ಬುಧವಾರ, ನವೆಂಬರ್ 25, 2020
22 °C
ನ.13ರಿಂದ 16ರವರೆಗೆ ನಡೆಯಲಿದೆ ಜಾತ್ರೆ, ರಥೋತ್ಸವ ಇಲ್ಲ, ಪೂಜೆಗಷ್ಟೇ ಸೀಮಿತ

ಮಹದೇಶ್ವರ ಬೆಟ್ಟ: ದೀಪಾವಳಿ ಜಾತ್ರೆಯೂ ಸರಳ, ಭಕ್ತರಿಗಿಲ್ಲ ಪ್ರವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೋವಿಡ್‌–19 ಕಾರಣದಿಂದಾಗಿ ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದ ಮಲೆಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಈ ಬಾರಿ ದೀಪಾವಳಿ ಜಾತ್ರೆಯೂ ಅತ್ಯಂತ ಸರಳ ಹಾಗೂ ಸಾಂಕೇತಿಕವಾಗಿ ನಡೆಯಲಿದೆ. 

ಇದೇ 13ರಿಂದ 16ರವರೆಗೆ ದೀಪಾವಳಿ ಜಾತ್ರಾ ಮಹೋತ್ಸವ ನಡೆಯಬೇಕಾಗಿದ್ದು, ನಾಲ್ಕೂ ದಿನಗಳ ಕಾಲ ಬೆಟ್ಟಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಆದೇಶ ಹೊರಡಿಸಿದ್ದಾರೆ. 

ಪ್ರತಿ ವರ್ಷ ದೀಪಾವಳಿ ಸಂದರ್ಭದಲ್ಲಿ ಎಣ್ಣೆಮಜ್ಜನ ಸೇವೆ, ಅಮಾವಾಸ್ಯೆ ಪೂಜೆ, ರಥೋತ್ಸವ ಸೇರಿದಂತೆ ವಿವಿಧ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತವೆ. ನಾಲ್ಕು ದಿನಗಳ ಅವಧಿಯಲ್ಲಿ ಅಂದಾಜು ಮೂರು ಲಕ್ಷದಿಂದ ಐದು ಲಕ್ಷ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. 

ಭಾರಿ ಸಂಖ್ಯೆಯಲ್ಲಿ ಭಕ್ತರು ಬಂದರೆ ಕೋವಿಡ್‌–19 ತಡೆ ನಿಯಮ ಪಾಲನೆ ಕಷ್ಟವಾಗಬಹುದು ಎಂಬ ಕಾರಣದಿಂದ ಜಿಲ್ಲಾಡಳಿತ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದೆ. ದಸರಾ ಜಾತ್ರಾ ಮಹೋತ್ಸವದ ಸಂದರ್ಭದಲ್ಲೂ ಭಕ್ತರಿಗೆ ಅವಕಾಶ ನೀಡಿರಲಿಲ್ಲ. 

ಜಾತ್ರೆಗೆ ನಿರ್ಬಂಧ ವಿಧಿಸುವ ಸಾಧ್ಯತೆ ಇದ್ದುದರಿಂದ ದೀಪಾವಳಿ ಸಮಯದಲ್ಲಿ ವಸತಿಗೃಹಗಳನ್ನು ಆನ್‌ಲೈನ್‌ ಮೂಲಕ ಕಾಯ್ದಿರಿಸುವ ವ್ಯವಸ್ಥೆಯನ್ನು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸ್ಥಗಿತಗೊಳಿಸಿತ್ತು. 

ರಥೋತ್ಸವ ಇಲ್ಲ: ನಾಲ್ಕು ದಿನಗಳಲ್ಲೂ ದೇವಾಲಯದ ಆವರಣದಲ್ಲಿ ಅರ್ಚಕರು, ಸಿಬ್ಬಂದಿ ಹಾಗೂ ಸ್ಥಳೀಯರ ಉಪಸ್ಥಿತಿಯಲ್ಲಿ ಸರಳವಾಗಿ ಜಾತ್ರೆಯ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ.

‘ರಥೋತ್ಸವ ಇರುವುದಿಲ್ಲ. ಜಾತ್ರೆಯ ಅಂಗವಾಗಿ ಹಾಲರವೆ ಮತ್ತು ತೆಪ್ಪೋತ್ಸವ ಮಾತ್ರ ಸ್ಥಳೀಯವಾಗಿ ನಡೆಯಲಿದೆ’ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.  

12ರಂದು ಗೋಲಕ ಹಣ ಎಣಿಕೆ: ಈ ಮಧ್ಯೆ, ದೇವಾಲಯದ ಗೋಲಕಗಳ ಹಣ ಎಣಿಕೆ ಕಾರ್ಯ ಇದೇ 12ರಂದು ಬೆಟ್ಟದ ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣ ಕಟ್ಟಡದ ಮೊದಲ ಮಹಡಿಯಲ್ಲಿ ನಡೆಯಲಿದೆ ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು