ಗುರುವಾರ , ಜನವರಿ 30, 2020
18 °C
ಬೇಡಿಕೆ ಈಡೇರಿಕೆಗಾಗಿ ವಿವಿಧ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ, ತಾಲ್ಲೂಕು ಕೇಂದ್ರಗಳಲ್ಲೂ ರ‍್ಯಾಲಿ

ಚಾಮರಾಜನಗರ: ಪ್ರತಿಭಟನೆಗಷ್ಟೇ ಸೀಮಿತವಾದ ಮುಷ್ಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಧೋರಣೆ ಹಾಗೂ ಕನಿಷ್ಠ ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲೆಯಲ್ಲೂ ವಿವಿಧ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಆದರೆ, ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಮುಷ್ಕರಕ್ಕೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮುಷ್ಕರ ಪ್ರತಿಭಟನೆಗಷ್ಟೇ ಸೀಮಿತವಾಗಿತ್ತು. ಜನಜೀವನ ಎಂದಿನಂತೆಯೇ ಇತ್ತು. ಸರ್ಕಾರಿ ಕಚೇರಿಗಳು, ಬ್ಯಾಂಕುಗಳು ಹಾಗೂ ಅಂಗಡಿ ಮುಂಗಟ್ಟುಗಳೆಲ್ಲ ತೆರೆದಿದ್ದವು. 

ಪ್ರತಿಭಟನಾ ರ‍್ಯಾಲಿ: ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಶಾಖೆ, ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ, ಸೆಂಟರ್‌ ಆಫ್‌ ಟ್ರೇಡ್ ಯೂನಿಯನ್‌, ಮಧ್ಯಾಹ್ನದ ಬಿಸಿಯೂಟ ಯೋಜನೆಯ ನೌಕರ ಸಂಘ, ಕರ್ನಾಟಕ ಅಕ್ಷರ ದಾಸೋಹ ನೌಕರರ ಸಂಘ ಹಾಗೂ ಗ್ರಾಮ ಪಂಚಾಯಿತಿ ನೌಕರರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನಾ ರ‍್ಯಾಲಿ ನಡೆಸಿದರು. 

ನಗರದ ಚಾಮರಾಜೇಶ್ವರಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಆರಂಭಿಸಿದ ನೂರಾರು ಕಾರ್ಯಕರ್ತರು ಭುವನೇಶ್ವರಿ ವೃತ್ತದಿಂದ ಬಿ. ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ತಾಲ್ಲೂಕು ಕಚೇರಿಗೆ ತೆರಳಿ ಕಚೇರಿ ಮುಂಭಾಗದಲ್ಲಿ ಧರಣಿ ಕುಳಿತು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. 

‘25 ಮತ್ತು 46ನೇ ಕಾರ್ಮಿಕ ಸಮ್ಮೇಳನದ ಶಿಫಾರಸ್ಸುಗಳಂತೆ ಕನಿಷ್ಟ ಕೂಲಿ ತಿಂಗಳಿಗೆ ₹ 21 ಸಾವಿರ ನಿಗದಿ ಮಾಡಬೇಕು. ಸರ್ಕಾರಿ ಸಂಸ್ಥೆಗಳು ಹಾಗೂ ಇಲಾಖೆಗಳನ್ನು ಖಾಸಗೀಕರಣಗೊಳಿಸಬಾರದು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು. 

‘ಅಂಗನವಾಡಿ ಕೇಂದ್ರದಲ್ಲಿಯೇ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸಬೇಕು. ಮಾತೃಪೂರ್ಣ ಯೋಜನೆ ಯಶಸ್ಸಿಗಾಗಿ ಹೆಚ್ಚಿನ ಸಹಾಯಕಿಯರನ್ನು ನೇಮಿಸಬೇಕು. ಅಂಗನವಾಡಿ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಬೇಕು’ ಎಂದು ಒತ್ತಾಯಿಸಿದರು. 

‘ಸಾಮಾಜಿಕ ಭದ್ರತೆಯ ಸೌಲಭ್ಯವಾದ ನಿವೃತ್ತಿ ವೇತನ ಸೇರಿದಂತೆ ಪ್ರತಿ ತಿಂಗಳು ₹ 10 ಸಾವಿರ ನೀಡಬೇಕು. ಐಸಿಡಿಎಸ್ ಯೋಜನೆಯನ್ನು ಖಾಸಗೀಕರಣಗೊಳಿಸಬಾರದು. ಪ್ರತಿವರ್ಷದ ಬಜೆಟ್‌ನಲ್ಲಿ ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಸಮರ್ಪಕ ಅನುದಾನ ನೀಡಬೇಕು. ಕಾರ್ಮಿಕ ಕಾಯ್ದೆ ತಿದ್ದುಪಡಿ ಮತ್ತು ಕ್ರೋಡೀಕರಣ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

‘ಅಕ್ಷರ ದಾಸೋಹ ನೌಕರರಿಗೆ ಶಾಸನಬದ್ಧ ಕನಿಷ್ಠ ಕೂಲಿ, ನಿವೃತ್ತಿ ವೇತನಕ್ಕೆ ಮತ್ತು ಡಿ ಗ್ರೂಪ್‌ ನೌಕರರೆಂದು ಪರಿಗಣಿಸಬೇಕು. ಅಕ್ಷರ ದಾಸೋಹ ಯೋಜನೆಯನ್ನು ಯಾವುದೇ ಸಂಘ, ಸಂಸ್ಥೆಗಳಿಗೆ ನೀಡಿ ಖಾಸಗೀಕರಣಗೊಳಿಸಬಾರದು. ಎಲ್ಲ ನೌಕರರನ್ನು ಕಾಯಂ ಮಾಡಬೇಕು. ಬೆಲೆ ಏರಿಕೆಗೆ ನಿಯಂತ್ರಣ ಏರಬೇಕು. ಜೀವನಕ್ಕೆ ಅವಶ್ಯಕವಿರುವ ವಸ್ತುಗಳನ್ನು ಸಾರ್ವಜನಿಕ ಪಡಿತರ ಮೂಲಕ ವಿತರಿಸುವ ವ್ಯವಸ್ಥೆ ಜಾರಿ ಮಾಡಬೇಕು’ ಎಂದು ಒತ್ತಾಯಿಸಿದರು. 

ಪ್ರತಿಭಟನೆಯಲ್ಲಿ ಅಂಗನವಾಡಿ ನೌಕಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಸುಜಾತಾ, ತಾಲ್ಲೂಕು ಅಧ್ಯಕ್ಷೆ ರೇವಮ್ಮ, ಕಾರ್ಯದರ್ಶಿ ಷಾಹಿದಾ ಬಾನು, ಖಜಾಂಚಿ ಕೆ.ಪಿ.ಯಶೋದರಮ್ಮ, ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ತಾಲ್ಲೂಕು ಅಧ್ಯಕ್ಷ ಸುರೇಶ್, ಅಕ್ಷರ ದಾಸೋಹ ಸಮಿತಿಯ ಜಿಲ್ಲಾ ಅಧ್ಯಕ್ಷೆ ಶಿವಮ್ಮ, ಪ್ರಧಾನ ಕಾರ್ಯದರ್ಶಿ ಪದ್ಮ, ಉಪಾಧ್ಯಕ್ಷಡೆ ಸರಸ್ವತಿ, ಕಾರ್ಯದರ್ಶಿ ತಾರಾಕುಮಾರಿ, ನಾಗಮಣಿ, ಪುಷ್ಪ, ಮತ್ತಿತರರು ಭಾಗವಹಿಸಿದ್ದರು.  

ತಹಶೀಲ್ದಾರ್‌ ಇಲ್ಲದುದಕ್ಕೆ ಆಕ್ಷೇಪ

ಪ್ರತಿಭಟನನಿರತರು ಮನವಿಯನ್ನು ತಹಶೀಲ್ದಾರ್‌ ಮಹೇಶ್‌ ಅವರಿಗೆ ನೀಡಲು ಬಯಸಿದ್ದರು. ಆದರೆ, ಈ ಸಂದರ್ಭದಲ್ಲಿ ತಹಶೀಲ್ದಾರ್‌ ಅವರು ಇರಲಿಲ್ಲ. ಮನವಿ ಪಡೆಯಲು ಉಪ ತಹಶೀಲ್ದಾರ್ ತಬಸೂಮ್‌ ಅವರು ಬಂದರು. 

ಇದರಿಂದ ಅಸಮಾಧಾನ ಕಾರ್ಮಿಕ ಸಂಘಟನೆಗಳ ಮುಖಂಡರು, ತಹಶೀಲ್ದಾರ್‌ ಅವರಿಗೆ ಮೊದಲೇ ತಿಳಿಸಿದ್ದೆವು. ಆದರೂ ಅವರು ಇಲ್ಲ. ನಮ್ಮ ಪ್ರತಿಭಟನೆಗೆ ಬೆಲೆಯೇ ಇಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಜಿಲ್ಲಾ ಉಸ್ತುವಾರಿ ಸಚಿವರು ಬಂದಿರುವುದರಿಂದ ತಹಶೀಲ್ದಾರ್‌ ಅವರು ಹೋಗಿದ್ದಾರೆ ಎಂದು ತಬಸೂಮ್‌ ಹಾಗೂ ಇತರರು ಸಮಾಧಾನಪಡಿಸಲು ಯತ್ನಿಸಿದರು. 

ಕೊನೆಗೆ ತಬಸೂಮ್‌ ಅವರೇ ಮನವಿ ಪತ್ರವನ್ನು ಸ್ವೀಕರಿಸಿದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು