ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3ನೇ ಪತ್ನಿಯನ್ನೇ ಕೊಂದು ಅಪಘಾತದ ಕಥೆ ಕಟ್ಟಿದ್ದ ಆರೋಪಿ!

2018ರ ಮೇ 26ರಂದು ನಡೆದಿದ್ದ ಸಾವಿನ ಪ್ರಕರಣ, 8 ತಿಂಗಳ ಬಳಿಕ ಪ್ರಕರಣ ಭೇದಿಸಿದ ಪೊಲೀಸರು
Last Updated 17 ಜನವರಿ 2020, 15:28 IST
ಅಕ್ಷರ ಗಾತ್ರ

ಚಾಮರಾಜನಗರ: ರಾಮಸಮುದ್ರದ ಬಳಿ 2019ರ ಮೇ 25ರಂದು ನಡೆದಿದ್ದ 23 ವರ್ಷದ ಯುವತಿಯ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಎಂಟು ತಿಂಗಳ ಬಳಿಕ ಭೇದಿಸಿರುವ ಪಟ್ಟಣ ಠಾಣೆಯ ಪೊಲೀಸರು, ಆರೋಪಿ ಸಿದ್ದರಾಜು ಎಂಬುವವರನ್ನು ಬಂಧಿಸಿದ್ದಾರೆ.

ಯುವತಿಯು ಹೊಂಗನೂರು ಗ್ರಾಮದ ಸಿದ್ದರಾಜುನ (42) ಮೂರನೇ ಪತ್ನಿ. ಆಕೆಯನ್ನು ಹತ್ಯೆ ಮಾಡಿ, ಅದನ್ನು ಅಪಘಾತವೆಂದು ಬಿಂಬಿಸಲು ಯಶಸ್ವಿಯಾಗಿದ್ದರು. ಅನುಮಾನಗೊಂಡು ತೀವ್ರ ತನಿಖೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ.

ರಾಮಸಮುದ್ರದ ಬೂದಿತಿಟ್ಟು ಕ್ರಾಸ್‌ ಬಳಿ ಅಪಘಾತದಿಂದ ಮಸಣಾಪುರ ಗ್ರಾಮದ ಮಮತಾ ಎಂಬ ಯುವತಿ ಮೃತಪ‍ಟ್ಟಿದ್ದಾಳೆ ಎಂದು ಹೇಳಲಾಗಿತ್ತು. ಆಟೊ ಚಾಲಕರಾಗಿದ್ದ ಸಿದ್ದರಾಜು ಅವರು ಗಾಯಗೊಂಡಿದ್ದ ಮಮತಾ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಹೋಗಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯುವಾಗ ಮಮತಾ ಮೃತಪ‍ಟ್ಟಿದ್ದರು. ಆಸ್ಪತ್ರೆಗೆ ದಾಖಲಿಸಿದ ನಂತರ ಸಿದ್ದರಾಜು ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡಿದ್ದರು. ಅಂದು ಸಂಚಾರ ಪೊಲೀಸರು ಅಪಘಾತ ಪ್ರಕರಣ ದಾಖಲಿಸಿದ್ದರು.

ಆನಂದಕುಮಾರ್‌ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕರಣದ ಬಗ್ಗೆ ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ: ‘ಸಿದ್ದರಾಜು ಮತ್ತು ಮಮತಾ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಘಟನೆಗೂ ಏಳು ತಿಂಗಳ ಹಿಂದೆ ಮಮತಾ ಪೋಷಕರು ಇನ್ನೊಬ್ಬರೊಂದಿಗೆ ಮಗಳ ಮದುವೆ ನಿಶ್ಚಯಿಸಿದ್ದರು. ಇದನ್ನು ತಿಳಿದು ಸಿದ್ದರಾಜು ಮದುವೆಯನ್ನು ತಪ್ಪಿಸಿದ್ದರು. ಈಗಾಗಲೇ ಎರಡು ಮದುವೆಯಾಗಿದ್ದ ಆರೋಪಿ, 2018ರ ಡಿಸೆಂಬರ್‌ನಲ್ಲಿ ಮಮತಾಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಅಲ್ಲಿ ದೇವಸ್ಥಾನದಲ್ಲಿ ತಾಳಿ ಕಟ್ಟಿ, ಎಲೆಕ್ಟ್ರಾನಿಕ್‌ ಸಿಟಿಯ ಹೆಬ್ಬಗೋಡಿಯಲ್ಲಿ ಮನೆ ಮಾಡಿ ಇರಿಸಿ ಗಾರ್ಮೆಂಟ್ಸ್‌ನಲ್ಲಿ ಕೆಲಸಕ್ಕೆ ಸೇರಿಸಿದ್ದ. ಅಲ್ಲಿಂದ ನಂತರಕೊಡಿಗೇಹಳ್ಳಿಯರಲ್ಲಿರುವ ಗೊಲ್ಲರಹಟ್ಟಿಯಲ್ಲಿ ತನ್ನ ಅತ್ತೆ ಮನೆಯಲ್ಲಿ ಇರಿಸಿದ್ದ. ಕೆಲವು ಸಮಯದ ನಂತರ ಚಾಮರಾಜನಗರಕ್ಕೆ ಕರೆದುಕೊಂಡು ಬಂದು ಅಂಬೇಡ್ಕರ್‌ ಬೀದಿಯಲ್ಲಿ ಬಾಡಿಗೆ ಮನೆ ಮಾಡಿ ಇರಿಸಿ, ಉತ್ತುವಳ್ಳಿ ಗ್ರಾಮದಲ್ಲಿರುವ ಗಾರ್ಮೆಂಟ್ಸ್‌ಗೆ ಸೇರಿಸಿದ್ದ’ ಎಂದು ಹೇಳಿದರು.

‘ಮನೆಯಲ್ಲಿ ಮಮತಾ ಒಬ್ಬಳೆ ಇರುತ್ತಿದ್ದಳು. ಸಿದ್ದರಾಜು ಹೊಂಗನೂರಿಗೆ ಹೋಗುತ್ತಿದ್ದರು. ಇದಕ್ಕೆ ಒಪ್ಪದ ಮಮತಾ ತನ್ನ ಜೊತೆಗೆ ಇರುವಂತೆ, ಇಲ್ಲದಿದ್ದರೆ ಊರಿಗೆ ಕರೆದುಕೊಂಡು ಹೋಗಿ ಎಂದು ಒತ್ತಾಯಿಸುತ್ತಿದ್ದಳು. ಈ ವಿಚಾರವಾಗಿ ದಂಪತಿ ನಡುವೆ ಗಲಾಟೆಯಾಗುತ್ತಿತ್ತು. ಜೊತೆಗೆ ಹಣಕಾಸಿನ ಸಮಸ್ಯೆಯೂ ಸಿದ್ದರಾಜುನನ್ನು ಬಾಧಿಸುತ್ತಿತ್ತು. ಈಕೆಯ ಸಹವಾಸ ಸಾಕು, ಏನಾದರೂ ಮಾಡಿಬಿಡಬೇಕು ನಿರ್ಧಾರ ಮಾಡಿದ್ದ ಸಿದ್ದರಾಜು ಮೇ 26ರಂದು ಅಪೆ ರಿಕ್ಷಾದಲ್ಲಿ ರಾಮಸಮುದ್ರ ರಸ್ತೆಯಲ್ಲಿ ಹೋಗುವಾಗ ಬಲ ಕಿವಿ ಹತ್ತಿರ ಕೈಯಿಂದ ಹೊಡೆದು, ರಿಕ್ಷಾದಿಂದ ಹೊರಗೆ ತಳ್ಳಿ ಹತ್ಯೆ ಮಾಡಿದ್ದರು. ವಿಚಾರಣೆ ವೇಳೆ ಅವರು ಇದನ್ನು ತಪ್ಪೊಪ್ಪಿಕೊಂಡಿದ್ದಾರೆ’ ಎಂದರು.

ಪಟ್ಟಣ ಠಾಣೆಯ ಇನ್‌ಸ್ಪೆಕ್ಟರ್‌ ಎನ್‌.ಸಿ.ನಾಗೇಗೌಡ ಅವರ ನೇತೃತ್ವದ ತಂಡ ಪ್ರಕರಣದ ತನಿಖೆಯನ್ನು ನಡೆಸಿ, ಆರೋಪಿಯನ್ನು ಬಂಧಿಸಲು ಯಶಸ್ವಿಯಾಗಿದೆ. ಎಎಸ್‌ಐ ಶಿವಸ್ವಾಮಿ, ಹೆಡ್‌ ಕಾನ್‌ಸ್ಟೆಬಲ್‌ ಮಹದೇವಸ್ವಾಮಿ, ಕಾನ್‌ಸ್ಟೆಬಲ್‌ಗಳಾದ ಚಿನ್ನಸ್ವಾಮಿ, ರವಿ ಜಿ.ಡಿ, ಸಹಾಯಕರಾದ ಶಿವಕುಮಾರ್‌, ಮಹೇಶ್‌, ಚಾಲಕ ಚಿನ್ನಸ್ವಾಮಿ ತಂಡದಲ್ಲಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಡಿವೈಎಸ್‌ಪಿ ಜೆ.ಮೋಹನ್‌, ಇನ್‌ಸ್ಪೆಕ್ಟರ್‌ ನಾಗೇಗೌಡ ಇದ್ದರು.

ಸಿದ್ದರಾಜುಗೆ ಸಹಾಯ: ತಂಗಿಯ ಬಂಧನ

‘ಪ್ರಕರಣದ ಬಗ್ಗೆ ಅನುಮಾನಗೊಂಡು ತೀವ್ರ ತನಿಖೆಗೆ ಒಳಪಡಿಸಿದಾಗ ಇದು ಕೊಲೆ ಎಂಬುದು ದೃಢಪಟ್ಟಿದೆ. ಸಿದ್ದರಾಜು ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ. ಇದೇ 13ರಂದು ಬೆಂಗಳೂರಿನ ತಾವರೆಕೆರೆ ಪೊಲೀಸ್‌ ಠಾಣಾ ವ್ಯಾಪ್ತಿಯ ಚೋಳನಾಯ್ಕನ ಹಳ್ಳಿಯಲ್ಲಿ ಪತ್ತೆ ಹಚ್ಚಿ ಕರೆದುಕೊಂಡು ಬರಲಾಯಿತು’ ಎಂದು ಆನಂದ್‌ ಕುಮಾರ್‌ ಹೇಳಿದರು.

‘ಸಿದ್ದರಾಜು ತಂಗಿ ಪುಷ್ಪಲತಾ ಎಂಬವರು ಆರೋಪಿಗೆ ತಲೆಮರೆಸಿಕೊಳ್ಳುವುದಕ್ಕೆ ಸಹಾಯ ಮಾಡಿದ್ದಾರೆ. ಹಣಕಾಸು ನೆರವು ನೀಡಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಹಾಗಾಗಿ, ಅವರನ್ನೂ ಬಂಧಿಸಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT