ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಯಸಿಯೊಂದಿಗೆ ಯುವಕ ಆತ್ಮಹತ್ಯೆ ಪ್ರಕರಣ, ಬೆಚ್ಚಿ ಬಿದ್ದ ಮಾಂಬಳ್ಳಿ

Last Updated 15 ಆಗಸ್ಟ್ 2021, 0:57 IST
ಅಕ್ಷರ ಗಾತ್ರ

ಯಳಂದೂರು:ತಾಲ್ಲೂಕಿನ ಮಾಂಬಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದ, ಕಾರಿನಲ್ಲಿ ಪ್ರೇಯಸಿಯೊಂದಿಗೆ ಕುಳಿತು ಬೆಂಕಿ ಹಾಕಿಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇಡೀ ಗ್ರಾಮವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ.

ಯುವಕ ಶ್ರೀನಿವಾಸ್‌, ಯುವತಿ ಕಾಂಚನಳನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಬೆಂಕಿ ಹಚ್ಚಿಕೊಂಡಿದ್ದನೇ ಅಥವಾ ಇಬ್ಬರೂ ಪರಸ್ಪರ ಸಮ್ಮತಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಶ್ರೀನಿವಾಸ್‌, ಕಾಂಚನಳನ್ನು ಪ್ರೀತಿಸುತ್ತಿದ್ದ. ಎರಡು ಮೂರು ಬಾರಿ ಅವರ ಮನೆಗೆ ಹೋಗಿ ತನಗೆ ಮದುವೆ ಮಾಡಿಸುವಂತೆ ಬೇಡಿಕೆ ಇಟ್ಟಿದ್ದ. ಇದನ್ನು ಆಕೆಯ ಪೋಷಕರು ನಿರಾಕರಿಸಿದ್ದರು ಎಂಬುದು ವಿಚಾರಣೆಯ ಸಂದರ್ಭದಲ್ಲಿ ಪೊಲೀಸರಿಗೆ ಗೊತ್ತಾಗಿದೆ. ಆ ಬಳಿಕಕಾಂಚನ, ಶ್ರೀನಿವಾಸ್‌ನಿಂದ ದೂರ ಇದ್ದಳು ಎಂದು ಮನೆಯವರು, ಸ್ನೇಹಿತರು ಹೇಳುತ್ತಿದ್ದಾರೆ.

ಹಾಗಿದ್ದರೆ, ಶ್ರೀನಿವಾಸ್‌ ಕರೆದಾಗ ಯಾಕೆ ಹೋದಳು? ಒಂದು ವೇಳೆ ಶ್ರೀನಿವಾಸ್‌ ಆಕೆಯನ್ನು ಬಲವಂತವಾಗಿ ಕಾರಿನಲ್ಲಿ ಕುಳಿತುಕೊಳ್ಳಲು ಯತ್ನಿಸಿದ್ದರೆ ಆಕೆ ಪ್ರತಿರೋಧ ತೋರಲಿಲ್ಲವೇ? ಇದು ಯಾರ ಗಮನಕ್ಕೂ ಬರಲಿಲ್ಲವೇ ಎಂಬೆಲ್ಲ ಪ್ರಶ್ನೆಗಳು ಉದ್ಭವವಾಗಿವೆ.

ಜಿಲ್ಲಾಸ್ಪತ್ರೆಯಲ್ಲಿ ನರ್ಸ್‌ ಆಗಿದ್ದ ಕಾಂಚನ ಗುರುವಾರ ರಾತ್ರಿ ಪಾಳಿಯಲ್ಲಿದ್ದಳು. ಗುರುವಾರ ಮನೆ ಬಿಟ್ಟವಳು ಮನೆಗೆ ಹೋಗಿಲ್ಲ.ಗುರುವಾರ ಆಕೆಗೆ ಕರೆ ಮಾಡಿದ್ದ ಶ್ರೀನಿವಾಸ್‌, ಮಾತನಾಡಲು ಶುಕ್ರವಾರ ಸಿಗುವಂತೆ ಹೇಳಿದ್ದ ಎಂದು ಗೊತ್ತಾಗಿದೆ.

ಚಾಮರಾಜನಗರದಿಂದ ಆತನೇ ಆಕೆಯನ್ನು ಕಾರಿನಲ್ಲಿ ಕರೆದುಕೊಂಡು ಬಂದಿದ್ದ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಕಾಂಚನ ಚಾಮರಾಜನಗರದಿಂದ ಬಸ್‌ನಲ್ಲಿ ಮಾಂಬಳ್ಳಿಗೆ ಬಂದಿದ್ದಳು. ಶ್ರೀನಿವಾಸ್‌ ಆಕೆಯನ್ನು ಕಾರಿನಲ್ಲಿ ಹಿಂಬಾಲಿಸಿದ್ದ. ಮಾಂಬಳ್ಳಿಯಲ್ಲಿ ಆಕೆ ಬಸ್‌ ಇಳಿಯುತ್ತಿದ್ದಂತೆಯೇ ಕಾರಿಗೆ ಬಲವಂತವಾಗಿ ಹತ್ತಿಸಿದ್ದ ಎಂಬ ಮಾತುಗಳು ಕೇಳಿ ಬರುತ್ತಿದೆ.

ತನಿಖೆ ಪ್ರಗತಿಯಲ್ಲಿ ಇದೆ: ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅಗರ ಮಾಂಬಳ್ಳಿ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಎಚ್‌.ಬಿ.ಮಾದೇಗೌಡ ಅವರು, ‘ಶ್ರೀನಿವಾಸ್ ಕಾಂಚನಳನ್ನು ಕಾರಿನಲ್ಲಿ ಕೂರಿಸಿಕೊಂಡು ಬಂದಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈತ ಮಾಂಬಳ್ಳಿಯಿಂದ ಚಾಮರಾಜನಗರಕ್ಕೆ ತೆರಳಿರುವ ಬಗ್ಗೆಸಿಸಿಟಿವಿ ಕ್ಯಾಮೆರಾ ವಿಡಿಯೊ ಸಂಗ್ರಹಿಸಲಾಗುತ್ತಿದೆ. ಕಾಂಚನಳೊಡನೆ ಮೊಬೈಲ್‌ನಲ್ಲಿ
ಸಂವಹನ ನಡೆಸಿರುವ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದು, ತನಿಖೆ ಪ್ರಗತಿಯಲ್ಲಿ ಇದೆ’ ಎಂದರು.

ಈ ಮಧ್ಯೆ, ಗುರುತು ಸಿಗದ ರೀತಿಯಲ್ಲಿ ಇಬ್ಬರ ದೇಹಗಳೂ ಸುಟ್ಟು ಕರಕಲು ಆಗಿರುವುದರಿಂದ ಮೃತಪಟ್ಟವರು ಶ್ರೀನಿವಾಸ್‌ ಮತ್ತು ಕಾಂಚನ ಹೌದೋ ಅಲ್ಲವೋ ಎಂಬುದನ್ನು ದೃಢಪಡಿಸಲು ಡಿಎನ್‌ಎ ಪರೀಕ್ಷೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಪ್ರೀತಿಯಲ್ಲಿ ಹುಚ್ಚನಾಗಿದ್ದ ಶ್ರೀನಿವಾಸ್‌

ಕಾಂಚನಳನ್ನು ಮನಸಾರೆ ಪ್ರೀತಿಸುತ್ತಿದ್ದ ಶ್ರೀನಿವಾಸ್‌, ಆಕೆಗೆ ಇಷ್ಟವಿಲ್ಲ ಎಂದು ಗೊತ್ತಾದಾಗ ಮನನೊಂದಿದ್ದ ಎಂದು ಹೇಳುತ್ತಾರೆ ಆತನ ಸಹಪಾಠಿಗಳು.

ಮೂರು ತಿಂಗಳ ಹಿಂದೆ ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಲು ಯತ್ನಿಸಿದ್ದ. ಅದೃಷ್ಟವಶಾತ್‌ ಬದುಕುಳಿದಿದ್ದ.

ಈಗ್ಗೆ 15ದಿನಗಳಿಂದ ಮತ್ತೆ ಕಾಂಚನಳನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದ ಎಂದು ತಿಳಿದು ಬಂದಿದೆ. ಕೆಲವು ದಿನಗಳಿಂದಸಾಯುವ ಮಾತನಾಡುತ್ತಿದ್ದ. ಕ್ಯಾನಲ್ಲಿ ಸೀಮೆಎಣ್ಣೆ ತುಂಬಿಕೊಂಡು ತಿರುಗುತ್ತಿದ್ದ, ಈ ಹಿಂದೆಯೇ ಈತ ಆತ್ಮಹತ್ಯೆಗೆ ಪ್ರಯತ್ನಪಟ್ಟಿದ್ದರಿಂದ ಯಾರು ಈತನ ಮಾತನ್ನು ನಂಬಿರಲಿಲ್ಲ ಎಂದು ಹೇಳುತ್ತಾರೆ ಆತನ ಗೆಳೆಯರು.

ಕುಟುಂಬದ ಆಧಾರ: ಕೋವಿಡ್‌ ಮೊದಲನೇ ಅಲೆಯ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ನರ್ಸ್‌ ಆಗಿ ನೇಮಕಗೊಂಡಿದ್ದ ಕಾಂಚನ ಕುಟುಂಬಕ್ಕೆ ಆಧಾರವಾಗಿದ್ದರು. ಆಕೆಯ ಒಬ್ಬಳು ತಂಗಿಗೆ ಮದುವೆಯಾಗಿತ್ತು. ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಬ್ಬರು ತಂಗಿ ಹಾಗೂ ತಮ್ಮನ್ನು ಸಾಕುವ ಹೊಣೆಯನ್ನು ಆಕೆ ಹೊತ್ತಿದ್ದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT