ಬುಧವಾರ, ಸೆಪ್ಟೆಂಬರ್ 22, 2021
22 °C

ಹೈಕಮಾಂಡ್‌ ಜತೆಗಿನ ಒಪ್ಪಂದದಂತೆ ಬಿಎಸ್‌ವೈ ರಾಜೀನಾಮೆ: ಶ್ರೀನಿವಾಸ ಪ್ರಸಾದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಹೈಕಮಾಂಡ್‌ ನಡುವೆ ಆಗಿದ್ದ ಒಪ್ಪಂದದಂತೆ ಯಡಿಯೂರಪ್ಪ ಅವರು ಈಗ ನಡೆದುಕೊಳ್ಳುತ್ತಿದ್ದಾರೆ’ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರು ಶುಕ್ರವಾರ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘75 ವರ್ಷ ಆದವರು ಮುಖ್ಯ ಹುದ್ದೆಗಳಲ್ಲಿ ಇರಬಾರದು ಎಂಬುದು ಪಕ್ಷದ ನಿಲುವು. ಹಾಗಿದ್ದರೂ ಸಮ್ಮಿಶ್ರ ಸರ್ಕಾರ ಪತನವಾದಾಗ ಯಡಿಯೂರಪ್ಪ ಮುಖ್ಯಮಂತ್ರಿ ಆದರು. ವಯಸ್ಸಾಗಿದ್ದರೂ, ಎರಡು ವರ್ಷಗಳ ಕಾಲ ಮುಖ್ಯಮಂತ್ರಿಯಾಗಲು ಅವಕಾಶ ಕೊಡುವುದಾಗಿ ಹೈಕಮಾಂಡ್‌ ಹೇಳಿತ್ತು. ಅಂದು ನಡೆದ ಮಾತುಕತೆಯಂತೆ ಯಡಿಯೂರಪ್ಪ ಅವರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಇದುವರೆಗೆ ಇದ್ದ ಊಹಾಪೋಹಕ್ಕೆ ಈಗ ತೆರೆ ಬಿದ್ದಿದೆ’ ಎಂದರು.

ಯಡಿಯೂರಪ್ಪ ಅವರಿಗೆ ಸ್ವಾಮೀಜಿಗಳು ಬೆಂಬಲ ವ್ಯಕ್ತಪಡಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಸದರು, ‘ಸ್ವಾಮೀಜಿಗಳು ಸೂಪರ್‌ ಹೈಕಮಾಂಡ್‌ಗಳಲ್ಲ. ಸ್ವಾಮೀಜಿಗಳು, ಹಿತೈಷಿಗಳು, ಬೆಂಬಲಿಗರು ಪಕ್ಷಕ್ಕೆ ಧಕ್ಕೆ ತರುವಂತೆ ಯಾರೂ ನಡೆದುಕೊಳ್ಳಬಾರದು, ಹೇಳಿಕೆ ನೀಡಬಾರದು ಎಂದು ಯಡಿಯೂರಪ್ಪ ಅವರೇ ಹೇಳಿದ್ದಾರೆ. ಪಕ್ಷವನ್ನು ರಾಜ್ಯದಲ್ಲಿ ಸಂಘಟಿಸಿದ ಯಡಿಯೂರಪ್ಪ ಅವರನ್ನು ಹೈಕಮಾಂಡ್‌ ಅತ್ಯಂತ ಗೌರವಯುತವಾಗಿ ನಡೆಸಿಕೊಂಡಿದೆ’ ಎಂದರು.

‘ಹೊಸ ಮುಖ್ಯಮಂತ್ರಿ ಯಾರು ಎಂಬುದು ಇನ್ನು ಎರಡು ದಿನಗಳಲ್ಲಿ ಗೊತ್ತಾಗಲಿದೆ. ಇದನ್ನು ಈಗಲೇ ಊಹಿಸಲು ಸಾಧ್ಯವಿಲ್ಲ. ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ: ಬಿಜೆಪಿ ದಲಿತರನ್ನು ಸಿಎಂ ಮಾಡಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರಲ್ಲಾ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಶ್ರೀನಿವಾಸ ಪ್ರಸಾದ್‌, ‘ಅವನ್ಯಾರು ಹೇಳುವುದಕ್ಕೆ’ ಎಂದು ಏಕವಚನದಲ್ಲಿ ಪ್ರಶ್ನಿಸಿದರು.

‘ವಿರೋಧ ಪಕ್ಷದಲ್ಲಿರುವವರು ಈ ರೀತಿ ಹೇಳಿಕೆ ಕೊಡುವುದೇ? ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ, ‘ಮುಂದಿನ ಬಾರಿಗೆ ದಲಿತ ಮುಖ್ಯ‌ಮಂತ್ರಿಯನ್ನು ಮಾಡುತ್ತೇನೆ’ ಎಂದು ಹೇಳುತ್ತಿದ್ದರು. ಅದಾದ ಮೇಲೆ ಮಾತನ್ನು ಬದಲಾಯಿಸಿದರು. ‘ನಾನೇ ಮುಂದಿನ ಮುಖ್ಯಮಂತ್ರಿ’ ಎಂದು ಅಂಬಾರಿ ಮೇಲೆ ಕುಳಿತುಕೊಂಡು ಬಂದರು. ಮೈಸೂರಿನಲ್ಲಿ ಸೋತ ನಂತರ ಚುನಾವಣೆಗೆ ನಿಲ್ಲಲು ಕ್ಷೇತ್ರ ಹುಡುಕುವ ಪರಿಸ್ಥಿತಿಗೆ ಬಂದಿದ್ದಾರೆ. ಸುಮ್ಮನೆ ಮಾತನಾಡುತ್ತಾರೆ’ ಎಂದು ವ್ಯಂಗ್ಯವಾಡಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ನಂತರವೂ ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರೊಂದಿಗೆ ಇದೇ ವಿಚಾರವನ್ನು ಮುಂದುವರಿಸಿದ ಸಂಸದರು, ‘ಐದು ವರ್ಷ ನೀವೇ ಮುಖ್ಯಮಂತ್ರಿಯಾಗಲು ಸಂಪೂರ್ಣ ಬೆಂಬಲ ಕೊಡುತ್ತೇವೆ. ನಂತರ ದಲಿತರನ್ನು ಸಿಎಂ ಮಾಡೋಣ ಎಂದು ಸಿದ್ದರಾಮಯ್ಯಗೆ ಹೇಳಿದ್ದೆ. ದಲಿತರಲ್ಲಿ ಯಾರು ಮುಖ್ಯಮಂತ್ರಿ ಆಗಬೇಕು ಎಂಬದನ್ನು ಕೂತು ಮಾತನಾಡೋಣ ಎಂದು ಹೇಳಿದ್ದರು. ನಂತರ ಅವರ ದಾಟಿಯೇ ಬದಲಾಯಿತು. ಅವರ ಹಿಂದೆ ಕುಳಿತುಕೊಳ್ಳುತ್ತಿದ್ದ ಮಹದೇವಪ್ಪ, ‘ನಾನೇ ಸಿಎಂ’ ಎಂದು ಹೇಳುವುದಕ್ಕೆ ಶುರು ಮಾಡಿದ. ಆದರೆ, ಎಲ್ಲರೂ ಮನೆಗೆ ಹೋದರು’ ಎಂದು ಹೇಳಿದರು.

ಹತಾಶೆಯ ಹೇಳಿಕೆ: ಕಾಂಗ್ರೆಸ್‌ನಿಂದ ಬಂದವರಿಗೆ ಸಚಿವ ಸ್ಥಾನ ಕೊಡಬಾರದು ಎಂಬ ಅಡಗೂರು ಎಚ್‌.ವಿಶ್ವನಾಥ್‌ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಶ್ರೀನಿವಾಸ ಪ್ರಸಾದ್‌ ಅವರು, ‘ಅದು ವೈಯಕ್ತಿಕ ಹೇಳಿಕೆ. ಅವರ ಹೇಳಿಕೆಗೆ ಚಿಕ್ಕಾಸಿನ ಬೆಲೆಯೂ ಇಲ್ಲ. ಹತಾಶೆಯ ರೀತಿಯಲ್ಲಿ ವಿಶ್ವನಾಥ್‌ ಹೇಳಿಕೆ ನೀಡುತ್ತಿದ್ದಾರೆ. ಅವರೇನೂ ಹೈಕಮಾಂಡಾ? ನಾನು, ವಿಶ್ವನಾಥ್‌ ಪಕ್ಷ ಕಟ್ಟಿಲ್ಲ. ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದಿದ್ದೇವೆ. ನಮಗೆ ಜವಾಬ್ದಾರಿ ನೀಡಿದ್ದಾರೆ. ಅವರಿಗೆ ಹೊರೆಯಾಗದೆ ಕರ್ತವ್ಯವನ್ನು ನಿರ್ವಹಿಸಬೇಕು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು