ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಮಳೆಯ ಹೊಡೆತ, ಸೆಸ್ಕ್‌ಗೆ ಭಾರಿ ನಷ್ಟ

ಸಮರೋಪಾದಿ ಕಾರ್ಯಾಚರಣೆ ಮಾಡಿದ್ದ ಸಿಬ್ಬಂದಿ, ಉಳಿದ ಸಮಯದಲ್ಲಿ ನಿರ್ವಹಣೆ ಕೊರತೆ– ಆರೋಪ
Last Updated 6 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಹಲವು ದಶಕಗಳಲ್ಲೇ ಕಂಡು ಕೇಳರಿಯದಂತಹ ಮಳೆ ಸುರಿದ ಪರಿಣಾಮ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ (ಸೆಸ್ಕ್‌) ಕೂಡ ಭಾರಿ ಪ್ರಮಾಣದಲ್ಲಿ ನಷ್ಟ ಅನುಭವಿಸಿದೆ.

ಜೂನ್‌ನಿಂದ ಅಕ್ಟೋಬರ್‌ವರೆಗಿನ ಹಾನಿಯ ಅಂಕಿ ಅಂಶಗಳನ್ನು ಗಮನಿಸಿದರೆ ಸೆಸ್ಕ್‌ಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಅಂದಾಜಿನ ಪ್ರಕಾರ ₹90 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ. ಮರಗಳು ತುಂಡಾಗಿ ಬಿದ್ದುದರಿಂದ, ಗಾಳಿ ಸೇರಿದಂತೆ ಮಳೆಗೆ ಸಂಬಂಧಿಸಿದ ವಿವಿಧ ಕಾರಣಗಳಿಂದ ನೂರಾರು ವಿದ್ಯುತ್‌ ಕಂಬಗಳು ತುಂಡಾಗಿವೆ. ಹತ್ತಾರು ವಿದ್ಯುತ್‌ ಪರಿವರ್ತಕಗಳು ಹಾಳಾಗಿವೆ.

ಸೆಸ್ಕ್‌ನ ಚಾಮರಾಜನಗರ ಹಾಗೂ ಕೊಳ್ಳೇಗಾಲ ಉಪವಿಭಾಗಗಳು ನೀಡಿರುವ ಮಾಹಿತಿ ಪ್ರಕಾರ, ಐದು ತಾಲ್ಲೂಕುಗಳಲ್ಲಿ535 ವಿದ್ಯುತ್‌ ಕಂಬಗಳು ಧರೆಗೆ ಉರುಳಿವೆ. 49 ವಿದ್ಯುತ್‌ ಪರಿವರ್ತಕಗಳು ಹಾಳಾಗಿವೆ. ವಿದ್ಯುತ್‌ ಪರಿವರ್ತಕಗಳನ್ನು ಇಡುವ 13 ಕಟ್ಟೆಗಳು ಹಾನಿಗೀಡಾಗಿವೆ. 2.68 ಕಿ.ಮೀನಷ್ಟು ಉದ್ದದ ವಿದ್ಯುತ್‌ ತಂತಿ ಹಾಳಾಗಿದೆ.

ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಪೂರ್ವ ಅವಧಿಯಿಂದಲೇ ಮಳೆ ಆರಂಭವಾಗಿತ್ತು. ಮುಂಗಾರು ಅವಧಿಯಲ್ಲಿ ಅದರಲ್ಲೂ ಆಗಸ್ಟ್‌ನಲ್ಲಿ ಐದು ದಶಕಗಳಲ್ಲಿ ಬಾರದೇ ಇದ್ದಂತಹ ಮಳೆ ಜಿಲ್ಲೆಯಾದ್ಯಂತ ಸುರಿದಿತ್ತು. ಅದೇ ತಿಂಗಳಲ್ಲಿ ಸೆಸ್ಕ್‌ಗೆ ಹೆಚ್ಚು ಹಾನಿಯಾಗಿದೆ ಎಂದು ಹೇಳುತ್ತಾರೆ ಅಧಿಕಾರಿಗಳು.

ಸಮರೋಪಾದಿ ಕಾರ್ಯ: ಚಾಮರಾಜನಗರ ಹಾಗೂ ಕೊಳ್ಳೇಗಾಲ ತಾಲ್ಲೂಕಿನಲ್ಲಿ ಹೆಚ್ಚು ಹಾನಿಯಾಗಿದ್ದು, ಗ್ರಾಮೀಣ ಭಾಗಗಳಲ್ಲಿ ವಿದ್ಯುತ್‌ ಕಂಬಗಳು ಧರೆಗೆ ಉರುಳಿದ ಕಾರಣಕ್ಕೆ ಹಲವು ಊರುಗಳು ದಿನಗಟ್ಟಲೆ ಕತ್ತಲೆಯಲ್ಲಿ ಮುಳುಗಿದ್ದವು. ಸೆಸ್ಕ್‌ ಸಿಬ್ಬಂದಿ ಹಗಲು ರಾತ್ರಿ ಎನ್ನದೆ ಸಮಾರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿ, ಗ್ರಾಮಗಳಿಗೆ ಮತ್ತೆ ವಿದ್ಯುತ್‌ ಸಂಪರ್ಕ ಕೊಡಿಸಿದ್ದರು.

ಕಾರ್ಯಾಚರಣೆಗೆ ಅಡ್ಡಿ: ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಹಲವು ಕಡೆಗಳಲ್ಲಿ ಕಾರ್ಯಾಚರಣೆಗೂ ಅಡ್ಡಿಯಾಗಿತ್ತು. ಜಿಲ್ಲೆಯ ಹಲವು ಕಡೆಗಳಲ್ಲಿ ಕಪ್ಪು ಮಣ್ಣು ಇದೆ. ಮಳೆ ಬಿದ್ದ ಕೂಡಲೇ ಕಪ್ಪು ಮಣ್ಣು ಜೌಗು ರೀತಿ ಬದಲಾಗುತ್ತದೆ. ವಿದ್ಯುತ್‌ ಕಂಬಗಳನ್ನು ಹಾಕಲು ಆಗುವುದಿಲ್ಲ. ಇದಲ್ಲದೇ ಭೂಮಿಯಲ್ಲಿ ತೇವಾಂಶ ಈಗಲೂ ಇದ್ದು, ಹೊಸ ಕಂಬ ನೆಡಲು ಗುಂಡಿ ತೆಗೆಯಲೂ ಆಗುತ್ತಿಲ್ಲ. ಈ ಕಾರಣದಿಂದ ಹಲವು ಕಡೆಗಳಲ್ಲಿ ಇನ್ನೂ ಹೊಸ ಕಂಬಗಳನ್ನು ಅಳವಡಿಸಲು ಸಾಧ್ಯವಾಗಿಲ್ಲ. ಆದರೆ, ಗ್ರಾಹಕರಿಗೆ ಪರ್ಯಾಯ ದಾರಿಯಲ್ಲಿ ತಾತ್ಕಾಲಿಕವಾಗಿ ಸೆಸ್ಕ್‌ ವಿದ್ಯುತ್‌ ಸಂಪರ್ಕ ಕಲ್ಪಿಸಿದೆ.

ತಾಲ್ಲೂಕಿನ ಚಂದಕವಾಗಿ ಹೋಬಳಿಯಲ್ಲಿ ಕಳೆದ ತಿಂಗಳು ರೈತರೊಬ್ಬರು ರಾತ್ರಿ ಜಮೀನಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ಮೃತಪಟ್ಟಿದ್ದರು. ಮಳೆಯ ಕಾರಣದಿಂದ ನೇರವಾಗಿ ಈ ದುರ್ಘಟನೆ ನಡೆಯದಿದ್ದರೂ, ಜಮೀನಿನಲ್ಲಿರುವ ತೆಂಗಿನಮರದ ಗರಿ ಬಿದ್ದು, ವಿದ್ಯುತ್‌ ತಂತಿ ತುಂಡಾಗಿತ್ತು. ರೈತ‌ನ ಕುಟುಂಬಕ್ಕೆ ಪರಿಹಾರ ನೀಡುವ ಪ್ರಕ್ರಿಯೆಯನ್ನು ಸೆಸ್ಕ್‌ ಆರಂಭಿಸಿದೆ.

ಇದಲ್ಲದೇ ತಾಲ್ಲೂಕಿನ ಹೆಬ್ಬಸೂರು ಹಾಗೂ ನಲ್ಲೂರಿನಲ್ಲಿ ವಿದ್ಯುತ್‌ ತಂತಿ ತುಳಿದು ಜಾನುವಾರು ಮೃತ‍ಪಟ್ಟಿದ್ದು ವರದಿಯಾಗಿತ್ತು.

ಬಾಗಿರುವ ಕಂಬಗಳು: ‘ಮಳೆಗಾಲದಲ್ಲಿ ಆಗಿರುವ ಹಾನಿಯನ್ನು ಸೆಸ್ಕ್‌ ಸಿಬ್ಬಂದಿ ಬಹುತೇಕ ಎಲ್ಲ ಕಡೆಗಳಲ್ಲೂ ದುರಸ್ತಿ ಪಡಿಸಿದ್ದಾರೆ.ಆದರೆ, ಉಳಿದ ಸಮಯದಲ್ಲಿ ಇದೇ ರೀತಿಯ ಕೆಲಸ ನಡೆಯುವುದಿಲ್ಲ.ಟಿಸಿ, ವಿದ್ಯುತ್‌ ಕಂಬ, ತಂತಿಗಳ ನಿರ್ವಹಣೆಯನ್ನು ಸೆಸ್ಕ್‌ ನಿಯಮಿತವಾಗಿ ನಡೆಸುತ್ತಿಲ್ಲ’ಎಂಬುದು ಜನರ ದೂರು.

‘ಬಹುತೇಕ ಕಡೆಗಳಲ್ಲಿ ವಿದ್ಯುತ್‌ ಕಂಬಗಳು ಬಾಗಿರುತ್ತವೆ. ಇದು ಯಾವತ್ತಿಗೂ ಅಪಾಯಕಾರಿ. ವಿದ್ಯುತ್‌ ಪರಿವರ್ತಕ, ಕಂಬಗಳಿಗೆ ಕಳೆ ಬಳ್ಳಿಗಳು ಆವರಿಸಿರುತ್ತವೆ. ಇವುಗಳನ್ನು ನಿಯಮಿವಾಗಿ ನಿರ್ವಹಣೆ ಮಾಡಲು ಸೆಸ್ಕ್‌ ಗಮನಹರಿಸುತ್ತಿಲ್ಲ’ ಎಂಬುದು ಜನ ಸಾಮಾನ್ಯರ
ಅಳಲು.

ಹಲವು ಕಡೆಗಳಲ್ಲಿ ವಿದ್ಯುತ್‌ ಪರಿವರ್ತಕಗಳಿಗೆ ಸುರಕ್ಷತಾ ಚೌಕಟ್ಟು ಇಲ್ಲ. ಕೈಗೆಟುಕುವಂತೆ ಇರುತ್ತದೆ. ಬೇಸಿಗೆ ಕಾಲದಲ್ಲಿ ತಂತಿಗಳು ಜೋತು ಬೀಳುವ ಸಮಸ್ಯೆ ಸಾಮಾನ್ಯ. ಇದೇ ಕಾರಣಕ್ಕೆ ಕಬ್ಬಿನ ಗದ್ದೆಗಳಿಗೆ ಬೆಂಕಿ ಬೀಳುವ ಪ್ರಕರಣ ವರದಿಯಾಗುತ್ತಲೇ ಇರುತ್ತದೆ.

‘ಕಪ್ಪು ಮಣ್ಣು ಇರುವ ಪ್ರದೇಶಗಳಲ್ಲಿ ಕಂಬಗಳು ಬಾಗುವ ಸಮಸ್ಯೆ ಹೆಚ್ಚು ಕಂಡು ಬರುತ್ತದೆ. ಕಪ್ಪು ಮಣ್ಣು ದೃಢತೆ ಕಡಿಮೆ ಹೀಗಾಗಿ, ಎಷ್ಟು ಆಳದಲ್ಲಿ ಗುಂಡಿ ತೋಡಿದರೂ ಕಂಬಗಳು ಗಟ್ಟಿಯಾಗಿ ನಿಲ್ಲುವುದಿಲ್ಲ. ಇದರಿಂದ ಅವು ವಾಲುತ್ತವೆ. ಆದರೆ, ತಂತಿ ದೃಢವಾಗಿ ಕಂಬಗಳನ್ನು ಹಿಡಿದಿಟ್ಟುಕೊಂಡಿರುತ್ತವೆ. ಹಾಗಾಗಿ, ಸ್ವಲ್ಪ ಬಾಗಿದಾಕ್ಷಣ ಅಪಾಯ ಉಂಟಾಗುವುದಿಲ್ಲ’ ಎಂದು ಹೇಳುತ್ತಾರೆ ಅಧಿಕಾರಿಗಳು.

ಗಮನಕ್ಕೆ ತಂದರೂ ‍ಪ್ರಯೋಜನವಾಗಿಲ್ಲ
ಹನೂರು ತಾಲ್ಲೂಕಿನ ಪೊನ್ನಾಚಿ ಗ್ರಾಮದಲ್ಲಿ ಮಳೆಗಾಳಿಗೆ ವಿದ್ಯುತ್ ಕಂಬಗಳು ಬಾಗಿರುವ ಬಗ್ಗೆ ವಿದ್ಯುತ್ ಅದಾಲತ್ ಕಾರ್ಯಕ್ರಮದಲ್ಲಿ ಸೆಸ್ಕ್ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನೂ ಕಂಬಗಳನ್ನು ನೆಟ್ಟಗೆ ಮಾಡಿಲ್ಲ.
–ರಾಜು,ಪೊನ್ನಾಚಿ

ಸಮಸ್ಯೆ ಬಗೆಹರಿಸಿ
ಬೀದಿ ದೀಪಗಳ ಸ್ವಿಚ್‌ ಹಾಳಾಗಿವೆ. ಸೆಸ್ಕ್‌ ಅಧಿಕಾರಿಗಳು, ಸಿಬ್ಬಂದಿ ಇದನ್ನು ಗಮನಿಸುತ್ತಿಲ್ಲ. ಮಳೆಯಿಂದ ಅನೇಕ ತಂತಿಗಳು ಜೋತು ಬಿದ್ದಿವೆ ಹಾಗೂ ಹಳೆಯ ಕಂಬಗಳನ್ನು ಬದಲಿಸಿಲ್ಲ. ಅನಾಹುತಕ್ಕೂ ಮೊದಲೇ ಇಂತಹ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಅನಾಹುತಗಳು ಆಗುವುದು ಖಂಡಿತ.
–ಶಿವು,ಹೊಸ ಹಂಪಾಪುರ, ಕೊಳ್ಳೇಗಾಲ

ವ್ಯವಸಾಯಕ್ಕೆ ತೊಂದರೆ
ಅತಿಯಾದ ಮಳೆಯಿಂದ ವಿದ್ಯುತ್ ಕಂಬಗಳು ವಾಲಿವೆ. ನಮ್ಮ ಜಮೀನುಗಳಲ್ಲಿ ವೈರ್‌ಗಳು ಕೈಗೆಟುಕುವಂತಿವೆ. ಇದರಿಂದ ವ್ಯವಸಾಯ ಮಾಡಲು ತೊಂದರೆಯಾಗುತ್ತಿದೆ. ಇದರ ಬಗ್ಗೆ ದೂರು ನೀಡಿದರೂ ಸೆಸ್ಕ್ ಅಧಿಕಾರಿಗಳು ಗಮನ ಹರಿಸಿಲ್ಲ. ಟಿಸಿಗಳಿಗೆ ಸರಿಯಾಗಿ ಜಂಪ್‌ಗಳನ್ನು ಅಳವಡಿಸಿಲ್ಲ. ವಿದ್ಯುತ್ ಕಂಬದಿಂದ ಮತ್ತೊಂದು ಕಂಬಕ್ಕೆ ಅಂತರ ಹೆಚ್ಚಾಗಿದೆ. ಇದರಿಂದ ವೈರ್‌ಗಳು ಜೋಲಾಡುತ್ತಿವೆ.
–ಮಹದೇವಸ್ವಾಮಿ,ಹೆಗ್ಗವಾಡಿಪುರ, ಚಾಮರಾಜನಗರ ತಾಲ್ಲೂಕು

ಸಮರ್ಪಕ ನಿರ್ವಹಣೆ ಬೇಕು
ವಿದ್ಯುತ್ ಕಂಬ ಹಾಗೂ ತಂತಿಗಳಿಗೆ ಕಳೆಗಿಡಗಳು ಹಬ್ಬಿವೆ. ಕೆಲ ಕಡೆಗಳಲ್ಲಿ ಮರಗಳಿಗೆ ವಿದ್ಯುತ್ ತಂತಿಗಳು ತಗುಲುತ್ತಿವೆ. ಇದರಿಂದಾಗಿ ರೈತರು ಭಯದಲ್ಲೇ ಜಮೀನುಗಳಲ್ಲಿ ಕೆಲಸ ಮಾಡಬೇಕಿದೆ. ವಿದ್ಯುತ್‌ ಕಂಬಗಳ ನಿರ್ವಹಣೆಯನ್ನು ಸಿಬ್ಬಂದಿ ಸಮರ್ಪಕವಾಗಿ ಮಾಡಬೇಕು.
–ಮಹದೇವಪ್ಪ,ಹಂಗಳ, ಗುಂಡ್ಲುಪೇಟೆ

‘ದೂರಿಗೆ ತಕ್ಷಣವೇ ಸ್ಪಂದನೆ’
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸೆಸ್ಕ್‌ನ ಚಾಮರಾಜನಗರ ಉಪವಿಭಾಗದ ಕಾರ್ಯಪಾಲಕ ಎಂಜಿನಿಯರ್‌, ಕೊಳ್ಳೇಗಾಲ ಉಪವಿಭಾಗದ ಹೊಣೆಯನ್ನೂ ಹೆಚ್ಚುವರಿಯಾಗಿ ಹೊತ್ತಿರುವ ಆರ್‌.ವಸಂತಕುಮಾರ್‌, ‘ಈ ವರ್ಷದ ಮಳೆಗಾಲದಲ್ಲಿ ನಮಗೆ ಹೆಚ್ಚಿನ ನಷ್ಟವಾಗಿದೆ. ಆಗಸ್ಟ್‌ನಲ್ಲಿ ಸುರಿದ ಧಾರಾಕಾರ ಮಳೆ ಹಾಗೂ ಪ್ರವಾಹದಿಂದಾಗಿ ವಿದ್ಯುತ್‌ ಕಂಬ, ಟಿಸಿಗಳು ಹಾಳಾಗಿವೆ. ಮಳೆ ವಾತಾವರಣ ಇನ್ನೂ ಇರುವುದರಿಂದ ಪೂರ್ಣ ಪ್ರಮಾಣದಲ್ಲಿ ದುರಸ್ತಿ ಕಾರ್ಯ ಆಗಿಲ್ಲ. ಆದರೆ, ಎಲ್ಲ ಕಡೆಗಳಲ್ಲೂ ಗ್ರಾಹಕರಿಗೆ ಪರ್ಯಾಯ ಮಾರ್ಗದ ಮೂಲಕ ವಿದ್ಯುತ್‌ ಸಂಪರ್ಕ ನೀಡಲಾಗಿದೆ’ ಎಂದರು.

‘ಹಲವು ಕಡೆ ಜಮೀನುಗಳಲ್ಲಿ ಇನ್ನೂ ನೀರು ನಿಂತಿದೆ. ನೀರು ಇಲ್ಲದಿರುವ ಕಡೆ ತೇವಾಂಶ ಹೆಚ್ಚಿದೆ. ಹೀಗಾಗಿ ಕಂಬ ಹಾಕುವುದಕ್ಕೆ ಆಗುತ್ತಿಲ್ಲ. ಕಂಬ ನೆಡಲು ಕನಿಷ್ಠ ಮೂರು ಮೀಟರ್‌ ಗುಂಡಿಯನ್ನು ತೆಗೆಯಬೇಕಾಗುತ್ತದೆ. ಎರಡು ಮೂರು ಅಡಿಗೆ ನೀರು ಸಿಗುತ್ತಿದೆ. ಇಂತಹ ಕಡೆಗಳಲ್ಲಿ ಕೆಲಸ ಬಾಕಿ ಇದೆ. ಉಳಿದ ಕಡೆಗಳಲ್ಲಿ ನಮ್ಮ ಸಿಬ್ಬಂದಿ ದುರಸ್ತಿ ಮಾಡಿದ್ದಾರೆ’ ಎಂದು ಹೇಳಿದರು.

ವಿದ್ಯುತ್‌ ಪೂರೈಕೆ ಸಮಸ್ಯೆಗಳ ಬಗ್ಗೆ ಗ್ರಾಹಕರಿಂದ ದೂರು ಬಂದ ತಕ್ಷಣ ಸ್ಪಂದಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

––

ನಿರ್ವಹಣೆ: ಸೂರ್ಯನಾರಾಯಣ ವಿ.

ಪೂರಕ ಮಾಹಿತಿ:ಮಹದೇವ್‌ ಹೆಗ್ಗವಾಡಿಪುರ, ಎಂ.ಮಲ್ಲೇಶ, ಬಿ.ಬಸವರಾಜು, ಅವಿನ್‌ ಪ್ರಕಾಶ್‌ ವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT