ಮಂಗಳವಾರ, ಜೂನ್ 28, 2022
27 °C
ಲಾಕ್‌ಡೌನ್‌ ಪರಿಣಾಮ, ಕಳೆದ ವರ್ಷವೂ ಇದೇ ಸ್ಥಿತಿ

ಹನೂರು: ಕೊಳ್ಳುವವರಿಲ್ಲದೇ ಮಣ್ಣು ಪಾಲಾಗುತ್ತಿದೆ ಕಲ್ಲಂಗಡಿ

ಬಿ.ಬಸವರಾಜು Updated:

ಅಕ್ಷರ ಗಾತ್ರ : | |

Prajavani

ಹನೂರು: ‘ಲಕ್ಷಾಂತರ ಖರ್ಚು ಮಾಡಿ ಬೆಳೆದ ಹಣ್ಣು ಇಂದು ಮಣ್ಣು ಪಾಲಾಗುತ್ತಿದೆ. ಒಂದು ವರ್ಷ ಫಸಲು ನಷ್ಟವಾದರೆ ಸರಿದೂಗಿಸಬಹುದು. ಆದರೆ ಪ್ರತಿ ವರ್ಷ ಇದೇ ರೀತಿ ನಷ್ಟವಾಗುತ್ತಾ ಹೋದರೆ ರೈತರು ಬದುಕುವುದಾದರೂ ಹೇಗೆ’ ಎಂದು ಬೇಸರ ವ್ಯಕ್ತಪಡಿಸಿದರು ಚೆನ್ನಾಲಿಂಗನಹಳ್ಳಿ ರೈತ ಪ್ರಸನ್ನ.

ಇರುವ ಏಳು ಎಕರೆ ಜಮೀನಿನ ಪೈಕಿ ನಾಲ್ಕು ಎಕರೆಯಲ್ಲಿ ಬೆಳೆದಿರುವ ಕಲ್ಲಂಗಡಿಯನ್ನು ಖರೀದಿಸುವವರು ಇಲ್ಲದೇ, ತೋಟದಲ್ಲೇ ನಿತ್ಯ ನೂರಾರು ಹಣ್ಣುಗಳು ಉದುರಿ ಕೊಳೆಯುತ್ತಿವೆ. ಕಳೆದ ವರ್ಷವೂ ಲಾಕ್‌ಡೌನ್‌ನಿಂದಾಗಿ ನಷ್ಟ ಅನುಭವಿಸಿದ್ದ ಇವರು ಈ ಬಾರಿಯಾದರೂ ಉತ್ತಮ ಆದಾಯ ಬರಬಹುದು ಎಂದು ನಿರೀಕ್ಷಿಸಿದ್ದರು.

ಆದರೆ, ಈ ಬಾರಿಯೂ ಸಾರಿಗೆ ಮುಷ್ಕರ, ಜನತಾ ಕರ್ಫ್ಯೂ, ಕೋವಿಡ್ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೋವಿಡ್ ನಿರ್ಬಂಧ ಅವರನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ. ಎರಡು ತಿಂಗಳ ಹಿಂದೆ ಕಲ್ಲಂಗಡಿ ಬೆಳೆದರೆ ಉತ್ತಮ ಆದಾಯ ಗಳಿಸಬಹುದು ಎಂಬ ನಿರೀಕ್ಷೆಯಿಂದ ನಾಲ್ಕು ಎಕರೆಯಲ್ಲಿ ಕಲ್ಲಂಗಡಿ ಹಣ್ಣು ಬೆಳೆದಿದ್ದರು. ಆದರೆ, ಈಗ ಅದು ಇವರ ಆಸೆಯನ್ನು ನಿರಾಶೆಗೊಳಿಸಿದೆ.

ವಾಹನ ಸ್ಥಗಿತ: ತಮಿಳುನಾಡು ಹಾಗೂ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಕಲ್ಲಂಗಡಿ ಹಣ್ಣಿಗೆ ಬೇಡಿಕೆಯಿದ್ದರೂ ವಾಹನ ಸಂಚಾರ ನಿಷೇಧವಾಗಿದ್ದರಿಂದ ಇವರ ಹಣ್ಣು ಖರೀದಿಗೆ ಯಾರು ಮುಂದಾಗಲಿಲ್ಲ. ಇದು ಇವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿತು. ಅಂತರರಾಜ್ಯ ಹಾಗೂ ಅಂತರ ಜಿಲ್ಲೆ ವಾಹನಗಳ ಸಂಚಾರ ನಿಷೇಧವಾಗಿತ್ತು. ಆದರೆ ಸರಕು ವಾಹನಗಳಿಗೆ ಅವಕಾಶ ಇದ್ದರೂ ಇವರು ಬೆಳೆದಿದ್ದ ಹಣ್ಣು ಖರೀದಿಸಲು ಮುಂದಾಗಲಿಲ್ಲ. 

₹3 ಲಕ್ಷ ನಷ್ಟ: ‘ನಾಲ್ಕು ಎಕರೆಯಲ್ಲಿ ಕಲ್ಲಂಗಡಿ ಬೆಳೆದಿದ್ದೇನೆ. ಇದಕ್ಕಾಗಿ ಮೂರು ಲಕ್ಷ ಬಂಡವಾಳವೂ ಹಾಕಿದ್ದೆ. ಕನಿಷ್ಠ ಕೆ.ಜಿ  ₹10ಗೆ ಹೋಗಿದ್ದರೂ ಬಂಡವಾಳವಲ್ಲದೇ ₹2 ಲಕ್ಷ ಲಾಭ ಬರುತ್ತಿತ್ತು. ಆದರೆ, ಈ ಲಾಕ್‌ಡೌನ್‌ನಿಂದಾಗಿ ಹಣ್ಣನ್ನು ಕೇಳುವವರೇ ಗತಿಯಿಲ್ಲದಂತಾಗಿದೆ. ಹೀಗಾದರೆ ನಾವು ಕೃಷಿ ಮಾಡುವುದಾದರೂ ಹೇಗೆ ಎಂಬುದೇ ಚಿಂತೆಯಾಗಿದೆ’ ಎಂದು ಪ್ರಸನ್ನ ಹೇಳಿದರು. 

‘ಬಾಳೆ ಪರಿಹಾರವೂ ಬಂದಿಲ್ಲ’

‘ಕಳೆದ ವರ್ಷ ಇದೇ ನಾಲ್ಕು ಎಕರೆ ಜಮೀನಿಗೆ ಬಾಳೆ ಫಸಲು ಹಾಕಿದ್ದೆ. ಬಿರುಗಾಳಿಗೆ ಸಿಕ್ಕಿ ಮರಗಳೆಲ್ಲವೂ ನೆಲಕಚ್ಚಿದ್ದವು. ಗ್ರಾಮಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರಿಂದ ವರದಿ ತಯಾರಿಸಿ ತಹಶೀಲ್ದಾರ್ ಅವರ ಮೂಲಕ ತೋಟಗಾರಿಕೆ ಇಲಾಖೆಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದೆ. ಆದರೆ, ಆರು ತಿಂಗಳಾದರೂ ಪರಿಹಾರ ಬಂದಿಲ್ಲ. ಕಳೆದ ವರ್ಷ ಬೆಳೆದಿದ್ದ ಕಲ್ಲಂಗಡಿ ಫಸಲಿಗೂ ಇದೇ ರೀತಿ ಅನ್ಯಾಯವಾಗಿತ್ತು’ ಎಂದು ರೈತ ಪ್ರಸನ್ನ ಅವರು ತಮ್ಮ ಅಳಲು ತೋಡಿಕೊಂಡರು.

ಹಣ್ಣುಗಳು ಮಣ್ಣುಪಾಲು: ‘ತೋಟಕ್ಕೆ ಬಳಸುವ ಕೊಟ್ಟಿಗೆ ಗೊಬ್ಬರ, ಕೀಟನಾಶಕ, ಕಳೆನಾಶಕ ಉಳುಮೆ ಖರ್ಚು ಕೂಡ ಹುಟ್ಟುತ್ತಿಲ್ಲ. ಜಿಲ್ಲೆಯಲ್ಲಿ ಬೆಳಿಗ್ಗೆ 6ರಿಂದ 10ರವೆಗೆ ಅವಕಾಶವಿರುವುದರಿಂದ ವ್ಯಾಪಾರಿಗಳು ಹಣ್ಣು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಬೇರೆ ಜಮೀನುಗಳಿಗೆ ಕೂಲಿ ಕೆಲಸಕ್ಕೆ ಬರುವ ಜನರು ಕಿತ್ತುಕೊಂಡು ಹೋಗುತ್ತಾರೆ. ಕೊಳೆತ ಹಣ್ಣುಗಳನ್ನು ಜಮೀನಲ್ಲಿ ಮಣ್ಣು ಹಾಕಿ ಮುಚ್ಚುತ್ತಿದ್ದೇನೆ’ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು