ರಾಷ್ಟ್ರಪತಿ, ಸಿ.ಎಂ ಹೋದ ಬೆನ್ನಿಗೇ ಕಿತ್ತು ಬಂತು ಟಾರು!

ಸಂತೇಮರಹಳ್ಳಿ: ಜಿಲ್ಲೆಗೆ ರಾಷ್ಟ್ರಪತಿ ಹಾಗೂ ಮುಖ್ಯಮಂತ್ರಿ ಬರುತ್ತಾರೆ ಎಂಬ ಕಾರಣಕ್ಕೆ ದುರಸ್ತಿಯಾಗಿದ್ದ ಸಂತೇಮರಹಳ್ಳಿ ಮೂಗೂರು ಕ್ರಾಸ್ ವರೆಗಿನ ರಸ್ತೆಯು, ಅವರು ಹೋಗಿ ಒಂದು ತಿಂಗಳಾಗುವಷ್ಟರಲ್ಲಿ ಕಿತ್ತು ಬಂದಿದೆ!
ಅಕ್ಟೋಬರ್ 7ರಂದು ವೈದ್ಯಕೀಯ ಕಾಲೇಜು ಆಸ್ಪತ್ರೆ ಉದ್ಘಾಟನೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಂದಿದ್ದರು. ಸಂಪೂರ್ಣವಾಗಿ ಹದಗೆಟ್ಟಿದ್ದ ಈ ರಸ್ತೆಯನ್ನು ಇಬ್ಬರೂ ಗಣ್ಯರ ಭೇಟಿಗೂ ಮುನ್ನ ತರಾತುರಿಯಲ್ಲಿ ಡಾಂಬರು ಹಾಕಿ ದುರಸ್ತಿ ಮಾಡಲಾಗಿತ್ತು. ಕಾಮಗಾರಿ ನಡೆಯುತ್ತಿದ್ದ ಸಮಯದಲ್ಲೇ ಕೆಲಸದ ಗುಣಮಟ್ಟದ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದರು. ಒಂದು ತಿಂಗಳ ಅವಧಿಯಲ್ಲಿ ಅದು ನಿಜವಾಗಿದೆ.
ಸಂತೇಮರಹಳ್ಳಿಯಿಂದ ಮೂಗೂರು ಕ್ರಾಸ್‌ವರೆಗೆ ಎಂಟು ಕಿ.ಮೀ ಉದ್ದದ ರಸ್ತೆಯಲ್ಲಿ ಆರು ಕಿ.ಮೀ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯು ₹80 ಲಕ್ಷ ವೆಚ್ಚದಲ್ಲಿ ದುರಸ್ತಿಗೊಳಿಸಿತ್ತು. ಕೊನೆಗೂ ರಸ್ತೆ ದುರಸ್ತಿ ಆಯಿತಲ್ಲ ಎಂದು ಪ್ರಯಾಣಿಕರು ಹಾಗೂ ಚಾಲಕರು ನಿಟ್ಟುಸಿರು ಬಿಟ್ಟಿದ್ದರು. ಮೂರ್ನಾಲ್ಕು ವಾರಗಳಲ್ಲಿ ಸವಾರರಿಗೆ ಸಂಚಾರ ಸಂಕಟ ಮತ್ತೆ ಆರಂಭವಾಗಿದೆ. ರಸ್ತೆಯ ಉದ್ದಗಲಕ್ಕೆ ಅಲ್ಲಲ್ಲಿ ಡಾಂಬರ್ ಕಿತ್ತು ಬಂದು ಜಲ್ಲಿಕಲ್ಲುಗಳು ಪೈಪೋಟಿಯಿಂದ ಮೇಲೇಳುತ್ತಿವೆ.
ರಸ್ತೆ ಕಾಮಗಾರಿ ಸಮಯದಲ್ಲಿ ಅಧಿಕಾರಿಗಳು ರಸ್ತೆಗೆ ಅನುಗುಣವಾಗಿ ಕಾಮಗಾರಿಯ ಗುಣಮಟ್ಟ ಕಾಪಾಡಿಕೊಳ್ಳಲು ಮುಂದಾಗಿಲ್ಲ ಎಂಬುದು ಸಾರ್ವಜನಿಕರ ದೂರು.
ತಿ.ನರಸೀಪುರದಿಂದ ಚಾಮರಾಜನಗರಕ್ಕೆ ಕಾವೇರಿ ಕುಡಿಯುವ ನೀರಿನ ಪೈಪ್‍ಲೈನ್ ಹಾದು ಹೋಗಿದೆ. ರಸ್ತೆಯ ಮಗ್ಗುಲಲ್ಲಿ ಪೈಪ್‍ಲೈನ್ ಹೋಗಿರುವುದರಿಂದ ಪೈಪ್ ಲೈನ್‌ನಲ್ಲಿ ನೀರಿನ ಸೋರಿಕೆಯಿಂದಾಗಿ ರಸ್ತೆಯ ಮಗ್ಗುಲಲ್ಲಿ ಕೊರಕಲು ಉಂಟಾಗಿ ತೇವಾಂಶವಾಗಿ ರಸ್ತೆಯ ಮೇಲೆ ಪರಿಣಾಮ ಬೀರುತ್ತಿದೆ.
ಈ ಭಾಗವು ಕಪ್ಪು ಮಣ್ಣಿನಿಂದ ಕೂಡಿದ್ದು, ತೇವಾಂಶ ಹೆಚ್ಚಿನ ಪ್ರಮಾಣದಲ್ಲಿ ಹಿಡಿದಿಟ್ಟುಕೊಳ್ಳುತ್ತದೆ. ಈ ಕಾರಣದಿಂದಲೂ ರಸ್ತೆ ಬೇಗ ಹಾಳಾಗುತ್ತದೆ. ಹಾಗಾಗಿ, ಇಲ್ಲಿ ಗುಣಮಟ್ಟದ ಕಾಮಗಾರಿಯ ಅಗತ್ಯವಿದೆ. ಆದರೆ, ಪ್ರತಿ ಬಾರಿ ಕಳಪೆ ಕೆಲಸವೇ ನಡೆಯುತ್ತದೆ ಎಂಬುದು ಸಾರ್ವಜನಿಕರ ಆರೋಪ.
‘ಈ ಭಾಗದಲ್ಲಿ ವಾಹನಗಳ ಸಂಚಾರ ಹೆಚ್ಚಿದೆ. ನಮಗೆ ಉತ್ತಮ ಗುಣಮಟ್ಟದ ರಸ್ತೆಗಳು ಬೇಕು. ಅಂತಹ ರಸ್ತೆ ಅಭಿವೃದ್ಧಿ ಪಡಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಪ್ರತಿಬಾರಿ ಇದೇ ಸಮಸ್ಯೆ ಉಂಟಾಗುತ್ತಿದೆ. ಮುಂದೆ ಇಂತಹ ಸಮಸ್ಯೆ ಬಾರದಂತೆ ಅಧಿಕಾರಿಗಳು ಎಚ್ಚರ ವಹಿಸಿ ರಸ್ತೆ ಕಾಮಗಾರಿ ಮುಂದುವರೆಸಬೇಕು’ ಎಂದು ಮುಖಂಡರಾದ ರೇವಣ್ಣ, ಮಹದೇವಪ್ರಸಾದ್ ಅವರು ಒತ್ತಾಯಿಸಿದರು.
‘ಶೀಘ್ರ ದುರಸ್ತಿ’
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ ಸತೀಶ್ ಅವರು, ‘ಸಂತೇಮರಹಳ್ಳಿ ಹಾಗೂ ಮೂಗೂರು ಕ್ರಾಸ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಪೂರ್ಣ ಪ್ರಮಾಣದಲ್ಲಿ ಅನುದಾನ ಬಿಡುಗಡೆಗೊಳಿಸಿಲ್ಲ. ರಾಷ್ಟ್ರಪತಿ ಆಗಮನದ ಹಿನ್ನೆಲೆಯಲ್ಲಿ ತುರ್ತು ದುರಸ್ತಿ ಕಾಮಗಾರಿ ಕೈಗೊಳ್ಳಲು ಅನುದಾನ ಬಿಡುಗಡೆಯಾಯಿತು. ಇದರಲ್ಲಿ ಪ್ಯಾಚ್ ಕಾಮಗಾರಿಯ ಜತೆಗೆ ಸಂಪೂರ್ಣ ರಸ್ತೆ ದುರಸ್ತಿಗೊಳಿಸಲಾಗಿದೆ. ಕೆಲವು ಕಡೆಗಳಲ್ಲಿ ಕಪ್ಪುಮಣ್ಣು ಇರುವುದರಿಂದ ಡಾಂಬರು ಮೇಲೆ ಬಂದಿದೆ. ಅದನ್ನು ಶೀಘ್ರವಾಗಿ ದುರಸ್ತಿಗೊಳಿಸಲಾಗುವುದು’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.