ಯಳಂದೂರು: ಗೂಬೆಗಳೆಂದರೆ ಬೆಚ್ಚುವವರೇ ಹೆಚ್ಚು. ರಾತ್ರಿಯ ರಾಜನಂತೆ ಮೆರೆಯುವ ಗೂಬೆಗಳ ಲೋಕ ವಿಸ್ಮಯಗಳ ಆಗರ. ಹಲವು ಪ್ರಭೇದಗಳ ಹಕ್ಕಿಗಳಿದ್ದರೂ ಗೂಬೆಗಳದ್ದು ವಿಶಿಷ್ಠ ಮತ್ತು ವಿಶೇಷ ಸಂಕುಲ.
ಕಾಡು-ನಾಡು ಎನ್ನದೆ ಪ್ರತ್ಯೇಕ ಆವಾಸದಲ್ಲಿ ಇರಲು ಬಯಸುವ ಗೂಬೆಗಳು ಪರಿಸರದ ಸೂಕ್ಷ್ಮ ಕೊಂಡಿಗಳಾಗಿ ಗುರುತಿಸಿಕೊಂಡಿವೆ. ಗೂಬೆಗಳು ಸ್ವಚ್ಛತೆಯ ರಾಯಭಾರಿ ಎಂಬುದೇ ಸೋಜಿಗ. ನಮ್ಮ ಸುತ್ತಲ ಅಭಯಾರಣ್ಯಗಳಲ್ಲಿ ನಲೆ ಕಂಡುಕೊಂಡ ಗೂಬೆ ಸಂತತಿಗಳು ವಿವಿಧ ಕಾರಣಗಳಿಂದ ನಾಶವಾಗುವ ಆತಂಕ ಪರಿಸರ ಪ್ರಿಯರಲ್ಲಿ ಎದುರಾಗಿದೆ.
ತಾಲ್ಲೂಕಿನ ಸುತ್ತಮುತ್ತಲ ಅಡವಿಯಲ್ಲಿ 225ಕ್ಕೂ ಹೆಚ್ಚಿನ ಪ್ರಬೇಧದ ಪಕ್ಷಿಗಳಿದ್ದು ಅಪರೂಪದ ಗಿಡುಗ, ರಣಹದ್ದುಗಳು ಕೂಡ ವಾಸಿಸುತ್ತವೆ. ಆದರೆ, ಸದಾ ಒಂಟಿಯಾಗಿ ಜೀವಿಸುವ, ಹಗಲಿನಲ್ಲಿ ಅಷ್ಟಾಗಿ ಕಾಣಸಿಗದ, ಭಯ ಕುತೂಹಲ ಉಳಿಸಿಕೊಂಡಿರುವ ಗೂಬೆಗಳು ತಾಲ್ಲೂಕಿನಲ್ಲಿ ಬದುಕಿವೆ. ಇಲಿ, ಕೀಟ ಮತ್ತು ಪಕ್ಷಿಗಳನ್ನು ಭಕ್ಷಿಸಿ ರೈತ ಮತ್ತು ಪ್ರಕೃತಿ ಸ್ನೇಹಿಯಾಗಿಯೂ ಕುತೂಹಲ ಕೆರಳಿಸುತ್ತವೆ.
ಸೆಪ್ಟೆಂಬರ್ ಚಳಿಗಾಲದ ಆರಂಭವಾಗಿದ್ದು ಇಳಿಸಂಜೆ ಆಗಸದಲ್ಲಿ ಗೂಬೆಗಳು ಹೊರ ಬರಲು ಸಿದ್ಧತೆ ನಡೆಸುತ್ತವೆ. ಪಾಳುಬಿದ್ದ ಕಟ್ಟಡ, ಹಳೆಯ ಮನೆಗಳು, ಗೋಪುರ, ಕಣಜ ಮತ್ತು ಚಾವಣಿಗಳ ನಡುವೆ ಗೂಬೆಗಳು ಗೂಡು ಕಟ್ಟುತ್ತವೆ. ಇವುಗಳ ವಿಚಿತ್ರ ಕೂಗು-ಕೇಕೆ, ಗೊರಕೆ, ಕರ್ಕಶ ಶಬ್ಧ ಜನರನ್ನು ಬೆಚ್ಚಿ ಬೀಳಿಸುತ್ತದೆ. ತಮ್ಮತ್ತ ಯಾರೂ ಸುಳಿಯದಂತೆ ನೋಡಿಕೊಳ್ಳುವ ತಂತ್ರ ಇವುಗಳ ಶಬ್ಧದ ಹಿಂದಿದೆ ಎನ್ನುತ್ತಾರೆ ಪಕ್ಷಿ ಪ್ರಿಯರು.
‘ಸಾಗುವಳಿ ಪ್ರದೇಶದಲ್ಲಿ ಉಪಟಳ ನೀಡುವ ಸಣ್ಣ ಪುಟ್ಟ ಜೀವಿಗಳನ್ನು ಗೂಬೆಗಳು ತಿನ್ನುತ್ತವೆ. ಸ್ವಾಭಾವಿಕ ನೆಲೆ, ಪ್ರಪಾತದ ಸಂದು, ಗುಳಿ, ಕಲ್ಲು ಪೊಟರೆಗಳಲ್ಲೂ ಬದುಕಿರುತ್ತವೆ. ಸಸ್ಯ ವೈವಿಧ್ಯ ಮತ್ತು ಆಹಾರ ಹೆಚ್ಚಳಕ್ಕೆ ನೆರವಾಗುವ ಗೂಬೆಗಳು ಅತಿಯಾದ ಕೀಟನಾಶಕ ಬಳಕೆ ಮತ್ತು ಕಲುಷಿತ ಜಲಮೂಲಗಳ ಹೆಚ್ಚಳದಿಂದ ಅವುಗಳ ಜೀವಕ್ಕೆ ಕಂಟಕ ಎದುರಾಗಿದೆ ಎನ್ನುತ್ತಾರೆ ಏಟ್ರೀ ಸಂಶೋಧಕ ಬಿಆರ್ಟಿ ಸಿ.ಮಾದೇಗೌಡ.
ಗೂಬೆ ಸ್ಟ್ರೀಜಿಪೋರ್ಮೀಸ್ ಗುಂಪಿಗೆ ಸೇರಿದೆ. ಈವರೆಗೆ 133 ಗೂಬೆಗಳ ಪ್ರಭೇದ ಗುರುತಿಸಲಾಗಿದೆ. ಬಿಳಿಗಿರಿಕಾಡಿನ ಸುತ್ತಮುತ್ತ ಹಲವು ಜಾತಿಯ ಗೂಬೆಗಳಿವೆ. ಇವುಗಳು ರಾತ್ರಿ ಕಾರ್ಯಾಚರಣೆ ನಡೆಸಿ, ಹೆಗ್ಗಣ ಹಾಗೂ ಸರ್ಪಗಳನ್ನು ಸೇವಿಸುತ್ತವೆ. ಕಣಜದ ಗೂಬೆ, ಕುಬ್ಜ ಗೂಬೆ, ಮೀನುಗೂಬೆ, ಮಂಜಿನಗೂಬೆ, ಕೊಂಬಿನಗೂಬೆ ಮೊದಲಾದ ಗೂಬೆ ವೈವಿಧ್ಯಗಳನ್ನು ಕಾಣಬಹುದು.
ಗೂಬೆ ರಕ್ಷಿಸಿ: ಗೂಬೆ ವಿಶ್ವದ ಎಲ್ಲ ರಾಷ್ಟ್ರಗಳಲ್ಲೂ ಕಂಡುಬರುತ್ತದೆ. ಗೂಬೆಯನ್ನು ಮೌಢ್ಯಗಳಿಂದ, ಶಕುನವಾಗಿ ನೋಡದೆ ರಕ್ಷಿಸಬೇಕು. ಊರು, ಕೇರಿ ಎನ್ನದೆ ಮನೆ ಸುತ್ತಮುತ್ತ ಗೂಬೆ ಕಂಡಾಗ ತೊಂದರೆ ನೀಡಬಾರದು ಎಂದು ಕರಾವೈಸಂಪ ಜಿಲ್ಲಾ ಘಟಕದ ಅಧ್ಯಕ್ಷ ಮುಡಿಗುಂಡ ಎನ್.ಮಹದೇವ ಹೇಳುತ್ತಾರೆ.
‘ಗೂಬೆ’ ಲಕ್ಷ್ಮಿ ವಾಹನ
ಗೂಬೆ ಕಂಡರೆ ಅಪಶಕುನ ಎಂಬ ಅಪನಂಬಿಕೆ ಸಮಾಜದಲ್ಲಿ ಬಲವಾಗಿದೆ. ಗೂಬೆ ರಾತ್ರಿಯ ಹೊತ್ತು ಚುರುಕಿನಿಂದ ಇರುತ್ತದೆ ಹಗಲಿನಲ್ಲಿ ಕಣ್ಣು ಕಾಣದು ಎಂಬ ಭ್ರಮೆ ಕೆಲವರಲ್ಲಿದ್ದರೂ ಅದು ತಪ್ಪು ಕಲ್ಪನೆ. ಅಗಲ ಮುಖ ಹೊಳೆಯುವ ನಯನ ಮೋಟು ಕುತ್ತಿಗೆ ದಪ್ಪತಲೆ ಬಿಳಿ ಚುಕ್ಕಿಯ ದೇಹ ಮತ್ತು ಮಣ್ಣಿನ ವರ್ಣದ ತುಪ್ಪಳ ಕಾಲಿನ ರಚನೆ ಸಹಜವಾಗಿ ಈ ಹಕ್ಕಿಯ ಬಗ್ಗೆ ಮೂಢನಂಬಿಕೆ ಬರುವಂತೆ ಮಾಡಿದೆ. ಲಕ್ಷ್ಮಿದೇವಿಯ ವಾಹನ ಗೂಬೆ ಎಂಬುದು ಪುರಾಣ ಕಥೆಗಳಲ್ಲಿ ಬರುತ್ತದೆ. ಗೂಬೆಗಳ ಮೊಟ್ಟೆ ಮರಿಗಳನ್ನು ನಾಶ ಮಾಡುವುದು ನಿಲ್ಲಬೇಕು ಗೂಬೆ ಸಂತತಿ ಸಂರಕ್ಷಿಸಿ ಉಳಿಸಿ ಬೆಳೆಸುವ ಕೆಲಸ ಆಗಬೇಕು ಎಂದು ಛಾಯಾಗ್ರಾಹಕ ಕೊಳ್ಳೇಗಾಲ ನವೀನ್ ಜಗಲಿ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.