ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರದಲ್ಲೂ ಮುಂದುವರಿದ ಮುಷ್ಕರ; ರಸ್ತೆಗಿಳಿಯದ ಕೆಎಸ್‌ಆರ್‌ಟಿಸಿ ಬಸ್‌

ಶನಿವಾರವೂ ಕೆಲಸಕ್ಕೆ ಹಾಜರಾಗದ ಚಾಲಕರು, ನಿರ್ವಾಹಕರು, ಡಿಪೋಗಳಲ್ಲೇ ಉಳಿದ ಬಸ್‌
Last Updated 12 ಡಿಸೆಂಬರ್ 2020, 12:23 IST
ಅಕ್ಷರ ಗಾತ್ರ

ಚಾಮರಾಜನಗರ: ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೆಎಸ್‌ಆರ್‌ಟಿಸಿ ನೌಕರರು ಆರಂಭಿಸಿರುವ ದಿಢೀರ್‌ ಮುಷ್ಕರ ಜಿಲ್ಲೆಯಲ್ಲಿ ಶನಿವಾರವೂ ಮುಂದುವರಿಯಿತು.

ಚಾಲಕರು, ನಿರ್ವಾಹಕರು ಹಾಗೂ ಇತರ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲಿಲ್ಲ. ಇದರಿಂದ ಜಿಲ್ಲೆಯಾದ್ಯಂತ ಒಂದೇ ಒಂದು ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸಲಿಲ್ಲ. ಎಲ್ಲ ಬಸ್‌ಗಳೂ ಡಿಪೋದಲ್ಲೇ ಇದ್ದವು.

ಎರಡನೇ ಶನಿವಾರದ ಕಾರಣಕ್ಕೆ ಸರ್ಕಾರಿ ರಜಾ ದಿನವಾಗಿದ್ದರಿಂದ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಆದರೂ ಅಗತ್ಯ ಕೆಲಸಗಳಿಗಾಗಿ ಬೇರೆ ಊರುಗಳಿಗೆ ಹೋಗಬೇಕಾದವರಿಗೆ ತೀವ್ರ ತೊಂದರೆಯಾಯಿತು.ಬಸ್‌ ಇರಬಹುದು ಎಂಬ ಲೆಕ್ಕಾಚಾರದಲ್ಲಿ ನಿಲ್ದಾಣಗಳಿಗೆ ಬಂದಿದ್ದ ಅವರು ನಿರಾಸೆ ಅನುಭವಿಸಿದರು.

ಪಟ್ಟಣ ಪ್ರದೇಶಗಳಿಗೆ ಕೂಲಿಗಾಗಿ ತೆರಳುವ ಕಾರ್ಮಿಕರು,‌ ತರಬೇತಿ ಶಾಲೆಗಳಿಗೆ ಹಾಗೂ ಗಾರ್ಮೆಂಟ್ಸ್ ಗಳಿಗೆ ತೆರಳುವ ಪ್ರಯಾಣಿಕರು ಕೆಎಸ್ಆರ್‌ಟಿಸಿ ಬಸ್ ಬಾರದ ಕಾರಣ ಗೊದಲಕ್ಕೀಡಾದರು. ಅನಿವಾರ್ಯವಾಗಿ ಖಾಸಗಿ ಬಸ್‌ಗಳು, ಆಟೊ ಹಾಗೂ ಇತರ ವಾಹನಗಳನ್ನು ಅವಲಂಬಿಸಬೇಕಾಯಿತು.

ಸಾರಿಗೆ ಬಸ್‌ ಇಲ್ಲದಿದ್ದುದರಿಂದ ಖಾಸಗಿ ಬಸ್‌ಗಳಿಗೆ ಹೆಚ್ಚು ಬೇಡಿಕೆ ಇತ್ತು. ಖಾಸಗಿ ಬಸ್‌ ನಿಲ್ದಾಣದಲ್ಲಿ ಜನರ ಓಡಾಟ ಹೆಚ್ಚಿತ್ತು. ಜಿಲ್ಲಾ ಕೇಂದ್ರದಲ್ಲಿ ಬಹುತೇಕ ಖಾಸಗಿ ಬಸ್‌ಗಳು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿಗೆ ಬಂದು ಪ್ರಯಾಣಿಕರನ್ನು ಹತ್ತಿಸುತ್ತಿದ್ದವು.

ಕೊಳ್ಳೇಗಾಲ, ಗುಂಡ್ಲುಪೇಟೆ, ಹನೂರು ಹಾಗೂ ಯಳಂದೂರುಗಳಲ್ಲೂ ಇದೇ ಸ್ಥಿತಿ ಇತ್ತು.

ಪ್ರತಿಭಟನೆಗೆ ಇಳಿಯದ ನೌಕರರು

ಮುಷ್ಕರದ ಮೊದಲ ದಿನವಾದ ಶುಕ್ರವಾರ ಜಿಲ್ಲೆಯಲ್ಲಿ ಚಾಮರಾಜನಗರ ಮತ್ತು ಗುಂಡ್ಲುಪೇಟೆಯಲ್ಲಿ ನೌಕರರು ಪ್ರತಿಭಟನೆ ನಡೆಸಿದ್ದರು. ಆದರೆ, ಶನಿವಾರ ಎಲ್ಲೂ ಪ್ರತಿಭಟನೆ ನಡೆಸಲಿಲ್ಲ. ಅಹಿತಕರ ಘಟನೆಗಳೂ ವರದಿಯಾಗಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ನಿಲ್ದಾಣಗಳಲ್ಲಿ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿತ್ತು.

‘ಶನಿವಾರ ಜಿಲ್ಲೆಯಾದ್ಯಂತ ಚಾಲಕರು, ನಿರ್ವಾಹಕರು ಹಾಗೂ ಇತರ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿಲ್ಲ. ಹೀಗಾಗಿ ನಮ್ಮ ವಿಭಾಗದಲ್ಲಿ ಒಂದೂ ಬಸ್‌ ಸಂಚರಿಸಿಲ್ಲ’ ಎಂದು ಕೆಎಸ್‌ಆರ್‌ಟಿಸಿ ಚಾಮರಾಜನಗರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್‌ ಬಿ. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮೈಸೂರು, ಬೆಂಗಳೂರು ಪ್ರಯಾಣಿಕರಿಗೆ ತೊಂದರೆ

ದೂರದ ಮೈಸೂರು, ಬೆಂಗಳೂರಿನ ಕಡೆಗೆ ತೆರಳಬೇಕಿದ್ದ ಪ್ರಯಾಣಿಕರು ಬಸ್‌ ಸಂಚಾರ ಸ್ಥಗಿತದಿಂದಾಗಿ ತೊಂದರೆ ಅನುಭವಿಸಿದರು.

ಬೆಳಿಗ್ಗೆ ಬೇಗ ಹೋಗುವ ಯೋಜನೆ ಹಾಕಿಕೊಂಡು ಬಂದಿದ್ದ ಪ್ರಯಾಣಿಕರು, ಕೆಎಸ್‌ಆರ್‌ಟಿಸಿ ಬಸ್‌ಗಳು ಇಲ್ಲದೇ ಇದ್ದುದರಿಂದ ಕಾದು ಕುಳಿತುರು. ಕೊನೆಗೆ ಕೆಲವರು ವಾಪಸ್‌ ಮನೆಗೆ ತೆರಳಿದರೆ, ಇನ್ನೂ ಕೆಲವರು ಸಿಕ್ಕಿದ ವಾಹನಗಳನ್ನು ಹತ್ತಿಕೊಂಡು ಹೋದರು.

ಖಾಸಗಿ ವಾಹನಗಳ ಹಾವಳಿ: ‘ಸಾರಿಗೆ ನೌಕರರ ಮುಷ್ಕರವನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಬಸ್ ಸಿಬ್ಬಂದಿ ಮತ್ತು ಕಾರು ಚಾಲಕರು ಪ್ರಯಾಣಿಕರಿಂದ ದುಪ್ಪಟ್ಟು ಹಣ ತೆಗೆದುಕೊಳ್ಳುತ್ತಿದ್ದರು. ಈ ಬಗ್ಗೆ ಪ್ರಯಾಣಿಕರು ಪ್ರಶ್ನೆ ಮಾಡಿದರೆ, ಮಾಮೂಲಿಯಂತೆ ಹಣ ಸ್ವೀಕರಿಸುತ್ತಿದ್ದರು’ ಎಂದು ಗುಂಡ್ಲುಪೇಟೆಯ ಪ್ರಯಾಣಿಕ ಜಿ.ಆರ್.ರವಿ ಅವರು ದೂರಿದರು.

ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದಿರುವ ನೌಕರರು ಭಾನುವಾರ ಕರ್ತವ್ಯಕ್ಕೆ ಹಾಜರಾಗುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ. ಹಾಗಾಗಿ, ಭಾನುವಾರ ಬಸ್‌ ಸಂಚಾರ ಆರಂಭವಾಗುವ ಬಗ್ಗೆ ಅನುಮಾನ ಇದೆ. ಅಧಿಕಾರಿಗಳಿಗೂ ಈ ಬಗ್ಗೆ ಮಾಹಿತಿ ಇಲ್ಲ. ಮಾತುಕತೆ ಫಲಕೊಟ್ಟರೆ ಭಾನುವಾರ ಮಧ್ಯಾಹ್ನದ ನಂತರ ಬಸ್‌ಗಳು ಸಂಚರಿಸುವ ಸಾಧ್ಯತೆ ಇದೆ ಎಂದು ಅವರು ಹೇಳುತ್ತಾರೆ.

‘ರಾಜ್ಯ ಮಟ್ಟದಲ್ಲಿ ನಡೆಯುತ್ತಿರುವ ಮಾತುಕತೆ ಇನ್ನೂ ಫಲಪ್ರದವಾಗದೇ ಇರುವುದರಿಂದ ಭಾನುವಾರ ಬಸ್‌ ಸಂಚಾರ ಆರಂಭವಾಗಲಿದೆಯೇ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ’ ಎಂದು ಶ್ರೀನಿವಾಸ್‌ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT