ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ದಾದಿಯರ ದಿನ| ದಾದಿಯರಲ್ಲೂ ‘ಅವ್ವ’ನ ವಾತ್ಸಲ್ಯದ ಹೃದಯ

ಮಾತೃತ್ವದ ಪ್ರತೀಕ ತಾಯಿ, ಆಸ್ಪತ್ರೆ ಬೆಳಕು ದಾದಿಯರು: ಇಬ್ಬರ ಸ್ಮರಣೆ ಇಂದು
Published 12 ಮೇ 2024, 5:03 IST
Last Updated 12 ಮೇ 2024, 5:03 IST
ಅಕ್ಷರ ಗಾತ್ರ

ಯಳಂದೂರು: ಸದಾ ರೋಗಿಗಳನ್ನು ಆರೈಕೆ ಮಾಡುವ ದಾದಿಯರು ವೈದ್ಯರ ಹೆಗಲೆಣೆಯಾದರೆ, ಸದಾ ಕುಟುಂಬದ ಕಣ್ಣಾಗಿರುವ ಅಮ್ಮಂದಿರು ವಾತ್ಸಲ್ಯ ತುಂಬುವ ಕರುಣಾಮಯಿಗಳು. ಇವರಿಬ್ಬರ ಸಾಂಗತ್ಯದಲ್ಲಿ ಮಾತೃ ಹೃದಯದ ಸಹನೆ ಮತ್ತು ಪರರನ್ನು ಸಾಂತ್ವನಗೊಳಿಸುವ ಮಧುರತೆ ತುಂಬಿದೆ. ಇವರಿಬ್ಬರ ಸ್ಮರಣೆಗೆ ಜಗತ್ತು ಇಂದು ಕಾತರದಿಂದ ಕಾಯುತ್ತಿದೆ.

ಜಿಲ್ಲೆಯಲ್ಲಿರುವ ಸರ್ಕಾರಿ ಆಸ್ಪತ್ರೆಗಳಿಗೆ ನಿತ್ಯ ಸಾವಿರಾರು ರೋಗಿಗಳು ತಪಾಸಣೆಗೆ ಬರುತ್ತಾರೆ. ಹಲವರು ಶುಶ್ರೂಷೆ ಪಡೆದು ತೆರಳಿದರೆ, ಇನ್ನೂ ಕೆಲವರು ಚಿಕಿತ್ಸೆಗೆ ದಾಖಲಾಗುತ್ತಾರೆ. ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುವವರು ಲವಲವಿಕೆಯಿಂದಿರಲು, ಅವರು ಚಿಕಿತ್ಸೆಗೆ ಸ್ಪಂದಿಸುವುದರಲ್ಲಿ ದಾದಿಯರ ಶ್ರಮ ಹೆಚ್ಚಿದೆ. ರೋಗಿಗಳನ್ನು ಮೃದು ಮಾತುಗಳಿಂದ ಸಂತೈಸಿ, ಧೈರ್ಯ ತುಂಬಿ ಮದ್ದು ನೀಡಿ ಆರೈಕೆ ಮಾಡುವಂತಹ ಮಮತೆಯ ಮಡಿಲು ಅವರದ್ದು. 

‘ದೇವರು ಎಲ್ಲ ಕಡೆ ಇರಲು ಸಾಧ್ಯವಿಲ್ಲ. ಹಾಗಾಗಿ, ಅಮ್ಮಂದಿರನ್ನು ಸೃಷ್ಟಿಸಿದ’, ‘ಕಾಲಕಾಲಕ್ಕೆ ಔಷಧ, ಚುಚ್ಚುಮದ್ದು, ಧೈರ್ಯ ತುಂಬಿ ಆಸ್ಪತ್ರೆಯ ಅಂಗಳದಲ್ಲಿ ಸಹನೆ ಮತ್ತು ಪ್ರೀತಿಯಿಂದ ರೋಗಿಗಳಿಗೆ ಆಪ್ತತೆ ತುಂಬುವ ನರ್ಸ್‌ಗಳದು ಮತ್ತೊಂದು ಪ್ರಪಂಚ’ ಎಂದು ಹೇಳುತ್ತದೆ ಇಂಗ್ಲಿಷ್‌ನ ನಾಣ್ಣುಡಿ.

‘ರೋಗಿಗಳಿಗೆ ನಯವಾಗಿ ಊಟ, ಮಾತ್ರೆ ಸೇವಿಸುವಂತೆ ಮಾಡುವಲ್ಲಿ ದಾದಿಯರ ಅನುನಯದ ವರ್ತನೆ ಅಮ್ಮಂದಿರನ್ನು ನೆನೆಪಿಸುತ್ತದೆ. ಕೋವಿಡ್ ಕಾಲಘಟ್ಟದಲ್ಲಿ ಉಸಿರು ಬಿಗಿ ಹಿಡಿದು ರೋಗಿಗಳ ಸೇವೆ ಮಾಡಿದ ದಾದಿಯರನ್ನು ಮರೆಯಲು ಸಾಧ್ಯ ಇಲ್ಲ’ ಎಂದು ಅಂಬಳೆ ನಾಗೇಶ ಹೇಳುತ್ತಾರೆ.

‘ಯಳಂದೂರು ಆಸ್ಪತ್ರೆಯಲ್ಲಿ ದಾದಿಯರು ಹೆಚ್ಚು ಇದ್ದಾರೆ. ಚಿಕಿತ್ಸೆ ಮತ್ತು ಹೆರಿಗೆಗೆ ಸುಸಜ್ಜಿತ ವಾರ್ಡ್ ಮತ್ತು ವೈದ್ಯರ ತಂಡ ಇಲ್ಲಿದೆ. ಹಾಗಾಗಿ, ಕೊಳ್ಳೇಗಾಲ, ನಗರ ಮತ್ತಿತರ ಸ್ಥಳಗಳಿಂದಲೂ ಆಸ್ಪತ್ರೆಗೆ ಬರುತ್ತಾರೆ. ಆಸ್ಪತ್ರೆ ಮೇಲ್ದರ್ಜೆಗೆ ಏರಿಸಿಲು ಸಿದ್ಧತೆ ನಡೆದಿದೆ. ಆದರೆ, ವೈದ್ಯರ ಕೊರತೆ ನಡುವೆಯೂ ದಾದಿಯರ ಉಪಚಾರ ಮತ್ತು ಸಹಕಾರ ರೋಗಿಗಳಿಗೆ ವರವಾಗಿದೆ. ಆರೋಗ್ಯ ಮತ್ತು ಭಾವನಾತ್ಮಕ ಬೆಸುಗೆ ಹೆಚ್ಚಲು, ರಾತ್ರಿ ಪಾಳಿಯಲ್ಲಿ ಸದಾ ಆರೋಗ್ಯರ ಸೇವೆ ಒದಗಿಸಲು ನರ್ಸಗಳ ಸಹಕಾರ ಕಾರಣ’ ಎಂದು ಹೇಳುತ್ತಾರೆ ವೈದ್ಯಾಧಿಕಾರಿ ಡಾ.ಶ್ರೀಧರ್.

‘ಸದಾ ರೋಗಿಗಳಿಗೆ ಸ್ಪಂದಿಸಬೇಕು. ಗರ್ಭಿಣಿಯರು ಮತ್ತು ಅಂಗವಿಕಲರನ್ನು ಮೊದಲು ಉಪಚರಿಸಬೇಕು. ನರ್ಸಿಂಗ್ ಕಲಿಕೆಗಿಂತಲೂ ವಾರ್ಡ್‌ಗಳಲ್ಲಿ ನೋಡಿ ತಿಳಿಯುವುದು, ರೋಗಿಗಳ ಬವಣೆ ಅರಿತು ಶುಶ್ರೂಷೆ ನೀಡುವುದು ಪ್ರತಿ ದಾದಿಯರಿಗೆ ಸವಾಲಾಗಿದೆ’ ಎನ್ನುವುದು ಶುಶ್ರೂಷಕರಾದ ಮೀನಾ ಮತ್ತು ರಾಧ ಅವರ ಅನುಭವದ ಮಾತು.

ಇಂದು ಶುಶ್ರೂಷಕರ ದಿನ

ಅಮ್ಮಂದಿರ ದಿನವೂ ಹೌದು ಆಧುನಿಕ ಶುಶ್ರೂಷೆಯ ಮೂಲ ತತ್ವಜ್ಞಾನಿ ಎಂದು ಗುರುತಾದ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮ ದಿನ ಮೇ 12ರಂದು ಅಂತರರಾಷ್ಟ್ರೀಯ ದಾದಿಯರ ದಿನ ಆಚರಿಸಲಾಗುತ್ತದೆ. ಹಲವು ಕೊರತೆಗಳ ನಡುವೆಯೂ ಈಕೆ ಯದ್ಧಗಳ ಸಂದರ್ಭ ಸೈನಿಕರ ಸೇವೆಗೆ ಬದುಕು ಸವೆಸಿದ್ದರು. ಮನುಕುಲದ ಇತಿಹಾಸದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ನರ್ಸ್‌ಗಳ ಅಗತ್ಯವನ್ನು ನೈಟಿಂಗೇಲ್‌ ಅವರ ಸೇವೆ ಸಾರಿತು. ಪ್ರತಿ ವರ್ಷದ ಮೇ ತಿಂಗಳ ಎರಡನೇ ಭಾನುವಾರವನ್ನು ತಾಯಂದಿರ ದಿನವಾಗಿ ಆಚರಿಸಲಾಗುತ್ತದೆ.  ತಾಯಿ ಮಮತೆ ಕುಟುಂಬದ ಬಂಧವನ್ನು ಅನಾದಿ ಕಾಲದಿಂದ ಕಟ್ಟಿಕೊಡುತ್ತಲೇ ಬಂದಿದೆ. ಆಧುನಿಕ ಕಾಲದಲ್ಲೂ ಜೈವಿಕ ಅಮ್ಮಂದಿರನ್ನು ಮೀರಿ ಅಕ್ಕ ಅಜ್ಜಿ ಮಹಿಳೆ ಮಗಳಲ್ಲೂ ಅವ್ವನ ಆಂತರ್ಯದ ಪ್ರೀತಿಯ ಕಡಲು ಹರಿಯುತ್ತಲೇ ಇದೆ. ‌ ನಾಗರಿಕತೆಯನ್ನು ಸಲುಹಿ ಮುನ್ನಡೆಸಿದ ತಾಯಂದಿರನ್ನು ಗೌರವಿಸಲು ‌‘ಅಮ್ಮಂದಿರ ದಿನ’ ಆಚರಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT