ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಚ್ಚೆದೊಡ್ಡಿ: ಶಾಲಾ ಮಕ್ಕಳಿಗೆ ವಾಹನ ವ್ಯವಸ್ಥೆ

ಭರವಸೆ ಈಡೇರಿಸಿದ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌, ಗೂಡ್ಸ್‌ ಟೆಂಪೊದಲ್ಲಿ ಕರೆದೊಯ್ಯುತ್ತಿರುವುದಕ್ಕೆ ಆಕ್ಷೇಪ
Last Updated 29 ಫೆಬ್ರುವರಿ 2020, 15:38 IST
ಅಕ್ಷರ ಗಾತ್ರ

ಹನೂರು: ಅರಣ್ಯದೊಳಗೆ ಕಡಿದಾದ ರಸ್ತೆಯಲ್ಲಿ ಜೀವ ಭಯದಲ್ಲೇ ಶಾಲೆಗೆ ತೆರಳುತ್ತಿದ್ದ ತಾಲ್ಲೂಕಿನ ಪಚ್ಚೆದೊಡ್ಡಿ ಗ್ರಾಮದ ಮಕ್ಕಳಿಗೆ ಶಾಲೆಗೆ ಹೋಗಲು ವಾಹನದ ವ್ಯವಸ್ಥೆ ಆಗಿದೆ. ಆ ಮೂಲಕ ಮೂರುವಾರಗಳ ಹಿಂದೆ ಗ್ರಾಮದ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ನೀಡಿದ್ದ ಭರವಸೆ ಈಡೇರಿದೆ.

ಶುಕ್ರವಾರದಿಂದಲೇ ಮಕ್ಕಳು ವಾಹನದಲ್ಲಿ ಶಾಲೆಗೆ ಹೋಗುತ್ತಿದ್ದಾರೆ. ಆದರೆ, ವ್ಯಾನ್‌ ಬದಲಿಗೆ ಗೂಡ್ಸ್‌ ಟೆಂಪೊದ ವ್ಯವಸ್ಥೆ ಮಾಡಲಾಗಿದ್ದು, ಮಕ್ಕಳು ಅದರಲ್ಲಿ ನಿಂತುಕೊಂಡೇ ಹೋಗಬೇಕಾಗಿದೆ. ಕಡಿದಾದ ರಸ್ತೆಯಲ್ಲಿ ವಾಹನದಲ್ಲಿ ನಿಂತುಕೊಂಡು ಹೋಗುವುದು ಅಪಾಯಕಾರಿಯಾಗಿದ್ದು, ಗೂಡ್ಸ್‌ ಟೆಂಪೊದ ವ್ಯವಸ್ಥೆ ಮಾಡಿರುವುದ‌ಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಆದರೆ, ಇದು ತಾತ್ಕಾಲಿಕ ವ್ಯವಸ್ಥೆ ಕೆಲವೇ ದಿನಗಳಲ್ಲಿ ವ್ಯಾನ್‌ ಮಾಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಪ್ರೌಢಶಾಲೆ ಹಾಗೂ ಕಾಲೇಜಿಗೆ ಹೋಗುವ ಗ್ರಾಮದಲ್ಲಿನ 16 ವಿದ್ಯಾರ್ಥಿಗಳು ಪ್ರತಿದಿನ ಶಾಲೆಗೆ ತೆರಳಲು ಐದಾರು ಕಿ.ಮೀ ದೂರ ನಡೆದುಕೊಂಡು ಹೋಗಬೇಕಿತ್ತು. ಜೊತೆಗೆ ಅರಣ್ಯದಲ್ಲಿ ನಡೆದಾಡಬೇಕಾಗಿತ್ತು. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಜಿಲ್ಲಾ ಉಸ್ತುವಾರಿ ಸಚಿವರು ಫೆ.10ರಂದು ಪಚ್ಚೆ ದೊಡ್ಡಿ ಶಾಲೆಯಲ್ಲಿ ವಾಸ್ತವ್ಯ ಹೂಡಿ ಸಮಸ್ಯೆಗಳನ್ನು ಆಲಿಸಿದ್ದರು. 20 ದಿನಗಳ ಒಳಗಾಗಿ ಅರಣ್ಯ ಇಲಾಖೆಯಿಂದ ವಾಹನ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು.

‘ಗ್ರಾಮಕ್ಕೆ ಗುರುವಾರ ಸಂಜೆ ಬೇಟಿ ನೀಡಿ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರ ಸಭೆ ನಡೆಸಲಾಯಿತು. ಬಳಿಕ ಮಕ್ಕಳಿಗೆ ಅನುಕೂಲವಾಗುವಂತೆ ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ಹಾಗೂ ಸಂಜೆ 4 ಮತ್ತು 5 ಗಂಟೆಗೆ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ತಾತ್ಕಾಲಿಕವಾಗಿ ಗೂಡ್ಸ್ ಆಟೋ ವ್ಯವಸ್ಥೆ ಮಾಡಲಾಗಿದೆ. ಶೀಘ್ರದಲ್ಲೇ ಮಿನಿ ಬಸ್‌ನ ವ್ಯವಸ್ಥೆ ಮಾಡುವುದಾಗಿ ಪರಿಸರ ಅಭಿವೃದ್ಧಿ ಸಮಿತಿ (ಇಡಿಸಿ) ಅಧ್ಯಕ್ಷರು ತಿಳಿಸಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೂ ಮಾಹಿತಿ ನೀಡಲಾಗಿದೆ’ ಎಂದು ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಏಡುಕುಂಡಲು ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಪರಿಸರ ಅಭಿವೃದ್ಧಿ ಸಮಿತಿ ಅಧ್ಯಕ್ಷರು ವಾರದೊಳಗೆ ವಾಹನವನ್ನು ಸ್ವಂತವಾಗಿ ಖರೀಧಿಸಲಿದ್ದಾರೆ. ಅಲ್ಲಿಯವರೆಗೆ ಗೂಡ್ಸ್ ಆಟೋ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಗ್ರಾಮಸ್ಥರು ಒಪ್ಪಿಗೆ ಸೂಚಿಸಿದ್ದಾರೆ. ಪ್ರತಿ ವರ್ಷ ವಾಹನ ನಿರ್ವಣೆಗೆ ₹1.80 ಲಕ್ಷ ಖರ್ಚಾಗಲಿದ್ದು ಇದನ್ನು ಅರಣ್ಯ ಇಲಾಖೆಯೇ ಭರಿಸಲಿದೆ. ಮುಂದಿನ ಶೈಕ್ಷಣಿಕ ವರ್ಷದೊಳಗೆ ದಾನಿಗಳ ಸಹಾಯದಿಂದ ಅರಣ್ಯ ಇಲಾಖೆ ವತಿಯಿಂದಲೇ ಸ್ವಂತವಾಗಿ ಶಾಲಾ ವಾಹನ ಬಿಡಲಾಗುವುದು’ ಎಂದು ಅವರು ವಿವರಿಸಿದರು.

ರಸ್ತೆ ದುರಸ್ತಿಗೆ ಮನವಿ

ಗುರುವಾರ ನಡೆದ ಸಭೆಯಲ್ಲಿ ಗ್ರಾಮಸ್ಥರು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಮತ್ತೆ ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದರು.

‘ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ, ರಾತ್ರಿ ವೇಳೆ ಜಮೀನಿನಲ್ಲಿ ಕಾವಲು ಕಾಯಲು ಆಗುತ್ತಿಲ್ಲ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ತೀರಾ ಹದಗೆಟ್ಟಿದ್ದು ರಸ್ತೆ ದುರಸ್ತಿಪಡಿಸಿಕೊಡಿ’ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಏಡುಕುಂಡಲು ಅವರು, ‘ಇಲಾಖೆ ವತಿಯಿಂದ ಈಗಾಗಲೇ ಕಚ್ಚಾ ರಸ್ತೆ ನಿರ್ಮಾಣ ಪ್ರಗತಿಯಲ್ಲಿದೆ’ ಎಂದರು.

ಪ್ರಾಣಿಗಳ ಹಾವಳಿಗೆ ಸಂಬಂಧಿಸಿದಂತೆ ಗ್ರಾಮದ ಸುತ್ತಲೂ ಐದು ಕಿ.ಮೀ ಆನೆಕಂದಕ ನಿರ್ಮಾಣಕ್ಕೆ ಕೂಡಲೇ ಕ್ರಿಯಾಯೋಜನೆ ತಯಾರಿಸುವಂತೆ ಸ್ಥಳದಲ್ಲೇ ಇದ್ದ ವಲಯ ಅರಣ್ಯಾಧಿಕಾರಿ ಸುಂದರ ಅವರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಸೂಳೇರಿಪಾಳ್ಯ ಗ್ರಾಮಪಂಚಾಯಿತಿ ಸದಸ್ಯ ನಾರಾಯಣ, ಎಸ್‌ಡಿಎಂಸಿ ಅಧ್ಯಕ್ಷ ರಾಜು, ಮುಖ್ಯಶಿಕ್ಷಕ ಬಸವರಾಜು, ಉಪ ವಲಯ ಅರಣ್ಯಾಧಿಕಾರಿ ಪ್ರಸಾದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT