ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ನೀತಿಸಂಹಿತೆ: ಪತ್ರಕರ್ತರ ಭವನ ಮುಚ್ಚುವಂತೆ ನೋಟಿಸ್‌!

ರಾಜಕೀಯ ಮುಖಂಡರು, ಅಭ್ಯರ್ಥಿಗಳ ಸುದ್ದಿಗೋಷ್ಠಿ– ಸಂವಾದಕ್ಕೆ ಅವಕಾಶ ಇಲ್ಲ‌– ಜಿಲ್ಲಾಡಳಿತ
Published 1 ಏಪ್ರಿಲ್ 2024, 4:18 IST
Last Updated 1 ಏಪ್ರಿಲ್ 2024, 4:18 IST
ಅಕ್ಷರ ಗಾತ್ರ

ಚಾಮರಾಜನಗರ: ‘ಮಾದರಿ ನೀತಿಸಂಹಿತೆ ಜಾರಿಯಲ್ಲಿದ್ದರೂ ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಿತ್ಯವೂ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ಹಾಗಾಗಿ, ಈ ಕಟ್ಟಡವನ್ನು ಮುಚ್ಚಿ ಸುಪರ್ದಿಗೆ ಪಡೆಯಬೇಕು’ ಎಂದು ಜಿ.ಪಂ. ಸಿಇಒ ಆನಂದ್‌ ಪ್ರಕಾಶ್‌ ಮೀನಾ ಅವರು ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಜುಂಜಣ್ಣ ಅವರಿಗೆ ತಿಳಿವಳಿಕೆ ನೋಟಿಸ್‌ ನೀಡಿದ್ದಾರೆ.

ಈ ನೋಟಿಸ್‌ ಆಧಾರದಲ್ಲಿ ಜುಂಜಣ್ಣ ಅವರು ಸಂಘಕ್ಕೆ ನೋಟಿಸ್‌ ನೀಡಿ ವಿವರಣೆ ಕೇಳಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಭವನದ ಕಟ್ಟಡವು ಲೋಕೋಪಯೋಗಿ ಇಲಾಖೆಯ ನಿವೇಶನದಲ್ಲಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅನುದಾನದಲ್ಲಿ ಕಟ್ಟಡ ನಿರ್ಮಿಸಲಾಗಿದ್ದು, ಈ ಕಾರಣಕ್ಕೆ ಅದನ್ನು ಸರ್ಕಾರಿ ಕಚೇರಿ ಎಂದು ಪರಿಗಣಿಸಿರುವ ಜಿಲ್ಲಾಡಳಿತ ಈ ನೋಟಿಸ್‌ ಜಾರಿಗೊಳಿಸಿದೆ.

ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ದೂರು ಆಧರಿಸಿ ಈ ಕ್ರಮ ವಹಿಸಲಾಗಿದೆ ಎಂದು ತಿಳಿದುಬಂದಿದೆ.

ನೋಟಿಸ್‌ನಲ್ಲಿ ಏನಿದೆ?:

‘ಭವನದಲ್ಲಿ ನಿತ್ಯವೂ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ರಾಜಕೀಯ ಮುಖಂಡರು, ಅಭ್ಯರ್ಥಿಗಳು ಸುದ್ದಿಗೋಷ್ಠಿ ಹಾಗೂ ಸಂವಾದ ನಡೆಸುವ ಮೂಲಕ ಪತ್ರಕರ್ತರಿಗೆ ಆಮಿಷ ಒಡ್ಡುತ್ತಿದ್ದಾರೆ ಎನ್ನಲಾಗುತ್ತಿದೆ. ಇದು ನೀತಿಸಂಹಿತೆಯ ಸ್ಪಷ್ಟ ಉಲ್ಲಂಘನೆ ಆಗುವಂತಿದೆ. ರಾಜಕೀಯ ಮುಖಂಡರು ಮತ್ತು ಅಭ್ಯರ್ಥಿಗಳು ಸುದ್ದಿಗೋಷ್ಠಿ, ಸಂವಾದದ ಸಮಯದಲ್ಲಿ ಔತಣಕೂಟ ಏರ್ಪಡಿಸುತ್ತಿದ್ದಾರೆ ಎನ್ನಲಾಗಿದೆ. ಭವನಕ್ಕೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ಅಲ್ಲಿ ನಡೆಯುವ ಚಲನವಲನ ಪರಿಶೀಲಿಸಬಹುದಾಗಿದೆ’ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ. 

‘ಕಟ್ಟಡವನ್ನು ಮುಚ್ಚಿ ಸುಪರ್ದಿಗೆ ಪಡೆಯುವುದು, ಇಲ್ಲವಾದಲ್ಲಿ ರಾಜಕೀಯ ಪಕ್ಷಗಳ ಸಭೆಗಳಿಗೆ ನೀಡಬೇಕಾದರೆ ಚುನಾವಣಾಧಿಕಾರಿ ಅನುಮತಿಯೊಂದಿಗೆ ಅಲ್ಲದೇ, ಬಾಡಿಗೆ ನಿಗದಿಪಡಿಸಿ ವಸೂಲಿ ಮಾಡಲು ಸೂಚಿಸಿದೆ’ ಎಂದು ತಿಳಿಸಲಾಗಿದೆ.

ನೋಟಿಸ್‌ ನೀಡಿರುವುದನ್ನು ಖಂಡಿಸಿರುವ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ, ‘ಇದು ಮಾಧ್ಯಮ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಯತ್ನ. ಜಿಲ್ಲಾಡಳಿತವು ನೋಟಿಸ್‌ ವಾಪಸ್‌ ಪಡೆಯಬೇಕು. ಪತ್ರಕರ್ತರಿಗೆ ಆಮಿಷ ಒಡ್ಡುತ್ತಿದ್ದಾರೆ ಎಂದು ನೋಟಿಸ್‌ ನೀಡಿದ ಅಧಿಕಾರಿ ಮತ್ತು ಸುಳ್ಳು ದೂರು ನೀಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರತಿಕ್ರಿಯೆಗೆ ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಸಿಇಒ ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT