ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರ್ಸಿಂಗ್‌ ಶಾಲೆಯ ಪ್ರವೇಶಾತಿಗೆ ತಡೆ?

ವೈದ್ಯಕೀಯ ಶಿಕ್ಷಣ ನಿರ್ದೇಶಕರಿಗೆ ಆರೋಗ್ಯ ಇಲಾಖೆಯ ಆಯುಕ್ತರ ಪತ್ರ; ಆಕಾಂಕ್ಷಿಗಳಲ್ಲಿ ಆತಂಕ;
Last Updated 8 ಜುಲೈ 2018, 14:14 IST
ಅಕ್ಷರ ಗಾತ್ರ

ಚಾಮರಾಜನಗರ: ಪಟ್ಟಣದಲ್ಲಿರುವ ಸರ್ಕಾರಿ ಶುಶ್ರೂಷಕರ ತರಬೇತಿ ಶಾಲೆ (ಸ್ಕೂಲ್‌ ಆಫ್‌ ನರ್ಸಿಂಗ್‌) ಶಾಲೆಯಲ್ಲಿಸಿಬ್ಬಂದಿ ಮತ್ತುಮೂಲಸೌಕರ್ಯಗಳ ಕೊರತೆಯ ಕಾರಣ ನೀಡಿ 2018–19ನೇ ಸಾಲಿಗೆ ವಿದ್ಯಾರ್ಥಿಗಳ ಪ್ರವೇಶಾತಿ ಪ್ರಕ್ರಿಯೆಯನ್ನು ತಡೆಯುವ ಪ್ರಸ್ತಾವನೆ ಇದ್ದು,ಕೋರ್ಸ್‌ಗೆ ಸೇರಲು ಬಯಸಿದ್ದ ಆಕಾಂಕ್ಷಿಗಳಲ್ಲಿ ಆತಂಕ ಸೃಷ್ಟಿಸಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಮೇ 2ರಂದು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಿಗೆ ಬರೆದಿರುವ ಪತ್ರವೊಂದು ಈ ಆತಂಕಕ್ಕೆ ಕಾರಣ.ಚಾಮರಾಜನಗರ ಮಾತ್ರವಲ್ಲದೇ, ಬೆಂಗಳೂರಿನ ಕೆಸಿಜಿ, ಬೀದರ್‌, ಗದಗ ಮತ್ತು ಕಾರವಾರದಲ್ಲಿನ ಸರ್ಕಾರಿ ನರ್ಸಿಂಗ್‌ ಶಾಲೆಗಳಲ್ಲೂಪ್ರಸಕ್ತ ಶೈಕ್ಷಣಿಕ ವರ್ಷದ ಪ್ರವೇಶಾತಿ ಪ್ರಕ್ರಿಯೆಯನ್ನು ತಡೆ ಹಿಡಿಯುವುದು ಸಮಂಜಸ ಎಂದು ಆಯುಕ್ತರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

2016ರಲ್ಲಿ ಆರಂಭ:ಚಾಮರಾಜನಗರದ ಸರ್ಕಾರಿ ಆಸ್ಪತ್ರೆಯ ಹಿಂಭಾಗದಲ್ಲಿರುವ ನರ್ಸಿಂಗ್‌ ಶಾಲೆ ಆರಂಭವಾಗಿದ್ದು 2016ರಲ್ಲಿ. ಅದಕ್ಕೂ ಮೊದಲು ಇದು ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರವಾಗಿತ್ತು. 2010ರಲ್ಲಿ ಇದನ್ನು ಸ್ಥಾಪಿಸಲಾಗಿತ್ತು.

ರಾಷ್ಟ್ರೀಯ ಆರೋಗ್ಯ ಯೋಜನೆಯ ಅನುದಾನದಡಿಯಲ್ಲಿ ಈ ಕೇಂದ್ರವನ್ನು 2016–17ರಲ್ಲಿನರ್ಸಿಂಗ್‌ ಶಾಲೆಯಾಗಿ ಮೇಲ್ದರ್ಜೆಗೆ ಏರಿಸಲಾಗಿತ್ತು. ಸದ್ಯ, ಇಲ್ಲಿ ಎರಡು ಬ್ಯಾಚ್‌ನ45 ಮಂದಿ ಕೋರ್ಸ್‌ ಪಡೆಯುತ್ತಿದ್ದಾರೆ. ಪ್ರತಿ ವರ್ಷ 40 ವಿದ್ಯಾರ್ಥಿಗಳ ಪ್ರವೇಶಾತಿಗೆ ಅವಕಾಶ ಇದೆ.ಮೊದಲ ವರ್ಷ ಈ ಶಾಲೆಯ ಬಗ್ಗೆ ಮಾಹಿತಿ ಇಲ್ಲದ ಕಾರಣ ಹೆಚ್ಚಿನ ವಿದ್ಯಾರ್ಥಿಗಳು ಬಂದಿರಲಿಲ್ಲ.

ಮೂರು ವರ್ಷದ ಡಿಪ್ಲೊಮಾ ಕೋರ್ಸ್‌ ಸೆಪ್ಟೆಂಬರ್‌ 1ರಿಂದ ಆರಂಭವಾಗುತ್ತದೆ. ಜುಲೈನಲ್ಲಿ ದಾಖಲಾತಿ ಪ್ರಕ್ರಿಯೆಗೆ ಚಾಲನೆ ಸಿಗುತ್ತದೆ. ಪ್ರವೇಶಾತಿಗಾಗಿಆಗಸ್ಟ್‌ನಲ್ಲಿ ಕೌನ್ಸೆಲಿಂಗ್‌ ‌ನಡೆಯುತ್ತದೆ. ಆದರೆ, ಈಗ ವೈದ್ಯಕೀಯ ಶಿಕ್ಷಣ ಇಲಾಖೆಯ ಮುಂದೆ ಇಂತಹ ಪ್ರಸ್ತಾವ ಇರುವುದರಿಂದ ಈ ವರ್ಷ ಪ್ರವೇಶಾತಿ ನಡೆಯುತ್ತದೆಯೋ ಇಲ್ಲವೋ ಎಂಬ ಗೊಂದಲ ಉಂಟಾಗಿದೆ.‘ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಪ್ರವೇಶಾತಿ ತಡೆಯುವ ಬಗ್ಗೆ ಯಾವುದೇ ಆದೇಶ ಬಂದಿಲ್ಲ’ ಎಂದು ಕಾಲೇಜಿನ ಪ್ರಾಂಶುಪಾಲರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಚಿವರ ಭೇಟಿ: ಹಿಂದುಳಿವ ವರ್ಗಗಳ ಕಲ್ಯಾಣ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರು ಇತ್ತೀಚೆಗೆ ಕಾಲೇಜಿಗೆ ಭೇಟಿ ನೀಡಿ ಈ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದರು. ವೈದ್ಯಕೀಯ ಶಿಕ್ಷಣ ಸಚಿವಾಲಯದ ಉನ್ನತ ಅಧಿಕಾರಿಗಳಿಗೆ ಕರೆ ಮಾಡಿ ಯಾವುದೇ ಕಾರಣಕ್ಕೂ ಕಾಲೇಜನ್ನು ಮುಚ್ಚಬಾರದು ಎಂದು ಹೇಳಿದ್ದರು.

‘ಕಾಲೇಜಿಗೆ ಉತ್ತಮವಾದ ಕಟ್ಟಡವಿದೆ. ಚೆನ್ನಾಗಿ ನಡೆಯುತ್ತಿದೆ. ಹೀಗಿರುವಾಗ ಪ್ರವೇಶಾತಿಗೆ ತಡೆ ನೀಡಬೇಕು ಎಂದು ಬರೆದಿರುವ ಪತ್ರದ ಉದ್ದೇಶವೇ ಅರ್ಥ ಆಗುತ್ತಿಲ್ಲ. ಬೋಧಕ ಅಥವಾ ಬೋಧಕೇತರ ಸಿಬ್ಬಂದಿ ಇಲ್ಲದಿದ್ದರೆ ಸರ್ಕಾರ ನೇಮಿಸಬೇಕು. ಮೂಲ ಸೌಕರ್ಯಗಳ ಕೊರತೆ ಇದ್ದರೆ, ಅದನ್ನು‌ಒದಗಿಸುವುದಕ್ಕೆ ಕ್ರಮ ಕೈಗೊಳ್ಳಬೇಕು. ಅದು ಬಿಟ್ಟು ಪ್ರವೇಶಾತಿಯನ್ನು ತಡೆಯುವುದು ಸರಿಯಲ್ಲ’ ಎಂದು ಜೆಡಿಎಸ್‌ ಮುಖಂಡಸಿ.ಎಂ. ಕೃಷ್ಣಮೂರ್ತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಆಯುಕ್ತರ ಪತ್ರದಲ್ಲೇನಿದೆ?

ಈ ಐದು ಸಂಸ್ಥೆಗಳಿಗೆ ಕಾಯಂ ಬೋಧಕರ ಮತ್ತು ಬೋಧಕೇತರ ಸಿಬ್ಬಂದಿ ಮಂಜೂರಾತಿ ಆಗಿಲ್ಲ. ಇದಲ್ಲದೇ ಮೂಲಭೂತ ಸೌಕರ್ಯಗಳ ಕೊರತೆಯೂ ಇದೆ‌. ಜೊತೆಗೆ ಪಿಐಪಿಯಲ್ಲಿ (ರಾಜ್ಯ ಕಾರ್ಯಕ್ರಮಗಳ ಅನುಷ್ಠಾನ ಯೋಜನೆ) ಅನುಮೋದನೆಯೂ ದೊರೆತಿಲ್ಲ ಎಂದು ಆಯುಕ್ತರು ಪತ್ರದಲ್ಲಿ ಬರೆದಿದ್ದಾರೆ.

325 ವಿದ್ಯಾರ್ಥಿಗಳು:ಈ ಐದು ಶಿಕ್ಷಣ ಸಂಸ್ಥೆಗಳಲ್ಲಿ ಒಟ್ಟು 325 ಮಂದಿ ವ್ಯಾಸಂಗ ಮಾಡುತ್ತಿದ್ದಾರೆ. 2016–17ನೇ ಸಾಲಿನಲ್ಲಿ 182 ಮತ್ತು 2017–18ರಲ್ಲಿ 143 ವಿದ್ಯಾರ್ಥಿಗಳು ಇಲ್ಲಿ ಪ್ರವೇಶ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT