ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷಮುಕ್ತ ರಾಜ್ಯ ಕಟ್ಟುವ ಪ್ರಯತ್ನ: ಚುಕ್ಕಿ ನಂಜುಂಡಸ್ವಾಮಿ

‘ನಮ್ದು’ ಸಾವಯವ ಆಹಾರೋತ್ಪನ್ನಗಳ ಬ್ರ್ಯಾಂಡ್‌ ಲೋಕಾರ್ಪಣೆ, ಮಳಿಗೆ ಉದ್ಘಾಟನೆ
Last Updated 2 ಅಕ್ಟೋಬರ್ 2020, 14:02 IST
ಅಕ್ಷರ ಗಾತ್ರ

ಚಾಮರಾಜನಗರ: ‘ರಾಜ್ಯವನ್ನು ವಿಷಮುಕ್ತ ಮಾಡುವ, ಜನರಿಗೆ ವಿಷಮುಕ್ತ ಆಹಾರ ತಲುಪಿಸುವ, ವಿಷಮುಕ್ತ ಕೃಷಿಯನ್ನು ಮಾಡಿ ಎಂದು ರೈತರಿಗೆ ಹೇಳುವ, ಕೃಷಿಕರನ್ನು ಸಾಲದ ಹೊರೆಯಿಂದ ಹೊರತರುವ, ಆತ್ಮಹತ್ಯೆ ದಾರಿ ತುಳಿದಿರುವ ಅನ್ನದಾತನಿಗೆ ಆಶಾದಾಯಕ ಹಾದಿ ತೋರಿಸುವ ಪ್ರಯತ್ನಯೇ ‘ನಮ್ದು’ ಬ್ರ್ಯಾಂಡ್‌ ಹಾಗೂ ಆಹಾರೋತ್ಪನ್ನ ಮಾರಾಟ ಮಳಿಗೆಯ ಆರಂಭ’ ಎಂದು ಅಮೃತಭೂಮಿ ಅಂತರರಾಷ್ಟ್ರೀಯ ಸುಸ್ಥಿರ ಅಭಿವೃದ್ಧಿ ಕೇಂದ್ರದ ಕಾರ್ಯನಿರ್ವಾಹಕ ಧರ್ಮದರ್ಶಿ ಚುಕ್ಕಿ ನಂಜುಂಡಸ್ವಾಮಿ ಅವರು ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಅಮೃತಭೂಮಿ ಅಂತರರಾಷ್ಟ್ರೀಯ ಸುಸ್ಥಿರ ಅಭಿವೃದ್ಧಿ ಕೇಂದ್ರ, ಮೈಸೂರಿನ ನಿಸರ್ಗ ಟ್ರಸ್ಟ್‌ ಸೇರಿದಂತೆ ನೈಸರ್ಗಿಕ ಕೃಷಿಯಲ್ಲಿ ತೊಡಗಿರುವ ವಿವಿಧ ಸಂಘಗಳು ಒಟ್ಟಾಗಿ ಆರಂಭಿಸಿರುವ ವಿಷಮುಕ್ತ ಆಹಾರೋತ್ಪನ್ನಗಳ ಬ್ರ್ಯಾಂಡ್‌ ‘ನಮ್ದು’ ಹಾಗೂ ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರೈತರೇ ಸ್ವತಃ ಉತ್ಪನ್ನಗಳನ್ನು ತಯಾರಿಸಿ, ನೇರವಾಗಿ ಮಾರಾಟ ಮಾಡುವ ಪ್ರಯತ್ನಗಳು ಈ ಹಿಂದೆ ನಡೆದಿದ್ದವು. ಆದರೆ, ಅವುಗಳಿಗೆ ಸಾಂಘಿಕ ರೂಪ ಕೊಡುವ ಅವಶ್ಯಕತೆ ಇತ್ತು. ಅದನ್ನು ವ್ಯವಸ್ಥೆಯ ಒಳಗಡೆಗೆ ತರಬೇಕಾಗಿತ್ತು. ಆ ಕೆಲಸ ಈಗ ಆಗಿದೆ. ಚಾಮರಾಜನಗರದಲ್ಲಿ ಇದು ಆರಂಭವಾಗಿದ್ದು, ಬೀದರ್‌ವರೆಗೂ ವಿಸ್ತರಿಸುತ್ತೇವೆ’ ಎಂದರು.

ಸಂಘರ್ಷವೊಂದೇ ಸಾಲದು: ‘ರೈತ ದೇಶದ ಬೆನ್ನೆಲುಬು ಎಂದು ಸರ್ಕಾರಗಳು ಹೇಳುತ್ತಾ ಬಂದಿವೆ. ಆದರೆ, ಆ ಬೆನ್ನೆಲುಬನ್ನು ಮುರಿಯುವ ಕೆಲಸ ಮಾಡುತ್ತಿವೆ. ಅಲ್ಪಸ್ವಲ್ಪ ಮಾರುಕಟ್ಟೆ ಭದ್ರತೆಯನ್ನು ಕಿತ್ತು ಹಾಕುವ ಕೆಲಸ ಮಾಡುತ್ತಿವೆ.ನಮಗೆ ಬೇಕಾದ ಬದಲಾವಣೆಗಳನ್ನು ನಾವೇ ಮಾಡಿಕೊಳ್ಳಬೇಕು. ಸಂಘರ್ಷವೊಂದೇ ಸಾಕಾಗುವುದಿಲ್ಲ. ಸರ್ಕಾರ, ರೈತರನ್ನು ಎಚ್ಚರಿಸುವುದಕ್ಕೆ ಹೋರಾಟ ಅಗತ್ಯ. ಆದರೆ, ಬಯಸುವ ಬದಲಾವಣೆಯನ್ನು ನಾವೇ ಕಟ್ಟಬೇಕು. ಸಂಘರ್ಷ ಮತ್ತು ನಿರ್ಮಾಣ ಸಮಾಜದ ಎರಡು ಗಾಲಿಗಳು. ಇದುವರೆಗೆ ರೈತ ಚಳವಳಿ ಒಂದೇ ಗಾಲಿಯಲ್ಲಿ ಚಲಿಸುತ್ತಿತ್ತು’ ಎಂದು ಚುಕ್ಕಿ ನಂಜುಂಡಸ್ವಾಮಿ ಅವರು ಹೇಳಿದರು.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್‌ಕುಮಾರ್‌ ಅವರು ಮಾತನಾಡಿ, ‘ದಾನ ಧರ್ಮ ಉಳಿದುಕೊಂಡಿದೆ ಎಂದರೆ ಅದು ರೈತ ಸಮುದಾಯದಲ್ಲಿ ಮಾತ್ರ. ಕೋವಿಡ್‌ನಿಂದಾಗಿ ಬಹಳಷ್ಟು ದೇಶಗಳಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ಆದರೆ, ನಮ್ಮ ದೇಶಕ್ಕೆ ಹೆಚ್ಚಿನ ತೊಂದರೆಯಾಗಿಲ್ಲ. ಇದರಲ್ಲಿ ರೈತರ ಕೊಡುಗೆ ಇದೆ. ರೈತರು ಮಾಡುತ್ತಿರುವ ಈ ಕಾರ್ಯ ಉತ್ತಮ ಹೆಜ್ಜೆ ಎಂದರು. ಇದಕ್ಕೆ ಕೃಷಿಕ ಸಮಾಜ ಒಂದೇ ಸಹಕಾರ ನೀಡಿದರೆ ಸಾಲದು, ಪ್ರತಿಯೊಬ್ಬರೂ ಬರಬೇಕು ವ್ಯಾಪಕ ಪ್ರಚಾರ ಆಗಬೇಕಾಗಿದೆ. ಸಾವಯವ ಕೃಷಿ ಚಳವಳಿ ರೂಪದಲ್ಲಿ ನಡೆಯಬೇಕು’ ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಚ್‌.ಟಿ.ಚಂದ್ರಕಲಾ ಅವರು ಮಾತನಾಡಿ, ‘ಹೊನ್ನೂರು ಪ್ರಕಾಶ್ ಅವರು ಸಾವಯವ ಕೃಷಿಯನ್ನು ಜನರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಸಾಯವಯ ಉತ್ಪನ್ನಗಳಿಗೆ ಇಲಾಖೆಯಿಂದ ಮಾರುಕಟ್ಟೆ ಕಲ್ಪಿಸುವ ಯೋಚನೆ ಇದೆ. ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ಕೂಡ ಮಾಡಿದ್ದೇವೆ’ ಎಂದರು.

ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಅವರು ಮಾತನಾಡಿ, ‘ವಿಷಯುಕ್ತ ಆಹಾರವನ್ನು ಸೇವಿಸಿ ನಾವು ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ₹20 ಸಾವಿರ, ₹30 ಸಾವಿರದ ಆಸೆಗೆ ಚಿಕಿತ್ಸೆಗಾಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದೇವೆ. ಇದು ತಪ್ಪಬೇಕು. ವಿಷಮುಕ್ತ ಆಹಾರವನ್ನೇ ಸೇವಿಸಬೇಕು. ನೈಸರ್ಗಿಕ ಕೃಷಿ ಪದ್ಧತಿಯಿಂದಲೂ ರೈತರು ಸ್ವಾವಲಂಬಿಗಳಾಗಬಹುದು’ ಎಂದು ಹೇಳಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಬಿ.ಹದ್ದಣ್ಣವರ್‌, ಕೃಷಿಕ ಸಮಾಜದ ಅಧ್ಯಕ್ಷ ಚಿಕ್ಕಸ್ವಾಮಿ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌, ರೈತ ಮುಖಂಡರು, ಸಾವಯವ ಕೃಷಿಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT