ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಸಂಕ್ರಾಂತಿ: ಸಂಭ್ರಮದ ಆಚರಣೆಗೆ ಸಿದ್ಧತೆ

ಹುಲುಗನಮುರಡಿ ರಥೋತ್ಸವ ಇಂದು, ಬಿಳಿಗಿರಿರಂಗನಬೆಟ್ಟದ ಚಿಕ್ಕತೇರು ನಾಳೆ
Published 14 ಜನವರಿ 2024, 13:54 IST
Last Updated 14 ಜನವರಿ 2024, 13:54 IST
ಅಕ್ಷರ ಗಾತ್ರ

ಚಾಮರಾಜನಗರ/ಯಳಂದೂರು: ಸುಗ್ಗಿ ಹಬ್ಬ ಮಕರ ಸಂಕ್ರಾಂತಿ ಆಚರಣೆಗೆ ಜಿಲ್ಲೆಯಾದ್ಯಂತ ಜನರು ಸಜ್ಜುಗೊಂಡಿದ್ದಾರೆ. 

ಇಂಗ್ಲಿಷ್‌ ಕ್ಯಾಲೆಂಡರ್‌ ವರ್ಷದ ಮೊದಲ ಹಬ್ಬ ಇದು. ಸೂರ್ಯ ಪಥ ಬದಲಿಸುವ ಸಂದರ್ಭದಲ್ಲಿ ಆಚರಿಸಲಾಗುವ ಈ ಹಬ್ಬದಲ್ಲಿ ಭೂಮಿ ತಾಯಿ, ಫಸಲಿಗೆ, ಜಾನುವಾರುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಜಾನುವಾರುಗಳನ್ನು ಕಿಚ್ಚಿನಲ್ಲಿ ಹಾಯಿಸಲಾಗುತ್ತದೆ.    

ಗ್ರಾಮೀಣ ಭಾಗದಲ್ಲಿ ಕೊಯ್ಲು ಮಾಡಿ ಭತ್ತಕ್ಕೆ ಬೊಂಬೆ ದೇವರು ಕೂರಿಸಿ ಹಬ್ಬ ಆಚರಿಸಲು ರೈತರು ಸಿದ್ಧತೆ ನಡೆಸಿದ್ದಾರೆ. ಎತ್ತುಗಳಿಗೆ ಅಲಂಕಾರ ಮಾಡುವ ಕೆಲಸ ನಡೆಯುತ್ತಿದೆ. 

ಹೆಣ್ಣು ಮಕ್ಕಳು ಎಳ್ಳು ಬೆಲ್ಲ ನೀಡಿ, ಹಿರಿಯರಿಂದ ಆಶೀರ್ವಾದ ಪಡೆಯುವ ಸಂಪ್ರದಾಯ ಆಚರಿಸಲು ಮುಂದಾಗಿದ್ದಾರೆ. ಮನೆಗಳನ್ನು ತಳಿರು ತೋರಣಗಳಿಂದ ಅಲಂಕರಿಸಲು ಮಹಿಳೆಯರು ಸಜ್ಜುಗೊಂಡಿದ್ದಾರೆ. 

ಮಾರುಕಟ್ಟೆಯಲ್ಲಿ ಸಂಕ್ರಾಂತಿ ಖರೀದಿ ಜೋರಾಗಿ ನಡೆದಿದೆ. ಸಾಮಾನ್ಯವಾಗಿ ಭಾನುವಾರ ಜಿಲ್ಲೆಯಾದ್ಯಂತ ಜನರು ಅಂಗಡಿ ಮುಂಗಟ್ಟುಗಳನ್ನು ಮುಚ್ಚುತ್ತಾರೆ. ಸೋಮವಾರ ಹಬ್ಬ ಇರುವ ಕಾರಣಕ್ಕೆ ಬಹುತೇಕರು ಭಾನುವಾರ ಅಂಗಡಿ ತೆರೆದಿದ್ದರು. ನಗರ, ಪಟ್ಟಣಗಳಲ್ಲಿ ಜನರ ಸಂಖ್ಯೆಯೂ ಹೆಚ್ಚಿತ್ತು. 

ಎಳ್ಳು, ಬೆಲ್ಲ, ಸಕ್ಕರೆ ಅಚ್ಚು, ಹೂವು ಸೇರಿದಂತೆ ಹಬ್ಬಕ್ಕೆ ಬೇಕಾದ ಸಾಮಗ್ರಿಗಳ ಖರೀದಿಯಲ್ಲಿ ಜನರು ತೊಡಗಿದ್ದರು. 

ಎಳ್ಳು ಬೆಲ್ಲದ ಮಿಶ್ರಣ ‍ಪೊಟ್ಟಣಗಳೇ ಮಳಿಗೆಗಳಲ್ಲಿ ಲಭ್ಯವಿದ್ದು, ಕೆಜಿಗೆ ₹160ರಿಂದ ₹200ರವರೆಗೂ ಇದೆ. ಎಳ್ಳು ಒಂದು ಕೆಜಿಗೆ ₹200–₹220 ಸಕ್ಕರೆ ಅಚ್ಚು ಕೆ.ಜಿಗೆ ₹200 ಇದೆ. 

‘ಭಾನುವಾರ ರಜಾ ದಿನವಾಗಿದ್ದರಿಂದ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು. ಅನಿವಾರ್ಯ ಇದ್ದವರು ಮಾತ್ರ ಪೇಟೆಗೆ ಬಂದಿದ್ದಾರೆ’ ಎಂದು ವ್ಯಾಪಾರಿ ಮುರಳಿ ‘ಪ್ರಜಾವಾಣಿ’ಗೆ ತಿಳಿಸಿದರು. 

ನಾಳೆ ಚಿಕ್ಕತೇರು: ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಮಂಗಳವಾರ (ಜ.16) ಸಂಕ್ರಾಂತಿ ಚಿಕ್ಕತೇರು ನಡೆಯಲಿದೆ. ರೈತರು ಹೊಸಹಕ್ಕಿ, ಕಬ್ಬು ಮತ್ತು ದಿನಸಿ ಪದಾರ್ಥಗಳನ್ನು ದೇವರಿಗೆ ಅರ್ಪಿಸಲು ಸಿದ್ಧತೆ ನಡೆಸಿದ್ದಾರೆ. 

ಸೋಲಿಗ ಸಮುದಾಯದ ಜನರು ಹಾಗೂ ಬಿಳಿಗಿರಿ ರಂಗನಾಥ ಸ್ವಾಮಿಯ ದಾಸರು ಭಕ್ತರು ರಥೋತ್ಸವದ ದಿನದಂದು ದವಸ ಧಾನ್ಯಗಳನ್ನು ರಂಗನಾಥನಿಗೆ ಅರ್ಪಿಸಿ, ರಥ ಎಳೆಯುಲು ಸಜ್ಜಾಗಿದ್ದಾರೆ.

ಬಿಳಿಗಿರಿರಂಗನ ಬೆಟ್ಟದ ರಂಗನಾಥ ಸ್ವಾಮಿ ಚಿಕ್ಕ ಜಾತ್ರೆಗೆ ಹೆಚ್ಚಿನ ಸಂಖ್ಯೆಯ ಭಕ್ತರು ಸೇರುವ ನಿರೀಕ್ಷೆ ಇದೆ. 

ದಾಸರು ಬೇಟೆ ಮನೆ ಉತ್ಸವ ನೆರವೇರಿಸಿ ಎಳ್ಳು, ಬೆಲ್ಲ, ಅಕ್ಕಿ, ಕಜ್ಜಾಯದ ನೈವೇದ್ಯ ಸೇವಿಸಿದ ನಂತರ ಭಕ್ತರು ವಿಶೇಷ ಪೂಜೆ ಸಲ್ಲಿಸುವ ಆಚರಣೆ ಇಲ್ಲಿದೆ.

‘ದೇವಾಲಯದಲ್ಲಿ ಬಾಳೆ, ಕಬ್ಬು, ತಳಿರು ತೋರಣಗಳ ಸಿಂಗಾರ ಮಾಡಿ, ರಥಕ್ಕೆ ಅಲಂಕರಿಸುವ ಕೆಲಸಗಳು ಆರಂಭವಾಗಿದ್ದು, ಸ್ಥಳೀಯ ಸೋಲಿಗರು ಮತ್ತು ಗ್ರಾಮಸ್ಥರು ಒಟ್ಟಾಗಿ ಹಬ್ಬದ ಸಂಭ್ರಮದಲ್ಲಿ ಸೇವೆ ಸಲ್ಲಿಸುವ ವಿಶಿಷ್ಟ ಆಚರಣೆ ಇಲ್ಲಿದೆ’ ಎಂದುಗ್ರಾಮದ ನಾಗೇಂದ್ರ ಹೇಳಿದರು. 

ಹೆಚ್ಚುವರಿ ಬಸ್‌: ಪಟ್ಟಣ ಸೇರಿದಂತೆ ಚಾಮರಾಜನಗರ ಮತ್ತು ಕೊಳ್ಳೇಗಾಲ ಭಾಗಗಳಿಂದಲೂ ಹೆಚ್ಚುವರಿಯಾಗಿ 50 ಬಸ್‌ಗಳ ಸೌಲಭ್ಯವನ್ನು ಕೆಎಸ್‌ಆರ್‌ಟಿಸಿ ಒದಗಿಸಿದೆ. ಸೋಮವಾರ ಮತ್ತು ಮಂಗಳವಾರ ಗುಂಬಳ್ಳಿ ಚೆಕ್‌ಪೋಸ್ಟ್‌ ಮತ್ತು ಹೊಂಡರಬಾಳು ಚೆಕ್‌ಪೋಸ್ಟ್‌ ಬಳಿಯಿಂದ ಬೆಟ್ಟಕ್ಕೆ ದ್ವಿಚಕ್ರವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. 

‘ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ. ದೇವರ ಅಲಂಕರಿಸುವ ಆಭರಣಗಳನ್ನು ಸೋಮವಾರ ಮೆರವಣಿಗೆ ಮೂಲಕ ಬೆಟ್ಟಕ್ಕೆ ಕೊಂಡೊಯ್ಯಲಾಗುವುದು’ ಎಂದು ತಹಸೀಲ್ದಾರ್ ಜಯಪ್ರಕಾಶ್ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಮಂಗಳವಾರ ಮಧ್ಯಾಹ್ನ 11.54 ರಿಂದ 12.05ರೊಳಗೆ ಸಲ್ಲುವ ಶುಭ ಮೀನ ಗುರು ನವಾಂಶ ಮುಹೂರ್ತದಲ್ಲಿ ರಥೋತ್ಸವ ಜರುಗಲಿದೆ. ಜ.18ರಂದು ಜಾತ್ರೋತ್ಸವ ಪೂಜಾ ಕೈಂಕರ್ಯಗಳು ಸಂಪನ್ನಗೊಳ್ಳಲಿವೆ’ ಎಂದು ಅರ್ಚಕ ರವಿಕುಮಾರ್ ಹೇಳಿದರು.

ಹುಲುಗನಮುರಡಿ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ತೇರು ಕಟ್ಟುವ ಕಾರ್ಯ ಅಂತಿಮ ಹಂತ ತಲುಪಿರುವುದು
ಹುಲುಗನಮುರಡಿ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ತೇರು ಕಟ್ಟುವ ಕಾರ್ಯ ಅಂತಿಮ ಹಂತ ತಲುಪಿರುವುದು
ಸಂಕ್ರಾಂತಿ ಹಬ್ಬದ ಮುನ್ನಾದಿನವಾದ ಭಾನುವಾರ ಸಂಜೆ ಚಾಮರಾಜನಗರದ ದೊಡ್ಡಂಗಡಿ ಬೀದಿಯಲ್ಲಿ ಜನಜಂಗುಳಿ ಕಂಡು ಬಂತು
ಸಂಕ್ರಾಂತಿ ಹಬ್ಬದ ಮುನ್ನಾದಿನವಾದ ಭಾನುವಾರ ಸಂಜೆ ಚಾಮರಾಜನಗರದ ದೊಡ್ಡಂಗಡಿ ಬೀದಿಯಲ್ಲಿ ಜನಜಂಗುಳಿ ಕಂಡು ಬಂತು

ರಥೋತ್ಸವ ನಾಳೆ

ಗುಂಡ್ಲುಪೇಟೆ: ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಿಕ್ಕತಿರುಪತಿ ಎಂದೇ ಪ್ರಸಿದ್ದಿ ಪಡೆದಿರುವ ಹುಲುಗನಮುರಡಿ ವೆಂಕಟರಮಣ ಸ್ವಾಮಿ ಬೆಟ್ಟದಲ್ಲಿ ಸೋಮವಾರ ಸಂಕ್ರಾಂತಿ ರಥೋತ್ಸವ ನಡೆಯಲಿದೆ. ಮಧ್ಯಾಹ್ನ 12.40ರಿಂದ  1.30ರೊಳಗೆ ನಡೆಯುವ ಶುಭ ಲಗ್ನದಲ್ಲಿ ರಥೋತ್ಸವ ನಡೆಯಲಿದ್ದು ತಾಲ್ಲೂಕು ಆಡಳಿತ ದೇವಾಲಯದ ಆಡಳಿತ ಮಂಡಳಿ ಸಿದ್ದತೆ ಮಾಡಿಕೊಂಡಿವೆ. ಬೆಟ್ಟದ ತಪ್ಪಲಿನಲ್ಲಿ ಪಾರ್ಕಿಂಗ್‌: ದೇವಾಲಯಕ್ಕೆ ಹೋಗುವ ತಿರುವಿನ ಹಾದಿಯಲ್ಲಿ ವಾಹನಗಳ ದಟ್ಟಣೆ ನಿಯಂತ್ರಿಸುವುದಕ್ಕಾಗಿ ತಪ್ಪಲಿನಿಂದ ಬೆಟ್ಟದವರೆಗೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.  ತಪ್ಪಲಿನಿಂದ ಬೆಟ್ಟದವರೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳು ಮಾತ್ರ ಓಡಾಡಲಿವೆ.  ದ್ವಿಚಕ್ರ ನಾಲ್ಕು ಚಕ್ರಗಳ ವಾಹನಗಳು ಸೇರಿದಂತೆ ಎಲ್ಲ ವಾಹನಗಳಿಗೆ ತಪ್ಪಲಿನಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ’ ಎಂದು ತಹಸೀಲ್ದಾರ್ ರಮೇಶ್ ಬಾಬು ತಿಳಿಸಿದರು.  ‘ಜಾತ್ರೆಯ ದಿನ ಭಕ್ತಾದಿಗಳಿಗೆ ಪ್ರಸಾದ ವಿತರಿಸಲು ಪ್ರಸಾದ ಮಾಡಿಸುವ ಭಕ್ತರಿಗೆ ಅವಕಾಶ ಮಾಡಲಾಗಿದೆ. ತೆರಕಣಾಂಬಿ ಪೊಲೀಸರು ಬಿಗಿ ಬಂದೋಬಸ್ತ್‌ ಒದಗಿಸುವರು’ ಎಂದು ಅವರು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT