ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಆರ್‌ಟಿ: ಗಸ್ತಿಗೆ ತಂತ್ರಾಂಶದ ಬಲ, ಅಧಿಕಾರಿಗಳಿಂದ ತರಬೇತಿ

ಹುಲಿ ಸಂರಕ್ಷಿತ ಪ್ರದೇಶದ ಸಿಬ್ಬಂದಿಯಿಂದ ‘ಎಂ–ಸ್ಟ್ರೈಪ್ಸ್‌’ ಆ್ಯಪ್‌ ಬಳಕೆ
Last Updated 29 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇನ್ನು ಮುಂದೆ ತಂತ್ರಜ್ಞಾನ ಆಧರಿತ ಗಸ್ತು ನಡೆಸಲಿದ್ದಾರೆ.

ವಾಚರ್‌ಗಳು, ಗಾರ್ಡ್‌ಗಳು ಮತ್ತು ಉಪ ವಲಯ ಅರಣ್ಯ ಅಧಿಕಾರಿಗಳು (ಡಿಆರ್‌ಎಫ್‌) ‘ಎಂ–ಸ್ಟ್ರೈಪ್ಸ್’ (M-STrIPES)‌ ಎಂಬ ಮೊಬೈಲ್‌ ತಂತ್ರಾಂಶವನ್ನು ಬಳಸಿಕೊಂಡು ಹುಲಿಗಳು ಹಾಗೂ ಇತರೆ ವನ್ಯಪ್ರಾಣಿಗಳ ಸಂರಕ್ಷಣಾ ಕಾರ್ಯದಲ್ಲಿ ತೊಡಗಲಿದ್ದಾರೆ.

‘ಎಂ–ಸ್ಟ್ರೈಪ್ಸ್‌’ ಎಂಬುದು ‘ಮಾನಿಟರಿಂಗ್ ಸಿಸ್ಟಮ್ ಫಾರ್‌ ಟೈಗರ್ಸ್‌: ಇಂಟೆನ್ಸಿವ್‌ ಪ್ರೊಟೆಕ್ಷನ್‌ ಹಾಗೂ ಇಕಾಲಾಜಿಕಲ್‌ ಸ್ಟೇಟಸ್‌’ನ ಸಂಕ್ಷಿಪ್ತ ರೂಪ. ಭಾರತೀಯ ವನ್ಯಜೀವಿ ಸಂಸ್ಥೆಯು (ವೈಲ್ಡ್‌ಲೈಫ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ) ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಸಹಯೋಗದಲ್ಲಿ ಇದನ್ನು ಅಭಿವೃದ್ಧಿ ಪಡಿಸಿದೆ. ದೇಶದ ಎಲ್ಲ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಈ ತಂತ್ರಾಂಶ ಬಳಕೆಯನ್ನುಎನ್‌ಟಿಸಿಎ ಕಡ್ಡಾಯಗೊಳಿಸಿದೆ.

ಬಿಆರ್‌ಟಿಯಲ್ಲಿ ಈ ಹಿಂದೆ ಈ ‌ತಂತ್ರಾಂಶ ಬಳಕೆಯಲ್ಲಿತ್ತು. ಪೂರ್ಣ ಪ್ರಮಾಣದಲ್ಲಿ ಅದು ಜಾರಿಯಾಗಿರಲಿಲ್ಲ. ಈಗ ಪರಿಷ್ಕೃತಗೊಂಡ ಆ್ಯಪ್‌ ಲಭ್ಯ ಇದ್ದು, ಅದರ ಬಳಕೆಯ ಬಗ್ಗೆ ಸಿಬ್ಬಂದಿಗೆ ತರಬೇತಿಯನ್ನೂ ನೀಡಲಾಗುತ್ತಿದೆ.

ಏನಿದು ತಂತ್ರಾಂಶ?: ಜಿಪಿಎಸ್‌, ಜಿಪಿಆರ್‌ಎಸ್‌ ಹಾಗೂ ರಿಮೋಟ್‌ ಸೆನ್ಸಿಂಗ್‌ ತಂತ್ರಜ್ಞಾನದ ಅಡಿಯಲ್ಲಿ ಕಾರ್ಯನಿರ್ವಹಿಸುವ ಈ ಆ್ಯಪ್‌ ಅನ್ನು ಕಳೆದ ವರ್ಷ ದೇಶದಾದ್ಯಂತ ಹುಲಿ ಗಣತಿಯಲ್ಲಿ ಬಳಸಲಾಗಿತ್ತು. ಆ್ಯಪ್‌ ಕಾರ್ಯನಿರ್ವಹಣೆಗೆ ಪೂರ್ತಿಯಾಗಿ ಇಂಟರ್‌ನೆಟ್‌ನ ಅಗತ್ಯವಿಲ್ಲ. ಮೊಬೈಲ್‌ಗೆ ಅಳವಡಿಸಲು ಇಂಟರ್‌ನೆಟ್‌ ಇದ್ದರೆ ಸಾಕು. ನಂತರ ಅದು ಜಿಪಿಎಸ್‌ ಆಧರಿತವಾಗಿ ಹಾಗೂ ಮೊಬೈಲ್‌ನಲ್ಲೇ ಇರುವ ಮ್ಯಾಪ್‌ ಆಧಾರವಾಗಿಟ್ಟುಕೊಂಡು ಕಾರ್ಯನಿರ್ವಹಿಸುತ್ತದೆ.

ಕಾರ್ಯನಿರ್ವಹಣೆ: ಹುಲಿಗಳು ಸೇರಿದಂತೆ ವನ್ಯಜೀವಿಗಳು ಹಾಗೂ ಅರಣ್ಯಗಳ ಸಂರಕ್ಷಣೆಗಾಗಿ ಈಗಲೂ ಸಿಬ್ಬಂದಿ ಗಸ್ತು ತಿರುಗುತ್ತಾರೆ. ಆ ಸಮಯದಲ್ಲಿ ತಾವು ಕಂಡ ಬದಲಾವಣೆಗಳು ಹಾಗೂ ವಿಷಯಗಳನ್ನು ದಾಖಲು ಮಾಡಿಕೊಳ್ಳುತ್ತಾರೆ. ಆದರೆ, ಅದು ವ್ಯವಸ್ಥಿತವಾಗಿ ನಡೆಯುವುದಿಲ್ಲ. ಕೆಳ ಹಂತದ ಸಿಬ್ಬಂದಿ ಮೇಲಿನ ಅಧಿಕಾರಿಗಳಿಗೆ ಮೌಖಿಕವಾಗಿ ತಿಳಿಸುತ್ತಾರೆ. ಈ ವಿವರಗಳು ಸಿಗುವುದಕ್ಕೆ ವಿಳಂಬವೂ ಆಗಬಹುದು. ಇದರಿಂದಾಗಿ ಕೆಲವು ತುರ್ತು ಸಂದರ್ಭಗಳಲ್ಲಿ ಉನ್ನತ ಅಧಿಕಾರಿಗಳಿಗೆ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುವುದಿಲ್ಲ.

ಈ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಈ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ. ವಾಚರ್‌ಗಳು, ಗಾರ್ಡ್‌ಗಳು ಹಾಗೂ ಡಿಆರ್‌ಎಫ್‌ಒಗಳು ತಮ್ಮ ವ್ಯಾಪ್ತಿಯಲ್ಲಿ ಗಸ್ತು ತಿರುಗುವಾಗ ಲಭ್ಯವಾಗುವ ಮಾಹಿತಿಗಳನ್ನು ಈ ಆ್ಯಪ್‌ ಮೂಲಕ ದಾಖಲಿಸಬೇಕು (ಉದಾಹರಣೆಗೆ ಹುಲಿಯ ಚಲನವಲನಗಳು ಕಂಡು ಬಂದರೆ, ಕಳ್ಳ ಬೇಟೆ ನಡೆದಿದ್ದರೆ, ಪ್ರಾಣಿಗಳು ಮೃತಪಟ್ಟಿದ್ದರೆ ಅವುಗಳ ಮಾಹಿತಿಯನ್ನು ಚಿತ್ರ ಸಮೇತ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಬೇಕು). ಸಿಬ್ಬಂದಿ ಅಪ್‌ಲೋಡ್‌ ಮಾಡಿದ ಮಾಹಿತಿಗಳನ್ನು ಉನ್ನತ ಅಧಿಕಾರಿಗಳು ತಂತ್ರಜ್ಞಾನದ ವ್ಯವಸ್ಥೆಯಲ್ಲಿ ತಾವು ಕುಳಿತಲ್ಲಿಂದಲೇ ಪಡೆಯಬಹುದು.

ಗಸ್ತು ಇನ್ನಷ್ಟು ಪರಿಣಾಮಕಾರಿ: ‘ಈ ಆ್ಯಪ್‌ನಿಂದಾಗಿ ಗಸ್ತನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬಹುದು. ಕೆಳ ಹಂತದ ಸಿಬ್ಬಂದಿಯ ಮೊಬೈಲ್‌ಗೆ ಆ್ಯಪ್‌ ಅಳವಡಿಸಲಾಗಿದೆ. ಅದರ ಬಳಕೆಯ ಬಗ್ಗೆ ತರಬೇತಿಗಳನ್ನೂ ನೀಡಲಾಗುತ್ತಿದೆ. ಒಂದರೆಡು ದಿನಗಳಲ್ಲಿ ಆ್ಯಪ್‌ ಬಳಕೆ ಆರಂಭಿಸಲಾಗುವುದು’ ಎಂದು ಬಿಆರ್‌ಟಿ ಹುಲಿಸಂರಕ್ಷಿತ ಪ್ರದೇಶದ ನಿರ್ದೇಶಕ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸಂತೋಷ್‌ ಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಅರಣ್ಯದ ಒಳಗೆ ಇಂಟರ್‌ನೆಟ್‌ ಇಲ್ಲದಿದ್ದರೂ ಇದು ಕಾರ್ಯನಿರ್ವಹಿಸುತ್ತದೆ. ಸಿಬ್ಬಂದಿ ಆ್ಯಪ್‌ನಲ್ಲಿ ಮಾಹಿತಿಗಳನ್ನು ದಾಖಲು ಮಾಡಿಕೊಳ್ಳಬೇಕು’ ಎಂದು ಅವರು ಮಾಹಿತಿ ನೀಡಿದರು.

ಸಿಬ್ಬಂದಿ ಮೇಲೆ ನಿಗಾ: ‘ಎಲ್ಲ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಈ ಆ್ಯಪ್‌ ಬಳಕೆ ಕಡ್ಡಾಯ. ಅರಣ್ಯ, ವನ್ಯಜೀವಿ ಸಂರಕ್ಷಣೆಯ ದೃಷ್ಟಿಯಿಂದ ಇದರಿಂದ ಹೆಚ್ಚು ಅನುಕೂಲವಾಗಲಿದೆ. ಈ ಆ್ಯಪ್‌ ಬಳಸಿಕೊಂಡು ಸಿಬ್ಬಂದಿಯ ಕಾರ್ಯನಿರ್ವಹಣೆಯ ಮೇಲ್ವಿಚಾರಣೆಯನ್ನೂ ನಾವು ಮಾಡಬಹುದು’ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್‌ ಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕರ್ತವ್ಯ ನಿರ್ವಹಿಸಿದ ಸ್ಥಳದಿಂದ ಸಿಬ್ಬಂದಿ ಕಡ್ಡಾಯವಾಗಿ ವಿವರಗಳನ್ನು ಅಪ್‌ಲೋಡ್‌ ಮಾಡಬೇಕಾಗುತ್ತದೆ. ಅವರು ಎಲ್ಲಿಂದ ಅಪ್‌ಲೋಡ್‌ ಮಾಡಿದ್ದಾರೆ ಎಂಬ ಮಾಹಿತಿ ನಮಗೆ ಗೊತ್ತಾಗುತ್ತದೆ. ಹಾಗಾಗಿ, ಸಿಬ್ಬಂದಿ ತಮಗೆ ನಿಯೋಜಿಸಿದ ಬೀಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ಸುಲಭವಾಗಿ ತಿಳಿಯಬಹುದು’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT