ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಎರಡು ಕೋಮುಗಳ ನಡುವೆ ಘರ್ಷಣೆ, ಪೊಲೀಸರಿಂದ ಲಾಠಿ ಚಾರ್ಜ್‌

Last Updated 3 ಸೆಪ್ಟೆಂಬರ್ 2022, 17:13 IST
ಅಕ್ಷರ ಗಾತ್ರ

ಚಾಮರಾಜನಗರ: ಸೈಕಲ್‌ ವೀಲಿಂಗ್‌ ವಿಚಾರವಾಗಿ ಎರಡು ಕೋಮುಗಳನಡುವೆ ಶನಿವಾರ ರಾತ್ರಿ ನಗರದಲ್ಲಿ ಘರ್ಷಣೆ ನಡೆದಿದೆ.

ತಕ್ಷಣವೇ ಮಧ್ಯಪ್ರವೇಶಿಸಿದ ಪೊಲೀಸರು ಲಾಠಿ ಚಾರ್ಜ್‌ ನಡೆಸಿ ಗುಂ‌ಪುಗಳನ್ನು ಚದುರಿಸಿದ್ದಾರೆ.

ನಗರದ ಸಂತೇಮರಹಳ್ಳಿ ವೃತ್ತದ ಬಳಿ ರಾತ್ರಿ 9.15ರ ಸುಮಾರಿಗೆ ಗಲಾಟೆ ನಡೆದಿದೆ. ಭಾರಿ ಸಂಖ್ಯೆಯಲ್ಲಿ ಸೇರಿದ್ದ ಎರಡೂ ಗುಂಪುಗಳು ಕೈ ಕೈ ಮಿಲಾಯಿಸಿವೆ. ಕೆಲವರು ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳ ಮೇಲೆ ಕಲ್ಲನ್ನೂ ತೂರಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ಘಟನೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್‌, ‘15 ವರ್ಷದ ಅನ್ಯಕೋಮಿನ ಹುಡುಗನೊಬ್ಬ ಸೈಕಲ್‌ ವೀಲಿಂಗ್‌ ಮಾಡುತ್ತಿರುವಾಗ ರಸ್ತೆಯಲ್ಲಿ ಹೋಗುತ್ತಿದ್ದ ಇನ್ನೊಂದು ಸಮುದಾಯದ ಯುವಕನಿಗೆ ತಾಗಿದೆ. ಇದನ್ನು ಪ್ರಶ್ನಿಸಿದ್ದ ಯುವಕ, ಹುಡುಗನನ್ನು ಗದರಿಸಿ‌ ಕೈಯಲ್ಲಿ ಹೊಡೆದು ಕಳಿಸಿದ್ದ. ಈ ವಿಚಾರವನ್ನು ಹುಡುಗ ತನ್ನಸಮುದಾಯವರಿಗೆ ಹೇಳಿದಾಗ ಅವರು ಗುಂಪು ಗೂಡಿಕೊಂಡು ಬಂದಿದ್ದಾರೆ. ಇವರೂ ಗುಂಪು ಸೇರಿದ್ದರು. ಈ ವೇಳೆ ಘರ್ಷಣೆಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸ್‌ ಸಿಬ್ಬಂದಿ ಗುಂಪನ್ನು ಚದುರಿಸಿದ್ದಾರೆ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ’ ಎಂದರು.

ನಗರದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು, ಘಟನೆಯ ಬಳಿಕ ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಸಿಬ್ಬಂದಿ ನಗರದಾದ್ಯಂತ ಗಸ್ತು ತಿರುಗುತ್ತಿದ್ದಾರೆ.

ಪೊಲೀಸ್‌ ಅಧಿಕಾರಿಗಳು ಎರಡೂ ಕಡೆಯ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದು, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT