ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್‌ ಕದ ತಟ್ಟಿದ ಮೋಹನ್‌|ಸಮ್ಮತಿಸುವರೇ ಸಿದ್ದರಾಮಯ್ಯ,ಶ್ರೀನಿವಾಸಪ್ರಸಾದ್‌?

ಕುತೂಹಲ ಮೂಡಿಸಿದೆ ಡಿಕೆಶಿ, ಸಿ.ಎಂ. ಭೇಟಿ; ಆಕಾಂಕ್ಷಿಗಳಲ್ಲಿ ತಳಮಳ
ಸೂರ್ಯನಾರಾಯಣ ವಿ.
Published 16 ಮಾರ್ಚ್ 2024, 5:51 IST
Last Updated 16 ಮಾರ್ಚ್ 2024, 5:51 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕ ಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದ, ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರ ಅಳಿಯ ಡಾ.ಎನ್‌.ಎಸ್‌.ಮೋಹನ್‌ ಅವರು ಟಿಕೆಟ್‌ ಕೈತಪ್ಪಿದ ತಕ್ಷಣ ಕಾಂಗ್ರೆಸ್‌ನತ್ತ ಮುಖ ಮಾಡಿರುವುದು ಪಕ್ಷದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. 

ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ಗೆ ಅವರು ಲಾಬಿ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಪಕ್ಷದ ಆಕಾಂಕ್ಷಿಗಳಿಗೆ ಮಾತ್ರವಲ್ಲದೆ ಮುಖಂಡರು, ಕಾರ್ಯಕರ್ತರಲ್ಲೂ ಗೊಂದಲ ಮೂಡಿಸಿದೆ. 

ಕ್ಷೇತ್ರದ ಅಭ್ಯರ್ಥಿ ಯಾರು ಎಂಬುದು ಇನ್ನೂ ಅಂತಿಮವಾಗದೇ ಇರುವುದರಿಂದ, ರಾಜ್ಯ ನಾಯಕರು ಕೊನೇ ಕ್ಷಣದಲ್ಲಿ ಮೋಹನ್‌ ಅವರ ಮೇಲೆ ಒಲವು ತೋರುತ್ತಾರೋ ಎಂಬ ಯೋಚನೆ ಅವರಲ್ಲಿದೆ. 

ರಹಸ್ಯ ಮಾತುಕತೆ: ಬೆಂಗಳೂರಿನಲ್ಲಿ ಗುರುವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಮತ್ತು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೋಹನ್‌ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ವಿವರಗಳು ಗೊತ್ತಾಗಿಲ್ಲ. ಮೋಹನ್‌ ಕೂಡ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿಲ್ಲ. 

ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಯಾಗಿದ್ದ ಸಂದರ್ಭದಲ್ಲಿ, ‘ಮೈಸೂರು ಭಾಗದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಬೇಕಾದರೂ ಸಿದ್ದರಾಮಯ್ಯ ಅವರ ಅಭಿಪ್ರಾಯ ಮುಖ್ಯವಾ‌ಗುತ್ತದೆ. ಅವರನ್ನೇ ಭೇಟಿ ಮಾಡಿ ಮಾತುಕತೆ ನಡೆಸಿ’ ಎಂದು ಸಲಹೆ ನೀಡಿದ್ದರು ಎಂದು ಗೊತ್ತಾಗಿದೆ. ಆ ಕಾರಣಕ್ಕೆ ಶುಕ್ರವಾರ ಮೈಸೂರಿನಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಅದಕ್ಕೂ ಮೊದಲು ಯತೀಂದ್ರ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಲೆಕ್ಕಾಚಾರ ಏನು?: ಮೈಸೂರಿನಲ್ಲಿ ಬಿಜೆಪಿಯು ರಾಜವಂಶಸ್ಥ ಯದುವೀರ್‌ ಒಡೆಯರ್‌ ಅವರನ್ನು ಕಣಕ್ಕಿಳಿಸಿದ ನಂತರ ಕಾಂಗ್ರೆಸ್‌ ತನ್ನ ಕಾರ್ಯತಂತ್ರವನ್ನು ಬದಲಿಸುತ್ತಿದೆ ಎಂದು ಹೇಳಲಾಗುತ್ತಿದೆ. 

‘ಶ್ರೀನಿವಾಸ ಪ್ರಸಾದ್ ಅವರು ಸಕ್ರಿಯ ರಾಜಕಾರಣದಿಂದ ನಿವೃತ್ತರಾಗುತ್ತಿದ್ದರೂ, ಅವರ ಪ್ರಭಾವ ಚಾಮರಾಜನಗರ ಮತ್ತು ಮೈಸೂರು ಕ್ಷೇತ್ರ ವ್ಯಾಪ್ತಿಯಲ್ಲಿ ಇನ್ನೂ ಇದೆ. ಅಳಿಯನಿಗೆ ಬಿಜೆಪಿ ಟಿಕೆಟ್‌ ನೀಡದಿರುವುದರಿಂದ ಅವರು ಬಿಜೆಪಿಯನ್ನು ಬೆಂಬಲಿಸುವ ಸಾಧ್ಯತೆ ಕಡಿಮೆ. ಒಂದು ವೇಳೆ ಪಕ್ಷದಿಂದ ಮೋಹನ್‌ಗೆ ಟಿಕೆಟ್‌ ನೀಡಿದರೆ, ಎರಡೂ ಕ್ಷೇತ್ರಗಳಲ್ಲಿ ಅವರ ಬೆಂಬಲ ಪಡೆಯಬಹುದು. ‍ಪಕ್ಷಕ್ಕೆ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರ ಮುಖಂಡರಲ್ಲಿದೆ. ಆದರೆ, ಅದು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತದೆಯೋ ತಿಳಿಯದು’ ಎಂದು ಹೇಳುತ್ತಾರೆ ಕಾಂಗ್ರೆಸ್‌ ಮುಖಂಡರು.

‌ಇಬ್ಬರ ಸಮ್ಮತಿ ಮುಖ್ಯ: ಈ ವಿಷಯದಲ್ಲಿ ಏನೇ ನಿರ್ಧಾರ ಕೈಗೊಳ್ಳಬೇಕಾಗಿದ್ದರೂ, ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೀರ್ಮಾನ ಮುಖ್ಯವಾಗುತ್ತದೆ. 

ಇಬ್ಬರ ನಡುವೆ ಈಗ ಉತ್ತಮ ಬಾಂಧವ್ಯ ಇಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ತಮ್ಮನ್ನು ಏಕಾಏಕಿ ಸಚಿವ ಸ್ಥಾನದಿಂದ ತೆಗೆದರು ಎಂದು ಶ್ರೀನಿವಾಸ ಪ್ರಸಾದ್‌ ನಿರಂತರವಾಗಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ. ಇದೇ ಕಾರಣಕ್ಕೆ ಅವರು ಪಕ್ಷ ತೊರೆದು, ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಈಗಲೂ ಸಿದ್ದರಾಮಯ್ಯ ಅವರ ಬಗ್ಗೆ ಸಂಸದರು ಟೀಕೆಗಳನ್ನು ಮಾಡುತ್ತಿದ್ದಾರೆ. ಹಾಗಾಗಿ, ಅಳಿಯ ಕಾಂಗ್ರೆಸ್‌ ಸೇರುವುದಕ್ಕೆ, ‘ಕೈ’ ಚಿಹ್ನೆಯಿಂದ ಸ್ಪರ್ಧಿಸುವುದಕ್ಕೆ ಒಪ್ಪುತ್ತಾರೆಯೇ ಎಂಬ ಪ್ರಶ್ನೆ ಎದ್ದಿದೆ. 

ಇತ್ತ, ಸಿದ್ದರಾಮಯ್ಯ ಅವರು ಕೂಡ ಈ ಪ್ರಸ್ತಾವಕ್ಕೆ ಸಮ್ಮತಿಸಿ ಸೂಚಿಸಬಹುದೇ ಎನ್ನುವ ಕುತೂಹಲವೂ ಮೂಡಿದೆ. 

‘ಪಕ್ಷದಲ್ಲೇ ಹಲವು ಆಕಾಂಕ್ಷಿಗಳಿದ್ದಾರೆ. ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ ಬೇರೆ ಪಕ್ಷದಲ್ಲಿ ಟಿಕೆಟ್‌ ಸಿಗದ ಕಾರಣಕ್ಕೆ ನಮ್ಮ ಪಕ್ಷಕ್ಕೆ ಬರಲು ಮುಂದಾಗಿರುವವರಿಗೆ ಟಿಕೆಟ್‌ ನೀಡಲು ಸಾಧ್ಯವೇ? ಒಂದು ವೇಳೆ ಕೊಟ್ಟರೂ ತಪ್ಪು ಸಂದೇಶ ಹೋಗುತ್ತದೆ. ಚುನಾವಣೆಯಲ್ಲಿ ಅದು ಪಕ್ಷಕ್ಕೆ ಮುಳುವಾಗಬಹುದು’ ಎಂಬ ಆತಂಕ ವ್ಯಕ್ತಪಡಿಸುತ್ತಾರೆ ಕಾಂಗ್ರೆಸ್‌ ಕಾರ್ಯಕರ್ತರು.  

‘ಆದರೆ, ವರಿಷ್ಠರು ತೀರ್ಮಾನ ತೆಗೆದುಕೊಂಡರೆ ನಾವು ಅದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಅಭ್ಯರ್ಥಿ ಪರವಾಗಿ ಕೆಲಸ ಮಾಡಲೇಬೇಕಾಗುತ್ತದೆ’ ಎಂದು ಹೇಳುತ್ತಾರೆ ಅವರು.

ಮರಿಸ್ವಾಮಿ
ಮರಿಸ್ವಾಮಿ

ಯತೀಂದ್ರ ಸಿದ್ದರಾಮಯ್ಯ ಅವರೊಂದಿಗೂ ಮಾತುಕತೆ ಕಾಂಗ್ರೆಸ್‌ ಪಕ್ಷದಲ್ಲಿದ್ದಾರೆ ಹಲವು ಆಕಾಂಕ್ಷಿಗಳು ಕ್ಷೇತ್ರದ ಅಭ್ಯರ್ಥಿ ಯಾರು ಎಂಬುದು ಇನ್ನೂ ಅಂತಿಮವಾಗಿಲ್ಲ

ಮೋಹನ್‌ ಸಿ.ಎಂ ಡಿಕೆಶಿಯವರನ್ನು ಭೇಟಿಯಾದ ಮಾಹಿತಿ ನಮಗಿಲ್ಲ. ಟಿಕೆಟ್‌ ನೀಡುವ ಬಗ್ಗೆ ಹೈಕಮಾಂಡ್‌ ತೀರ್ಮಾನಿಸುತ್ತದೆ-
ಪಿ.ಮರಿಸ್ವಾಮಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ

ಅಭಿನಂದನಾ ಸಮಾರಂಭದ ನಂತರ ಸ್ಪಷ್ಟ ಚಿತ್ರಣ ‘ಮೋಹನ್‌ ಅವರೊಬ್ಬರೇ ಬೇರೆ ಪಕ್ಷ ಸೇರುವ ನಿರ್ಧಾರ ಕೈಗೊಳ್ಳುವುದಕ್ಕೆ ಸಾಧ್ಯವಿಲ್ಲ. ಶ್ರೀನಿವಾಸ್‌ ಪ್ರಸಾದ್‌ ಸಲಹೆ ಅಭಿಪ್ರಾಯಗಳನ್ನು ಪಡೆಯದೆ ಅವರು ಮುಂದಡಿ ಇಡುವ ಸಾಧ್ಯತೆ ಕಡಿಮೆ’ ಎಂದು ಹೇಳುತ್ತಾರೆ ಸಂಸದರ ಆಪ್ತರು.  ‘ರಾಜಕೀಯದಲ್ಲಿ ಶತ್ರು ಮಿತ್ರರು ಎಂಬುದಿಲ್ಲ. ಏನು ಬೇಕಾದರೂ ಆಗಬಹುದು. ಸಂಸದರು ಮತ್ತು ಮುಖ್ಯಮಂತ್ರಿ ಒಪ್ಪಲೂಬಹುದು ಒಪ್ಪದಿರಬಹುದು. ಸಮಯ ಕೂಡಿ ಬರಬೇಕಷ್ಟೆ. ಆದರೆ ಅಂತಹ ಚರ್ಚೆ ನಡೆಯುತ್ತಿರುವುದಂತು ನಿಜ’ ಎಂದು ಹೇಳುತ್ತಾರೆ ಅವರು.  ಭಾನುವಾರ ಮೈಸೂರಿನಲ್ಲಿ ಶ್ರೀನಿವಾಸ ಪ‍್ರಸಾದ್‌ ಅವರ ಚುನಾವಣಾ ರಾಜಕೀಯ ಜೀವನದ ಸುವರ್ಣ ಮಹೋತ್ಸವದ ಅಂಗವಾಗಿ ಅಭಿನಂದನಾ ಸಮಾರಂಭ ನಡೆಯಲಿದ್ದು ಆ ಬಳಿಕ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT