ಶುಕ್ರವಾರ, ಡಿಸೆಂಬರ್ 2, 2022
19 °C
ಎಲ್ಲೆಂದರಲ್ಲಿ ಪ್ಲಾಸ್ಟಿಕ್‌, ಪೂರ್ಣ ಪ್ರಮಾಣದಲ್ಲಿ ಜಾರಿಯಾಗದ ಪ್ಲಾಸ್ಟಿಕ್‌ ನಿಷೇಧ ಆದೇಶ

ಚಾಮರಾಜನಗರ- ತ್ಯಾಜ್ಯ: ವೈಜ್ಞಾನಿಕ ವಿಲೇವಾರಿಯೇ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಪರಿಸರಕ್ಕೆ ಹಾನಿಕಾರಕವಾಗಿರುವ ಪ್ಲಾಸ್ಟಿಕ್‌ನ ನಿರ್ವಹಣೆ ಸ್ಥಳೀಯ ಸಂಸ್ಥೆಗಳಿಗೆ ಸವಾಲಾಗಿ ಪರಿಣಮಿಸಿದೆ. ಜಿಲ್ಲೆಯಾದ್ಯಂತ ಪ್ಲಾಸ್ಟಿಕ್‌ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. 

ಏಕ ಬಳಕೆಯ ಪ್ಲಾಸ್ಟಿಕ್‌ ಮೇಲೆ ನಿಷೇಧ ಹೇರಿ ಆರು ತಿಂಗಳು ಕಳೆದಿವೆ. ಹಾಗಿದ್ದರೂ, ಜಿಲ್ಲೆಯಲ್ಲಿ ಈ ನಿಯಮ ಕಟ್ಟುನಿಟ್ಟಾಗಿ ಜಾರಿಗೆ ಬಂದಿಲ್ಲ. ಎಲ್ಲ ಕಡೆಗಳಲ್ಲೂ ರಾಜಾರೋಷವಾಗಿ ಏಕ ಬಳಕೆಯ ಪ್ಲಾಸ್ಟಿಕ್‌ ಲಭ್ಯವಿದೆ. ಸ್ಥಳೀಯ ಆಡಳಿತಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಗಾಗ ಕಾರ್ಯಾಚರಣೆ ನಡೆಸಿ ವ್ಯಾಪಾರಿಗಳಿಗೆ ದಂಡ ವಿಧಿಸುತ್ತಿರುವುದನ್ನು ಬಿಟ್ಟರೆ ಬೇರೇನೂ ಮಾಡುತ್ತಿಲ್ಲ. ನಿಷೇಧಿತ ಪ್ಲಾಸ್ಟಿಕ್‌ ಬಳಕೆಯ ವಿರುದ್ಧ ಕಠಿಣ ಕ್ರಮ ಕೈಗೊಂಡ ಒಂದು ಉದಾಹರಣೆಯೂ ಸಿಗುವುದಿಲ್ಲ. 

ಜಿಲ್ಲೆ ಚಿಕ್ಕದಾಗಿರುವುದರಿಂದ ದೊಡ್ಡ ನಗರ, ಪಟ್ಟಣ, ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿ ಪ್ಲಾಸ್ಟಿಕ್‌ ಸಂಗ್ರಹ ಕಡಿಮೆ. ಹಾಗಿದ್ದರೂ ಪ್ಲಾಸ್ಟಿಕ್‌ ತ್ಯಾಜ್ಯದ ಸಮಸ್ಯೆ ಇದ್ದೇ ಇದೆ. ಬೃಹದಾಕಾರವಾಗಿ ಬೆಳೆದಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಭೂತವಾಗಿ ಕಾಡುವುದು ಖಚಿತ.ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ಕಸ ಹೆಚ್ಚಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಇದರ ಹಾವಳಿ ಕಡಿಮೆ.

ಜಿಲ್ಲೆಯಾದ್ಯಂತ ಉತ್ಪತ್ತಿಯಾಗುವ ಪ್ಲಾಸ್ಟಿಕ್‌ ಕಸಗಳಲ್ಲಿ ಶೇ 100ರಷ್ಟು ಸಂಗ್ರಹವನ್ನು ಸ್ಥಳೀಯ ಸಂಸ್ಥೆಗಳು ಮಾಡುತ್ತಿಲ್ಲ. ಪೌರಕಾರ್ಮಿಕರು ಮನೆ ಮನೆಗೆ ಹೋಗಿ, ಮಳಿಗೆಗಳಿಗೆ ಹೋಗಿ ಕಸವನ್ನು ಸಂಗ್ರಹಿಸುತ್ತಾರೆ. ಹಾಗಿದ್ದರೂ, ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್‌ ಕಸವನ್ನು ಎಸೆಯುವವರು ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಪ್ಲಾಸ್ಟಿಕ್‌ ಕಸವನ್ನು ರಾಶಿ ಹಾಕಿ ಸುಡುವವರೂ ಇದ್ದಾರೆ.ಸಂಗ್ರಹವಾಗುವ ಪ್ಲಾಸ್ಟಿಕ್‌ ಕಸವನ್ನು ನಗರ ಸ್ಥಳೀಯ ಸಂಸ್ಥೆಗಳು, ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಶೇಖರಿಸಿ ಇಡುತ್ತಿವೆ. ಜಿಲ್ಲಾ ಕೇಂದ್ರ ಚಾಮರಾಜನಗರದ ನಗರಸಭಾ ವ್ಯಾಪ್ತಿಯಲ್ಲಿ ಪ್ರತಿ ದಿನ 28 ಟನ್‌ಗಳಷ್ಟು ಕಸ ಸಂಗ್ರಹವಾಗುತ್ತದೆ. ಈ ಪೈಕಿ ಶೇ 50ರಷ್ಟು ಹಸಿ ಕಸ. ಉಳಿದಿದ್ದ ಒಣಕಸ. ಈ ಪೈಕಿ ಶೇ 3ರಿಂದ ಶೇ 5ರಷ್ಟು ಪ್ಲಾಸ್ಟಿಕ್‌ ಕಸ. ಅಧಿಕಾರಿಗಳು ನೀಡುವ ಮಾಹಿತಿ ಪ್ರಕಾರ ಒಂದೂವರೆ ಟನ್‌ಗಳಷ್ಟು ಪ್ಲಾಸ್ಟಿಕ್‌ ಸಂಗ್ರಹವಾಗಬಹುದು. ಸದ್ಯ ನಗರಸಭೆಯು ಕರಿವರದರಾಜನಬೆಟ್ಟದ ತಪ್ಪಲಿನಲ್ಲಿರುವ ತ್ಯಾಜ್ಯ ಸಂಗ್ರಹ ಘಟಕದಲ್ಲಿ ಸಂಗ್ರಹಿಸಿಟ್ಟಿದೆ. ನಿಗದಿತ ಪ್ರಮಾಣದಲ್ಲಿ ಸಂಗ್ರಹವಾದ ಬಳಿಕ ಮರುಬಳಕೆಗಾಗಿ ಕಾರ್ಖಾನೆಗೆ ಕಳುಹಿಸಲಾಗುತ್ತದೆ ಎಂದು ಹೇಳುತ್ತಾರೆ ಅಧಿಕಾರಿಗಳು.

ನಗರ ವ್ಯಾಪ್ತಿಯಲ್ಲಿ ಕಸ ಸಂಗ್ರಹಿಸುವ ಪೌರಕಾರ್ಮಿಕರು ಸಂಗ್ರಹಿಸಿರುವ ಕಸದಲ್ಲಿ ಗುಜರಿಗೆ ಮಾರಬಹುದಾದ ಕಸವನ್ನು ಅವರೇ ಮಾರಾಟ ಮಾಡುತ್ತಾರೆ. ಹಾಗಾಗಿ, ಪೂರ್ಣ ಪ್ರಮಾಣದ ಪ್ಲಾಸ್ಟಿಕ್‌ ನಗರಸಭೆಯ ಕಸ ಸಂಗ್ರಹ ಘಟಕದಲ್ಲಿ ತಲುಪುವುದಿಲ್ಲ. ಘಟಕದಲ್ಲಿ ಸಂಗ್ರಹಿಸಿರುವ ಪ್ಲಾಸ್ಟಿಕ್‌ಗಳು ಗುಜರಿಗೂ ಆಗದಂತಹವುಗಳು. 

ಕೊಳ್ಳೇಗಾಲ ನಗರಸಭಾ ವ್ಯಾಪ್ತಿಯಲ್ಲಿ ಪ್ರತಿ ದಿನ 21 ಟನ್‌ ಕಸ ಸಂಗ್ರಹವಾಗುತ್ತದೆ. ಈ ಪೈಕಿ 14 ಟನ್‌ ಹಸಿ ಕಸ. ಒಣಕಸ 3 ಟನ್‌, ಪ್ಲಾಸ್ಟಿಕ್‌ ಸೇರಿದಂತೆ ಇತರ ಕಸ 4 ಟನ್‌ಗಳಷ್ಟು ಸಂಗ್ರಹವಾಗುತ್ತದೆ. ಒಣಕಸದೊಂದಿಗೆ ಬೆರೆತಿರುವ ಪ್ಲಾಸ್ಟಿಕ್‌ ಅನ್ನು ಪ್ರತ್ಯೇಕ‌ಗೊಳಿಸಿ ತ್ಯಾಜ್ಯ ಘಟಕದಲ್ಲಿ ಶೇಖರಿಸಲಾಗುತ್ತಿದೆ. ಕಳೆದ ವರ್ಷ 100 ಟನ್‌ಗಳಷ್ಟು ಪ್ಲಾಸ್ಟಿಕ್‌ ಅನ್ನು ಬೆಂಗಳೂರಿನ ಮರುಬಳಕೆ ಕಾರ್ಖಾನೆಗೆ ಕಳುಹಿಸಲಾಗಿತ್ತು ಎಂದು ಹೇಳುತ್ತಾರೆ ಅಧಿಕಾರಿಗಳು.

ಗುಂಡ್ಲುಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಪ್ರತಿ ದಿನ 9.5 ಟನ್ ಕಸ ಸಂಗ್ರಹಣೆಯಾಗುತ್ತಿದೆ. ಇದರಲ್ಲಿ ಶೇ 2ರಿಂದ ಶೇ 3ರಷ್ಟು ಪ್ಲಾಸ್ಟಿಕ್‌ ತ್ಯಾಜ್ಯ ಇದೆ. ಸದ್ಯ ಕಸವನ್ನು ಪಟ್ಟಣದ ಹೊರಭಾಗದಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಈಗ ಅಲ್ಲಿ ತ್ಯಾಜ್ಯ ಘಟಕದ ಸ್ಥಾಪನೆಯಾಗಿದೆ. 

ಸಂಗ್ರಹಿಸಿರುವ ಕಸದಿಂದ ಪ್ಲಾಸ್ಟಿಕ್‌ ಅನ್ನು ಬೇರ್ಪಡಿಸಿ ಕಾರ್ಖಾನೆಗೆ ಕೊಡಲಾಗುತ್ತದೆ ಎಂದು ಗುಂಡ್ಲುಪೇಟೆ ಪುರಸಭೆ ಮುಖ್ಯಾಧಿಕಾರಿ ಹೇಮಂತ್ ರಾಜ್ ತಿಳಿಸಿದರು. ಯಳಂದೂರು ಹಾಗೂ ಹನೂರಿನ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕಸದ ಪ್ರಮಾಣ ಕಡಿಮೆ ಯಳಂದೂರಿನಲ್ಲಿ 3 ಟನ್‌ಗಳಷ್ಟು ಕಸ ಸಂಗ್ರಹವಾಗುತ್ತದೆ. ಇಲ್ಲೂ ಪ್ಲಾಸ್ಟಿಕ್‌ ಕಸವನ್ನು ಸಂಗ್ರಹಿಸಿ ಇಡಲಾಗುತ್ತಿದೆ.  

---

ನಮ್ಮಲ್ಲೂ ಜಾಗೃತಿ ಬೇಕು

ಪ್ಲಾಸ್ಟಿಕ್‌ ಬಳಕೆ ಎಗ್ಗಿಲ್ಲದೆ ನಡೆಯುತ್ತಿದೆ. ಜನರು ಸ್ವತಃ ಜಾಗೃತರಾಗದೆ ಪ್ಲಾಸ್ಟಿಕ್‌ ಮುಕ್ತ ಪರಿಸರ ನಿರ್ಮಾಣ ಸಾಧ್ಯವೇ ಇಲ್ಲ. ಪ್ಲಾಸ್ಟಿಕ್‌ ಅನ್ನು ಬಳದಿರುವ ಪ್ರತಿಜ್ಞೆಯನ್ನು ಪ್ರತಿಯೊಬ್ಬರೂ ಮಾಡಬೇಕು. ಪ್ಲಾಸ್ಟಿಕ್‌ ವಸ್ತುಗಳಿಗೆ ಬೆಂಕಿ ಹಾಕುವುದನ್ನು ಬಿಡಬೇಕು. ಸ್ಥಳೀಯ ಸಂಸ್ಥೆಗಳು ಪ್ಲಾಸ್ಟಿಕ್‌ಗೆ ಕಡಿವಾಣ ಹಾಕಲು ಕ್ರಮಗಳನ್ನು ಕೈಗೊಳ್ಳಬೇಕು. 

–ಸಿ.ಎಂ.ವೆಂಕಟೇಶ್‌, ಪರಿಸರ ಪ್ರೇಮಿ, ಚಾಮರಾಜನಗರ

ಪ್ಲಾಸ್ಟಿಕ್ ತ್ಯಾಜ್ಯ ಅರಿವಿಲ್ಲ

ಗ್ರಾಮೀಣ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಅವುಗಳ ನಿರ್ವಹಣೆಯ ಬಗ್ಗೆ ಇನ್ನೂ ಜಾಗೃತಿ ಮೂಡಿಲ್ಲ. ಗ್ರಾಮೀಣರು ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕಿಸುವ ಬಗ್ಗೆಯೂ ತಿಳಿದಿಲ್ಲ. ಪಂಚಾಯಿತಿ ಸಿಬ್ಬಂದಿ ಯಾವಾಗಲೋ ಒಮ್ಮೆ ಸ್ವಚ್ಛಗೊಳಿಸಿ ಫೋಟೋ ತೆಗೆದು ಹೋಗುವುದನ್ನು ಬಿಟ್ಟರೆ ಇನ್ನೇನು ಕೆಲಸಗಳು ಆಗುತ್ತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಮಾರಾಟ ಮಾಡದಂತೆ ತಡೆಗಟ್ಟಬೇಕಿದೆ.

–ಮಲ್ಲಿಕಾರ್ಜುನ, ಹೊನ್ನೂರು, ಯಳಂದೂರು ತಾಲ್ಲೂಕು

ಎಲ್ಲಿಂದರಲ್ಲಿ ಹಾರಾಟ

ಅರಣ್ಯ ಮತ್ತು ವನ್ಯಜೀವಿ ಪರಿಸರದಲ್ಲಿ ಎಗ್ಗಿಲ್ಲದೆ ಪ್ಲಾಸ್ಟಿಕ್ ಬಿದ್ದಿದೆ. ಗಾಳಿ ಮಳೆ ಬಂದರೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಕಸ ಹಾರಾಡುತ್ತದೆ. ಮಣ್ಣು ಜಲ ಹಾಗೂ ವಾಯು ಮಾಲಿನ್ಯ ಹೆಚ್ಚಾಗುತ್ತದೆ. ಹಾಗಾಗಿ ಪ್ಲಾಸ್ಟಿಕ್ ಚೀಲ ನಿಷೇಧಿಸಿ ಬಟ್ಟೆಗಳನ್ನು ಪರಿಚಯಿಸಬೇಕು.

–ಶಿವು, ಪರಿಸರ ಪ್ರೇಮಿ ಕಂದಹಳ್ಳಿ, ಯಳಂದೂರು ತಾಲ್ಲೂಕು

ಕ್ರಮ ಕೈಗೊಳ್ಳಿ

ಪಟ್ಟಣದಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಕಂಡು ಬರುತ್ತದೆ. ಕಸ ಸಂಗ್ರಹ, ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಅಧಿಕಾರಿಗಳು ಪ್ಲಾಸ್ಟಿಕ್ ಮಾರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು.

-ನವೀನ್, ಹನೂರು

ಪರ್ಯಾಯಕ್ಕೆ ಪ್ರೇರೇಪಿಸಿ

ಅಂಗಡಿಗವರೂ ಪ್ಲಾಸ್ಟಿಕ್‌ ಮಾರುತ್ತಾರೆ. ಜನರೂ ಕೊಳ್ಳುತ್ತಾರೆ. ಪ್ಲಾಸ್ಟಿಕ್‌ ನಿಷೇಧ ನಿಯಮದ ಪಾಲನೆ ನಡೆಯುತ್ತಿಲ್ಲ. ಪ್ಲಾಸ್ಟಿಕ್‌ ಚೀಲದ ಬದಲಿಗೆ ಬಟ್ಟೆಯ ಚೀಲ ಬಳಸುವುದಕ್ಕೆ ಜನರಿಗೆ ಪ್ರೇರೇಪಣೆ ನೀಡಬೇಕಿದೆ

–ರವಿ, ಹನೂರು

ಕಾಯಿಲೆಗಳಿಗೆ ದಾರಿ

ಪ್ಲಾಸ್ಟಿಕ್ ಬಳಸಬೇಡಿ ಎಂದು ಹೇಳಿದರೂ ಅದರ ಬಳಕೆ ಕಡಿಮೆಯಾಗಿಲ್ಲ. ನಿಷೇಧ ನಿಯಮ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ. ಪ್ಲಾಸ್ಟಿಕ್‌ನಿಂದ ಕ್ಯಾನ್ಸರ್‌ ಸೇರಿದಂತೆ ಅನೇಕ ಕಾಯಿಲೆಗಳು ಬರುತ್ತವೆ. ಪರಿಸರವೂ ಹಾಳಾಗುತ್ತದೆ. 

–ಭಾಗ್ಯರಾಜ್, ಕೊಳ್ಳೇಗಾಲ

--

ಪ್ಲಾಸ್ಟಿಕ್‌ ವೈಜ್ಞಾನಿಕ ನಿರ್ವಹಣೆ

ನಗರ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್‌ಅನ್ನು ಒಂದು ಕಡೆ ಶೇಖರಿಸಿ ಇಡಲಾಗುತ್ತಿದೆ. ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಪ್ಲಾಸ್ಟಿಕ್‌ ಪುನರ್‌ಬಳಕೆ ಮಾಡುವ ಕಾರ್ಖಾನೆಗೆ ಕಳುಹಿಸಬೇಕು. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅನುಮತಿ ಸಿಕ್ಕಿದ ತಕ್ಷಣ ಕಳುಹಿಸಲಾಗುವುದು. ಉಳಿದಂತೆ, ನಿಷೇಧಿತ ಪ್ಲಾಸ್ಟಿಕ್‌ ಬಳಕೆಯ ಮೇಲೆ ನಿಗಾ ಇಡಲಾಗಿದ್ದು, ನಿಯಮಿತವಾಗಿ ಕಾರ್ಯಾಚರಣೆ ನಡೆಸಿ, ಪ್ಲಾಸ್ಟಿಕ್‌ ಮಾರಾಟ ಮಾಡುವ, ಬಳಸುವ ಅಂಗಡಿಗಳಿಗೆ ದಂಡ ವಿಧಿಸಲಾಗುತ್ತಿದೆ. 

– ಎಸ್‌.ವಿ.ರಾಮದಾಸ್‌, ಚಾಮರಾಜನಗರ ನಗರಸಭಾ ಆಯುಕ್ತ

ಉತ್ತಮ ನಿರ್ವಹಣೆ

ಯಳಂದೂರು ಪಟ್ಟಣದ ಅನುಪಯುಕ್ತ ತ್ಯಾಜ್ಯವನ್ನು ಕೊಳ್ಳೇಗಾಲ ಪಟ್ಟಣಕ್ಕೆ ಸಾಗಿಸಿ ಮರುಬಳಕೆ ಮಾಡಲಾಗುತ್ತಿದೆ. ಕುದೇರು ಬಳಿ ನಾಲ್ಕು ಎಕರೆ ಭೂಮಿಯನ್ನು ಕೊಂಡು ಅನುಪಯುಕ್ತ ತ್ಯಾಜ್ಯವನ್ನು ಸಂಸ್ಕರಿಸಲು ಯೋಜನೆ ರೂಪಿಸಲಾಗಿದೆ. ವೈ.ಕೆ.ಮೋಳೆ ರಸ್ತೆ ಬಳಿ ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿಸುವತ್ತ ಚಿತ್ತ ಹರಿಸಲಾಗಿದೆ.

–ಮಲ್ಲೇಶ್, ಮುಖ್ಯಾಧಿಕಾರಿ,ಯಳಂದೂರು ಪಟ್ಟಣ ಪಂಚಾಯಿತಿ

ನಿಷೇಧಿತ ಪ್ಲಾಸ್ಟಿಕ್‌ ಬಳಸಿದರೆ ದಂಡ

ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಸುತ್ತಿರುವ, ಮಾರುತ್ತಿರುವ ಅಂಗಡಿಗಳ ಮೇಲೆ ದಾಳಿ ನಡೆಸಿ ದಂಡ ವಿಧಿಸಲಾಗುತ್ತಿದೆ. ಇದನ್ನು ಮೀರಿ ಪ್ಲಾಸ್ಟಿಕ್ ಮಾರಾಟ ಮಾಡಿದರೆ ಅಂಥ ಅಂಗಡಿಗಳ ಪರವಾನಿಗೆ ರದ್ದುಪಡಿಸಲಾಗುವುದು.

–ಮೂರ್ತಿ, ಮುಖ್ಯಾಧಿಕಾರಿ, ಹನೂರು ಪಟ್ಟಣ ಪಂಚಾಯಿತಿ

 

ನಿರ್ವಹಣೆ: ಸೂರ್ಯನಾರಾಯಣ ವಿ.

ಪೂರಕ ಮಾಹಿತಿ: ನಾ.ಮಂಜುನಾಥ
ಸ್ವಾಮಿ, ಅವಿನ್‌ ಪ್ರಕಾಶ್‌ ವಿ., ಬಿ.ಬಸರವಾಜು, ಎಂ.ಮಲ್ಲೇಶ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.