ಶನಿವಾರ, ನವೆಂಬರ್ 28, 2020
25 °C
ಬುಧವಾರ ನೀರು ಪೂರೈಸದಿದ್ದರೆ ರಸ್ತೆ ತಡೆ: ಬಡಾವಣೆ ನಿವಾಸಿಗಳ ಎಚ್ಚರಿಕೆ

12 ದಿನದಿಂದ ಕುಡಿಯುವ ನೀರಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ತಾಲ್ಲೂಕಿನ ಹಂಗಳ ಹೋಬಳಿ ಕೇಂದ್ರದ ಹಿಂದುಳಿದ ಜನಾಂಗದ ಬಡಾವಣೆಗೆ ಕಳೆದ 12 ದಿನದಿಂದ ಕುಡಿಯುವ ನೀರು ಪೂರೈಸದ ಕಾರಣ ಒಂದು ಕಿ.ಮೀ. ದೂರದಲ್ಲಿರುವ ಕೆರೆಯಲ್ಲಿರುವ ಕೊಳವೆ ಬಾವಿಯಿಂದ ತರಬೇಕಾಗಿದೆ.

ಬಡಾವಣೆಯ ಪಕ್ಕದಲ್ಲಿ ಇರುವ ಶುದ್ಧ ಕುಡಿಯುವ ನೀರಿನ ಘಟಕವು ಕೆಟ್ಟು ನಿಂತ ಪರಿಣಾಮ ವಾರಗಟ್ಟಲೇ ಸಂಗ್ರಹ ಮಾಡುವ ನೀರು ಕುಡಿಯಬೇಕಾದ ಪರಿಸ್ಥಿತಿ ಬಡಾವಣೆಯ ಜನರಿಗೆ ಬಂದಿದೆ.

‘ಪುರುಷರಾದರೆ ಸೈಕಲ್ ಅಥವಾ ಬೈಕ್‌ಗಳಲ್ಲಿ ಕೆರೆಯಿಂದ ನೀರು ತರುತ್ತಾರೆ. ಮಹಿಳೆಯರು ಕಿ.ಮೀ. ಗಟ್ಟಲೇ ತಲೆಯ ಮೇಲೆ ನೀರು ಹೊರಬೇಕಿದೆ’ ಎಂದು ಬಾಬುಜಗಜೀವನ್ ರಾಂ ಬಡಾವಣೆಯ ರಾಜೇಶ್ ತಿಳಿಸಿದರು.

‘ಪ್ರತಿದಿನ ಕೆಲಸಕ್ಕೆ ಹೋಗುವ ಮುಂಚೆ ನೀರು ತರಲೇಬೇಕು. ಇದರಿಂದಾಗಿ ಅನೇಕರು ದಿನದ ಕೂಲಿಯನ್ನೇ ಕಳೆದುಕೊಳ್ಳಬೇಕಿದೆ. ವಾರಕ್ಕೆ ಕನಿಷ್ಠ ಎರಡು ಬಾರಿಯಾದರೂ ನೀರು ಬಿಡುವಂತೆ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಆರೋಪಿಸಿದರು.

‘ಇಂತಹ ಸಮಸ್ಯೆಗಳು ಗ್ರಾಮದ ಮೇಲ್ವರ್ಗದ ಜನಾಂಗದವರು ಇರುವ ಬಡಾವಣೆಯಲ್ಲಿ ಇಲ್ಲ. ಅಲ್ಲಿಗೆ ಎರಡು ದಿನಗಳಿಗೊಮ್ಮೆಯಾದರೂ ನೀರು ಬಿಡುತ್ತಾರೆ. ನಮ್ಮ ಬಡಾವಣೆಗೆ ಬುಧವಾರ ನೀರು ಬಿಡದಿದ್ದಲ್ಲಿ ರಸ್ತೆ ತಡೆ ನಡೆಸಲಾಗುವುದು, ಅಲ್ಲದೇ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಲಾಗುತ್ತದೆ’ ಎಂದು ನಿವಾಸಿಗಳು ಎಚ್ಚರಿಕೆ ನೀಡಿದರು.

‘ನೀರುಗಂಟಿಯನ್ನು ಬದಲಾವಣೆ ಮಾಡುವಂತೆ ದೂರು ಬಂದಿದೆ. ಆದರೆ ಆ ಕೆಲಸಕ್ಕೆ ಯಾರೂ ಬರುತ್ತಿಲ್ಲ, ಬುಧವಾರ ನೀರು ಪೂರೈಸುವ ವ್ಯವಸ್ಥೆ ಮಾಡುತ್ತೇನೆ’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಮಾರ್ ಸ್ವಾಮಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು