ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ಕಾರ್ಮಿಕರಿಗೆ ನರೇಗಾ ವರದಾನ

ಹಂಗಳ ಗ್ರಾ.ಪಂ. ನಲ್ಲಿ ಪ್ರತಿ ದಿನ 400 ಜನರಿಗೆ ಕೆಲಸ
Last Updated 9 ಮೇ 2020, 2:21 IST
ಅಕ್ಷರ ಗಾತ್ರ

ಗುಂಡ್ಲುಪೇಟೆ:ಲಾಕ್ ಡೌನ್‌ನಿಂದಾಗಿ ಸಂಕಷ್ಟಕ್ಕೆ ಈಡಾಗಿದ್ದ ಗ್ರಾಮೀಣ ಭಾಗದ ಜನರ ಪಾಲಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆ ವರವಾಗಿ ಪರಿಣಮಿಸಿದೆ.

ತಾಲ್ಲೂಕಿನ ಹಂಗಳ ಗ್ರಾಮ ಪಂಚಾಯಿತಿ ತಮ್ಮ ವ್ಯಾಪ್ತಿಗೆ ಬರುವ ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆಯಡಿ ಕೆಲಸ ನೀಡಿ ಗ್ರಾಮೀಣಾಭಿವೃದ್ಧಿ ಕಾಮಗಾರಿಯನ್ನು ಮಾಡಲಾಗುತ್ತಿದೆ. ದಿನನಿತ್ಯ 400ಕ್ಕೂ ಹೆಚ್ಚಿನ ಜನರು ಕೆಲಸ ಮಾಡುತ್ತಿದ್ದಾರೆ.

ಹಂಗಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಹಂಗಳಪುರ, ಪುತ್ತನಪುರ, ಬಸವಾಪುರ, ಮೇಲುಕಾಮನಹಳ್ಳಿ, ದೇವರಹಳ್ಳಿ ಸೇರಿದಂತೆ ಇತರ ಹಲವು ಗ್ರಾಮಗಳು ಬರುತ್ತವೆ. ಇಲ್ಲಿನ ಜನರು ಪ್ರತಿ ದಿನ ನರೇಗಾ ಕೂಲಿ ಕೆಲಸಕ್ಕೆ ಬರುತ್ತಿದ್ದು, ದಿನಕ್ಕೆ ಒಬ್ಬರಿಗೆ ₹ 275 ನೀಡಲಾಗುತ್ತಿದೆ.

‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಚೀಟಿ ಹೊಂದಿರುವ 2,000 ಮಂದಿದ್ದಾರೆ. 300ಕ್ಕೂ ಹೆಚ್ಚು ಜನರು ಹೊಸದಾಗಿ ಉದ್ಯೋಗ ಚೀಟಿಗೆ ಅರ್ಜಿ ಸಲ್ಲಿಸಿದ್ದಾರೆ. ಇವರಿಗೂ ಕೂಡ ಎರಡು ದಿನದಲ್ಲಿ ಕಾರ್ಡ್ ನೀಡಲಾಗುವುದು. ನಂತರ ಅವರು ಕೆಲಸಕ್ಕೆ ಬರಬಹುದು’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಕುಮಾರಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಗ್ರಾಮದ ಹೊರ ವಲಯದಲ್ಲಿರುವ ದೊಡ್ಡಕೆರೆಯಲ್ಲಿ ನೀರು ಸರಿಯಾದ ರೀತಿಯಲ್ಲಿ ಹರಿಯಲು ಕಾಲುವೆ ನಿರ್ಮಾಣ, ಬಂಡೀಪುರ ಅರಣ್ಯದ ಒಳಗೆ ಇರುವ ಹಿರೀಕೆರೆಯಿಂದ ಸರಾಗವಾಗಿ ನೀರು ಬರಲು ಖಾಸಗಿ ಜಮೀನಿನ ಮಧ್ಯೆ ಮುಚ್ಚಿರುವ ಗುಂಡಿಯಲ್ಲಿ ಹೂಳು ತೆಗೆಯುವುದು, ಕೆರೆಯಲ್ಲಿ ಬೆಳೆದಿರುವ ಮುಳ್ಳಿನ ಗಿಡಗಳನ್ನು ತೆರವುಗೊಳಿಸುವುದು ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

‘ಪ್ರತಿದಿನ 250 ಮಹಿಳೆಯರು, 150 ಮಂದಿ ಪುರುಷರು ನರೇಗಾ ಕೆಲಸಕ್ಕೆ ಬರುತ್ತಿದ್ದು, ಎಲ್ಲರಿಗೂ ಸಮಾನ ಕೂಲಿ ನೀಡಲಾಗುತ್ತಿದೆ. ಅವರಿಗೆ ವಾರದ ಕೊನೆಯಲ್ಲಿ ₹275 ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು’ ಎಂದು ಎಂದು ಪಿಡಿಒ ತಿಳಿಸಿದರು.

‘ತಮ್ಮ ಸ್ವಂತ ಜಮೀನಿನಲ್ಲಿ ಸಹ ಕೆಲಸ ಮಾಡಿಕೊಳ್ಳಲು ಅವಕಾಶ ಇದೆ. ಜಾಬ್ ಕಾರ್ಡ್ ಹೊಂದಿರುವವರಿಗೆ ಒಂದು ₹1 ಲಕ್ಷದವರೆಗೆ ವಿಮೆಯನ್ನು ಗ್ರಾಮ ಪಂಚಾಯತಿ ವತಿಯಿಂದ ಮಾಡಿ ಸಲಾಗುತ್ತದೆ. ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಮಾಡಿ ವರ್ಷಕ್ಕೆ ₹2000 ಖಾತೆಗೆ ಹಾಕಲಾಗುತ್ತದೆ. ಈ ಸೌಲಭ್ಯಗಳನ್ನು ಜನರು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಕುಮಾರಸ್ವಾಮಿ ಹೇಳಿದರು.

‘ಹೊರಗಡೆ ಕೆಲಸಕ್ಕೆ ಹೋಗುತ್ತಿದ್ದೆವು. ಲಾಕ್‌ಡೌನ್ ಆದಾಗಿನಿಂದ ಕೆಲಸ ಇರಲಿಲ್ಲ. ಸಂಪಾದನೆಯೂ ಇರಲಿಲ್ಲ. ಗ್ರಾಮ ಪಂಚಾಯತಿ ಕೆಲಸ ನೀಡಿಸಾದಾಗಿನಿಂದ ವಾರಕೊಮ್ಮೆ ಕೂಲಿ ಹಣ ಬರುತ್ತಿದೆ. ಜೀವನೋಪಾಯಕ್ಕೆ ತೊಂದರೆ ಇಲ್ಲ’ ಎಂದು ಕೂಲಿ ಕಾರ್ಮಿಕ ಬೆಳ್ಳನಾಯಕ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT