ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಅಕ್ರಮ ರೆಸಾರ್ಟ್‌, ಹೋಂ ಸ್ಟೇ ವಿರುದ್ಧ ಕ್ರಮಕ್ಕೆ ಶಿಫಾರಸು

ಬಿಆರ್‌ಟಿ: ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ವರದಿ
Last Updated 15 ಡಿಸೆಂಬರ್ 2022, 6:49 IST
ಅಕ್ಷರ ಗಾತ್ರ

ಚಾಮರಾಜನಗರ: ‘ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿರುವ ಬಿಳಿಗಿರಿರಂಗನಬೆಟ್ಟದಲ್ಲಿರುವ ಅಕ್ರಮ ರೆಸಾರ್ಟ್‌ಗಳು, ಹೋಂ ಸ್ಟೇಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಶಿಫಾರಸು ನೀಡಿದೆ.

‘ಅಕ್ರಮ ರೆಸಾರ್ಟ್‌, ಹೋಂಸ್ಟೇಗಳ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು’ ಎಂದು ಕೋರಿ ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ, ಎನ್‌ಟಿಸಿಎಯ ಕೇಂದ್ರ ಕಚೇರಿಗೆ ದೂರು ನೀಡಿದ್ದರು.

ದೂರಿನ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಕೇಂದ್ರ ಕಚೇರಿಯು ಬೆಂಗಳೂರಿನಲ್ಲಿರುವ ಪ್ರಾಧಿಕಾರದ ಪ್ರಾದೇಶಿಕ ಕಚೇರಿಗೆ ಸೂಚಿಸಿತ್ತು. ಅದರಂತೆ, ಸಹಾಯಕ ಐಜಿಎಫ್‌ (ಅಸಿಸ್ಟೆಂಟ್‌ ಇನ್‌ಸ್ಪೆಕ್ಟರ್‌ ಜನಲರ್‌ ಆಫ್‌ ಫಾರೆಸ್ಟ್ಸ್‌) ಹರಿಣಿ ವೇಣುಗೋಪಾಲ್‌ ನವೆಂಬರ್‌ 7ರಿಂದ 9ರವರೆಗೆ ಬಿಆರ್‌ಟಿ ಹುಲಿಸಂರಕ್ಷಿತ ಪ್ರದೇಶದ ನಿರ್ದೇಶಕಿ ಹಾಗೂ ಡಿಸಿಎಫ್‌ ದೀಪ್‌ ಜೆ.ಕಾಂಟ್ರಾಕ್ಟರ್‌ ಹಾಗೂ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ, ಬೆಟ್ಟದಲ್ಲಿರುವ ಹೋಂ ಸ್ಟೇ, ರೆಸಾರ್ಟ್‌ಗಳಿಗೆ ಭೇಟಿ ನೀಡಿ ಪ್ರಾಧಿಕಾರದ ಕೇಂದ್ರ ಕಚೇರಿಗೆ ವರದಿಯನ್ನು ನ.28ರಂದು ಸಲ್ಲಿಸಿದ್ದರು.

ಪರಿಸರ ಸೂಕ್ಷ್ಮ ವಲಯ (ಇಎಸ್‌ಝಡ್‌) ಅಧಿಸೂಚನೆ ನಿಯಮಗಳು, ಅರಣ್ಯ ಸಂರಕ್ಷಣೆ ಕಾಯ್ದೆ, ಎನ್‌ಟಿಸಿಎ ನಿಯಮಗಳು ಹಾಗೂ ಸುಪ್ರೀಂ ಕೋರ್ಟ್‌ನ ತೀರ್ಪು ಉಲ್ಲಂಘಿಸಿ ರೆಸಾರ್ಟ್‌ ಹಾಗೂ ಹೋಂ ಸ್ಟೇಗಳನ್ನು ನಡೆಸುತ್ತಿರುವುದನ್ನು ಅವರು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಪ್ರವಾಸೋದ್ಯಮ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ ಇಲಾಖೆಯ ಅನುಮತಿಯನ್ನೂ ಪಡೆದಿಲ್ಲ ಎಂಬುದನ್ನೂ ಪ್ರಸ್ತಾಪಿಸಿದ್ದರು.

ವಿಜಿಕೆಕೆಯ ಅಂಗ ಸಂಸ್ಥೆ ಕರುಣಾ ಟ್ರಸ್ಟ್‌ ನಡೆಸುತ್ತಿರುವ ಗೊರುಕನ ರೆಸಾರ್ಟ್ಸ್‌, ಗಿರಿದರ್ಶಿನಿ ರೆಸಿಡೆನ್ಸಿ, ಚಂಪಕಾರಣ್ಯ ಹೋಂ ಸ್ಟೇ/ ಶ್ವೇತಾದ್ರಿ ಹೋಂ ಸ್ಟೇ, ರಜತಾದ್ರಿ ಹಿಲ್‌ ವಿಲಾಸ್‌, ರಾಜ್‌ಕುಮಾರ್ ಲಾಡ್ಜ್‌, ಆಕಾಶ್‌ ಲಾಡ್ಜ್‌, ರಂಗಣ್ಣ ರೂಮ್ಸ್‌, ಪಿ.ಸಿ. ಮಂಜು ಲಾಡ್ಜ್‌ಗಳಲ್ಲಿ ಪರಿಶೀಲನೆ ನಡೆಸಿದ್ದರು.

ಪಿ.ಸಿ.ಮಂಜು ಲಾಡ್ಜ್‌ ಸದ್ಯ ವಾಸದ ಉದ್ದೇಶಕ್ಕೆ ಬಳಸಲಾಗುತ್ತಿದೆ. ವಿಜಿಕೆಕೆಗೆ ಸೇರಿರುವ ಆಕಾಶ್‌ ಲಾಡ್ಜ್‌ ಸದ್ಯ ಇನ್‌ಸ್ಟಿಟ್ಯೂಟ್‌ಅಫ್‌ ಪಬ್ಲಿಕ್‌ ಹೆಲ್ತ್‌ ಸಂಸ್ಥೆಯ ಸಂಶೋಧನಾ ಉದ್ದೇಶಕ್ಕೆ ಬಳಕೆಯಾಗುತ್ತಿದೆ ಎಂದು ವರದಿ ಹೇಳಿದೆ.ರಜತಾದ್ರಿ ಹಿಲ್‌ ವಿಲಾಸ್‌ಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ.

ಕರುಣಾ ಟ್ರಸ್ಟ್‌ ಬಿಟ್ಟು ಉಳಿದ ಯಾವುದೇ ರೆಸಾರ್ಟ್‌, ಹೋಂ ಸ್ಟೇ ಮಾಲೀಕರು ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿಕೊಂಡಿಲ್ಲ.

ಪರಿಸರ ಶಿಕ್ಷಣದ ‌ಹೆಸರಿನಲ್ಲಿ ರೆಸಾರ್ಟ್‌: ‘ಕರುಣಾ ಟ್ರಸ್ಟ್‌, ಪರಿಸರ ಶಿಕ್ಷಣ ಮತ್ತು ಆಯುರ್ವೇದ ಕೇಂದ್ರದ ಹೆಸರಿನಲ್ಲಿ ಗೊರುಕನ ಎಕೊ ವೆಲ್‌ನೆಸ್‌ ರೆಸಾರ್ಟ್‌ ಅನ್ನು ಸಂಪೂರ್ಣವಾಗಿ ವಾಣಿಜ್ಯ ಉದ್ದೇಶದಿಂದ ನಿರ್ವಹಿಸಲಾಗುತ್ತಿದೆ. ದಾಖಲೆಯಲ್ಲಿರೆಸಾರ್ಟ್‌ ಎಂಟು ಎಕರೆ ಜಾಗದಲ್ಲಿದ್ದು, ಅದಕ್ಕಿಂತಲೂ ಹೆಚ್ಚು ಜಾಗವನ್ನು ಬಳಸಲಾಗಿದೆ. ಪ್ರವಾಸಿಗರನ್ನು ಸೆಳೆಯಲು ನೀರಿನ ತೊರೆಯಲ್ಲಿ ಕಟ್ಟಡ ಕಟ್ಟಲಾಗಿದೆ. ಚೆಕ್‌ ಡ್ಯಾಂ ನಿರ್ಮಿಸಿ, ನೀರಿನ ಹರಿವನ್ನು ತಡೆಯಲಾಗಿದೆ’ ಎಂದು ವರದಿ ಹೇಳಿದೆ.

ವರದಿಯ ಪ್ರಮುಖ ಶಿಫಾರಸು

* ಪರಿಸರ ಸೂಕ್ಷ್ಮ ವಲಯದ ಮೇಲ್ವಿಚಾರಣಾ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುವ ಬಿಆರ್‌ಟಿ ನಿರ್ದೇಶಕರು ಸಮಿತಿ ಅಧ್ಯಕ್ಷರ ಗಮನಕ್ಕೆ ತಂದು ಶೀಘ್ರವಾಗಿ ಸಮಿತಿಯ ಸಭೆ ಕರೆದು ಚರ್ಚಿಸಬೇಕು. ಪ್ರತಿ ಪ್ರಕರಣದಲ್ಲೂ ಸಂಬಂಧಿಸಿದ ಇಲಾಖೆಗಳು ಕ್ರಮ ಕೈಗೊಳ್ಳಬೇಕು

* ಕರ್ನಾಟಕ ಉಪ ಲೋಕಾಯುಕ್ತರ ಸೂಚನೆಯಂತೆ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಬೇಕು. ಈ ಸಂಬಂಧ ನಡೆಯುತ್ತಿರುವ ಜಂಟಿ ಸಮೀಕ್ಷೆ ಹಾಗೂ ವರದಿ ಸಲ್ಲಿಕೆ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಬೇಕು.

* ಸ್ಥಳೀಯ ಸಲಹಾ ಸಮಿತಿ (ಪಿಎಲ್‌ಎ) ನಿಯಮಿತವಾಗಿ ಸಭೆ ಸೇರಿ, ಪ್ರವಾಸೋದ್ಯಮ ಚಟುವಟಿಕೆಗಳ ಮೇಲೆ ನಿಗಾ ಇಡಬೇಕು

ನಿಯಮಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ವರದಿ ಸಂಬಂಧ ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತರೊಂದಿಗೆ ಶೀಘ್ರ ಸಭೆ ನಡೆಸಲಾಗುವುದು.
ದೀಪ್‌ ಜೆ.ಕಾಂಟ್ರಾಕ್ಟರ್‌, ಬಿಆರ್‌ಟಿ ಡಿಸಿಎಫ್‌

ಬಿಆರ್‌ಟಿ ಹುಲಿ, ಆನೆಗಳ ಪ್ರಮುಖ ಆವಾಸ ಸ್ಥಾನ. ಅರಣ್ಯ ಸಂರಕ್ಷಣೆಯ ನಿಟ್ಟಿನಲ್ಲಿ ವರದಿ ಆಧಾರದಲ್ಲಿ ರಾಜ್ಯ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು.
ಗಿರಿಧರ ಕುಲಕರ್ಣಿ, ವನ್ಯಜೀವಿ ಸಂರಕ್ಷಣಾವಾದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT