ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಪ್ಪನ ಸನ್ನಿಧಿಗೆ ಪಾದಯಾತ್ರೆ, ಅರಣ್ಯದ ಮೇಲಿರಲಿ ಕಾಳಜಿ

ಬಿ. ಬಸವರಾಜು/ಜಿ.ಪ್ರದೀಪ್‌ ಕುಮಾರ್
Published 4 ಮಾರ್ಚ್ 2024, 6:05 IST
Last Updated 4 ಮಾರ್ಚ್ 2024, 6:05 IST
ಅಕ್ಷರ ಗಾತ್ರ

ಹನೂರು/ಮಹದೇಶ್ವರಬೆಟ್ಟ: ಉತ್ತರ ದೇಶದಿಂದ ಕತ್ತಲ ರಾಜ್ಯಕ್ಕೆ ಬಂದು ತನ್ನ ಆಚಾರ ವಿಚಾರಗಳ ಮೂಲಕ ಲಕ್ಷಾಂತರ ಭಕ್ತರನ್ನು ಸೆಳೆಯುತ್ತಿರುವ ಪವಾಡ ಪುರುಷ ಮಹದೇಶ್ವರ ಸ್ವಾಮಿಯ ದರ್ಶನಪಡೆಯಲು ಪಾದಯಾತ್ರೆ ಮೂಲಕ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ.

ವಾಹನಗಳ ಸೌಕರ್ಯವಿರುವ ಈ ಕಾಲದಲ್ಲೂ ಮಾದಪ್ಪನಿಗೆ ಹರಕೆ ಹೊತ್ತುಕೊಂಡು ಕಲ್ಲು ಮುಳ್ಳು, ಕಾಡು ಮೇಡು ಎನ್ನದೆ ಕಾಲ್ನಡಿಗೆಯಲ್ಲಿ ಲಕ್ಷಾಂತರ ಭಕ್ತರು ಬರುತ್ತಿದ್ದಾರೆ. ಮಹಾಶಿವರಾತ್ರಿ, ಯುಗಾದಿ ಮತ್ತು ದೀಪಾವಳಿ ಜಾತ್ರಾ ಮಹೋತ್ಸವದ ಸಮಯದಲ್ಲಿ ಪಾದಯಾತ್ರಿಗಳ ಸಂಖ್ಯೆ ಜಾಸ್ತಿ ಇರುತ್ತದೆ. 

ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಬರುವ ಪರಂಪರೆ ಹೊಸದೇನಲ್ಲ. ಇದಕ್ಕೆ ಶತಮಾನಗಳ ಇತಿಹಾಸವಿದೆ.  ವಾಹನ ಸೌಕರ್ಯ ಇಲ್ಲದ ಕಾಲಘಟ್ಟದಲ್ಲಿ ಜನರು ಕಾಡಿನೊಳಗೆ ಕಾಲ್ನಡಿಗೆಯಲ್ಲಿಯೇ ಬೆಟ್ಟಕ್ಕೆ ಹೋಗುತ್ತಿದ್ದರು. ಇನ್ನೂ ಕೆಲವರು ಎತ್ತಿನ ಗಾಡಿಗಳ ಮೂಲಕ ತೆರಳುತ್ತಿದ್ದರು. ಆಗ ಕಾಲ್ನಡಿಗೆ ಅನಿವಾರ್ಯವಾಗಿತ್ತು. ಅದೀಗ ಹರಕೆಯ ರೂಪವಾಗಿ ಬದಲಾಗಿದೆ. 

ಅರಣ್ಯದಲ್ಲಿ ಸಂಚಾರ: ವರ್ಷದ ಮೊದಲ ಜಾತ್ರೆ ಮಹಾ ಶಿವರಾತ್ರಿ ಜಾತ್ರೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆಯಲ್ಲಿ ಬರುತ್ತಾರೆ. ಜಾತ್ರೆಗೆ 10 ದಿನ,  ಒಂದು ವಾರ ಇರುವಾಗ ಭಕ್ತರು ತಮ್ಮ ಊರುಗಳಿಂದ ಪಾದಯಾತ್ರೆ ಆರಂಭಿಸುತ್ತಾರೆ. 

ಬೆಂಗಳೂರು, ಮೈಸೂರು, ಮಂಡ್ಯ, ಕನಕಪುರ, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಪಾದಯಾತ್ರೆಯಲ್ಲಿ ಆಗಮಿಸುವ ಭಕ್ತರು ಕಾವೇರಿ ನದಿಯನ್ನು ದಾಟಿ ದಟ್ಟಾರಣ್ಯದ ಮಧ್ಯೆದೊಳಗೆ ನೆತ್ತಿ ಸುಡುವ ಬಿಸಿಲನ್ನೂ ಲೆಕ್ಕಿಸದೆ ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ ಬರುತ್ತಾರೆ. 

ಚಾಮರಾಜನಗರ ಜಿಲ್ಲೆಯ ಎಲ್ಲ ತಾಲ್ಲೂಕುಗಳ ವಿವಿಧ ಗ್ರಾಮಗಳಿಂದಲೂ ಬೆಟ್ಟಕ್ಕೆ ಪಾದಯಾತ್ರೆ ಕೈಗೊಳ್ಳುತ್ತಾರೆ. 

ಸಂಗಮದಿಂದ ಕಾವೇರಿ ನದಿ ದಾಟಿ ಬಸವನಕಡ ಎಂಬ ಸ್ಥಳಕ್ಕೆ ಬಂದ ನಂತರ ನದಿ ದಡದಲ್ಲೇ ಅಡುಗೆ ತಯಾರಿಸಿ ಉಪಹಾರ ಸೇವಿಸಿ ನಂತರ ಕಾವೇರಿ ವನ್ಯಧಾಮದೊಳಗೆ ಸಾಗಿ ಶಾಗ್ಯ ಗ್ರಾಮದ ಮುಖೇನ ತೆರಳುತ್ತಾರೆ. ಮಾರ್ಗದ ಉದ್ದಕ್ಕೂ ಅಲ್ಲಲ್ಲಿ ಗ್ರಾಮಸ್ಥರು, ಸ್ವಯಂ ಸೇವಕರು ಪಾದಯಾತ್ರಿಗಳಿಗೆ ಉಪಹಾರ ವ್ಯವಸ್ಥೆ ಮಾಡುವ ಮೂಲಕ ಸಹಕಾರ ನೀಡುತ್ತಾರೆ.

ಸ್ವಚ್ಛತೆಗೆ ಗಮನ ಇರಲಿ: ಪಾದಯಾತ್ರೆಯಲ್ಲಿ ಬರುವ ಭಕ್ತರು ಕಾವೇರಿ ವನ್ಯಧಾಮ ಮತ್ತು ಮಲೆ ಮಹದೇಶ್ವರ ವನ್ಯಧಾಮದ ಮೂಲಕ ಸಾಗಬೇಕು. ಅರಣ್ಯ ಭಾಗದಲ್ಲಿ ಸಾಗುವಾಗ ಪ್ಲಾಸ್ಟಿಕ್‌ ನೀರಿನ ಬಾಟಲಿ, ಊಟದ ತಟ್ಟೆ ಸೇರಿದಂತೆ ಇತೆರೆ ಪ್ಲಾಸ್ಟಿಕ್‌ ವಸ್ತುಗಳು, ಕಾಗದದ ಪೊಟ್ಟಣ, ಚಪ್ಪಲಿಗಳು ಸೇರಿದಂತೆ ತ್ಯಾಜ್ಯಗಳನ್ನು ದಾರಿ ಮಧ್ಯೆ ಎಲ್ಲೆಂದರಲ್ಲಿ ಎಸೆಯಲಾಗುತ್ತಿದ್ದು, ಪ‍ರಿಸರಕ್ಕೆ ಮಾರಕವಾಗುತ್ತಿದೆ. ತಾಳಬೆಟ್ಟದಿಂದ ಬೆಟ್ಟದವರೆಗೆ ಸಾಗುವ ರಸ್ತೆಯ ಬದಿಗಳಲ್ಲೂ ರಾಶಿ ರಾಶಿ ಕಸ ಬೀಳುತ್ತದೆ. 

ಪ್ರತಿ ವರ್ಷ ಜಾತ್ರಾ ಸಮಯದಲ್ಲಿ ಭಕ್ತರ ಪಾದಯಾತ್ರೆ ಮುಗಿದ ಬಳಿಕ ಅವರು ಸಾಗಿದ ಸಾಗಿದ ಹಾದಿಯನ್ನು ಸ್ವಚ್ಛಗೊಳಿಸುವುದೇ ಅರಣ್ಯ ಇಲಾಖೆ ಮತ್ತು ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಪ್ರಾಧಿಕಾರಕ್ಕೆ ದೊಡ್ಡ ಕೆಲಸವಾಗುತ್ತದೆ. 

ಅರಣ್ಯ ಇಲಾಖೆ ಮತ್ತು ಪ್ರಾಧಿಕಾರ ಪಾದಯಾತ್ರೆ ಸಾಗುವ ದಾರಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಕಸ ಹಾಕಲು ಬುಟ್ಟಿ ವ್ಯವಸ್ಥೆ, ಪ್ಲಾಸ್ಟಿಕ್‌ ವಸ್ತುಗಳನ್ನು ಎಸೆಯದಂತೆ ಜಾಗೃತಿ ಮೂಡಿಸಿದರೂ, ಇಲ್ಲಿವರೆಗೆ ತ್ಯಾಜ್ಯಗಳ ಹಾವಳಿಗೆ ನಿಯಂತ್ರಣ ಹೇರಲು ಸಾಧ್ಯವಾಗಿಲ್ಲ.  

ಈ ಬಾರಿ ಅರಣ್ಯ ಇಲಾಖೆ ಮತ್ತು ಪ್ರಾಧಿಕಾರ ಪಾದಯಾತ್ರಿಗಳಿಗೆ ಸೌಕರ್ಯ ಕಲ್ಪಿಸುವುದರ ಜೊತೆಗೆ, ಪ್ಲಾಸ್ಟಿಕ್‌ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯುವುದಕ್ಕೆ ಕಡಿವಾಣ ಹಾಕುವುದಕ್ಕೆ ಹಲವು ಕ್ರಮ ಕೈಗಳನ್ನು ಕೈಗೊಂಡಿವೆ. 

ಅರಣ್ಯದ ಹಾದಿಯಲ್ಲಿ ಅಲ್ಲಲ್ಲಿ ತ್ಯಾಜ್ಯವನ್ನು ಹಾಕಲು ಜಾಗವನ್ನು ಗುರುತಿಸಿ ತಾತ್ಕಾಲಿಕ ಕಸದ ಬುಟ್ಟಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ನಿರ್ಮಿಸಿದ್ದಾರೆ. ನದಿ ದಾಟಿ ಬರುವ ಭಕ್ತರು ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡುವುದರ ಜತೆಗೆ ಸಂಜೆ 6 ಗಂಟೆ ಬಳಿಕ ಪಾದಯಾತ್ರೆ ಮಾಡದಂತೆ ಎಚ್ಚರಿಕೆ ನೀಡುತ್ತಿದ್ದಾರೆ. ಸಂಜೆ ವೇಳೆ ನದಿ ತೀರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಉಳಿದುಕೊಳ್ಳುವ ಭಕ್ತರು ಅರಣ್ಯದೊಳಗೆ ಹೋಗದಂತೆ ತಾಕೀತು ಮಾಡುತ್ತಿದ್ದಾರೆ.

ಕಾಳ್ಗಿಚ್ಚಿನ ಭೀತಿ: ಉರಿ ಬೇಸಿಗೆ ಸಮಯವಾಗಿರುವುದರಿಂದ ಮರಗಿಡಗಳು ಒಣಗಿರುತ್ತವೆ. ಹೀಗಾಗಿ ಬೀಡಿ ಸಿಗರೇಟು ಸೇದುವುದಕ್ಕಾಗಿ ಮತ್ತು ಭಕ್ತರಿಗೆ ಅಡುಗೆ ಸಿದ್ಧಪಡಿಸಲು ಬೆಂಕಿ ಹಚ್ಚುವಾಗ ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಿದ್ದಾರೆ. ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನೂ ಪಾದಯಾತ್ರೆ ಸಾಗುವ ಜಾಗದಲ್ಲಿ ನಿಯೋಜಿಸಲಾಗಿದೆ. 

ಚೆಕ್‌ಪೋಸ್ಟ್‌: ಪ್ಲಾಸ್ಟಿಕ್‌ ತ್ಯಾಜ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾವೇರಿ ವನ್ಯಧಾಮ ಮತ್ತು ಮಲೆ ಮಹದೇಶ್ವರ ವನ್ಯಧಾಮದ ಆಡಳಿತ ದಾರಿ ಮಧ್ಯೆ ಚೆಕ್‌ಪೋಸ್ಟ್‌ ನಿರ್ಮಿಸಿವೆ. ಭಕ್ತರನ್ನು ತಪಾಸಣೆ ಮಾಡಿ ಪ್ಲಾಸ್ಟಿಕ್‌ ಬಾಟಲಿ, ವಸ್ತುಗಳನ್ನು ಬಳದಂತೆ ತಿಳಿಹೇಳಿ ಕಳುಹಿಸಲು ಸಿಬ್ಬಂದಿಯನ್ನೂ ನಿಯೋಜಿಸಿದೆ. 

ಕುಡಿಯುವ ನೀರಿನ ವ್ಯವಸ್ಥೆ: ತಾಳಬೆಟ್ಟದಿಂದ ಬೆಟ್ಟದವರೆಗೆ ರಸ್ತೆ ಮಾರ್ಗದಲ್ಲಿ ಅಲ್ಲಲ್ಲಿ ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯ ವ್ಯವಸ್ಥೆಯನ್ನು ಪ್ರಾಧಿಕಾರ ಮಾಡುತ್ತಿದೆ.  

ದೇವಾಲಯದಲ್ಲಿ ಸ್ವಾಮಿಯ ದರ್ಶನ ಪಡೆಯಲು ರಾಜಗೋಪುರದ ಮುಂಭಾಗವಿರುವ ಜೋಡಿ ರಸ್ತೆಯ ಬಲ ರಸ್ತೆಯಲ್ಲಿ ತಾತ್ಕಾಲಿಕವಾಗಿ ಸುಮಾರು ಐದು ಸರದಿ ಸಾಲನ್ನು ನಿರ್ಮಾಣ ಮಾಡಲಾಗಿದ್ದು ನೇರ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ.

‘ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ’

ಪಾದಯಾತ್ರೆಯಲ್ಲಿ ಬರುವ ಭಕ್ತರನ್ನು ವಡಕೆಹಳ್ಳದ ಬಳಿ ನಿರ್ಮಿಸಲಾಗಿರುವ ಚೆಕ್‌ಪೋಸ್ಟ್‌ನಲ್ಲಿ ತಡೆದು ಪ್ಲಾಸ್ಟಿಕ್ ತೆಗೆದುಕೊಂಡು ಹೋಗದಂತೆ ತಿಳಿಸಲಾಗುತ್ತಿದೆ. ಜತೆಗೆ ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದು ಅರಣ್ಯದೊಳಗೆ ಪ್ಲಾಸ್ಟಿಕ್‌  ಊಟದ ತಟ್ಟೆಗಳನ್ನು ಎಲ್ಲೆಂದರಲ್ಲಿ ಎಸೆಯದಂತೆ ಭಕ್ತರಿಗೆ ಸೂಚನೆ ನೀಡಲಿದ್ದಾರೆ. ಪಾದಯಾತ್ರೆಯಲ್ಲಿ ಬರುವ ಭಕ್ತರು ಭಕ್ತಿಯ ಪರಿಸರ ಸಂರಕ್ಷಣೆಯ ಬಗ್ಗೆಯೂ ಕಾಳಜಿ ತೋರಬೇಕು –ಜಿ.ಸಂತೋಷ್ ಕುಮಾರ್ ಡಿಸಿಎಫ್ ಮಲೆಮಹದೇಶ್ವರ

‘ವನ್ಯಧಾಮ ಜಾಗೃತಿ ಮೂಡಿಸಲಾಗುತ್ತಿದೆ’

ಕಾವೇರಿ ನದಿ ದಾಟಿ ಬರುವ ಭಕ್ತರು ಅರಣ್ಯದೊಳಗೆ ಸಾಗುವ ಕಾಲುದಾರಿ ಬಿಟ್ಟು ಬೇರೆ ಕಡೆ ಹೋಗದಂತೆ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ. ನದಿಯಿಂದ ಕಳ್ಳಿದೊಡ್ಡಿ ತಲುಪವವರೆಗೂ ದಾರಿಯುದ್ದಕ್ಕೂ ಸಿಬ್ಬಂದಿ ನಿಯೋಜಿಸಿ ಪರಿಸರ ಹಾಗೂ ವನ್ಯಪ್ರಾಣಿಗಳಿಗೆ ತೊಂದರೆ ನೀಡದಂತೆ ಸೂಚನೆ ನೀಡಲಾಗುತ್ತಿದೆ. ಕೆಂಚಯ್ಯನದೊಡ್ಡಿ ಬಳಿ ಚೆಕ್ ಪೋಸ್ಟ್ ನಿರ್ಮಿಸಿ ಅರಣ್ಯದೊಳಗೆ ಪ್ಲಾಸ್ಟಿಕ್ ಹಾಗೂ ಇನ್ನಿತರ ವಸ್ತುಗಳ‌ನ್ನು ಕೊಂಡೊಯ್ಯದಂತೆ ಅರಿವು ಮೂಡಿಸಲಾಗುತ್ತಿದೆ –ಎಂ.ಎನ್.ಅಂಕರಾಜು ಎಸಿಎಫ್ ಕಾವೇರಿ ವನ್ಯಧಾಮ

‘ಕುಡಿಯುವ ನೀರು ಸ್ವಚ್ಛತೆಗೆ ಒತ್ತು’

‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು ‘ಪಾದಯಾತ್ರಿಗಳಿಗೆ ದೇವಾಲಯಕ್ಕೆ ಉಚಿತ ನೇರ ಪ್ರವೇಶ ಇದೆ. ತಾಳಬೆಟ್ಟದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಪಾದಯಾತ್ರಿಗಳು ತಾಳ ಬೆಟ್ಟದಲ್ಲಿ ಪಾದರಕ್ಷೆಗಳನ್ನು ಬಿಟ್ಟು ಬರುವುದರಿಂದ ಅದನ್ನು ವಿಲೇವಾರಿ ಮಾಡಲು ಸಿಬ್ಬಂದಿ ಹಾಗೂ ಸ್ವಯಂಸೇವಕರನ್ನು ನಿಯೋಜಿಸಲಾಗಿದೆ’ ಎಂದರು. 

‘ಅಲ್ಲಲ್ಲಿ ಕಸ ಪ್ಲಾಸ್ಟಿಕ್ ಎಸೆಯದಂತೆ ಭಕ್ತರಿಗೆ ತಿಳಿವಳಿಕೆ ನೀಡಿ ಕ್ಷೇತ್ರವನ್ನು ಸ್ವಚ್ಚವಾಗಿಡಲು ಕ್ರಮವಹಿಸಲಾಗಿದೆ. ಹಾಗೂ ಬಿಸಿಲಿನ ತಾಪಮಾನ ಜಾಸ್ತಿ ಇರುವುದರಿಂದ ತಾಳಬೆಟ್ಟದಿಂದ ದೇವಾಲಯದವರೆಗೆ ಮಾರ್ಗ ಮಧ್ಯೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಲಾಗಿದೆ. ಪ್ರಾಧಿಕಾರದ ಆವರಣದ ಸುತ್ತಲೂ ನೆರಳಿನ ವ್ಯವಸ್ಥೆ ಹಾಗೂ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಭಕ್ತರು ದೇವಾಲಯದ ಸಿಬ್ಬಂದಿಯೊಂದಿಗೆ ಸಹಕರಿಸಬೇಕು’ ಎಂದು ಮನವಿ ಮಾಡಿದರು. 

ಭಕ್ತರು ಏನಂತಾರೆ?

‘ಸೌಕರ್ಯಗಳು ಒದಗಿಸಬೇಕು‘

ಎರಡು ವರ್ಷಗಳಿಂದ ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ ಬರುತ್ತಿದ್ದೇವೆ. ಕಾಲ್ನಡಿಗೆಯಲ್ಲಿ ಬರಲು ಶುರು ಮಾಡಿದಾಗಿನಿಂದ ಆರೋಗ್ಯದ ಸಮಸ್ಯೆ ನಿವಾರಣೆಯಾಗಿದೆ. ದಾರಿ ಮಧ್ಯೆ ಕುಡಿಯುವ ನೀರು ಸೇರಿದಂತೆ ವಿವಿಧ ಸೌಕರ್ಯಗಳನ್ನು ಕಲ್ಪಿಸಿದರೆ ನಮಗೆ ಅನುಕೂಲವಾಗುತ್ತದೆ –ಸುನಿಲ್, ಶಿವನಸಮುದ್ರ, ಮಂಡ್ಯ ಜಿಲ್ಲೆ

‘ಯಾತ್ರಿಗಳ ಸಂಖ್ಯೆ ಹೆಚ್ಚಳ’

ಗ್ರಾಮದಿಂದ 20 ಜನರು ನಾಲ್ಕು ವರ್ಷಗಳಿಂದ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯಲ್ಲಿ ಹೋಗುತ್ತಿದ್ದೇವೆ. ವರ್ಷದಿಂದ ವರ್ಷಕ್ಕೆ ನಮ್ಮ ಜೊತೆಗೆ ಕಾಲ್ನಡಿಗೆಯಲ್ಲಿ ಬರುವವರ ಸಂಖ್ಯೆ ಏರಿಕೆಯಾಗುತ್ತಿದೆ –ಸೋಮಶೇಖರ್, ಬನ್ನೂರು, ಮೈಸೂರು ಜಿಲ್ಲೆ

‘ಹರಕೆ ಮುಂದುವರಿಸಿದ್ದೇನೆ‘

ಮನೆಯಲ್ಲಿ ಮಗನಿಗೆ ಆರೋಗ್ಯದಲ್ಲಿ ಏರುಪೇರಾಗಿತ್ತು. ಆರು ವರ್ಷಗಳ ಹಿಂದೆ ಹರಕೆ ಹೊತ್ತು ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಬರಲು ಆರಂಭಿಸಿದೆ. ಇನ್ನೂ ಹರಕೆಯನ್ನು ಮುಂದುವರೆಸಿದ್ದೇನೆ –ಮಹದೇವಮ್ಮ, ಬನ್ನೂರು, ಮೈಸೂರು ಜಿಲ್ಲೆ

‘ದರ್ಶನಕ್ಕೆ ಬೇಗ ಅವಕಾಶ ಕೊಡಿ’

ಮೂರು ವರ್ಷಗಳ ಹಿಂದೆ ಆರೋಗ್ಯದಲ್ಲಿ ಸಮಸ್ಯೆಯುಂಟಾಗಿತ್ತು. ಮನೆಯಲ್ಲಿ ಹಿರಿಯರ ಸಲಹೆ ಮೇರೆಗೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡಲು ಆರಂಭಿಸಿದೆ. ಈಗ ಸಮಸ್ಯೆಯೆಲ್ಲಾಬಗೆಹರಿದಿದೆ. ಆದರೂ ಪಾದಯಾತ್ರೆ ಮುಂದುವರಿಸಿದ್ದೇನೆ. ಕಿ.ಮೀ ಗಟ್ಟಲೆ ದೂರದಿಂದ ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ಸ್ವಾಮಿಯ ದರ್ಶನ ಬೇಗ ಆಗುವಂತೆ ಮಾಡಬೇಕು –ಪುಷ್ಪಾವತಿ, ಮಳವಳ್ಳಿ, ಮಂಡ್ಯ ಜಿಲ್ಲೆ

ಕಾಮಗಾರಿ ತ್ವರಿತಗೊಳಿಸಿ

ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ ನಡೆಯುತ್ತಿರುವ ಮೆಟ್ಟಿಲು ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸಬೇಕು. ಶಿವರಾತ್ರಿ ಜಾತ್ರಾ ಸಂದರ್ಭದಲ್ಲಿ ಬಿಸಿಲು ಜಾಸ್ತಿಯಾಗಿರುವುದರಿಂದ ಕಾಲ್ನಡಿಗೆಯಲ್ಲಿ ಬರುವಂತಹ ತಿರುಪತಿ ಮಾದರಿಯಲ್ಲಿ ನೆರಳಿನ ವ್ಯವಸ್ಥೆ, ಅಲ್ಲಲ್ಲಿ ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಕಲ್ಪಿಸಿಕೊಟ್ಟರೆ ಭಕ್ತರಿಗೆ ಅನುಕೂಲವಾಗಲಿದೆ‌ –ಸರ್ವಮಂಗಳ, ದೆಂಕಣಿಕೋಟೆ, ತಮಿಳುನಾಡು

ಪಾದಯಾತ್ರೆಯಲ್ಲಿ ಭಕ್ತರು ಮಹದೇಶ್ವರಬೆಟ್ಟಕ್ಕೆ ಬರಲು ಆರಂಭಿಸಿದ್ದು ಭಾನುವಾರ ಹಲವು ಭಕ್ತರು ಕಾವೇರ ನದಿಯನ್ನು ದಾಟಿದರು
ಪಾದಯಾತ್ರೆಯಲ್ಲಿ ಭಕ್ತರು ಮಹದೇಶ್ವರಬೆಟ್ಟಕ್ಕೆ ಬರಲು ಆರಂಭಿಸಿದ್ದು ಭಾನುವಾರ ಹಲವು ಭಕ್ತರು ಕಾವೇರ ನದಿಯನ್ನು ದಾಟಿದರು
ಕಳೆದ ವರ್ಷ ಪಾದಯಾತ್ರೆಯಲ್ಲಿ ಬಂದಿದ್ದ ಭಕ್ತರು ಕಾವೇರಿ ನದಿಯನ್ನು ಹಗ್ಗದ ಸಹಾಯದಿಂದ ದಾಟುತ್ತಿದ್ದ ದೃಶ್ಯ (ಸಂಗ್ರಹ ಚಿತ್ರ)
ಕಳೆದ ವರ್ಷ ಪಾದಯಾತ್ರೆಯಲ್ಲಿ ಬಂದಿದ್ದ ಭಕ್ತರು ಕಾವೇರಿ ನದಿಯನ್ನು ಹಗ್ಗದ ಸಹಾಯದಿಂದ ದಾಟುತ್ತಿದ್ದ ದೃಶ್ಯ (ಸಂಗ್ರಹ ಚಿತ್ರ)
ಪಾದಯಾತ್ರೆಯಲ್ಲಿ ಬರುವ ಭಕ್ತರಿಗಾಗಿ ನದಿ ದಡದಲ್ಲೇ ಅಡುಗೆ ಸಿದ್ಧಪಡಿಸಲಾಗುತ್ತದೆ (ಸಂಗ್ರಹ ಚಿತ್ರ)
ಪಾದಯಾತ್ರೆಯಲ್ಲಿ ಬರುವ ಭಕ್ತರಿಗಾಗಿ ನದಿ ದಡದಲ್ಲೇ ಅಡುಗೆ ಸಿದ್ಧಪಡಿಸಲಾಗುತ್ತದೆ (ಸಂಗ್ರಹ ಚಿತ್ರ)
ತಾಳಬೆಟ್ಟದಿಂದ ಮಹದೇಶ್ವರಬೆಟ್ಟಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಕಸ ಹಾಕಲು ಸಿಮೆಂಟ್‌ ರಿಂಗ್‌ಗಳನ್ನು ಪ್ರಾಧಿಕಾರದ ವತಿಯಿಂದ ಇಡಲಾಗಿದೆ  
ತಾಳಬೆಟ್ಟದಿಂದ ಮಹದೇಶ್ವರಬೆಟ್ಟಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಕಸ ಹಾಕಲು ಸಿಮೆಂಟ್‌ ರಿಂಗ್‌ಗಳನ್ನು ಪ್ರಾಧಿಕಾರದ ವತಿಯಿಂದ ಇಡಲಾಗಿದೆ  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT