ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣದಾಸೆಗೆ ಕುರಿಗಾಹಿ ವೃದ್ಧನ ಕೊಂದ: ಪ್ರಕರಣ ಭೇದಿಸಿದ ಪೊಲೀಸರು

ವೃದ್ಧನ ಕೊಂದು ಉಂಗುರ, ₹3,000 ದೋಚಿದ
Last Updated 13 ಫೆಬ್ರುವರಿ 2020, 14:47 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಹಂಡ್ರಕಳ್ಳಿ ಗ್ರಾಮದಲ್ಲಿ ಇದೇ 4ರಂದು 65 ವರ್ಷದ ಕುರಿಗಾಹಿಯೊಬ್ಬರ ಕೊಲೆ ಪ್ರಕರಣವನ್ನು ಚಾಮರಾಜನಗರ ಪೂರ್ವ ಠಾಣೆಯ ಪೊಲೀಸರು ವಾರದ ಬಳಿಕ ಭೇದಿಸಿದ್ದಾರೆ.

ಮಂಗಲ ಗ್ರಾಮದ ನಿವಾಸಿ ಮಹದೇವೇಗೌಡ ಅವರ ಶವ ಫೆ.5‌ರಂದು ಹಂಡ್ರಕಳ್ಳಿ ಗ್ರಾಮದ ಜಮೀನಿನೊಂದರಲ್ಲಿ ಪತ್ತೆಯಾಗಿತ್ತು. ಪಂಚೆಯಿಂದ ಕುತ್ತಿಗೆ ಬಿಗಿದು, ಮುಖಕ್ಕೆ ಮಾರಾಕಾಸ್ಟ್ರಗಳಿಂದ ಹೊಡೆದು ಹತ್ಯೆ ಮಾಡಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇದೇ 11ರಂದು ಹಂಡ್ರಕಳ್ಳಿ ಮೋಳೆ ಗ್ರಾಮದ ಗೋವಿಂದಶೆಟ್ಟಿ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಹಣದ ಆಸೆಗಾಗಿ ತಾನೆ ಕೊಲೆ ಮಾಡಿದ್ದಾಗಿ ವಿಚಾರಣೆ ಸಂದರ್ಭದಲ್ಲಿ ಆರೋಪಿ ಬಾಯಿಬಿಟ್ಟಿದ್ದಾನೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದ ಕುಮಾರ್‌ ಅವರು ಹೇಳಿದ್ದಾರೆ.

ಹಣದ ಆಸೆಗೆ ಕೊಂದ: ‘ಮಹದೇವೇಗೌಡ ಅವರು ಕುರಿ ಹಾಗೂ ಹಸುಗಳನ್ನು ಮೇಯಿಸುವುದರ ಜೊತೆಗೆ ಬ್ರೋಕರ್‌ ಕೆಲಸ ಮಾಡುತ್ತಿದ್ದರು, ಬಡ್ಡಿ ವ್ಯವಹಾರ ಮಾಡುತ್ತಿದ್ದರು. ಕೈಯಲ್ಲಿ ಸದಾ ಹಣ ಇಟ್ಟುಕೊಳ್ಳುತ್ತಿದ್ದರು. ಇದನ್ನು ಗಮನಿಸಿದ್ದ ಗೋವಿಂದಶೆಟ್ಟಿ 4ರಂದು ಕುರಿಗಳನ್ನು ಮೇಯಿಸುತ್ತಿದ್ದ ಮಹದೇವೇಗೌಡ ಅವರ ಮೇಲೆ ದೊಣ್ಣೆ ಹಾಗೂ ಮಚ್ಚಿನಿಂದ ದಾಳಿ ಮಾಡಿ ಹತ್ಯೆ ಮಾಡಿ, ಅವರ ಕೈಯಲ್ಲಿದ್ದ ಉಂಗುರ ಹಾಗೂ ₹3,000 ನಗದನ್ನು ತೆಗೆದುಕೊಂಡಿದ್ದ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಶವದ ಕೈಯಲ್ಲಿ ಉಂಗುರ ಇಲ್ಲದನ್ನು ಕಂಡಾಗ ಹಾಗೂ ಸದಾ ಹಣವನ್ನು ಇಟ್ಟುಕೊಳ್ಳುವ ಅಭ್ಯಾಸವನ್ನು ಮಹದೇವೇಗೌಡ ಅವರು ಹೊಂದಿದ್ದರಿಂದ, ಹಣಕ್ಕಾಗಿಯೇ ಈ ಕೊಲೆ ನಡೆದಿರಬಹುದು ಎಂಬ ಬಲವಾದ ಅನುಮಾನ ತನಿಖಾಧಿಕಾರಿಗಳಿಗೆ ಉಂಟಾಯಿತು. ತೀವ್ರವಾಗಿ ತನಿಖೆ ನಡೆಸಿ, ಮಾಹಿತಿ ಕಲೆ ಹಾಕಿದ ನಂತರ ಗೋವಿಂದ ಶೆಟ್ಟಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ,ತಾನೇ ಕೊಂದು ಹಣ ಹಾಗೂ ಉಂಗುರವನ್ನು ತೆಗೆದುಕೊಂಡು ಹೋಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆತನ ಬಳಿಯಿಂದ ₹1,000 ಹಣವನ್ನೂ ವಶಪಡಿಸಿಕೊಳ್ಳಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ಗ್ರಾಮಾಂತರ ಸರ್ಕಲ್‌ ಇನ್‌ಸ್ಪೆಕ್ಟರ್‌ ಕೆ.ಎಂ.ಮಂಜು ನೇತೃತ್ವದ ತನಿಖಾ ತಂಡ ಪ್ರಕರಣವನ್ನು ಭೇದಿಸಿದೆ. ರಾಮಸಮುದ್ರ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಎಸ್‌.ಪಿ.ಸುನಿಲ್‌, ಸಿಬ್ಬಂದಿ ನಾಗನಾಯ್ಕ, ಚಂದ್ರು, ಡಿ.ಶಾಂತರಾಜು, ವೆಂಕಟೇಶ, ದೊಡ್ಡವೀರಶೆಟ್ಟಿ, ಮಾದೇಶ್‌ ಕುಮಾರ್‌, ನಿಂಗರಾಜು, ಮಂಜುನಾಥ, ಕಿಶೋರ, ಅಶೋಕ, ಎಸ್‌.ವೆಂಕಟೇಶ, ಬಸವರಾಜು, ಶಂಕರರಾಜು, ರಾಜು ಮಹೇಶ್‌ ತಂಡದಲ್ಲಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಬಿ.ಹದ್ದಣ್ಣವರ್‌, ಡಿವೈಎಸ್‌ಪಿ ಜೆ.ಮೋಹನ್‌ ಇದ್ದರು.

‘ದುಡ್ಡಿಗಾಗಿ ಏನು ಬೇಕಾದರೂ ಮಾಡುತ್ತಿದ್ದ’
‘ಗೋವಿಂದಶೆಟ್ಟಿ ಹಲವು ಚಟಗಳಿಗೆ ದಾಸನಾಗಿದ್ದ. ಕುಡಿಯುತ್ತಿದ್ದ, ಗಾಂಜಾವನ್ನೂ ಸೇವಿಸುತ್ತಿದ್ದ. ಹಣಕ್ಕಾಗಿ ಏನನ್ನೂ ಮಾಡಲು ಸಿದ್ಧನಿದ್ದ. ಈ ಹಿಂದೆಯೂ ಇಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಬಗ್ಗೆ ವಿಚಾರಣೆ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾನೆ. ಈ ಬಗ್ಗೆ ಇನ್ನಷ್ಟು ತನಿಖೆ ನಡೆಸುವ ಅಗತ್ಯವಿದೆ’ ಎಂದು ಆನಂದಕುಮಾರ್‌ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT