ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಗೆ ಪಿಎಫ್‌ಐ ಕಾರ್ಯಕರ್ತರಿಂದ ಗೌರವದ ವಿದಾಯ

ಕುಟುಂಬ, ಸಂಬಂಧಿಕರ ಅನುಪಸ್ಥಿತಿಯಲ್ಲಿ ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರ
Last Updated 12 ಜುಲೈ 2020, 15:09 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್‌–19 ಕಾರಣದಿಂದ ಮೃತಪಟ್ಟ ಹನೂರು ತಾಲ್ಲೂಕಿನ ಕೊಂಗರಹಳ್ಳಿಯ ವ್ಯಕ್ತಿಯ ಅಂತ್ಯ ಸಂಸ್ಕಾರವನ್ನು ನೆರವೇರಿಸುವ ಮೂಲಕ ಜಿಲ್ಲೆಯ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತರು ಮಾನವೀಯತೆ ಮೆರೆದಿದ್ದಾರೆ.

ವ್ಯಕ್ತಿಯ ಕುಟುಂಬ ಹಾಗೂ ಸಂಬಂಧಿಕರ ಅನುಪಸ್ಥಿತಿಯಲ್ಲಿ, ಜಿಲ್ಲಾಡಳಿತ ಚಾಮರಾಜನಗರದ ಬಳಿ ಗುರುತಿಸಿರುವ ಜಾಗದಲ್ಲಿ ಪಿಎಫ್‌ಐನ ಆರು ಮಂದಿ ಕಾರ್ಯಕರ್ತರು ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ.

ಶ್ವಾಸಕೋಸದ ಸೋಂಕಿನಿಂದ ಬಳಲುತ್ತಿದ್ದ 58 ವರ್ಷದ ವ್ಯಕ್ತಿ ಕೋವಿಡ್‌ನಿಂದ ಮೃತಪಟ್ಟಿರುವುದು ಖಚಿತವಾಗುತ್ತಿದ್ದಂತೆಯೇ, ಸರ್ಕಾರದ ಶಿಷ್ಟಾಚಾರದಂತೆ ಅಂತ್ಯಕ್ರಿಯೆ ನಡೆಸಲು ಜಿಲ್ಲಾಡಳಿತ ತೀರ್ಮಾನಿಸಿತು. ಅಂತ್ಯ ಸಂಸ್ಕಾರಕ್ಕಾಗಿಯೇ ಗುರುತಿಸಲಾಗಿರುವ ಸರ್ಕಾರಿ ಜಮೀನಿನಲ್ಲಿ ಎಂಟು ಅಡಿ ಆಳದ ಗುಂಡಿ ತೆಗೆಯಲಾಯಿತು.

ನಗರದಿಂದ ಕೊಳ್ಳೇಗಾಲದ ಆಸ್ಪತ್ರೆಗೆ ತೆರಳಿದ ಪಿಎಫ್‌ಐ ಕಾರ್ಯಕರ್ತರು, ಪಿಪಿಇ ಕಿಟ್‌ಗಳನ್ನು ಧರಿಸಿ ರಾತ್ರಿ 10.30ರ ಹೊತ್ತಿಗೆ ಮೃತದೇಹವನ್ನು ಆಂಬುಲೆನ್ಸ್‌ ಮೂಲಕ ಅಂತ್ಯ ಸಂಸ್ಕಾರ ನಡೆಯುವ ಜಾಗಕ್ಕೆ ಕರೆತಂದರು.

ಗುಂಡಿಗೆ ಸೋಂಕು ನಿವಾರಕ ಸಿಂಪಡಿಸಿದ ನಂತರ ಆಂಬುಲೆನ್ಸ್‌ನಿಂದ ಶವವನ್ನು ಕೆಳಗಿಳಿಸಿ, ಮೃತದೇಹಕ್ಕೂ ಸೋಂಕು ನಿವಾರಕವನ್ನು ಸಿಂಪಡಿಸಿ, ಹಗ್ಗಗಳ ಮೂಲಕ ಗುಂಡಿಗೆ ಇಳಿಸಿದರು. ಆ ಬಳಿಕ ಮಣ್ಣು ಹಾಕಿ ಮುಚ್ಚಿದರು. ನಗರಸಭೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸಮ್ಮುಖದಲ್ಲಿ11.30ರ ಸುಮಾರಿಗೆ ಎಲ್ಲ ಪ್ರಕ್ರಿಯೆ ನಡೆಯಿತು.

ಸದ್ಯ ಆರು ಮಂದಿ ಸ್ವಯಂ ಸೇವಕರು ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಪಿಎಫ್‌ಐ ಕಾರ್ಯಕರ್ತರ ಈ ಮಾನವೀಯ ಮಾದರಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

15 ಜನ ಸ್ವಯಂ ಸೇವಕರು: ಜಿಲ್ಲೆಯಲ್ಲಿ ಕೋವಿಡ್‌ನಿಂದಾಗಿ ಮೃತಪ‍ಟ್ಟವರ ಅಂತ್ಯ ಸಂಸ್ಕಾರ ನೆರವೇರಿಸಲು ಸ್ವಯಂ ಸೇವಕರಾಗಲು ಪಿಎಫ್‌ಐನ 15 ಮಂದಿ ಕಾರ್ಯಕರ್ತರು ಮುಂದೆ ಬಂದಿದ್ದಾರೆ.

ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಅನುಸರಿಸಬೇಕಾದ ನಿಯಮಗಳು ಹಾಗೂ ಮಾಡಬೇಕಾದ ವಿಧಾನಗಳ ಬಗ್ಗೆ ಇವರಿಗೆ ಜಿಲ್ಲಾಡಳಿತ ತರಬೇತಿಯನ್ನೂ ನೀಡಿದೆ.

ಗೌರವಯುತ ವಿದಾಯ ಪಡೆಯಬೇಕು

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಿಎಫ್‌ಐನ ಜಿಲ್ಲಾ ಘಟಕದ ಕಾರ್ಯದರ್ಶಿ ಶುಬೇಹ್‌ ಖಾನ್‌, ‘ಬಳ್ಳಾರಿ ಹಾಗೂ ರಾಜ್ಯದ ಕೆಲವೆಡೆಗಳಲ್ಲಿ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಅಮಾನವೀಯವಾಗಿ ನಡೆದುಕೊಂಡ ವಿಷಯ ಬಹಿರಂಗ ಆದ ನಂತರ, ಕೋವಿಡ್‌–19 ಮೃತಪಟ್ಟವರಿಗೆ ಗೌರವಯುತ ಅಂತ್ಯಸಂಸ್ಕಾರ ಮಾಡಲು ‌ಕಾರ್ಯಕರ್ತರು ನೆರವಾಗಬೇಕು ಎಂದು ಸಂಘಟನೆಯ ಮುಖಂಡರು ಸೂಚನೆ ನೀಡಿದ್ದರು. ಅದರಂತೆ ರಾಜ್ಯದಾದ್ಯಂತ ಕಾರ್ಯಕರ್ತರು ಸ್ವಯಂ ಸೇವಕರಾಗಿ ದುಡಿಯುತ್ತಿದ್ದಾರೆ. ನಮ್ಮ ಜಿಲ್ಲೆಯಲ್ಲೂ 15 ಕಾರ್ಯಕರ್ತರನ್ನು ಗುರುತಿಸಿದ್ದೇವೆ’ ಎಂದು ಹೇಳಿದರು.

‘ಎರಡು ತಂಡಗಳನ್ನು ಮಾಡಿದ್ದೇವೆ. ಶನಿವಾರ ನಡೆಸಿದ ಅಂತ್ಯಸಂಸ್ಕಾರದಲ್ಲಿ ಆರು ಮಂದಿ ಭಾಗವಹಿಸಿದ್ದಾರೆ. ಧರ್ಮ ಭೇದವಿಲ್ಲದೆ ಎಲ್ಲ ಸುರಕ್ಷತಾ ಸಾಧನಗಳನ್ನು ಧರಿಸಿ, ಶಿಷ್ಟಾಚಾರದಂತೆ ಗೌರವಯುತವಾಗಿ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

‘ಮೃತ ವ್ಯಕ್ತಿಯ ಕುಟುಂಬದವರು, ಸಂಬಂಧಿಕರು ಯಾರೂ ಇರಲಿಲ್ಲ. ಎಲ್ಲವನ್ನೂ ನಮ್ಮ ಕಾರ್ಯಕರ್ತರೇ ಮಾಡಿದ್ದಾರೆ. ಜೀವ ಇದ್ದಾಗ ಸಮಾಜದಲ್ಲಿ ಗೌರವ ಪಡೆಯುವ ವ್ಯಕ್ತಿಯೊಬ್ಬ ಸತ್ತ ಬಳಿಕವೂ ಗೌರವಯುತ ಅಂತ್ಯಸಂಸ್ಕಾರ ಪಡೆಯಬೇಕು ಎಂಬ ಕಾರಣದಿಂದ ಈ ಕಾರ್ಯವನ್ನು ಮಾಡುತ್ತಿದ್ದೇವೆ’ ಎಂದು ಶುಬೇಹ್‌ ಖಾನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT