ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಳೆ ನಿರ್ವಹಣೆ: ಬೇಕಿದೆ ಇನ್ನಷ್ಟು ಸಿದ್ಧತೆ

ನಗರ ಸ್ಥಳೀಯರ ಸಂಸ್ಥೆಗಳಲ್ಲಿ ಚರಂಡಿ, ಒಳಚರಂಡಿ ಸಮಸ್ಯೆ ಹೆಚ್ಚು, ಮುರಿದು ಬೀಳುವ ವಿದ್ಯುತ್‌ ಕಂಬಗಳು
Published 28 ಮೇ 2024, 5:16 IST
Last Updated 28 ಮೇ 2024, 5:16 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಾದ್ಯಂತ ಮುಂಗಾರು ಪೂರ್ವ ಮಳೆ ಕೊಂಚ ವಿಳಂಬವಾದರೂ ಭರ್ಜರಿಯಾಗಿಯೇ ಸುರಿಯುತ್ತಿದೆ. ಗಾಳಿ ಮಳೆಗೆ ನಗರ, ಪಟ್ಟಣ ಪ್ರದೇಶಗಳಲ್ಲಿ ಮಾತ್ರವಲ್ಲದೆ, ಗ್ರಾಮೀಣ ಭಾಗಗಳಲ್ಲೂ ಅವಾಂತರ ಸೃಷ್ಟಿಯಾಗಿದೆ.

ನಗರ, ಪಟ್ಟಣ ವ್ಯಾಪ್ತಿಯಲ್ಲಿ ಚರಂಡಿ ಉಕ್ಕೇರುವುದು, ಗಾಳಿಗೆ ಮರಗಳು ಬಿದ್ದು ಸಮಸ್ಯೆಗಳಾದರೆ, ಗ್ರಾಮೀಣ ಭಾಗಗಳಲ್ಲಿ ಬೆಳೆ ಹಾನಿಯ ಜೊತೆಗೆ ವಿದ್ಯುತ್‌ ಕಂಬಗಳು ಮುರಿದು ಬೀಳುವುದು, ಮರಗಳು ರಸ್ತೆಗೆ ಬೀಳುವಂತಹ ಪ್ರಕರಣಗಳು ವರದಿಯಾಗುತ್ತಿವೆ.  

ನಗರ ಸ್ಥಳೀಯ ಸಂಸ್ಥೆಗಳು, ಚಾಮರಾಜನಗರ ವಿದ್ಯುತ್‌ ಸರಬರಾಜು ನಿಗಮ (ಸೆಸ್ಕ್‌) ಮಳೆಗಾಲ ಎದುರಿಸಲು ಸಿದ್ಧತೆ ನಡೆಸಿವೆ. ಸಮಸ್ಯೆ ಎದುರಾದಾಗ, ಸ್ಪಂದಿಸುವ ಕೆಲಸಗಳನ್ನು ಮಾಡುತ್ತಿವೆ. ಸ್ಪಂದನೆ ವಿಳಂಬವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳೂ ಬರುತ್ತಿವೆ.  

ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ ನಾಲ್ಕೈದು ಮರಗಳು ಗಾಳಿ ಮಳೆಗೆ ಬಿದ್ಧಿವೆ. ಅದೃಷ್ಟವಶಾತ್‌ ಜೀವ ಹಾನಿ ಸಂಭವಿಸಿಲ್ಲ. ನಗರಸಭೆ ಅಧಿಕಾರಿಗಳು ತ‌ಕ್ಷಣವೇ ಸ್ಪಂದಿಸಿ ಅವುಗಳನ್ನು ತೆರವುಗೊಳಿಸಿದ್ದಾರೆ. ನಗರ ವ್ಯಾಪ್ತಿಯ ರಸ್ತೆಗಳ ಬದಿಯಲ್ಲಿ ದೊಡ್ಡ ಮರಗಳು ಇಲ್ಲದಿರುವುದರಿಂದ ಗಾಳಿ ಮಳೆಗೆ ಉರುಳಿ ಬೀಳುವ ಅಪಾಯ ಇಲ್ಲ. 

ವಿದ್ಯುತ್‌ ಕಂಬಗಳು ಧರೆಗೆ

15 ದಿನಗಳ ಅವಧಿಯಲ್ಲಿ ಗಾಳಿ ಮಳೆಗೆ ಮರಗಳಿಗಿಂತಲೂ ಹೆಚ್ಚಾಗಿ ಧರೆಗುರುಳಿದ್ದು ವಿದ್ಯುತ್‌ ಕಂಬಗಳು. ಇಡೀ ಜಿಲ್ಲೆಯಲ್ಲಿ 348 ವಿದ್ಯುತ್‌ ಕಂಬಗಳು ಮುರಿದಿವೆ. 17 ವಿದ್ಯುತ್‌ ಪರಿವರ್ತಕಗಳು (ಟಿಸಿ) ಸುಟ್ಟು ಹೋಗಿವೆ. 

ಸೆಸ್ಕ್‌ನ ಕೊಳ್ಳೇಗಾಲ ಉಪವಿಭಾಗ ವ್ಯಾಪ್ತಿಯಲ್ಲಿ 148 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಕೊಳ್ಳೇಗಾಲ ತಾಲ್ಲೂಕಿನಲ್ಲಿ 93, ಹನೂರು ತಾಲ್ಲೂಕಿನಲ್ಲಿ 45 ಮತ್ತು ಯಳಂದೂರು ತಾಲ್ಲೂಕುಗಳಲ್ಲಿ 10 ಕಂಬಗಳು ಧರಾಶಾಹಿಯಾಗಿವೆ. ಐದು ವಿದ್ಯುತ್‌ ಪರಿವರ್ತಕಗಳು ವಿವಿಧ ಕಾರಣಗಳಿಂದ ಸುಟ್ಟು ಹೋಗಿವೆ.

ಚಾಮರಾಜನಗರ ಉಪವಿಭಾಗ ವ್ಯಾಪ್ತಿಯಲ್ಲಿ 200 ವಿದ್ಯುತ್‌ ಕಂಬ‌ಗಳು ಮುರಿದು ಬಿದ್ದಿವೆ. ಈ ಪೈಕಿ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 122 ಮತ್ತು ಚಾಮರಾಜನಗರ ತಾಲ್ಲೂಕಿನಲ್ಲಿ 78 ಕಂಬಗಳು ಮುರಿದಿವೆ. ಚಾಮರಾಜನಗರ ತಾಲ್ಲೂಕಿನಲ್ಲಿ ಮೂರು, ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಒಂಬತ್ತು ಸೇರಿದಂತೆ 12 ವಿದ್ಯುತ್‌ ಪರಿವರ್ತಕಗಳು ಹಾಳಾಗಿವೆ.

ಟಿಸಿಗಳ ನಿರ್ವಹಣೆ ಕೊರೆತೆಯಿಂದ ಗುಂಡ್ಲುಪೇಟೆ ತಾಲ್ಲೂಕಿನ ಮಗುವಿನಹಳ್ಳಿ, ಕಗ್ಗಳದ ಹುಂಡಿ ಗ್ರಾಮದಲ್ಲಿ ಜಾನುವಾರುಗಳಿಗೆ ವಿದ್ಯುತ್ ಪ್ರವಹಿಸಿ ಮೃತ ಪಟ್ಟಿವೆ. 

ಮಳೆಗಾಲ ಆರಂಭಕ್ಕೂ ಮುನ್ನ ಸೆಸ್ಕ್‌ ಸಿಬ್ಬಂದಿ ತಂತಿಗಳಿಗೆ ತಾಗುತ್ತಿದ್ದ ಮರಗಳ ರೆಂಬೆಗಳನ್ನು ಕತ್ತರಿಸುತ್ತಿದ್ದಾರೆ. ನಗರ, ಪಟ್ಟಣ ಪ್ರದೇಶಗಳಲ್ಲಿ ಜಂಗಲ್‌ ಕಟಿಂಗ್‌ ನಡೆಸಲಾಗಿದೆ. ಗ್ರಾಮೀಣ ಭಾಗಗಳಲ್ಲೂ ಸಿಬ್ಬಂದಿ ಮಾಡುತ್ತಿದ್ದಾರೆ. ಆದರೆ, ಪೂರ್ಣಗೊಂಡಿಲ್ಲ. ವಿದ್ಯುತ್‌ ಪರಿವರ್ತಕಗಳ ನಿರ್ವಹಣೆ ಕೊರತೆಯ ಬಗ್ಗೆಯೂ ದೂರುಗಳು ಬಂದಿವೆ.  

ವಿದ್ಯುತ್‌ ಕಣ್ಣಮುಚ್ಚಾಲೆ: ಗಾಳಿ ಮಳೆ ಸಂದರ್ಭದಲ್ಲಿ ಕಂಬ ಮುರಿದು ವಿದ್ಯುತ್‌ ಸಂಪರ್ಕ ಕಡಿತವಾಗುವುದು ಒಂದೆಡೆಯಾದರೆ, ಕೆಲವು ಕಡೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಸೆಸ್ಕ್‌ ಸಿಬ್ಬಂದಿ ವಿದ್ಯು್‌ ಪೂರೈಕೆ ನಿಲ್ಲಿಸುತ್ತಾರೆ. 

ಸಾಮಾನ್ಯವಾಗಿ ಕಾಡಂಚಿನ ಗ್ರಾಮಗಳಿಗೆ ಹೆಚ್ಚು ಮಳೆಯಾಗುತ್ತದೆ. ಮಳೆ ಸಂದರ್ಭದಲ್ಲಿ ಗ್ರಾಮದ ಭಾಗಗಳಿಗೆ ವಿದ್ಯುತ್ ತೆಗೆಯಲಾಗುತ್ತದೆ. ಇದರಿಂದಾಗಿ ಕಾಡಂಚಿನ ಗ್ರಾಮದ ಜನರು ಕತ್ತಲೆಯಲ್ಲಿ ದಿನ ಕಳೆಯುವಂತಾಗಿದೆ. ಕಾಡಂಚಿನ ಗ್ರಾಮಗಳಲ್ಲಿ ಹಂದಿ ಹಾವಳಿ ಹೆಚ್ಚಿದೆ. ಚಿರತೆಗಳು ಗ್ರಾಮಗಳಿಗೆ ನುಗ್ಗಿ ಮೇಕೆ, ನಾಯಿಗಳನ್ನು ತೆಗೆದುಕೊಂಡು ಹೋಗುತ್ತಿವೆ ಎಂಬುದು ಕಾಡಂಚಿನ ರೈತರ ಅಳಲು.

ಚರಂಡಿ, ಯುಜಿಡಿಯದ್ದೇ ಸಮಸ್ಯೆ

ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಹೆಚ್ಚು ಸಮಸ್ಯೆಗಳು ಕಂಡು ಬರುತ್ತಿರುವುದು ನಗರ ಸ್ಥಳೀಯ ಸಂಸ್ಥೆಗಳಲ್ಲಿ. ಚರಂಡಿ, ಒಳಚರಂಡಿ ಕಟ್ಟಿಕೊಂಡು ನೀರು ರಸ್ತೆ, ಮನೆಗಳಿಗೆ ಉಕ್ಕುವುದು ಮಾತ್ರವಲ್ಲದೆ, ಕೊಳಚೆ ನೀರು ಹರಿದು ವಾತಾವರಣವೇ ಕಲುಷಿತವಾಗುತ್ತಿದೆ. 

ಜಿಲ್ಲೆಯಲ್ಲಿರುವ ಐದೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈ ಸಮಸ್ಯೆ ಇದ್ದು, ನಗರಸಭೆಯಾಗಿರುವ ಚಾಮರಾಜನಗರ, ಕೊಳ್ಳೇಗಾಲಗಳಲ್ಲಿ ಇದು ಕೊಂಚ ಜಾಸ್ತಿಯೇ ಇದೆ. 

ಮಳೆ ಬಂದಾಗ ಚರಂಡಿ ಕಟ್ಟಿಕೊಳ್ಳುತ್ತದೆ. ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸಿಬ್ಬಂದಿ ಯಂತ್ರಗಳ ಮೂಲಕ ಕಸಕಡ್ಡಿಗಳನ್ನು ಚರಂಡಿಯಿಂದ ತೆಗೆದು ಮೇಲಕ್ಕೆ ಹಾಕುತ್ತಾರೆ. ನಂತರ ಆ ತ್ಯಾಜ್ಯವನ್ನು ತಕ್ಷಣಕ್ಕೆ ಅಲ್ಲಿಂದ ತೆರವುಗೊಳಿಸುವುದಿಲ್ಲ. ಇದು  ಅನೈರ್ಲಮ್ಯವನ್ನು ಉಂಟು ಮಾಡುತ್ತಿದ್ದು, ರೋಗ ರುಜಿನಗಳ ಭೀತಿಯನ್ನೂ ಸೃಷ್ಟಿಸಿದೆ. 

‘ಮಳೆ ಬಂದಾಗ ಉಂಟಾಗುವ ಸಮಸ್ಯೆಗಳನ್ನು ಬಗೆಹರಿಸಲು ನಾವು ಆದ್ಯತೆ ನೀಡುತ್ತಿವೆ. ನಂತರ ಹೂಳನ್ನು ತೆರವುಗೊಳಿಸುತ್ತೇವೆ. ಆದರೆ, ನಮ್ಮಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಎಲ್ಲವನ್ನೂ ಒಂದೇ ಸಲಕ್ಕೆ ಮಾಡುವುದು ಕಷ್ಟವಾಗುತ್ತದೆ’ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಅಧಿಕಾರಿಗಳು.

ನಿರ್ವಹಣೆ: ಸೂರ್ಯನಾರಾಯಣ ವಿ.

ಪೂರಕ ಮಾಹಿತಿ: ಮಹದೇವ್‌ ಹೆಗ್ಗವಾಡಿಪುರ, ನಾ.ಮಂಜುನಾಥಸ್ವಾಮಿ, ಅವಿನ್ ಪ್ರಕಾಶ್‌ ವಿ., ಬಿ.ಬಸವರಾಜು, ಮಲ್ಲೇಶ ಎಂ.

ಕೊಳ್ಳೇಗಾಲದಲ್ಲಿ ತಂತಿಮೇಲೆ ಬಿದ್ದ ಮರ
ಕೊಳ್ಳೇಗಾಲದಲ್ಲಿ ತಂತಿಮೇಲೆ ಬಿದ್ದ ಮರ
ಚಾಮರಾಜನಗರದ ಗುಂಡ್ಲುಪೇಟೆ ರಸ್ತೆಯು ಹೊಂಡಗಳು ಸೃಷ್ಟಿಯಾಗಿದೆ
ಚಾಮರಾಜನಗರದ ಗುಂಡ್ಲುಪೇಟೆ ರಸ್ತೆಯು ಹೊಂಡಗಳು ಸೃಷ್ಟಿಯಾಗಿದೆ
ಚಾಮರಾಜನಗರದ ಬಡಾವಣೆಯೊಂದರಲ್ಲಿ ಕಟ್ಟಿಕೊಂಡಿರುವ ಚರಂಡಿಯ ಚಪ್ಪಡಿ ಕಲ್ಲನ್ನು ತೆರವುಗೊಳಿಸಿರುವುದು
ಚಾಮರಾಜನಗರದ ಬಡಾವಣೆಯೊಂದರಲ್ಲಿ ಕಟ್ಟಿಕೊಂಡಿರುವ ಚರಂಡಿಯ ಚಪ್ಪಡಿ ಕಲ್ಲನ್ನು ತೆರವುಗೊಳಿಸಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT