ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ | ಕಾಡಂಚಿನ ಜಮೀನು ನೀಡಲು ಮಾಲೀಕರ ಒಲವು

ಬಂಡೀಪುರ: ಕಣಿಯನಪುರ–ಮೊಯಾರ್‌ ಆನೆ ಕಾರಿಡಾರ್‌ ವಿಸ್ತರಿಸಲು ಅವಕಾಶ–ಇಲಾಖೆಗೆ ಬಾಲಚಂದ್ರ ಪತ್ರ
Last Updated 2 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಗುಂಡ್ಲುಪೇಟೆ:‌ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯದ ಕಾಡಂಚಿನ ಕೆಲವು ರೈತರು ಹಾಗೂ ಉದ್ಯಮಿಗಳು ಪಾಳು ಬಿದ್ದಿರುವ ತಮ್ಮ ಜಮೀನನ್ನು ಅರಣ್ಯ ಇಲಾಖೆಗೆ ಮಾರಾಟ ಮಾಡಲು ಮುಂದಾಗಿದ್ದಾರೆ.

ಖಾಸಗಿಯವರಿಂದ ಜಮೀನು ಖರೀದಿಸಿದರೆ, ಈ ವಲಯದಲ್ಲಿರುವಕಣಿಯನಪುರ–ಮೊಯಾರ್‌ ಆನೆ ಕಾರಿಡಾರ್‌ ವಿಸ್ತರಿಸಲು ಸಾಧ್ಯ. ಇದರಿಂದಬಂಡೀಪುರ ಹಾಗೂ ತಮಿಳುನಾಡಿನ ಮಧುಮಲೆ ಹುಲಿ ಸಂರಕ್ಷಿತ ಪ್ರದೇಶಗಳ ನಡುವೆ ಆನೆ ಹಾಗೂ ಇತರ ಪ್ರಾಣಿಗಳ ಓಡಾಟಕ್ಕೆ ಅನುಕೂಲ ಎಂಬ ಲೆಕ್ಕಾಚಾರದಲ್ಲಿ ಅಧಿಕಾರಿಗಳಿದ್ದಾರೆ. ಬಂಡೀಪುರ ಹುಲಿ ಯೋಜನೆ ನಿರ್ದೇಶಕಟಿ.ಬಾಲಚಂದ್ರ ಅವರು, ಈ ಸಂಬಂಧ ಇಲಾಖೆಗೆ ಪತ್ರವನ್ನೂ ಬರೆದಿದ್ದಾರೆ.

ಕಣಿಯನಪುರ- ಮೊಯಾರ್ ಆನೆ ಕಾರಿಡಾರ್‌ನ ವ್ಯಾಪ್ತಿಯಲ್ಲಿ ಹಲವು ರೈತರ ಜಮೀನುಗಳಿದ್ದು, ಅಲ್ಲಿ ಕೃಷಿ ಚಟುವಟಿಕೆಗಳು ನಡೆಯುತ್ತಿಲ್ಲ. ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಿದರೆ ಮತ್ತು ಬೇರೆ ಕಡೆ ಜಮೀನು ನೀಡಿದರೆ, ಕಾಡಂಚಿನಲ್ಲಿ ಇರುವ ಜಮೀನನ್ನು ಇಲಾಖೆಗೆ ನೀಡಲು ಒಲವು ವ್ಯಕ್ತಪಡಿಸಿದ್ದಾರೆ. ಪೋತರಾಜ್‌ ಎಂಬುವವರು ತಮ್ಮ 106 ಎಕರೆ ಭೂಮಿಯನ್ನು ನೀಡಲು ಮುಂದೆ ಬಂದಿದ್ದಾರೆ.

‘ಅರಣ್ಯ ಸಚಿವ ಆನಂದ ಸಿಂಗ್ ಅವರು ಮಾರ್ಚ್‌ನಲ್ಲಿ ಬಂಡೀಪುರಕ್ಕೆ ಬಂದಿದ್ದ ಸಂದರ್ಭದಲ್ಲಿ ಆನೆ ಕಾರಿಡಾರ್ ಅನ್ನು ವಿಸ್ತರಿಸುವ ಬಗ್ಗೆ ಚರ್ಚೆ ನಡೆದಿತ್ತು. ಜಮೀನು ಕೊಡಲು ಮುಂದಾಗಬೇಕು ಎಂದುರೈತರಿಗೆ ಮನವಿ ಮಾಡಬೇಕು ಎಂದೂ ಅವರು ಸಲಹೆ ನೀಡಿದ್ದರು. ಅದರಂತೆ ಇಲಾಖೆಯ ಅಧಿಕಾರಿಗಳು ಕಾಡಂಚಿನಲ್ಲಿ ಇರುವ ರೈತರಿಗೆ ತಿಳಿಸಿದ್ದಾರೆ. ಉದ್ಯಮಿ ಪೋತರಾಜ್ ಎಂಬುವವರು 106 ಎಕರೆ ನೀಡಲು ಮುಂದಾಗಿದ್ದಾರೆ. ಇದೇ ಭಾಗದ ಕೆಲವು ರೈತರು ಜಮೀನು ಕೊಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಇಲಾಖೆಗೆ ಪತ್ರ ಬರೆದಿದ್ದೇನೆ’ ಎಂದು ಬಾಲಚಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಡಂಚಿನ ಜಮೀನು ನೀಡಲು ಒಲವು ವ್ಯಕ್ತಪಡಿಸಿರುವ ರೈತರು, ಪರ್ಯಾಯ ಜಾಗದಲ್ಲಿ ಭೂಮಿಯನ್ನು ನೀಡುವಂತೆ ಕೇಳಿಕೊಂಡಿದ್ದಾರೆ. ಇದನ್ನೂ ಇಲಾಖೆಯ ಗಮನಕ್ಕೆ ತರಲಾಗಿದೆ’ ಎಂದು ಅವರು ಹೇಳಿದರು.

‘ಕಾಡಂಚಿನ ಪ್ರದೇಶದಲ್ಲಿ ಇರುವ ಜಮೀನುಗಳಲ್ಲಿ ಕೃಷಿ ಮಾಡಲು ಸಾಧ್ಯವಾಗುವುದಿಲ್ಲ. ನೀರಿಗೆ ಮಳೆಯನ್ನೇ ಆಶ್ರಯಿಸಬೇಕಿದೆ. ಜೊತೆಗೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚು. ಹೀಗಾಗಿ ರೈತರು ಭೂಮಿ ಮಾರಾಟ ಮಾಡುತ್ತಿದ್ದಾರೆ’ ಎಂದು ಸ್ಥಳೀಯ ರೈತ ನಾಗಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT