ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಜಿಲ್ಲೆಯ ಆರೋಗ್ಯ ಸೇವೆಗೆ ನವ ಚೈತನ್ಯ

ಯಡಬೆಟ್ಟದ 2.33 ಎಕರೆ ಜಾಗದಲ್ಲಿ ನಾಲ್ಕು ಮಹಡಿಗಳ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣ: ಉದ್ಘಾಟನೆ ಇಂದು
Last Updated 7 ಅಕ್ಟೋಬರ್ 2021, 7:03 IST
ಅಕ್ಷರ ಗಾತ್ರ

ಚಾಮರಾಜನಗರ: ಗುರುವಾರ ಉದ್ಘಾ ಟನೆಗೊಳ್ಳುತ್ತಿರುವ 450 ಹಾಸಿಗೆ ಸಾಮರ್ಥ್ಯದ ಸೂಪರ್‌ ಸ್ಪೆಷಾಲಿಟಿ ಬೋಧನಾ ಆಸ್ಪತ್ರೆ ಜಿಲ್ಲೆಯ ಜನರ ಬಹುದಿನಗಳ ಕನಸು. ಜಿಲ್ಲೆಯ ಆರೋಗ್ಯ ಸೇವೆಯಲ್ಲಿ ಇದು ಮಹತ್ವದ ಮೈಲಿಗಲ್ಲಾಗಲಿದೆ.

2012ರಲ್ಲಿ ಜಗದೀಶ ಶೆಟ್ಟರ್‌ ನೇತೃತ್ವದ ಬಿಜೆಪಿ ಸರ್ಕಾರ ಜಿಲ್ಲೆಗೆ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯನ್ನು ಮಂಜೂರು ಮಾಡುವ ಮೂಲಕ ಜಿಲ್ಲೆಯ ಜನರಲ್ಲಿ, ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ಹಾಗೂ ಗುಣ ಮಟ್ಟದ ಆರೋಗ್ಯ ಸೇವೆಯ ಕನಸು ಮೊಳಕೆಯೊಡೆಯುವಂತೆ ಮಾಡಿತ್ತು.

ನಂತರ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜಿಲ್ಲೆಯಲ್ಲಿ ಕಾಲೇಜು ಸ್ಥಾಪನೆಗೆ ಒತ್ತು ನೀಡಿ, ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಆರಂಭವಾಗುವಂತೆ ಮಾಡಿತ್ತು. ವೈದ್ಯಕೀಯ ಕಾಲೇಜಿನ ಕಟ್ಟಡ ನಿರ್ಮಾಣಕ್ಕಾಗಿ ₹ 118 ಕೋಟಿ ಬಿಡುಗಡೆ ಮಾಡಿ, 2014ರ ಫೆಬ್ರುವರಿಯಲ್ಲಿ ಶಂಕುಸ್ಥಾ‍ಪನೆ ನೆರವೇರಿಸಲಾಗಿತ್ತು.

ಯಡಬೆಟ್ಟದಲ್ಲಿ ಗುರುತಿಸಿದ್ದ 42 ಎಕರೆ ಪ್ರದೇಶದಲ್ಲಿ ಕಾಲೇಜು ಕಟ್ಟಡ, ವೈದ್ಯರ ವಸತಿಗೃಹ ಹಾಗೂ ವಿದ್ಯಾರ್ಥಿಗಳ ಹಾಸ್ಟೆಲ್‌ ಗಳನ್ನು ನಿರ್ಮಿಸ ಲಾಯಿತು. 2016ರಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ತರಗತಿಗಳು ಆರಂಭವಾದವು. ಕಾಲೇಜು ಆರಂಭವಾಗಿ ಈ ವರ್ಷಕ್ಕೆ ಐದು ವರ್ಷ ಪೂರ್ಣವಾಗಿದ್ದು, ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳು ಕಾಲೇಜಿನಿಂದ ಹೊರ ಬಂದಿದ್ದಾರೆ.

ವೈದ್ಯಕೀಯ ಕಾಲೇಜು ಆರಂಭಕ್ಕೆ ಭಾರತೀಯ ವೈದ್ಯಕೀಯ ಮಂಡಳಿ (ಈಗ ಅದು ರಾಷ್ಟ್ರೀಯ ವೈದ್ಯಕೀಯ ಆಯೋಗ) ಹಲವು ಮಾನದಂಡ ರೂಪಿಸಿತ್ತು. ಕಾಲೇಜು ಆರಂಭಕ್ಕೆ 350 ಹಾಸಿಗೆಗಳ ಆಸ್ಪತ್ರೆ ಬೇಕಿತ್ತು. ಆಗ ಜಿಲ್ಲಾಸ್ಪತ್ರೆಯ ಸಾಮರ್ಥ್ಯ ಇದ್ದುದು 250 ಹಾಸಿಗೆ ಮಾತ್ರ.

ಕಾಲೇಜು ಕಟ್ಟಡದ ಜೊತೆಗೆ ಹಾಸ್ಟೆಲ್‌ ಕಟ್ಟಡಗಳೂ ಇರಬೇಕಾಗಿತ್ತು. ಕನಿಷ್ಠ 40 ರಿಂದ 50 ಎಕರೆ ಜಾಗಬೇಕಿತ್ತು. ಮೂಲಸೌಕರ್ಯ ಇಲ್ಲ ಎಂಬ ಕಾರಣಕ್ಕೆ ಮೊದಲ ವರ್ಷ ವೈದ್ಯಕೀಯ ಮಂಡಳಿ ಕಾಲೇಜಿಗೆ ಅನುಮತಿಯನ್ನೂ ನೀಡಿರಲಿಲ್ಲ. ಕೊನೆಗೆ ಯಡಬೆಟ್ಟದಲ್ಲಿ 42 ಎಕರೆ ಜಮೀನು ಗುರುತಿಸಿ ಅದನ್ನು ವೈದ್ಯಕೀಯ ಕಾಲೇಜಿಗೆ ಹಸ್ತಾಂತರಿಸಲಾಗಿತ್ತು.

ಇದರಲ್ಲಿ ಪ್ರಮುಖ ಪಾತ್ರ ವಹಿಸಿದವರು ಆಗ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದ ಡಾ.ಎಚ್‌.ಟಿ.ಚಂದ್ರಶೇಖರ್‌ ಹಾಗೂ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಂಬಂಧಿಸಿದಂತೆ ಸಮನ್ವಯ ಅಧಿಕಾರಿಯಾಗಿದ್ದ, ಆಗ ಜಿಲ್ಲಾಸ್ಪತ್ರೆಯಲ್ಲಿ ದಂತ ವೈದ್ಯಾಧಿಕಾರಿಯಾಗಿದ್ದ ಡಾ.ಸತ್ಯಪ್ರಕಾಶ್‌. ಹೊಸ ಆಸ್ಪತ್ರೆ ಉದ್ಘಾಟನೆಯಾಗುತ್ತಿರುವ ಸಂದರ್ಭದಲ್ಲಿ ‘ಪ್ರಜಾವಾಣಿ’ಯೊಂದಿಗೆ ಅವರು ಸಂತಸ ಹಂಚಿಕೊಂಡಿದ್ದಾರೆ.

ಹೊಸ ಆಸ್ಪತ್ರೆಯ ಅನಿವಾರ್ಯತೆ: ವರ್ಷದಿಂದ ವರ್ಷಕ್ಕೆ ಬೋಧನಾ ಆಸ್ಪತ್ರೆಯ ಹಾಸಿಗೆ ಸಾಮರ್ಥ್ಯ ಹೆಚ್ಚಿಸಬೇಕಾಗಿತ್ತು. ಹಾಗಾಗಿ, ಹೊಸ ಬೋಧನಾ ಆಸ್ಪತ್ರೆ ನಿರ್ಮಾಣ ಅನಿವಾರ್ಯವಾಗಿತ್ತು.

ಸಿದ್ದರಾಮಯ್ಯ ಸರ್ಕಾರ ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಆರಂಭದಲ್ಲಿ ₹ 113 ಕೋಟಿ ಮಂಜೂರು ಮಾಡಿತ್ತು. ಆಸ್ಪತ್ರೆಗಾಗಿ ವೈದ್ಯಕೀಯ ಕಾಲೇಜಿನ ಬಳಿಯಲ್ಲೇ 10 ಎಕರೆ ಸರ್ಕಾರಿ ಜಮೀನು ಮಂಜೂರು ಮಾಡಲಾಗಿತ್ತು. 2018ರ ಆಗಸ್ಟ್‌ನಲ್ಲಿ ಹೊಸ ಆಸ್ಪತ್ರೆಯ ಕಟ್ಟಡ ಆರಂಭವಾಗಿತ್ತು. ಮೂರು ವರ್ಷದ ನಂತರ ಆಸ್ಪತ್ರೆ ಉದ್ಘಾಟನೆಯಾಗುತ್ತಿದೆ.

ಹೆಚ್ಚುವರಿ ವೆಚ್ಚ: ಆರಂಭದಲ್ಲಿ ₹ 113.81 ಕೋಟಿಯ ಅಂದಾಜು ವೆಚ್ಚ ನಿಗದಿಮಾಡಲಾಗಿತ್ತು. ಆದರೆ, ಬಳಿಕ ಯೋಜನಾ ವೆಚ್ಚವನ್ನು ಪರಿಷ್ಕರಿಸಲಾಗಿದ್ದು, ಅದು ₹ 166.48 ಕೋಟಿಗೆ ತಲುಪಿತ್ತು. 2.33 ಎಕರೆ ಜಾಗದಲ್ಲಿ, 30,728 ಚದರ ಮೀಟರ್‌ ವ್ಯಾಪ್ತಿಯಲ್ಲಿ ನೆಲ ಮತ್ತು ನಾಲ್ಕು ಮಹಡಿಗಳ ಆಸ್ಪತ್ರೆ ನಿರ್ಮಾಣವಾಗಿದೆ.

ಅತ್ಯಾಧುನಿಕ ಸೌಕರ್ಯ ಲಭ್ಯ
ಹೊಸ ಆಸ್ಪತ್ರೆಯಲ್ಲಿ ಒಂಬತ್ತು ಆಧುನಿಕ ಆಪರೇಷನ್ ಥಿಯೇಟರ್‌ಗಳು ಇವೆ. ಸುಸಜ್ಜಿತ 50 ಹಾಸಿಗೆ ಐಸಿಯು ವಾರ್ಡ್‍ಗಳು, 20 ಸಾವಿರ ಲೀಟರ್‌ ದ್ರವ ಆಮ್ಲಜನಕ ಸಂಗ್ರಹ ಟ್ಯಾಂಕ್, 2,000 ಎಲ್‍ಪಿಎಂ ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕಗಳು, ಕೇಂದ್ರಿತ ವೈದ್ಯಕೀಯ ಗ್ಯಾಸ್ ಪೈಪ್‍ಲೈನ್ ವ್ಯವಸ್ಥೆ, ಹೊರರೋಗಿಗಳು (ಒಪಿಡಿ) ಮತ್ತು ಒಳರೋಗಿಗಳು (ಐಪಿಡಿ) ವಿಭಾಗಗಳಲ್ಲದೆ 30 ಹಾಸಿಗೆಗಳ ತುರ್ತು ವಿಭಾಗ ಕೂಡ ಇವೆ.
ಕ್ರಿಟಿಕಲ್ ಕೇರ್ ಮತ್ತು ಸೂಪರ್ ಸ್ಪೆಷಾಲಿಟಿ ವಿಭಾಗಗಳಾದ ಹೃದ್ರೋಗ, ಮೂತ್ರಪಿಂಡ, ಡಯಾಲಿಸಿಸ್ ಘಟಕ, ಮೂತ್ರಶಾಸ್ತ್ರ ಮತ್ತು ನರವಿಜ್ಞಾನಕ್ಕೆ ಸಂಬಂಧಿಸಿದಂತೆ ಶಸ್ತ್ರಚಿಕಿತ್ಸೆಯ ವ್ಯವಸ್ಥೆಯೂ ಇಲ್ಲಿದೆ.ಉಳಿದಂತೆ ಎಲ್ಲ ವೈದ್ಯಕೀಯ ಸೇವೆಗಳು ಇಲ್ಲಿ ಲಭ್ಯವಿದೆ.

ಕಾಡಲಿದೆ ನೀರಿನ ಕೊರತೆ
ಹೊಸ ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯಗಳಿದ್ದರೂ, ಆ ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಲಭ್ಯವಿಲ್ಲ. ಕೊರೆಸಿರುವ ಹಲವು ಕೊಳವೆ ಬಾವಿಗಳು ಬರಡಾಗಿವೆ. ಸದ್ಯ ಶಿವಪುರ ಗ್ರಾಮದ ಒಂದು ಕೊಳವೆ ಬಾವಿಯಿಂದ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಪೂರೈಸಲಾಗುತ್ತಿದೆ.

450 ಹಾಸಿಗೆಗಳ ಆಸ್ಪತ್ರೆಗೆ ನೀರಿನ ಅಗತ್ಯ ಹೆಚ್ಚಿದ್ದು, ಪರ್ಯಾಯ ವ್ಯವಸ್ಥೆ ಮಾಡದಿದ್ದರೆ, ನೀರಿನ ಕೊರತೆ ಕಾಡಲಿದೆ.

ನಂಜನಗೂಡಿನಿಂದ ಕಪಿಲಾ ನದಿಯ ನೀರನ್ನು ₹ 43 ಕೋಟಿ ವೆಚ್ಚದಲ್ಲಿ ಬದನಗುಪ್ಪೆ–ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶಕ್ಕೆ ಪೂರೈಸಲು ಪೈಪ್‌ಲೈನ್‌ ನಿರ್ಮಿಸಲಾಗಿದ್ದು, ಅಲ್ಲಿಂದ ಪೈಪ್‌ಲೈನ್‌ ವಿಸ್ತರಿಸಿ ವೈದ್ಯಕೀಯ ಕಾಲೇಜಿಗೆ ನೀಡುವ ಪ್ರಸ್ತಾವ ಕಡತದ ಹಂತದಲ್ಲಿದೆ. ಅದನ್ನು ಶೀಘ್ರವಾಗಿ ಅನುಷ್ಠಾನಗೊಳಿ‌ಸಿದರೆ ಸಮಸ್ಯೆ ಬಗೆಹರಿಯಲಿದೆ ಎಂಬುದು ವೈದ್ಯರ ಅಭಿಪ್ರಾಯ.

--

ಹಿಂದುಳಿದ ಜಿಲ್ಲೆ ಚಾಮರಾಜನಗರದಲ್ಲಿ ಇಂತಹ ಆಸ್ಪತ್ರೆ ನಿರ್ಮಾಣವಾಗಿರುದವರಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಲಿದೆ.
-ಡಾ.ಎಚ್‌.ಟಿ.ಚಂದ್ರಶೇಖರ್‌, ನಿವೃತ್ತ ಹೆಚ್ಚುವರಿ ಜಿಲ್ಲಾಧಿಕಾರಿ

--

ಉತ್ತಮ ಆಸ್ಪತ್ರೆ ನಿರ್ಮಾಣವಾಗಿದೆ. ವೈದ್ಯಕೀಯ ಕಾಲೇಜು ಆರಂಭಕ್ಕೆ ಆಗಿನ ಸರ್ಕಾರ, ಜಿಲ್ಲಾಡಳಿತ ನೀಡಿರುವ ಸಹಕಾರ ದೊಡ್ಡದು.
-ಡಾ.ಸತ್ಯ ಪ್ರಕಾಶ್‌, (ಕಾಲೇಜು ಸ್ಥಾಪನೆ ಸಮನ್ವಯ ಅಧಿಕಾರಿಯಾಗಿದ್ದವರು)

---

ನಮ್ಮದು ಗಡಿ ಜಿಲ್ಲೆ ಆಗಿರುವುದರಿಂದ ನೆರೆಯ ತಮಿಳುನಾಡು ಹಾಗೂ ಕೇರಳದ ಜನರು ಕೂಡ ಇಲ್ಲಿ ಆರೋಗ್ಯ ಸೇವೆ ಪಡೆಯಬಹುದು.
-ಡಾ.ಡಿ.ಎಂ.ಸಂಜೀವ್‌, ವೈದ್ಯಕೀಯ ಕಾಲೇಜಿನ ಡೀನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT