ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಡಿ.ಸುಧಾಕರ್ ವಜಾ, ಬಂಧನಕ್ಕೆ ಬಿಜೆಪಿ ಆಗ್ರಹ

ದಲಿತರ ಮತ ಪಡೆದು ಗೆದ್ದ ಕಾಂಗ್ರೆಸ್‌ನಿಂದ ಸಮುದಾಯದ ಮೇಲೆ ದೌರ್ಜನ್ಯ: ಮೂಡ್ನಾಕೂಡು ಪ್ರಕಾಶ್
Published 14 ಸೆಪ್ಟೆಂಬರ್ 2023, 7:03 IST
Last Updated 14 ಸೆಪ್ಟೆಂಬರ್ 2023, 7:03 IST
ಅಕ್ಷರ ಗಾತ್ರ

ಚಾಮರಾಜನಗರ: ದಲಿತರ ಮೇಲೆ ದೌರ್ಜನ್ಯ ಎಸಗಿರುವ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ ಅವರನ್ನು ಸಂಪುಟದಿಂದ ವಜಾ ಮಾಡಿ, ಬಂಧಿಸಬೇಕು ಎಂದು ಬಿಜೆಪಿ ಜಿಲ್ಲಾ ಎಸ್ ಸಿ ಮೋರ್ಚಾ ಆಗ್ರಹಿಸಿದೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ ಸಿ ಮೋರ್ಚಾ ಅಧ್ಯಕ್ಷ ಮೂಡ್ನಾಕೂಡು ಪ್ರಕಾಶ್, ‘ಬೆಂಗಳೂರಿನ ಯಲಹಂಕದಲ್ಲಿ ಪರಿಶಿಷ್ಟ ಜಾತಿಯವರ ಮೇಲೆ ದೌರ್ಜನ್ಯ ನಡೆಸಿರುವ ಸಚಿವ ಡಿ. ಸುಧಾಕರ್ ವಿರುದ್ಧ ಎಸ್ ಸಿ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್ ಐಆರ್ ದಾಖಲಾಗಿದೆ. ಆದರೆ, ಸರ್ಕಾರ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ. ದಲಿತರ ಮತಗಳಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈಗ ಅವರನ್ನು ಕಡೆಗಣಿಸುತ್ತಿದೆ’ ಎಂದು ದೂರಿದರು.

‘ಸಂವಿಧಾನ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರು ಹೇಳಿಕೊಂಡು ಮುಗ್ದ ದಲಿತರನ್ನು ಸರ್ಕಾರ ಬಲಿಹಾಕುತ್ತಿದೆ. ಸರ್ಕಾರ ಡಿ.ಸುಧಾಕರ್ ವಿರುದ್ಧ ಕ್ರಮ ಕೈಗೊಂಡಿಲ್ಲ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಇದು ಸುಳ್ಳು ಪ್ರಕರಣ ಎಂದು ಹೇಳಿಕೆ ನೀಡಿ ಸುಧಾಕರ್ ಬೆಂಬಲಕ್ಕೆ ನಿಂತಿದ್ದಾರೆ. ಹಾಗಾಗಿ, ಇಬ್ಬರನ್ನೂ ಸಂಪುಟದಿಂದ ವಜಾ ಮಾಡಬೇಕು. ಡಿ.ಸುಧಾಕರ್ ಅವರನ್ನು ತಕ್ಷಣವೇ ಬಂಧಿಸಬೇಕು’ ಎಂದು ಆಗ್ರಹಿಸಿದರು.

‘ದಲಿತರ ಬಗ್ಗೆ ಕಾಳಜಿ ಇದೆ, ಪ್ರೀತಿ ಇದೆ ಎಂದು ಭಾಷಣ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾಕೆ ಸುಮ್ಮನಿದ್ದಾರೆ? ದಲಿತರ ಮತಗಳು ಮಾತ್ರ ಬೇಕಾಗಿದೆಯೇ’ ಎಂದು ಪ್ರಶ್ನಿಸಿದರು.

‘ಗೃಹ ಸಚಿವ ಡಾ.ಜಿ.ಪರಮೇಶ್ವರ ದಲಿತ ಸಮುದಾಯದವರು. ತಮ್ಮ ಸಮುದಾಯದವರ ಮೇಲೆ ದೌರ್ಜನ್ಯ ನಡೆದಿದೆ. ಅವರು ಸುಮ್ಮನೆ ಇರಬಾರದು. ಸುಧಾಕರ್ ಅವರನ್ನು ಬಂಧಿಸಲು ಆದೇಶಿಸಬೇಕು ಇಲ್ಲವೇ ರಾಜೀನಾಮೆ ನೀಡಬೇಕು’ ಎಂದು ಪ್ರಕಾಶ್ ಒತ್ತಾಯಿಸಿದರು.

‘ರಾಜ್ಯದಲ್ಲಿ ಪೊಲೀಸರು ಸಂವಿಧಾನ ಪ್ರಕಾರ ಕೆಲಸ ಮಾಡುತ್ತಿಲ್ಲ. ರಾಜ್ಯ ಸಚಿವ ಸಂಪುಟದಲ್ಲಿ ಗೂಂಡಾಗಳು, ದಲಿತ ವಿರೋಧಿಗಳೇ ತುಂಬಿಕೊಂಡಿದ್ದಾರೆ’ ಎಂದು ಕಿಡಿ ಕಾರಿದರು.

ಸಿಬಿಐಗೆ ವಹಿಸಿ: ‘ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಚಾಮರಾಜನಗರದಲ್ಲಿ ಕಾಂಗ್ರೆಸ್ ಮುಖಂಡ ದಡದಹಳ್ಳಿ ರಮೇಶ್ ಅವರ ಸಾವು ಅನುಮಾನ ಹುಟ್ಟುಹಾಕಿದ್ದು, ಪೊಲೀಸರು ಸಮರ್ಪಕವಾಗಿ ತನಿಖೆ ನಡೆಸುತ್ತಿಲ್ಲ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು’ ಎಂದು ಪ್ರಕಾಶ್ ಆಗ್ರಹಿಸಿದರು.

‘ಈ ಪ್ರಕರಣದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಧ್ಯಸ್ಥಿಕೆ ವಹಿಸಿದ್ದಾರೆ. ನಂತರ ಅವರು ವಾರದ ಕಾಲ ಕ್ಷೇತ್ರದಲ್ಲಿ ಇರಲಿಲ್ಲ. ಪ್ರಕರಣದ ಬಗ್ಗೆ ಶಾಸಕರನ್ನು ತನಿಖೆ ಮಾಡಿದರೆ ಸತ್ಯಾಂಶ ಗೊತ್ತಾಗಲಿದೆ. ಪಕ್ಷದ ಮುಖಂಡ ಮೃತಪಟ್ಟಿದ್ದರೂ ಜಿಲ್ಲೆಯ ಮೂರು ಶಾಸಕರು, ಉಸ್ತುವಾರಿ ಸಚಿವರು ಕುಟುಂಬಕ್ಕೆ ಸಾಂತ್ವನ ಹೇಳಿಲ್ಲ’ ಎಂದು ಆರೋಪಿಸಿದರು.

ಎಸ್ ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುತ್ತಿಗೆ ಮೂರ್ತಿ, ಮುಖಂಡರಾದ ಟಗರುಪುರ ರೇವಣ್ಣ, ಕೊತ್ತನೂರು ರಾಜಶೇಖರ, ಮೂಡಹ್ಳಿ ಮೂರ್ತಿ ಮತ್ತು ಶಿವಣ್ಣ ರಾಮಸಮುದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT