ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಮಹಿಳಾ ಠಾಣೆಗೆ ಬೇಕಿದೆ ಸ್ವಂತ ಕಟ್ಟಡ

Published 8 ಮಾರ್ಚ್ 2024, 7:12 IST
Last Updated 8 ಮಾರ್ಚ್ 2024, 7:12 IST
ಅಕ್ಷರ ಗಾತ್ರ

ಚಾಮರಾಜನಗರ: ದೌರ್ಜನ್ಯಕ್ಕೆ ಒಳಗಾಗಿರುವ ಹೆಣ್ಣುಮಕ್ಕಳು ಮತ್ತು ಮಹಿಳೆಯರಿಗೆ ದೂರು ಸಲ್ಲಿಸಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ಜಿಲ್ಲಾ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಮಹಿಳಾ ಠಾಣೆಗೆ ಸ್ವಂತ ಸೂರಿಲ್ಲ. 

ನಗರದ ರಾಮಸಮುದ್ರದ ಪೂರ್ವ ಪೊಲೀಸ್‌ ಠಾಣೆ ಹಿಂಭಾಗದಲ್ಲಿರುವ ಪೊಲೀಸ್‌ ವಸತಿ ಗೃಹದಲ್ಲಿ ಠಾಣೆ ಕಾರ್ಯಾಚರಿಸುತ್ತಿದೆ. 

ಕಟ್ಟಡವು ವಸತಿ ಗೃಹವಾಗಿರುವುದರಿಂದ ಪೊಲೀಸ್‌ ಠಾಣೆಯ ವಾತಾವರಣ ಇಲ್ಲ. ಇಕ್ಕಟ್ಟು ಇದೆ. ಹೀಗಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿ ಇರುವ ಸ್ಥಳಾವಕಾಶದಲ್ಲೇ ಕರ್ತವ್ಯ ನಿರ್ವಹಿಸಬೇಕಾಗಿದೆ.

ಸ್ವಂತ ಕಟ್ಟಡ ನಿರ್ಮಾಣಕ್ಕೆ ಪೊಲೀಸ್‌ ಇಲಾಖೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತ ಮಹಿಳೆಯರು ದೂರು ಕೊಡಲು ಬಂದಾಗ ಅವರಿಗೆ ಸುರಕ್ಷತೆ ಭಾವನೆ ಮೂಡಬೇಕು ಎಂಬ ಉದ್ದೇಶದಿಂದ ಮಹಿಳೆಯರಿಗಾಗಿಯೇ ಪ್ರತ್ಯೇಕ ಠಾಣೆಯನ್ನು ಸ್ಥಾಪಿಸಲಾಗಿತ್ತು. ಜಿಲ್ಲೆಯಲ್ಲಿ ಒಂದು ಠಾಣೆ ಇದೆ. ಆರಂಭದಲ್ಲಿ ಜಿಲ್ಲೆಯ ಎಲ್ಲ ಭಾಗದ ಸಂತ್ರಸ್ತ ಮಹಿಳೆಯರು ಇಲ್ಲಿಗೆ ಬಂದು ದೂರು ಕೊಡಬೇಕಾಗಿತ್ತು. ಈಗ ಆಯಾ ಭಾಗದ ಠಾಣೆಯಲ್ಲೇ ದೂರು ಕೊಡಬಹುದು. 

‘ಜಿಲ್ಲಾ ಕೇಂದ್ರಕ್ಕೆ ಹತ್ತಿರದ ಊರುಗಳ ದೂರುದಾರರು ಬಂದು ಸುಲಭವಾಗಿ ದೂರು ನೀಡಬಹುದು. ಆದರೆ, ಇತರ ತಾಲ್ಲೂಕು ಕೇಂದ್ರ ಹಾಗೂ ದೂರದ ಊರುಗಳಿಂದ ಬಂದು ದೂರು ಕೊಡುವುದು ಕಷ್ಟ. ಇದರಿಂದ ಜನರಿಗೆ ಅನನುಕೂಲ ಆಗುವುದರಿಂದ ಸ್ಥಳೀಯ ಠಾಣೆಗಳಲ್ಲೇ ಈಗ ದೂರು ನೀಡುವುದಕ್ಕೆ ಅವಕಾಶ ಕಲ್ಪಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪದ್ಮಿನಿ ಸಾಹು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಸದ್ಯ ಚಾಮರಾಜನಗರ ಪಟ್ಟಣ, ಗ್ರಾಮಾಂತರ, ಕುದೇರು, ಸಂತೇಮರಹಳ್ಳಿ ಠಾಣಾ ವ್ಯಾಪ್ತಿಯ ಪೋಕ್ಸೊ, ಬಾಲ್ಯ ವಿವಾಹದಂತಹ ದೌರ್ಜನ್ಯ ಪ್ರಕರಣಗಳನ್ನು ಮಹಿಳಾ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು. 

ಸಿಬ್ಬಂದಿ ಕೊರತೆ ಇಲ್ಲ: ಮಹಿಳಾ ಠಾಣೆಯಲ್ಲಿ ಸಿಬ್ಬಂದಿ ಕೊರತೆ ಇಲ್ಲ. ಆದರೆ, ಮಹಿಳಾ ಸಿಬ್ಬಂದಿ ಮಾತ್ರ ಇಲ್ಲಿಲ್ಲ. ಪುರುಷ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದಾರೆ. 

ಒಬ್ಬರು ಇ‌ನ್‌ಸ್ಪೆಕ್ಟರ್‌, ಇಬ್ಬರು ಪಿಎಸ್‌ಐಗಳು, ಇಬ್ಬರು ಎಎಸ್‌ಐಗಳು, 19 ಮಂದಿ ಹೆಡ್‌ಕಾನ್‌ಸ್ಟೆಬಲ್‌ ಮತ್ತು ಕಾನ್‌ಸ್ಟೆಬಲ್‌ಗಳಿದ್ದಾರೆ. 

ದಾಖಲಾದ ಪ್ರಕರಣಗಳು: 2022ರಲ್ಲಿ 65 ಪ್ರಕರಣಗಳು, 2023ರಲ್ಲಿ 60 ಪ್ರಕರಣಗಳು ಮತ್ತು 2024ರಲ್ಲಿ ಇಲ್ಲಿವರೆಗೆ 3 ಪ್ರಕರಣಗಳು ದಾಖಲಾಗಿವೆ.

ಪದ್ಮಿನಿ ಸಾಹು
ಪದ್ಮಿನಿ ಸಾಹು
ಮಹಿಳಾ ಠಾಣೆಯಲ್ಲಿ ಸಿಬ್ಬಂದಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಬಾಲ್ಯ ವಿವಾಹ ಮತ್ತು ಪೋಕ್ಸೊ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ.
ಪದ್ಮಿನಿ ಸಾಹು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಹೊಸ ಕಟ್ಟಡಕ್ಕೆ ಪ್ರಸ್ತಾವ: ಎಸ್‌ಪಿ

ಮಹಿಳಾ ಠಾಣೆಗೆ ಸ್ವಂತ ಕಟ್ಟಡದ ಅವಶ್ಯಕತೆ ಇರುವುದು ನಿಜ. ನಾವು ಪ್ರಸ್ತಾವ ಸಿದ್ಧಪಡಿಸಿದ್ದೇವೆ. ಚಾಮರಾಜನಗರ ಸಂಚಾರ ಠಾಣೆ ಮತ್ತು ಮಹಿಳಾ ಠಾಣೆಗೆ ಒಂದೇ ಕಟ್ಟಡ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ನೆಲ ಮಹಡಿಯಲ್ಲಿ ಸಂಚಾರ ಠಾಣೆ ಇದ್ದರೆ ಮೊದಲ ಮಹಡಿಯಲ್ಲಿ ಮಹಿಳಾ ಠಾಣೆಗೆ ನಿರ್ಮಿಸಲು ಉದ್ದೇಶಿಸಲಾಗಿದೆ’ ಎಂದು ಎಸ್‌ಪಿ ಪದ್ಮಿನಿ ಸಾಹು ಹೇಳಿದರು.  ‘ಸಂತೇಮರಹಳ್ಳಿ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಿರುವ ಪಟ್ಟಣ ಠಾಣೆಯ ಹಿಂಭಾಗದಲ್ಲೇ ಜಾಗ ಇದೆ’ ಎಂದು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT