ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಲೋಕಸಭಾ ಚುನಾವಣೆ | ಗಿರಿಜನರ ಮತಗಳ ಮೇಲೆ ಪಕ್ಷಗಳ ಕಣ್ಣು

ಬಿಳಿಗಿರಿರಂಗನಬೆಟ್ಟ, ಬೇಡಗುಳಿ ಪೋಡುಗಳಲ್ಲಿ ಮತದಾನ ಬಹಿಷ್ಕಾರದ ಎಚ್ಚರಿಕೆ
Published 18 ಏಪ್ರಿಲ್ 2024, 4:52 IST
Last Updated 18 ಏಪ್ರಿಲ್ 2024, 4:52 IST
ಅಕ್ಷರ ಗಾತ್ರ

ಚಾಮರಾಜನಗರ/ಗುಂಡ್ಲುಪೇಟೆ: ಮತದಾನಕ್ಕೆ ಇನ್ನು ಎಂಟು ದಿನಗಳು ಬಾಕಿ ಇರುವಂತೆಯೇ ಪಕ್ಷಗಳು ಹಾಗೂ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ವಿವಿಧ ತಂತ್ರಗಳನ್ನು ಹೆಣೆಯುತ್ತಿದ್ದಾರೆ.  

ಚಾಮರಾಜನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಗಿರಿಜನರ ಮತಗಳ ಮೇಲೆಯೂ ಪಕ್ಷಗಳು ಕಣ್ಣಿಟ್ಟಿವೆ.

ಸೋಲಿಗ, ಜೇನುಕುರುಬ, ಬೆಟ್ಟಕುರುಬ ಸಮುದಾಯದವರು ಜಿಲ್ಲೆಯಲ್ಲಿ 45 ಸಾವಿರದಷ್ಟು ಜನರಿದ್ದಾರೆ. 35 ಸಾವಿರಕ್ಕೂ ಹೆಚ್ಚು ಮಂದಿ ಮತದಾರರು ಇದ್ದಾರೆ ಎಂದು ಹೇಳುತ್ತಾರೆ ಮುಖಂಡರು. 

ಗುಂಡ್ಲುಪೇಟೆ, ಚಾಮರಾಜನಗರ, ಯಳಂದೂರು, ಹನೂರು ವ್ಯಾಪ್ತಿಯಲ್ಲಿ ಗಿರಿಜನರ ಹಾಡಿಗಳಿವೆ. ಗುಂಡ್ಲುಪೇಟೆ ಭಾಗದಲ್ಲಿ ಹಾಡಿಗಳಲ್ಲಿ ಹೆಚ್ಚು ಪ್ರಚಾರ ನಡೆಯುತ್ತಿದೆ. ಉಳಿದ ಕಡೆಗಳಲ್ಲಿ ಇನ್ನೂ ಶುರುವಾಗಿಲ್ಲ.  

ಶಾಸಕರನ್ನೊಳಗೊಂಡ ಮುಖಂಡರು  ಒಂದೆಡೆ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಭೆ ಸಮಾರಂಭ ನಡೆಸಿ ವಿರೋಧ ಪಕ್ಷಗಳ ನ್ಯೂನತೆಗಳನ್ನು ತಿಳಿಸಿ ಮತದಾರರನ್ಬು ಸೆಳೆಯುವ ಕೆಲಸ ಮಾಡಿದರೆ, ನಿರ್ದಿಷ್ಟ ಸಮುದಾಯದವರ ಮತಗಳನ್ನು ಕೇಳಲು ಹೋಗುವಾಗ ಆಯಾ ಸಮುದಾಯದ ಮುಖಂಡರನ್ನೇ ಮುಂದೆ ಕಳುಹಿಸುತ್ತಿದ್ದಾರೆ.

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಗಿರಿಜನರು ಹಾಡಿಗಳಿಗೆ, ಪಕ್ಷದಲ್ಲಿ ಗುರುತಿಸಿಕೊಂಡಿರುವ ಬುಡಕಟ್ಟು ಸಮುದಾಯದ ಮುಖಂಡರನ್ನೇ ಪ್ರಚಾರಕ್ಕೆ ಕಳುಹಿಸುತ್ತಿದ್ದಾರೆ. ಮುಖಂಡರ ನೇತೃತ್ವದ ಕಾರ್ಯಕರ್ತರ ತಂಡ ಹಾಡಿಗಳಿಗೆ ಭೇಟಿ ನೀಡಿ, ಗಿರಿಜನರೊಂದಿಗೆ ಬೆರೆತು ಪಕ್ಷದ ಗುರುತು, ಕ್ರಮ ಸಂಖ್ಯೆ ಮತ್ತು ಪಕ್ಷ ಅಧಿಕಾರದಲ್ಲಿದ್ದಾಗ ಮಾಡಿರುವ ಯೋಜನೆಗಳ ಬಗ್ಗೆ ವಿವರಿಸಿ ಮತ ಕೇಳುತ್ತಿದ್ದಾರೆ. 

ಗುಂಡ್ಲುಪೇಟೆ ಭಾಗದ ಗಿರಿಜನರು ಕೆಲಸಕ್ಕಾಗಿ ತಮಿಳುನಾಡಿನ ನೀಲಗಿರಿ ಮತ್ತು ಕೇರಳದ ವಯನಾಡು ಜಿಲ್ಲೆಗಳಿಗೆ ಹೋಗುತ್ತಾರೆ. ಮತದಾನದಂದು ಅವರನ್ನು ಊರಿಗೆ ಕರೆತರಲು ಪ್ರಯತ್ನ ನಡೆಯುತ್ತಿದೆ.

ಮತದಾನ ಮಾಡಲು ಅರ್ಹತೆ ಹೊಂದಿರುವ ಎಲ್ಲರೂ ಬರುವಂತೆ ಹೇಳಿ, ಅವರ ಪ್ರಯಾಣ ವೆಚ್ಚ, ಇನ್ನಿತರ ಖರ್ಚುಗಳನ್ನು ನೀಡುವ ಭರವಸೆಯನ್ನು ಪಕ್ಷಗಳ ಮುಖಂಡರು ನೀಡಿ, ಅವರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ.  

ಗ್ರಾಮಗಳಲ್ಲಿ ಯಾವ ಜನಾಂಗದ ಮತದಾರರು ಹೆಚ್ಚಿದ್ದಾರೆ ಎಂಬುದರ ಮೇಲೆ ಪ್ರಚಾರ ನಡೆಯುತ್ತಿದೆ.

‘ಗಿರಿಜನರಲ್ಲೂ ಬೇರೆ ಬೇರೆ ಪಕ್ಷಗಳ ಬೆಂಬಲಿಗರಿದ್ದಾರೆ. ಮುಖಂಡರು ಹೇಳಿದಂತೆ ಜನಾಂಗ ಕೇಳುವುದಿಲ್ಲ. ಅಕ್ಷರ ಜ್ಞಾನ ಇಲ್ಲದಿದ್ದರೂ, ಯಾರಿಗೆ ಮತಹಾಕಬೇಕು ಎಂಬ ತಿಳಿವಳಿಕೆ ಸಮುದಾಯದವರಿಗೆ ಇದೆ. ಯಾವುದೇ ಕಷ್ಟದ ಸಂದರ್ಭದಲ್ಲಿ ಬಾರದ ಮುಖಂಡರು ಚುನಾವಣೆ ಸಂದರ್ಭದಲ್ಲಿ ಬಂದು ಅವರ ಕೆಲಸ ಮಾಡಿಕೊಳ್ಳುತ್ತಾರೆ. ಜನರ ಕಷ್ಟ ಕೇಳಲು ಬರುವುದಿಲ್ಲ’ ಎಂದು ಜೇನು ಕುರುಬ ಸಮುದಾಯದ ಯುವಕರು ದೂರಿದರು. 

ಮತದಾನ ಬಹಿಷ್ಕಾರದ ಬಿಸಿ

ಈ ಬಾರಿ ಬುಡಕಟ್ಟು ಜನಾಂಗದವರು ಕೂಡ ನೀರಿನ ಸಮಸ್ಯೆ ಒಕ್ಕಲೆಬ್ಬಿಸುವಿಕೆ ರಸ್ತೆ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರಗಳ ನೀಡಬೇಕು ಎಂಬುದು ಸೇರಿದಂತೆ ಸೌಕರ್ಯಗಳ ಕೊರತೆ ಮುಂದಿಟ್ಟುಕೊಂಡು ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ. 

ಯಳಂದೂರು ತಾಲ್ಲೂಕಿನ ಏಳು ಹಾಡಿಗಳ ಜನರು ಮತದಾನ ಬಹಿಷ್ಕಾರ ಮಾಡುವುದಾಗಿ ಘೋಷಿಸಿದ್ದಾರೆ. ಬುಧವಾರ ಚಾಮರಾಜನಗರ ತಾಲ್ಲೂಕಿನ ಬೇಡಗುಳಿಯ ಆರು ಪೋಡುಗಳ ನಿವಾಸಿಗಳು ಚುನಾವಣೆಯಲ್ಲಿ ಹಕ್ಕು ಚಲಾಯಿಸುವುದಿಲ್ಲ ಎಂದು ಘೋಷಿಸಿಕೊಂಡು ಪ್ರತಿಭಟನೆ ನಡೆಸಿದ್ದಾರೆ. 

ಬಿಳಿಗಿರಿರಂಗನಬೆಟ್ಟದ ವ್ಯಾಪ್ತಿಯಲ್ಲಿ ಪಕ್ಷಗಳು ಇನ್ನೂ ಪ್ರಚಾರ ಆರಂಭಿಸಿಲ್ಲ. ಶಾಸಕ ಎ.ಆರ್‌.ಕೃಷ್ಣಮೂರ್ತಿ ಅವರು ಸೋಲಿಗ ಮುಖಂಡರಿಗೆ ಕರೆ ಮಾಡಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.  ಬೇಡಗುಳಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಗಿರಿಜನರೊಂದಿಗೆ ಮಾತುಕತೆ ನಡೆಸಿದ್ದಾರೆ. 

‘ಪ್ರತಿ ಬಾರಿಯೂ ಗಿರಿಜನರು ಜಿಲ್ಲೆಯಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಮತದಾನ ಮಾಡುತ್ತಾರೆ. ಈ ಬಾರಿ ಕೆಲವು ಪೋಡುಗಳ ನಿವಾಸಿಗಳು ತಮಗೆ ಸೌಕರ್ಯಗಳ ಕೊರತೆ ಇದೆ ಕುಡಿಯುವ ನೀರಿನಂತಹ ಕನಿಷ್ಠ ಸೌಲಭ್ಯ ಪಡೆಯಲು ಅರಣ್ಯ ಇಲಾಖೆ ಅವಕಾಶ ಕೊಡುತ್ತಿಲ್ಲ ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮತದಾನ ಬಹಿಷ್ಕಾರ ಮಾಡಲು ತೀರ್ಮಾನಿಸಿದ್ದಾರೆ. ಅಧಿಕಾರಿಗಳು ಜನಪ್ರತಿನಿಧಿಗಳು ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಜಿಲ್ಲಾ ಬುಡಕಟ್ಟು ಗಿರಿಜನರ ಸಂಘದ ಪ್ರಧಾನ ಕಾರ್ಯದರ್ಶಿ ಮಾದೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT