ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಶೌಚಾಲಯಗಳಿದ್ದರೂ ಬಳಸದ ಜನ; ಬಯಲು ಬಹಿರ್ದೆಸೆ ಇನ್ನೂ ಜೀವಂತ

ಸಮುದಾಯ ಶೌಚಾಲಯಗಳ ನಿರ್ವಹಣೆ ಕೊರತೆ, ಜಾಗ, ನೀರಿನ ಸಮಸ್ಯೆ
Last Updated 7 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಚಾಮರಾಜನಗರ ಜಿಲ್ಲೆಯು 2018ರಲ್ಲೇ ‘ಬಯಲು ಬಹಿರ್ದೆಸೆ ಮುಕ್ತ’ ಜಿಲ್ಲೆ ಎಂಬ ಅಧಿಕೃತ ಸ್ಥಾನ ಪಡೆದಿದೆ. ಆದರೆ, ಈ ಸ್ಥಾನ ಮಾನ ಸರ್ಕಾರಿ ಕಡತದಲ್ಲಷ್ಟೇ ಇದೆ.

ಜಿಲ್ಲೆಯ ನಗರ, ಪ‍ಟ್ಟಣ, ಹೋಬಳಿ ಕೇಂದ್ರ, ಗ್ರಾಮೀಣ ಭಾಗಗಳಲ್ಲಿ ಕೆಲವರು ಈಗಲೂ ಬಹಿರ್ದೆಸೆಗೆ ಬ‌ಯಲನ್ನೇ ಆವಲಂಬಿಸಿದ್ದಾರೆ. ರಸ್ತೆಗಳ ಬದಿ, ಮೈದಾನ, ಖಾಲಿ ನಿವೇಶನ, ಕುರುಚಲು ಗಿಡಗಳಿರುವ ಜಾಗ.... ಹೀಗೆ ಜನ ಸಂಚಾರ ಕಡಿಮೆ ಇರುವಲ್ಲೆಲ್ಲ ಮಲ ವಿಸರ್ಜನೆ ಮಾಡುತ್ತಾರೆ. ಕೆಲವರು ಶೌಚಾಲಯ ಇಲ್ಲದ ಕಾರಣಕ್ಕೆ ಬಹಿರ್ದೆಸೆಗೆ ಬಯಲನ್ನು ಅವಲಂಬಿಸಿದ್ದರೆ, ಇನ್ನೂ ಕೆಲವರು ಶೌಚಾಲಯ ಇದ್ದರೂ ಅದನ್ನು ಬಳಸದೆ ಬಯಲಲ್ಲಿ ಶೌಚ ಮಾಡುತ್ತಿದ್ದಾರೆ.

ಇನ್ನೂ ಕೆಲವು ಕಡೆಗಳಲ್ಲಿ ಗ್ರಾಮ ಪಂಚಾಯಿತಿಗಳು ಸರಿಯಾದ ಸಮಯಕ್ಕೆ ಅನುದಾನ ನೀಡದೆ ಶೌಚಾಲಯ ನಿರ್ಮಾಣ ವಿಳಂಬವಾಗುತ್ತಿದೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮುದಾಯ ಶೌಚಾಲಯಗಳಿದ್ದರೂ, ಇನ್ನೂ ಜನರ ಬಳಕೆಗೆ ಮುಕ್ತವಾಗಿಲ್ಲ. ಈ ಎಲ್ಲ ಕಾರಣಗಳಿಂದ ಬಯಲು ಬಹಿರ್ದೆಸೆ ಪದ್ಧತಿ ಇನ್ನೂ ಜಿಲ್ಲೆಯಲ್ಲಿ ಮುಂದುವರೆದಿದೆ.

2013–14ರಲ್ಲಿ ಸ್ವಚ್ಛ ಭಾರತ ಅಭಿಯಾನ ದೇಶದಾದ್ಯಂತ ಆರಂಭವಾದ ನಂತರ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಗಮನಾರ್ಹ ಪ್ರಮಾಣದಲ್ಲಿ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. 2018–19ನೇ ಸಾಲಿನಲ್ಲಿ ಒಂದೇ ವರ್ಷದಲ್ಲಿ ದಾಖಲೆಯ 78 ಸಾವಿರಗಳಷ್ಟು ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಜಿಲ್ಲಾ ಪಂಚಾಯಿತಿ ನೀಡಿರುವ ಅಂಕಿ ಅಂಶಗಳ ಪ್ರಕಾರ ಈವರೆಗೆ 1.63 ಲಕ್ಷದಷ್ಟು ವೈಯಕ್ತಿಕ ಶೌಚಾಲಯಗಳನ್ನು ಗ್ರಾಮೀಣ ಭಾಗಗಳಲ್ಲಿ ನಿರ್ಮಿಸಲಾಗಿದೆ. ಈ ವರ್ಷದಲ್ಲಿ ಇನ್ನೂ 1,869 ಶೌಚಾಲಯಗಳು ನಿರ್ಮಾಣವಾಗಬೇಕಿದೆ.

ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಸಾಮಾನ್ಯ ವರ್ಗದವರಿಗೆ ₹12 ಸಾವಿರ, ಪರಿಶಿಷ್ಟ, ಪರಿಶಿಷ್ಟ ಪಂಗಡದವರಿಗೆ ₹15 ಸಾವಿರ ಅನುದಾನ ನೀಡಲಾಗುತ್ತದೆ. ಈ ಅನುದಾನ ಸರಿಯಾದ ಸಮಯಕ್ಕೆ ಸಿಗುವುದಿಲ್ಲ ಎಂಬ ದೂರುಗಳಿವೆ. ಹನೂರು ತಾಲ್ಲೂಕು ವ್ಯಾಪ್ತಿಯಲ್ಲಿ ಸಕಾಲಕ್ಕೆ ಅನುದಾನ ಸಿಗದೇ ಇರುವುದರಿಂದ ಶೌಚಾಲಯ ನಿರ್ಮಾಣ ಕಾಮಗಾರಿ ಅರ್ಧದಲ್ಲೇ ನಿಂತಿವೆ.

ಹಲವು ಸಮಸ್ಯೆಗಳು: ಶೌಚಾಲಯಗಳು ಇದ್ದರೂ, ಅದನ್ನು ಬಳಕೆ ಮಾಡದವರು ಒಂದು ವರ್ಗದವರಾದರೆ, ವಿವಿಧ ಸಮಸ್ಯೆಗಳ ಕಾರಣಕ್ಕೆ ಶೌಚಾಲಯ ನಿರ್ಮಿಸಲಾಗದವರು ಮತ್ತು ಶೌಚಾಲಯ ಬಳಸಲು ಆಗದವರಿದ್ದಾರೆ.

ಬಡ ಕುಟುಂಬಗಳಲ್ಲಿ ಶೌಚಾಲಯ ನಿರ್ಮಿಸಲು ಜಾಗದ ಸಮಸ್ಯೆ ಇದೆ. ಇನ್ನೂ ಕೆಲವರಿಗೆ ನೀರಿನ ಸಮಸ್ಯೆ ಇದೆ. ಹೀಗಾಗಿ, ಬಯಲನ್ನೇ ಅವಲಂಬಿಸಿದ್ದಾರೆ. ವೈಯಕ್ತಿಕ ಶೌಚಾಲಯ ನಿರ್ಮಾಣ ಸಾಧ್ಯವಾಗದವರಿಗಾಗಿ ಸಮುದಾಯ ಶೌಚಾಲಯಗಳ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಬಹುತೇಕ ಸಮುದಾಯ ಶೌಚಾಲಯಗಳು ನಿರ್ವಹಣೆ ಕೊರತೆ ಎದುರಿಸುತ್ತಿವೆ. ಗ್ರಾಮ ಪಂಚಾಯಿತಿಗಳಾಗಲಿ, ನಗರ ಸ್ಥಳೀಯ ಸಂಸ್ಥೆಗಳಲಾಗಲಿ ಅವುಗಳ ನಿರ್ವಹಣೆಗೆ ಕಾಳಜಿ ವಹಿಸುತ್ತಿಲ್ಲ. ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿ ಒಂಬತ್ತು ಸಮುದಾಯ ಶೌಚಾಲಯಗಳು ನಿರ್ಮಾಣಗೊಂಡು ವರ್ಷಗಳು ಉರುಳಿದರೂ, ಸಾರ್ವಜನಿಕ ಬಳಕೆಗೆ ಇನ್ನೂ ಮುಕ್ತಗೊಂಡಿಲ್ಲ.

ಸಾರ್ವಜನಿಕರು ಏನಂತಾರೆ..?

ಅರಿವು ಮೂಡಿಸಲಿ

ಗ್ರಾಮಗಳಲ್ಲಿ ಪ್ರತಿ ಮನೆಗಳಲ್ಲಿವೈಯಕ್ತಿಕ ಶೌಚಾಲಯ ನಿರ್ಮಾಣವಾಗಿಲ್ಲ. ಬಯಲು ಬಹಿರ್ದೆಸೆಯಿಂದಾಗುವ ದುಷ್ಪರಿಣಾಮದ ಬಗ್ಗೆ ಗ್ರಾಮೀಣ ಪ್ರದೇಶದ ಜನರಿಗೆ ಅರಿವಿಲ್ಲ. ಆರೋಗ್ಯ ಇಲಾಖೆ, ತಾಲ್ಲೂಕು ಪಂಚಾಯಿತಿ ಆಡಳಿತಗಳು ಜನರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕು. ಗ್ರಾಮ ಪಂಚಾಯಿತಿಯವರು ಮನೆಗಳ ಸಮೀಕ್ಷೆ ನಡೆಸಿ ಶೌಚಾಲಯ ಹೊಂದಿಲ್ಲದ ಕುಟುಂಬಗಳನ್ನು ಗುರುತಿಸಿ ಅವರಿಗೆ ಶೌಚಾಲಯ ನಿರ್ಮಿಸಲು ತಿಳಿಸಬೇಕು.

–ನಂಜುಂಡಸ್ವಾಮಿ, ಹೊಸಮೋಳೆ, ಚಾಮರಾಜನಗರ ತಾಲ್ಲೂಕು

***

ಸಕಾಲದಲ್ಲಿ ಸಿಗದ ಅನುದಾನ

ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಗ್ರಾಮಪಂಚಾಯಿತಿ ವತಿಯಿಂದ ಅನುದಾನ ಸರಿಯಾಗಿ ಬಳಕೆಯಾಗುತ್ತಿಲ್ಲ. ಇದರಿಂದ ಕೂಲಿ ಮಾಡಿ ಜೀವನ ಸಾಗಿಸುವವರು ಶೌಚಾಲಯ ನಿರ್ಮಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ನರೇಗಾದಲ್ಲಿ ಶೌಚಾಲಯ ನಿರ್ಮಿಸಲು ಅವಕಾಶವಿದೆ. ಸಕಾಲದಲ್ಲಿ ಅನುದಾನ ಬಿಡುಗಡೆಯಾಗುತ್ತಿಲ್ಲ. ಅಲ್ಲದೇ ಗ್ರಾಮಕ್ಕೊಂದಾರೂ ಸಾರ್ವಜನಿಕ ಶೌಚಾಲಯ ನಿರ್ಮಿಸಿಕೊಡಬೇಕು.

–ಸಿದ್ದಪ್ಪಾಜಿ, ಮಂಗಲ ಹೊಸೂರು, ಚಾಮರಾಜನಗರ ತಾಲ್ಲೂಕು

***

ಶೌಚಾಲಯ ಅನಾಥ

ಸ್ವಚ್ಛ ಗ್ರಾಮ ಯೋಜನೆಯಲ್ಲಿ ಎರಡು ಸಾಮೂಹಿಕ ಶೌಚಾಲಯ ನಿರ್ಮಿಸಲಾಗಿದೆ. ನಿರ್ವಹಣೆಇಲ್ಲದೆ ಇವು ಸೊರಗಿವೆ. ಕೆಲವು ಕುಸಿದು ಬೀಳುವ ಹಂತದಲ್ಲಿ ಇದೆ. ಮನೆಯ ಶೌಚಾಲಯಶುಚಿಯಾಗಿ ಇಟ್ಟುಕೊಂಡು ಬಳಸುವ ಬಗ್ಗೆ ಜಾಗೃತಿ ಮೂಡಿಸಬೇಕು.

–ಎಂ.ಮಹೇಶ್,ಯರಗಂಬಳ್ಳಿ,ಯಳಂದೂರು ತಾಲ್ಲೂಕು

***

ಬಯಲು ಮಲ ವಿಸರ್ಜನೆ ತಪ್ಪಿಸಿ

ಇನ್ನೂ ಶೌಚ, ಸ್ವಚ್ಛತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಿದೆ. ಪಟ್ಟಣ ಮತ್ತು ಕೆಲವುಗ್ರಾಮಗಳಲ್ಲಿ ಇನ್ನೂ ಅಸ್ತಿತ್ವದಲ್ಲಿ ಇರುವ ಬಯಲು ಮಲ ವಿಸರ್ಜನೆ ತಪ್ಪಿಸಲು ಯೋಜನೆರೂಪಿಸಬೇಕಿದೆ. ಅದರಿಂದ ಉಂಟಾಗುವ ಕೆಡುಕಿನ ಬಗ್ಗೆ ತಿಳಿ ಹೇಳುವ ಕೆಲಸ ಆಗಬೇಕು.

–ಬಸವರಾಜು, ಸಾಹಿತಿ, ಗುಂಬಳ್ಳಿ

***

ಕಡತದಲ್ಲಿ ಶೌಚಾಲಯ

ಶೆಟ್ಟಳ್ಳಿ ಗ್ರಾಮಪಂಚಾಯಿತಿಯಲ್ಲಿ ಶೌಚಾಲಯಗಳೇ ನಿರ್ಮಾಣವಾಗಿಲ್ಲ. ಆದರೆ ಕಾಮಗಾರಿ ಮುಗಿದಿದೆ ಎಂದು ಅನುದಾನ ಮಾತ್ರ ಬಿಡುಗಡೆಯಾಗಿದೆ. ಇದರಿಂದಾಗಿ ಜನರು ಶೌಚಾಲಯಕ್ಕೆ ರಸ್ತೆ ಬದಿಯನ್ನೇ ಅವಲಂಬಿಸಿದ್ದಾರೆ.

–ಶ್ರೀರಂಗಶೆಟ್ಟಿ, ಭದ್ರಯ್ಯನಹಳ್ಳಿ, ಹನೂರು ತಾಲ್ಲೂಕು

***

ಸಕಾಲಕ್ಕೆ ಅನುದಾನ ಬೇಕು

ಫಲಾನುಭವಿಗಳು ಶೌಚಾಲಯ ಕಟ್ಟಿಸಲು ಮುಂದಾದರೂ ಗ್ರಾಮಪಂಚಾಯಿತಿ ಅಧಿಕಾರಿಗಳು ನಿಗಧಿತ ಸಮಯಕ್ಕೆ ಪ್ರೋತ್ಸಾಹ ಧನ ಕೊಡುವುದಿಲ್ಲ. ಇದರಿಂದ ಜನರು ಶೌಚಾಲಯ ನಿರ್ಮಾಣಕ್ಕೆ ನಿರಾಸಕ್ತಿ ತೋರುತ್ತಿದ್ದಾರೆ.

–ಮಹಾದೇವಪ್ರಭು, ಶಿವಪುರ‌, ಹನೂರು ತಾಲ್ಲೂಕು

***

ಶೌಚಾಲಯ ಇದ್ದರೂ ಬಳಸುತ್ತಿಲ್ಲ

ನಮ್ಮ ಗ್ರಾಮದಲ್ಲಿ ಶೌಚಾಲಯಗಳು ಇದ್ದರು ಸಹ ಗ್ರಾಮಸ್ಥರು ಶೌಚಾಲಯಗಳನ್ನು ಬಳಸುವುದಿಲ್ಲ. ಎಲ್ಲರೂ ಸಹ ಕೆರೆ ಕಟ್ಟೆ, ಅಡ್ಡ ರಸ್ತೆ ಮತ್ತು ಬಯಲನ್ನೇ ಆವರಿಸುತ್ತಾರೆ. ಆ ಕಾರಣ ಬಯಲು ಮುಕ್ತ ಮಾಡಲು ಅಸಾಧ್ಯ.

–ರಘು,ಕುಣಗಳ್ಳಿ, ಕೊಳ್ಳೇಗಾಲ ತಾಲ್ಲೂಕು

***

ನೀರಿನ ಸಮಸ್ಯೆ

ಕೆಲವರು ಮನೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡಿದ್ದರೂ ಬಯಲನ್ನು ಅವಲಂಬಿಸಿದ್ದಾರೆ. ನೀರಿನ ಸಮಸ್ಯೆಯಿಂದಾಗಿ ಶೌಚಾಲಯ ಬಳಕೆ ಮಾಡಲು ಆಗುತ್ತಿಲ್ಲ. ವಾರಕ್ಕೆ, 15 ದಿನಕ್ಕೊಮ್ಮೆ ನೀರು ಬಿಟ್ಟರೆ ಶೌಚಾಲಯ ಬಳಸುವುದಾದರೂ ಹೇಗೆ? ಹೀಗಾಗಿ ವಿಧಿ ಇಲ್ಲದೆ ಜನರು ಬಯಲನ್ನು ಅವಲಂಬಿಸಿದ್ದಾರೆ

–ರಾಜೇಶ್, ಹಂಗಳ, ಗುಂಡ್ಲುಪೇಟೆ ತಾಲ್ಲೂಕು

***

ಶೌಚಾಲಯಕ್ಕೆ ಬೀಗ

ಗುಂಡ್ಲುಪೇಟೆ ಪಟ್ಟಣದ ಕೆಲ ವಾರ್ಡ್‌ಗಳಲ್ಲಿ ಜನರು ಬಹಿರ್ದೆಸೆಗೆ ಬಯಲು ಮತ್ತು ರಸ್ತೆಯ ಬದಿಯನ್ನು ಅವಲಂಭಿಸಿದ್ದಾರೆ. ಸಾರ್ವಜನಿಕ ಶೌಚಾಲಯಗಳಿದ್ದರೂ ನಿರ್ವಹಣೆ ಕೊರತೆಯಿಂದಾಗಿ ಬೀಗ ಬಿದ್ದಿದೆ. ಪಟ್ಟಣದ ಕಾಗೆ ಹಳ್ಳದ ಬಳಿ, ಮದ್ದನೇಶ್ವರ ಶಾಲಾ ಹಿಂಭಾಗದಲ್ಲಿ ಮತ್ತು ಅಂಬೇಡ್ಕರ್ ವೃತ್ತ ಹಾಗೂ ಹೊಸುರು ರಸ್ತೆಯಲ್ಲಿ ಇರುವ ಸಾರ್ವಜನಿಕ ಶೌಚಾಲಯಗಳಿಗೆ ಬೀಗ ಜಡಿಯಲಾಗಿದೆ.

–ರಮೇಶ್, ಗುಂಡ್ಲುಪೇಟೆ

***

‘ನಿಗದಿತ ಗುರಿ ತಲುಪಿದ್ದೇವೆ’

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ನಿಗದಿತ ಗುರಿಯಷ್ಟು ಶೌಚಾಲಯಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಹನೂರು ಪಟ್ಟಣ ಪಂಚಾಯಿತಿಯಲ್ಲಿ ಮಾತ್ರ 30 ಶೌಚಾಲಯಗಳ ನಿರ್ಮಾಣ ಪ್ರಗತಿಯಲ್ಲಿದೆ. ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ ಸಮುದಾಯ ಶೌಚಾಲಯಗಳ ಉದ್ಘಾಟನೆ ಇನ್ನೂ ಆಗದಿರುವುದು ಗಮನಕ್ಕೆ ಬಂದಿದೆ. ತಕ್ಷಣ ಅವುಗಳನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲು ಅಧಿಕಾರಿಗಳಿಗೆ ಸೂಚಿಸಿಲಾಗಿದೆ

– ಕೆ.ಸುರೇಶ್‌, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ

***

ಯಳಂದೂರು: ಶೇ 95 ಶೌಚಾಲಯ ನಿರ್ಮಾಣ

ಯಳಂದೂರು ತಾಲ್ಲೂಕಿನ 12 ಪಂಚಾಯಿತಿ ವ್ಯಾಪ್ತಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಹೇರಳ ಅವಕಾಶ ಇದೆ. ಆಯಾಪಂಚಾಯಿತಿ ಈಗಲೂ ಅನುದಾನ ನೀಡುತ್ತಿದೆ. ಅಗತ್ಯ ಇದ್ದವರು ನೋಂದಾಯಿಸಿಕೊಂಡರೆ ಸಾಕು. ನಿಯಮಾನುಸಾರ ಶೌಚಾಲಯ ನಿರ್ಮಿಸಿಕೊಳ್ಳಲು ಆದೇಶ ನೀಡಲಾಗುತ್ತದೆ. ತಾಲ್ಲೂಕಿನ 28ಗ್ರಾಮಗಳಲ್ಲಿ ಶೇ 95 ಶೌಚಾಲಯ ಪೂರ್ಣಗೊಂಡಿದೆ.

– ಆರ್.ಉಮೇಶ್,ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ, ಯಳಂದೂರು

***

235 ಶೌಚಾಲಯ ನಿರ್ಮಾಣ ಪ್ರಗತಿಯಲ್ಲಿಗುಂಡ್ಲುಪೇಟೆ ತಾಲ್ಲೂಕಿನಲ್ಲಿ678 ವೈಯಕ್ತಿಕ ಶೌಚಾಲಯ ನಿರ್ಮಾಣವಾಗಬೇಕಿತ್ತು. 443 ಶೌಚಾಲಯಗಳು ಮುಗಿದಿವೆ. 235 ಶೌಚಾಲಯಗಳ ಕಾರ್ಯ ನಡೆಯುತ್ತಿದೆ.

–ಶ್ರೀಕಂಠೇರಾಜೇ ಅರಸ್, ಗುಂಡ್ಲುಪೇಟೆ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ

***

ಸಮಸ್ಯೆಗಳ ನಿವಾರಣೆಗೆ ಗಮನ: ಸಿಇಒ

ಗ್ರಾಮೀಣ ಭಾಗಗಳಲ್ಲಿ ಶೌಚಾಲಯ ನಿರ್ಮಾಣ ಹಾಗೂ ಅದರ ಬಳಕೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಜಿಲ್ಲೆಯಾದ್ಯಂತ ಭೇಟಿ ನೀಡಿ ಖುದ್ದಾಗಿ ಪರಿಶೀಲಿಸುವ ಕೆಲಸ ಬಾಕಿ ಇದೆ. ಶೀಘ್ರದಲ್ಲಿ ಭೇಟಿ ನೀಡುತ್ತೇನೆ. ನಿಗದಿತ ಗುರಿಯಷ್ಟು ಶೌಚಾಲಯಗಳನ್ನು ಕಡ್ಡಾಯವಾಗಿ ನಿರ್ಮಿಸಬೇಕು ಎಂದು ಸೂಚಿಸಿದ್ದೇನೆ. ಶೌಚಾಲಯ ಬಳಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವೂ ನಿರಂತರವಾಗಿ ನಡೆಯುತ್ತಿದೆ.

ಗ್ರಾಮೀಣ ಭಾಗಗಳಲ್ಲಿ ಜನರಿಗೆ ಶೌಚಾಲಯ ನಿರ್ಮಿಸಲು ಜಾಗದ ಸಮಸ್ಯೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಕೆಲವರಿಗೆ ನೀರಿನ ಸಮಸ್ಯೆಯೂ ಇದೆ ಎಂಬ ಮಾಹಿತಿಯೂ ಸಿಕ್ಕಿದೆ. ಜಿಲ್ಲೆಯಾದ್ಯಂತ ಜಲಜೀವನ್‌ ಮಿಷನ್‌ ಅಡಿಯಲ್ಲಿ ಮನೆ ಮನೆಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಯೋಜನೆ ಪೂರ್ಣಗೊಂಡಾಗ ನೀರಿನ ಸಮಸ್ಯೆ ಬಗೆಹರಿಯಲಿದೆ.

– ಕೆ.ಎಂ.ಗಾಯತ್ರಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ

***

ನಿರ್ವಹಣೆ: ಸೂರ್ಯನಾರಾಯಣ ವಿ.

ಪೂರಕ ಮಾಹಿತಿ: ಮಲ್ಲೇಶ ಎಂ., ನಾ.ಮಂಜುನಾಥಸ್ವಾಮಿ, ಬಿ.ಬಸವರಾಜು, ಮಹದೇವ್‌ ಹೆಗ್ಗವಾಡಿಪುರ, ಅವಿನ್‌ ಪ್ರಕಾಶ್‌ ವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT