ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ವಿ.ವಿ ಸ್ನಾತಕೋತ್ತರ ಕೇಂದ್ರ: ದಶಕ ಕಳೆದರೂ ಕಾಯಂ ಬೋಧಕರಿಲ್ಲ

ಚಾಮರಾಜನಗರ: ಮೂರು ಹುದ್ದೆಗಳಷ್ಟೇ ಕಾಯಂ
Last Updated 25 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಗಡಿ ಜಿಲ್ಲೆಯಲ್ಲಿ ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರ ಆರಂಭವಾಗಿ ದಶಕಕಳೆದರೂ, ಒಬ್ಬನೇ ಒಬ್ಬ ಕಾಯಂ ಬೋಧಕರ ನೇಮಕವಾಗಿಲ್ಲ. ಅತಿಥಿ ಉಪನ್ಯಾಸಕರೇ 10 ವರ್ಷಗಳಿಂದ ಬೋಧನೆ ಮಾಡುತ್ತಿದ್ದಾರೆ.

ಸದ್ಯ 10 ಕೋರ್ಸ್‌ಗಳು ಇಲ್ಲಿವೆ (ಎಂಎ –ಕನ್ನಡ, ಎಂಎ –ರಾಜ್ಯ ಶಾಸ್ತ್ರ, ಎಂಎ–ಅರ್ಥಶಾಸ್ತ್ರ, ಎಂಎಸ್‌ಡಬ್ಲ್ಯು, ಎಂಲಿಬ್‌, ಎಂಕಾಂ, ಎಂಎಸ್ಸಿ– ಗಣಿತ, ಎಂಎಸ್ಸಿ– ರಸಾಯನ ವಿಜ್ಞಾನ, ಎಂಎಸ್ಸಿ– ಭೌತವಿಜ್ಞಾನ, ಎಂಎಸ್ಸಿ–ಕಂಪ್ಯೂಟರ್‌ ಸೈನ್ಸ್‌ ). 450 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಕಾಯಂ ಹುದ್ದೆ ಮೂರು: ಕಾಯಂ ಬೋಧಕರ ನೇಮಕ ಆಗದೇ ಇರುವುದರಿಂದ ಬೋಧನೆಗಾಗಿ ವಿಶ್ವವಿದ್ಯಾಲಯವು ಅತಿಥಿ ಉಪನ್ಯಾಸಕರನ್ನೇ ನೆಚ್ಚಿಕೊಂಡಿದೆ. 55 ಮಂದಿ ಅತಿಥಿ ಉಪನ್ಯಾಸಕರು ಇಲ್ಲಿದ್ದಾರೆ. ಮೂವರು ಸಂದರ್ಶಕ ಪ್ರಾಧ್ಯಾಪಕರಿದ್ದಾರೆ.

ಕೇಂದ್ರದ ನಿರ್ದೇಶಕ ಹುದ್ದೆ ಹಾಗೂ ಎರಡು ಎಫ್‌ಡಿಎ ಹುದ್ದೆಗಳು ಮಾತ್ರ ಭರ್ತಿಯಾಗಿವೆ.ಪ್ರೊ.ಶಿವಬಸವಯ್ಯ ಒಂಬತ್ತು ವರ್ಷಗಳಿಂದ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. 31 ಬೋಧಕೇತರ ಸಿಬ್ಬಂದಿ ಇದ್ದು, ಇಬ್ಬರು ಮಾತ್ರ ಕಾಯಂ ಆಗಿದ್ದಾರೆ. ಉಳಿದವರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ.

ಶೈಕ್ಷಣಿಕವಾಗಿ ಉತ್ತಮ ಸಾಧನೆ: ಕಾಯಂ ಬೋಧಕರು ಇಲ್ಲದಿದ್ದರೂ ಇಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಉತ್ತಮವಾಗಿದೆ. ಕನ್ನಡ ವಿಷಯದಲ್ಲಿ ಇಲ್ಲಿನ ವಿದ್ಯಾರ್ಥಿಗಳೇ ಸತತವಾಗಿ ವಿಶ್ವವಿದ್ಯಾಲಯಕ್ಕೆ ಮೊದಲ ರ‍್ಯಾಂಕ್‌ ಗಳಿಸುತ್ತಿದ್ದಾರೆ.

ಕಾಯಂ ಬೋಧಕರಿದ್ದರೆ ಇನ್ನಷ್ಟು ‌ಉತ್ತಮ ಸಾಧನೆ ಮಾಡಬಹುದು ಎಂಬುದು ಇಲ್ಲಿನ ವಿದ್ಯಾರ್ಥಿಗಳ ಅಭಿಪ್ರಾಯ. ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರು ಕೂಡ, ತಮ್ಮನ್ನೇ ಕಾಯಂ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ‌ಒತ್ತಾಯಿಸುತ್ತಾರೆ.

ಸರ್ಕಾರಕ್ಕೆ ಮತ್ತೆ ಪ್ರಸ್ತಾವ: ಕುಲಪತಿ

‘30 ಬೋಧಕರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಈಗಾಗಲೇ ಎರಡು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಅದನ್ನು ಸರ್ಕಾರ ವಾಪಸ್‌ ಕಳುಹಿಸಿದೆ. ಸ್ನಾತಕೋತ್ತರ ಕೇಂದ್ರ ಅಭಿವೃದ್ಧಿಯಾಗಬೇಕಾದರೆ ಕಾಯಂ ಪ್ರಾಧ್ಯಾಪಕರು ಬೇಕೇ ಬೇಕು. ಈಗ ಮತ್ತೊಮ್ಮೆ ಪ್ರಸ್ತಾವ ಕಳುಹಿಸಲು ತೀರ್ಮಾನಿಸಿದ್ದೇವೆ’ ಎಂದು ಮೈಸೂರು ವಿಶ್ವವಿದ್ಯಾಲಯದಕುಲಪತಿ ಪ್ರೊ.ಜಿ.ಹೇಮಂತ್‌ ಕುಮಾರ್‌ಹೇಳಿದರು.

‘ಅತಿಥಿ ಬೋಧಕರಿಂದ ಉತ್ತಮ ಕಾರ್ಯ’

‘ಮೂರು ಹುದ್ದೆ ಮಾತ್ರ ಭರ್ತಿಯಾಗಿವೆ. ಕಾಯಂ ಬೋಧಕರು ಯಾರೂ ಇಲ್ಲ. ಅವರ ಅನುಪಸ್ಥಿತಿಯಲ್ಲೂ ಅತಿಥಿ ಉಪನ್ಯಾಸಕರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಸಾಧನೆ ಉತ್ತಮವಾಗಿದೆ. ಕಾಯಂ ಬೋಧಕರ ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಮತ್ತೆ ಪ್ರಸ್ತಾವ ಸಲ್ಲಿಸಲು ಸಿಂಡಿಕೇಟ್‌ ಸಭೆ ತೀರ್ಮಾನಿಸಿದೆ’ ಎಂದು ಕೇಂದ್ರದ ನಿರ್ದೇಶಕ ಪ್ರೊ.ಶಿವಬಸವಯ್ಯ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT