ಗುರುವಾರ , ಸೆಪ್ಟೆಂಬರ್ 24, 2020
27 °C
ಇನ್ನು ಮುಂದೆ ಒಬ್ಬರೇ ಸ್ವಾಮೀಜಿಯಿಂದ ಮಠದ ಆಡಳಿತ–ಮಠಾಧೀಶರ ಸಲಹೆ, ನಿರ್ಣಯ

ಸಾಲೂರು ಮಠ: ಪೀಠಕ್ಕೇರಿದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಹದೇಶ್ವರ ಬೆಟ್ಟ/ಹನೂರು: ಮಹದೇಶ್ವರ ಬೆಟ್ಟದ ಸಾಲೂರು ಮಠದ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿರುವ ಎಂ.ನಾಗೇಂದ್ರ ಅವರ ಪಟ್ಟಾಧಿಕಾರ ಮಹೋತ್ಸವವು ಶನಿವಾರ ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ನೆರವೇರಿತು.

ಮಠದ ಪೀಠಾಧಿಪತಿ ಪಟ್ಟದ ಗುರುಸ್ವಾಮಿ ಅವರು, ನಾಗೇಂದ್ರ ಅವರನ್ನು ಶಿಷ್ಯನನ್ನಾಗಿ ಸ್ವೀಕರಿಸಿ ದೀಕ್ಷೆ ನೀಡಿದರು. ಪಟ್ಟಕ್ಕೇರಿದ ನೂತನ ಸ್ವಾಮೀಜಿಗೆ ಶಾಂತಮಲ್ಲಿಕಾರ್ಜುನ ಮಹಾಸ್ವಾಮಿ ಎಂದು ನಾಮಕರಣ ಮಾಡಲಾಗಿದೆ. 

ಶನಿವಾರ ಮುಂಜಾನೆ 4 ಗಂಟೆಯಿಂದ 6 ಗಂಟೆಯ ನಡುವಿನ ಅವಧಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪಟ್ಟಾಧಿಕಾರ ಮಹೋತ್ಸವ ಜರುಗಿತು. ಪಂಚಕಳಸ ಪೂಜೆ, ಗದ್ದುಗೆಗಳಿಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಅಷ್ಟೋತ್ತರ ಶತ ನಾಮಾವಳಿ ನಡೆಯಿತು. ಪೀಠಕ್ಕೇರಿದ ನಾಗೇಂದ್ರ ಅವರು ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ತುಮಕೂರಿನ ಸಿದ್ಧಗಂಗಾ ಮಠದ ಸಿದ್ದಲಿಂಗಸ್ವಾಮೀಜಿ, ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ ಅವರ ಪಾದಪೂಜೆಯನ್ನೂ ನಡೆಸಿದರು. 

ಒಬ್ಬರ ಆಡಳಿತ: ‘ಇನ್ನು ಮುಂದೆ ಮಠದಲ್ಲಿ ಇಬ್ಬರು ಸ್ವಾಮೀಜಿಯ ಆಡಳಿತ ಇರಬಾರದು. ಎಲ್ಲವನ್ನೂ ಒಬ್ಬರೇ ನಿರ್ವಹಿಸಬೇಕು. ಉಭಯ ಪೀಠಾಧಿಪತಿಗಳಿದ್ದರೆ ಗೊಂದಲಕ್ಕೆ ಕಾರಣವಾಗುತ್ತದೆ’ ಎಂದು ವೇದಿಕೆ ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀಗಳು ಸಲಹೆ ನೀಡಿದರು. ‌‌

‘ಸಾಲೂರು ಮಠದಲ್ಲಿ ಪಟ್ಟದ ಗುರುಸ್ವಾಮಿಗಳಿಗೆ ಪದೇ ಪದೇ ಆರೋಗ್ಯ ಸಮಸ್ಯೆ ಕಾಡುತ್ತಿದ್ದುದರಿಂದ, ಮಠದ ಭಕ್ತರು ಉತ್ತರಾಧಿಕಾರಿ ಆಯ್ಕೆ ಮಾಡಿಕೊಡುವಂತೆ ಮನವಿ ಮಾಡಿದರು. ಇದಕ್ಕಾಗಿ ಒಂಬತ್ತು ಪದಾಧಿಕಾರಿಗಳ ಆಯ್ಕೆ ಸಮಿತಿಯನ್ನು ರಚನೆ ಮಾಡಲಾಗಿತ್ತು. ಈ ಸಮಿತಿಯು ಉತ್ತರಾಧಿಕಾರಿ ಸ್ಥಾನಕ್ಕೆ ವಟು ನಾಗೇಂದ್ರ ಅವರೇ ಸೂಕ್ತ ಎಂದು ಅಂತಿಮ ವರದಿ ನೀಡಿತ್ತು’ ಎಂದು ಅವರು ಹೇಳಿದರು. 

‘ಹೊಸ ಮಠಾಧಿಪತಿಯು ತಮ್ಮ ವಿದ್ವತ್ ಜೊತೆಗೆ ಹೃದಯ ವೈಶಾಲ್ಯವನ್ನು ಮೈಗೂಡಿಸಿಕೊಂಡು ಭವ್ಯ ಇತಿಹಾಸವನ್ನು ಹೊಂದಿರುವ ಸಾಲೂರು ಮಠದ ಉನ್ನತಿಗೆ ಶ್ರಮಿಸಲಿ. ಬೇಡಗಂಪಣ ಸಮುದಾಯದವರು ಸೇರಿದಂತೆ ಮಠದ ಭಕ್ತರಿಗೆ ಸನ್ಮಾರ್ಗಗಳನ್ನು ತೋರಿಸುತ್ತಾ ಪರಿಶುದ್ಧತೆ, ನಿಷ್ಠೆ ಪೂಜೆಯನ್ನು ಕೈಗೊಳ್ಳಬೇಕು’ ಎಂದು ಸ್ವಾಮೀಜಿ ಹೇಳಿದರು. 

ಹನೂರು ಶಾಸಕ ಆರ್‌.ನರೇಂದ್ರ ಅವರು ಮಾತನಾಡಿ, ‘ಎರಡು ವರ್ಷಗಳಿಂದ ಇದ್ದ ಗೊಂದಲ ಈಗ ಬಗೆಹರಿದಿದೆ. ಈ ಸ್ಥಳಕ್ಕೆ ಲಕ್ಷಾಂತರ ಭಕ್ತಾಧಿಗಳು ಬರುತ್ತಿದ್ದು ಇನ್ನು ಮುಂದೆ ಈ ಸ್ಥಳದಲ್ಲಿ ಧಾರ್ಮಿಕತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದರ ಜೊತೆಗೆ, ಈ ಭಾಗದ ಹಳ್ಳಿಗಳ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಜವಾಬ್ದಾರಿಯೂ ನೂತನ ಸ್ವಾಮೀಜಿ ಅವರಿಗಿದೆ. 

ಸಿದ್ಧಗಂಗಾ ಶ್ರೀಗಳು, ಕನಕಪುರ ದೇಗುಲ ಶ್ರೀಗಳು ಮಾತನಾಡಿದರು.

ಮಳವಳ್ಳಿ ಮಠದ ಶಿವರುದ್ರಸ್ವಾಮಿಗಳು, ಗುಂಡ್ಲುಪೇಟೆ ಶಾಸಕ ಸಿ.ಎಸ್‌.ನಿರಂಜನಕುಮಾರ್‌, ಮುಖಂಡರಾದ ಪರಿಮಳ ನಾಗಪ್ಪ, ಪ್ರೀತನ್ ನಾಗಪ್ಪ, ಉತ್ತರಾಧಿಕಾರಿ ಆಯ್ಕೆ ಸಮಿತಿ ಅಧ್ಯಕ್ಷ ಶಾಗ್ಯ ರವಿ, ನಿರ್ದೇಶಕ ತೋಟೇಶ್ ಪದಾಧಿಕಾರಿಗಳು, ವಿವಿಧ ಮಠಗಳ ಮಠಾಧೀಶರು ಮತ್ತು ಭಕ್ತರು ಇದ್ದರು.

ಚ್ಯುತಿ ಬರದಂತೆ ಕಾರ್ಯನಿರ್ವಹಣೆ
ನೂತನ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಮಹಾಸ್ವಾಮಿ ಅವರು ಮಾತನಾಡಿ, ‘ಇದು ನನ್ನ ಜೀವನದಲ್ಲಿ ಅತ್ಯದ್ಭುತವಾದ ದಿನ. ವಯಸ್ಸು ಹಾಗೂ ಅನುಭವವಿಲ್ಲದ ನನಗೆ, ನನ್ನ ಗುರುಗಳು ಸಾಲೂರು ಮಠದ ಉತ್ತರಾಧಿಕಾರಿಯಾಗಿ ಪಟ್ಟಾಭಿಷೇಕ ಮಾಡಿದ್ದಾರೆ. ವಿಶ್ವಾಸಕ್ಕೆ ದಕ್ಕೆ ಬಾರದಂತೆ ಮಠದ ಹಿತವನ್ನು ಕಾಪಾಡಿಕೊಂಡು ಮಠವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತೇನೆ’ ಎಂದು ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು