ಗುಂಡ್ಲುಪೇಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರನ್ನು ಕೂಡಲೇ ವಜಾ ಗೊಳಿಸುವಂತೆ ಒತ್ತಾಯಿಸಿ ಗುಂಡ್ಲುಪೇಟೆ ಬ್ಲಾಕ್ ಹಾಗೂ ಯೂತ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ರಾಜ್ಯಪಾಲರನ್ನು ಕೂಡಲೇ ವಜಾ ಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ
ಪಟ್ಟಣದ ಕಾಂಗ್ರೆಸ್ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಗುಂಡ್ಲುಪೇಟೆ ಬ್ಲಾಕ್ ಹಾಗೂ ಯೂತ್ ಕಾಂಗ್ರೆಸ್ ಮುಖಂಡರು ಎಂಡಿಸಿಸಿ ವೃತ್ತ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಮುಂಭಾಗ ಮಾವನ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು. ಈ ವೇಳೆ ಕೇಂದ್ರ ಬಿಜೆಪಿ ಸರ್ಕಾರ ಹಾಗು ರಾಜ್ಯ ಪಾಲರ ವಿರುದ್ಧ ಧಿಕ್ಕಾರ ಘೋಷಣೆ ಕೂಗಿ ಆಕ್ರೋಶ ಹಾಕಿ, ನಂತರ ತಾಲೂಕು ಕಚೇರಿ ಮುಂದೆ ಜಮಾವಣೆಗೊಂಡರು.
ಈ ಸಂದರ್ಭದಲ್ಲಿ ಪ್ರತಿಭಟನಾನಿರತರು ಮಾತನಾಡಿ, ರಾಜ್ಯದಲ್ಲಿ 136 ಸ್ಥಾನ ಗೆದ್ದು ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ. ಈ ಮೂಲಕ ಕಳಂಕ ರಹಿತರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ರಾಜ್ಯಪಾಲರನ್ನು ತನ್ನ ಕೈಗೊಂಬೆ ಮಾಡಿಕೊಂಡಿದೆ. ತಮ್ಮದಲ್ಲದ ಪ್ರಕರಣದಲ್ಲಿ ಸಿದ್ದರಾಮಯ್ಯರನ್ನು ಸಿಲುಕಿಸಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ಇದು ಸಂವಿಧಾನ ವಿರೋಧಿ ನಡೆಯಾಗಿದೆ. ಆದ್ದರಿಂದ ಈ ಕೂಡಲೇ Áಜ್ಯ ಪಾಲರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಅಹಿಂದ ನಾಯಕ ಸಿದ್ದರಾಮಯ್ಯ 2ನೇ ಬಾರಿಗೆ ಮುಖ್ಯಮಂತ್ರಿಯಾಗಿರುವುದನ್ನು ಸಹಿಸದ ಕೇಂದ್ರ ಹಾಗು ರಾಜ್ಯ ಬಿಜೆಪಿ ನಾಯಕರು ಪ್ರತಿನಿತ್ಯ ಸಿಎಂ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಪರ ಇಡೀ ಸಚಿವ ಸಂಪುಟ, ಶಾಸಕರು ಸೇರಿದಂತೆ ರಾಜ್ಯದ ಹಿಂದುಳಿದ ಜನಾಂಗ ನಿಂತಿದೆ. ಇದನ್ನು ಬಿಜೆಪಿಯವರು ಮನಗಾಣಬೇಕು. ಈ ಹಿಂದೆ ಬಿಜೆಪಿ-ಜೆಡಿಎಸ್ ಪಕ್ಷದ ಹಲವು ಮಂದಿ ಹಗರಣಗಳನ್ನು ಮಾಡಿ ಮುಖ್ಯವಾಹಿನಿಗೆ ಬಂದಿದ್ದರು ಸಹ ರಾಜ್ಯಪಾಲರು ಸುಮ್ಮನಿದ್ದು, ಇದೀಗ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ಕ್ರಮ ಸರಿಯಲ್ಲ ಎಂದು ಆಕ್ರೋಶ ಹೊರ ಹಾಕಿದರು.
ಈ ವೇಳೆ ಪ್ರತಿಭಟನಾ ನಿರತ ಗುಂಡ್ಲುಪೇಟೆ ಬ್ಲಾಕ್ ಹಾಗೂ ಯೂತ್ ಕಾಂಗ್ರೆಸ್ ಮುಖಂಡರು ತಹಸೀಲ್ದಾರ್ ಟಿ.ರಮೇಶ್ ಬಾಬು ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಬಿ.ರಾಜಶೇಖರ, ಪುರಸಭೆ ಸದಸ್ಯರಾದ ಮಹಮ್ಮದ್ ಇಲಿಯಾಸ್, ಶ್ರೀನಿವಾಸ ಕಣ್ಣಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಕಬ್ಬಹಳ್ಳಿ ಮಹೇಶ್, ಎಸ್‍ಆರ್‍ಎಸ್ ರಾಜಶೇಖರ್, ಜಿ.ಎಲ್.ರಾಜು, ರಘು, ವಿಶ್ವ, ಹಜರ್, ಕಲ್ಲಿಗೌಡನಹಳ್ಳಿ ಬಸವರಾಜು, ಭೀಮನಬೀಡು ಮಲ್ಲೀಕ್, ದೇವರಹಳ್ಳಿ ಪ್ರಕಾಶ್, ಸಂದೀಪ್ ಸೇರಿದಂತೆ ಹಲವು ಮಂದಿ ಕಾಂಗ್ರೆಸ್ ಮುಖಂಡರು ಹಾಗು ಕಾರ್ಯಕರ್ತರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.