ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಬಿಡುವು ನೀಡಿದ ಮಳೆ, ಮುಂದುವರಿದ ನೆರೆ ಭೀತಿ

ಚಾಮರಾಜನಗರ: ಬ್ಯಾಡಮೂಡ್ಲು, ದೊಡ್ಡಮೋಳೆ, ಚಿಕ್ಕಮೋಳೆ ವ್ಯಾಪ್ತಿಯಲ್ಲಿ ಕೃಷಿ ಭೂಮಿ ಜಲಾವೃತ
Last Updated 5 ಆಗಸ್ಟ್ 2022, 14:39 IST
ಅಕ್ಷರ ಗಾತ್ರ

ಚಾಮರಾಜನಗರ/ಕೊಳ್ಳೇಗಾಲ: ಗುರುವಾರ ದಿನಪೂರ್ತಿ ಅಬ್ಬರಿಸಿ ಜನಜೀವನ ಅಸ್ತವ್ಯಸ್ತಗೊಳಿಸಿದ್ದ ಮಳೆ ಶುಕ್ರವಾರ ಬಿಡುವು ನೀಡಿತ್ತು.

ಭಾರಿ ಮಳೆ ಇನ್ನೂ ಎರಡು ದಿನ ಮುಂದುವರಿಯಲಿದೆ ಎಂಬ ಹವಾಮಾನ ಇಲಾಖೆಯ ಮುನ್ಸೂಚನೆಯಿಂದ ಆತಂಕಗೊಂಡಿದ್ದ ಜನರು ಶುಕ್ರವಾರ ಮಳೆಯಾಗದೇ ಇದ್ದುದರಿಂದ ಕೊಂಚ ನಿರಾಳರಾದರು. ಆದರೆ, ಗಾಳಿಯ ಪ್ರಮಾಣ ಹೆಚ್ಚಿತ್ತು.

ಮಳೆ ಸುರಿಯದಿದ್ದರೂ, ಕೊಳ್ಳೇಗಾಲ ತಾಲ್ಲೂಕಿನ ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ ಮುಂದುವರಿದಿದೆ. ಚಾಮರಾಜನಗರ ತಾಲ್ಲೂಕಿನ ಸುವರ್ಣಾವತಿ ಜಲಾಶಯದ ಅಚ್ಚುಕಟ್ಟು ಪ್ರದೇಶ ಹಾಗೂ ದೊಡ್ಡ ದೊಡ್ಡ ಕೆರೆಗಳ ಹಿನ್ನೀರಿನ ವ್ಯಾಪ್ತಿಯಲ್ಲಿ ನೂರಾರು ಎಕರೆ ಕೃಷಿ ಜಮೀನುಗಳಲ್ಲಿ ನಿಂತಿರುವ ನೀರು ಇಳಿದಿಲ್ಲ.

ಕೊಳ್ಳೇಗಾಲ ತಾಲ್ಲೂಕಿನ ಕಾವೇರಿ ನದಿ ತೀರದ ಜಮೀನುಗಳಿಗೆ ನುಗ್ಗಿದ್ದ ನೀರು ಇಳಿದಿಲ್ಲ. ಕಬಿನಿ ಜಲಾಶಯದಿಂದ ನದಿಗೆ ಹರಿಸಲಾಗುತ್ತಿರುವ ನೀರಿನ ಪ್ರಮಾಣವನ್ನು ಶುಕ್ರವಾರ ಸಂಜೆ ಹೆಚ್ಚಿಸಿರುವುದರಿಂದ ‍ನೀರಿನ ಮಟ್ಟ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಕೊಡಗು, ಕೇರಳದ ವೈಯನಾಡು ಪ್ರದೇಶದಲ್ಲಿ ಮಳೆ ಕಡಿಮೆಯಾಗದೇ ಇದ್ದರೆ, ಇನ್ನಷ್ಟು ಹೆಚ್ಚು ಕೃಷಿ ಜಮೀನುಗಳು ಜಲಾವೃತವಾಗುವ ಆತಂಕ ಸೃಷ್ಟಿಯಾಗಿದೆ.

ಚಾಮರಾಜನಗರ ತಾಲ್ಲೂಕಿನ ಸುವರ್ಣಾವತಿ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಬರುವ ಬ್ಯಾಡಮೂಡ್ಲು, ದೊಡ್ಡಮೋಳೆ, ಚಿಕ್ಕಮೋಳೆ, ದೊಡ್ಡಕೆರೆ, ಬಂಡಿಗೆರೆ ಸುತ್ತಮುತ್ತಲಿನ ನೂರಾರು ಎಕರೆ ಜಮೀನು ಜಲಾವೃತವಾಗಿದೆ. ಬಾಳೆ, ಕಬ್ಬು, ಜೋಳ ಸೇರಿದಂತೆ ವಿವಿಧ ಬೆಳೆಗಳು ನೀರಿನಲ್ಲಿ ಸಿಲುಕಿವೆ.

ಇಳಿದ ಹೊರ ಹರಿವು: ಈ ಮಧ್ಯೆ, ಶುಕ್ರವಾರ ಮಳೆಯಾಗದಿರುವುದರಿಂದ ಸುವರ್ಣಾವತಿ ಜಲಾಶಯದ ಒಳ ಹರಿವಿನ ಮಟ್ಟ 300 ಕ್ಯುಸೆಕ್‌ಗೆ ಇಳಿದಿದ್ದು, ಹೊರ ಹರಿವನ್ನು ₹5000 ದಿಂದ 2,500ಕ್ಕೆ ಇಳಿಸಲಾಗಿದೆ. ಚಿಕ್ಕಹೊಳೆ ಜಲಾಶಯದ ಹೊರ ಹರಿವನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾಡಾ ಅಧ್ಯಕ್ಷರ ಭೇಟಿ: ಕಾವೇರಿ ಜಲಾನಯನ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ನಿಜಗುಣರಾಜು ಅವರು ಕಾವೇರಿ ನೀರಾವರಿ ನಿಗಮ ಹಾಗೂ ಕಾಡಾ ಅಧಿಕಾರಿಗಳೊಂದಿಗೆ ಶುಕ್ರವಾರ ಬ್ಯಾಡಮೂಡ್ಲು, ದೊಡ್ಡಮೋಳೆ, ದೊಡ್ಡಕೆರೆ, ಬಂಡಿಗೆರೆ ಪ್ರದೇಶಗಳಿಗೆ ಭೇಟಿ ನೀಡಿ ನೆರೆ ಪರಿಸ್ಥಿತಿಯನ್ನು ಪರಿಶೀಲಿಸಿದರು. ರೈತರ ಅಹವಾಲುಗಳನ್ನು ಆಲಿಸಿದರು.

‘ಸ್ಥಳಕ್ಕೆ ಭೇಟಿ ನೀಡಿ ಪ‍ರಿಶೀಲನೆ ನಡೆಸಿದ್ದೇನೆ. ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದ್ದೇನೆ. ಹಲವು ಕಡೆಗಳಲ್ಲಿ ಕೃಷಿ ಜಮೀನುಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತಿದೆ. ತಹಶೀಲ್ದಾರ್‌ ಹಾಗೂ ಜಿಲ್ಲಾಧಿಕಾರಿ ಅವರಿಗೆ ಕರೆ ಮಾಡಿ, ನಷ್ಟ ಅನುಭವಿಸಿದ ರೈತರಿಗೆ ನಿಯಮಾನುಸಾರ ಪರಿಹಾರ ನೀಡಬೇಕು ಎಂದು ಸೂಚಿಸಲಾಗಿದೆ’ ಎಂದು ನಿಜಗುಣರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೋಡಿ ಬಿದ್ದ ಕೆರೆಗಳು
ನಿರಂತರ ಮಳೆಯಿಂದಾಗಿ ಕೆರೆ ಕಟ್ಟೆಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಕೆರೆಗಳು ಮತ್ತೆ ಭರ್ತಿಯಾಗಿ ಕೋಡಿ ಬೀಳಲು ಆರಂಭಿಸಿವೆ.

ನಗರಕ್ಕೆ ಸಮೀಪವಿರುವ ದೊಡ್ಡರಾಯಪೇಟೆ ಕೆರೆ 15 ವರ್ಷಗಳ ಬಳಿಕ ಮೊದಲ ಬಾರಿಗೆ ತುಂಬಿ ಹರಿದಿದೆ. ದೊಡ್ಡಕೆರೆ ಕೋಡಿ ಬಿದ್ದು, ನೀರು ಕೋಡಿ ಮೋಳೆ ಕೆರೆಗೆ ಹರಿಯುತ್ತಿದೆ. ತಾಲ್ಲೂಕಿನ ಹೊಮ್ಮದ ದೊಡ್ಡಕೆರೆ ಮತ್ತೊಮ್ಮೆ ತುಂಬಿ ಹರಿಯುತ್ತಿದೆ.

‘ಕೆರೆಕಟ್ಟೆಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ತಾಲ್ಲೂಕಿನ ಅಮಚವಾಡಿ ಕೆರೆಗೆ ವಾರದ ಅವಧಿಯಲ್ಲಿ 64 ದಶಲಕ್ಷ ಘನ ಅಡಿ ನೀರು ಹರಿದು ಬಂದಿದೆ’ ಎಂದು ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ‌ಎಂಜಿನಿಯರ್‌ ಮಂಜುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT