ಭಾನುವಾರ, ಮೇ 22, 2022
21 °C
ಚಾಮರಾಜನಗರ: ಅಮೃತಭೂಮಿಯಲ್ಲಿ ಪ್ರೊ.ಎಂಡಿಎನ್‌ 85ನೇ ಜನ್ಮ ದಿನಾಚರಣೆ

ಫೆಬ್ರುವರಿ 13ರಂದು ವಿಷಮುಕ್ತ ಕರ್ನಾಟಕ ಅಭಿಯಾನಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 85ನೇ ಜನ್ಮ ದಿನದಂದು (ಫೆ.13) ತಾಲ್ಲೂಕಿನ ಹೊಂಡರಬಾಳುವಿನಲ್ಲಿರುವ ಅಮೃತಭೂಮಿ ಅಂತರರಾಷ್ಟ್ರೀಯ ಸುಸ್ಥಿರ ಕೃಷಿ ಅಭಿವೃದ್ಧಿ ಕೇಂದ್ರದಲ್ಲಿ ‘ವಿಷಮುಕ್ತ ಕರ್ನಾಟಕ’ ಅಭಿಯಾನಕ್ಕೆ ಚಾಲನೆ ಸಿಗಲಿದೆ.

ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ಅಮೃತಭೂಮಿ ಅಂತರರಾಷ್ಟ್ರೀಯ ಸುಸ್ಥಿರ ಅಭಿವೃದ್ಧಿ ಕೇಂದ್ರವು ಜಂಟಿಯಾಗಿ ಪ್ರೊ.ಎಂಡಿಎನ್‌ ಅವರ ಜನ್ಮ ದಿನಾಚರಣೆಯ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. 

ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಅವರು ಬುಧವಾರ ಪ‍ತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಬಗ್ಗೆ ಮಾಹಿತಿಗಳನ್ನು ನೀಡಿದರು. 

‘ರಾಜ್ಯದ ರೈತರನ್ನು ರಾಸಾಯನಿಕ ಮುಕ್ತ ಕೃಷಿಯಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸಲು ವಿಷಮುಕ್ತ ಕರ್ನಾಟಕ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಜಿಲ್ಲಾ ಮಟ್ಟದಲ್ಲಿ ‘ವಿಷಮುಕ್ತ ಚಾಮರಾಜನಗರ’ ಅಭಿಯಾನ ಜಾರಿಯಲ್ಲಿದ್ದು, ಜಿಲ್ಲೆಯ ರೈತರನ್ನು ನೈಸರ್ಗಿಕ ಕೃಷಿ ಮಾಡುವಂತೆ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ. ವಿಷಮುಕ್ತ ಚಾಮರಾಜನಗರದ ಆಂದೋಲನದ ಸದಸ್ಯತ್ವಕ್ಕೂ 13ರಂದು ಚಾಲನೆ ನೀಡಲಾಗುವುದು’ ಎಂದು ಹೇಳಿದರು. 

ರೈತರ ಕಂಪನಿ: ‘ಪ್ರೊ.ಎಂ.ಡಿ.ಎನ್‌. ಸ್ವಾಭಿಮಾನಿ ರೈತ ಉತ್ಪಾದಕ ಕಂಪನಿ–ಕರ್ನಾಟಕ ಎಂಬ ಕಂಪನಿಯನ್ನು ರೈತರಲ್ಲೆಲ್ಲರೂ ಸೇರಿ ಸ್ಥಾಪಿಸಲು ಮುಂದಾಗಿದ್ದು, ಅದರ ಉದ್ಘಾಟನೆ ನಡೆಯಲಿದೆ. ರೈತರು ತಾವು ಬೆಳೆದ ಬೆಳೆಗಳ ಮೌಲ್ಯವರ್ಧನೆ ಮಾಡಿ ಕಂಪನಿಯ ಅಡಿಯಲ್ಲಿ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ಗುರಿ ಹೊಂದಲಾಗಿದೆ’ ಎಂದು ಅವರು ಹೇಳಿದರು.  

‘ಈಗಾಗಲೇ ಚಾಮರಾಜನಗರದಲ್ಲಿ ನಮ್ದು ಬ್ರ್ಯಾಂಡ್‌ ಮಳಿಗೆ ತೆರೆಯಲಾಗಿದೆ. ಇದೇ ರೀತಿ ರಾಜ್ಯದಾದ್ಯಂತ ಮಳಿಗೆಗಳನ್ನು ತೆರೆಯಲು ಯೋಜನೆ ಹಾಕಿಕೊಂಡಿದ್ದೇವೆ. ರೈತರು ತಮ್ಮ ಉತ್ಪನ್ನಗಳನ್ನು ಈ ಮಳಿಗೆಗಳ ಮೂಲಕ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಿದ್ದಾರೆ’ ಎಂದರು.

ವಿಚಾರ ಸಂಕಿರಣ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾನೂನುಗಳಿಂದ ರೈತರಿಗೆ ಆಗುವ ತೊಂದರೆ ಹಾಗೂ ರೈತರೇ ಕಟ್ಟಬಹುದಾದ ಪರ್ಯಾಯಗಳ ಬಗ್ಗೆ ಕೃಷಿ ತಜ್ಞ ಕೆ.ಪಿ.ಸುರೇಶ ಅವರು ವಿಷಯ ಮಂಡಿಸಲಿದ್ದಾರೆ. ಉತ್ತರ ಭಾರತದಲ್ಲಿ ನಡೆಯುತ್ತಿರುವ  ರೈತ ಹೋರಾಟವನ್ನು ಉದ್ದಗಲಕ್ಕೂ ವಿಸ್ತರಿಸುವ ಬಗ್ಗೆ ಚರ್ಚೆಯೂ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಮುಖಂಡರಾದ ಮಾಡ್ರಹಳ್ಳಿ ಮಹದೇವಪ್ಪ, ಹೊನ್ನೂರು ಬಸವಣ್ಣ, ಕಡಬೂರು ಮಂಜುನಾಥ್‌ ಇದ್ದರು. 

ಎಸ್‌ಐ ಸಿದ್ದರಾಜನಾಯ್ಕಗೆ ಪ್ರೊ.ಎಂಡಿಎನ್‌ ಪ್ರತಿಷ್ಠಾನ ಪ್ರಶಸ್ತಿಗೆ  

ಪ್ರೊ.ಎಂಡಿಎನ್‌ ಪ್ರತಿಷ್ಠಾನ ಪ್ರಶಸ್ತಿಗೆ ಈ ವರ್ಷ ಚಾಮರಾಜನಗರ ಪಟ್ಟಣ ಠಾಣೆ ಅಪರಾಧ ವಿಭಾಗದ ಸಬ್‌ ಇನ್‌ಸ್ಪೆಕ್ಟರ್‌ ಸಿದ್ದರಾಜನಾಯ್ಕ ಅವರನ್ನು ಆಯ್ಕೆಮಾಡಲಾಗಿದೆ. 

‘ಸಿದ್ದರಾಜನಾಯ್ಕ ಅವರು ಪ್ರಾಮಾಣಿಕ ಅಧಿಕಾರಿ. ವೀರಪ್ಪನ್‌ ವಿರುದ್ಧದ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಗುಂಡೇಟು ತಿಂದಿದ್ದಾರೆ. ನಿವೃತ್ತಿಯ ಅಂಚಿನಲ್ಲಿದ್ದರೂ, ಕೋವಿಡ್‌ ಸಮಯದಲ್ಲಿ ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ. ಅವರನ್ನು ಈ ಬಾರಿಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ’ ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್‌ ಅವರು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು