ಗುರುವಾರ , ಏಪ್ರಿಲ್ 15, 2021
24 °C

ಪೋಸ್ಟ್ ಪೇಮೆಂಟ್ ಬ್ಯಾಂಕ್ ಮಹಾಮೇಳ ಮಾರ್ಚ್ 1ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಅಂಚೆ ಇಲಾಖೆ ನಂಜನಗೂಡು ವಿಭಾಗವು ಭಾನುವಾರದಿಂದ (ಮಾರ್ಚ್ 1)  10ರವರೆಗೆ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕಿನ ವ್ಯವಹಾರಗಳ ಮಹಾಮೇಳವನ್ನು ಏರ್ಪಡಿಸಿದೆ.

ಚಾಮರಾಜನಗರ, ಗುಂಡ್ಲುಪೇಟೆ, ಹನೂರು, ಕೊಳ್ಳೇಗಾಲ ಹಾಗೂ ಯಳಂದೂರು ತಾಲ್ಲೂಕುಗಳ ವ್ಯಾಪ್ತಿಗೆ ಬರುವ ಎಲ್ಲಾ ಅಂಚೆ ಕಚೇರಿಗಳಲ್ಲಿ ಮಹಾಮೇಳ ಹಮ್ಮಿಕೊಳ್ಳಲಾಗಿದೆ. ಈ ಮೇಳದಲ್ಲಿ ವಿವಿಧ ಸೇವೆಗಳ ಸೌಲಭ್ಯವನ್ನು ಸಾರ್ವಜನಿಕರು ಪಡೆಯಬಹುದು.

ಆಧಾರ್ ಜೋಡಣೆಗೊಂಡಿರುವ ಯಾವುದೇ ಬ್ಯಾಂಕ್ ಖಾತೆಯಿಂದ ಹಣವನ್ನು ಸಮೀಪದ ಅಂಚೆ ಕಚೇರಿಯಿಂದ ಅಥವಾ ಮನೆ ಬಾಗಿಲಿಗೆ ಬರುವ ಪೋಸ್ಟ್‌ ಮ್ಯಾನ್‌ ಮೂಲಕ ಬೆರಳಚ್ಚಿನ ದೃಢೀಕರಣದ ಮೂಲಕ ಪಡೆಯಬಹುದು. ಸರ್ಕಾರದ ಬೇರೆಬೇರೆ ಇಲಾಖೆಗಳಿಂದ ದೊರಕುವ ಸಹಾಯಧನ, ವೃದ್ಧಾಪ್ಯ, ಅಂಗವಿಕಲ ಹಾಗೂ ವಿಧವಾ ವೇತನ ಇತ್ಯಾದಿಗಳ ಅರ್ಹ ಫಲಾನುಭವಿಗಳು ಹಣ ಪಡೆಯಲು ದೂರದ ಬ್ಯಾಂಕ್‌ಗೆ ಹೋಗುವ ಸಮಸ್ಯೆ ಈ ಸೇವೆಯಿಂದ ಇರುವುದಿಲ್ಲ.

ವ್ಯವಹಾರವು ಸಂಪೂರ್ಣ ಕಾಗದ ರಹಿತವಾಗಿದ್ದು, ಯಾವುದೇ ಸಹಿ ಅಥವಾ ದಾಖಲೆಗಳ ಪ್ರತಿ ನೀಡಬೇಕಾಗಿರುವುದಿಲ್ಲ. ಮನೆಯಿಂದಲೇ ವಿದ್ಯುತ್ ಬಿಲ್ ಪಾವತಿ, ಡಿಟಿಎಚ್ ರೀಚಾರ್ಜ್, ಮೊಬೈಲ್ ರೀಚಾರ್ಜ್ ಬಿಲ್ ಪಾವತಿ ಮಾಡಬಹುದು. ಬೇರೆ ಬ್ಯಾಂಕ್‌ಗಳಿಂದ ಹಣ ಕಳುಹಿಸಬಹುದು ಹಾಗೂ ಇತರೆ ಬ್ಯಾಂಕುಗಳಿಂದ ಹಣವನ್ನು ಅಂಚೆ ಖಾತೆಗೆ ಜಮೆ ಮಾಡಿಕೊಳ್ಳಬಹುದು.

ಅಂಚೆ ಉಳಿತಾಯ ಖಾತೆಯೊಂದಿಗೆ ಜೋಡಿಸಿ ಅದಕ್ಕೆ ಹಣ ಹಾಕುವ ಅಥವಾ ಹಣ ತೆಗೆಯುವ ಸೌಲಭ್ಯ ಸಹ ಲಭ್ಯವಿದೆ. ಆರ್ ಡಿ, ಪಿಪಿಎಫ್, ಸುಕನ್ಯಾ ಅಭಿವೃದ್ಧಿ ಖಾತೆಗಳಿಗೆ ಮನೆಯಿಂದಲೇ ಹಣ ಜಮಾ ಮಾಡಬಹುದು.

ಸಾರ್ವಜನಿಕರು ಹತ್ತಿರದ ಅಂಚೆ ಕಚೇರಿಗಳಿಗೆ ತಾವು ಉಪಯೋಗಿಸುತ್ತಿರುವ ಮೊಬೈಲ್‌ನೊಂದಿಗೆ ಭೇಟಿ ನೀಡಿ ಅಥವಾ ಪೋಸ್ಟ್‌ ಮ್ಯಾನ್‌ ಮೂಲಕ ಈ ಖಾತೆಗಳನ್ನು ತೆರೆದು  ಡಿಜಿಟಲ್ ಬ್ಯಾಂಕ್ ಸೌಲಭ್ಯಗಳನ್ನು ಅತ್ಯಂತ ಸರಳವಾಗಿ ಮನೆಯಂಗಳದಲ್ಲಿಯೇ ಪಡೆದುಕೊಳ್ಳಬಹುದು  ಎಂದು ನಂಜನಗೂಡು ಅಂಚೆ ವಿಭಾಗದ ಸೂಪರಿಂಟೆಂಡೆಂಟ್‌ ಕೆ.ರಾಮಲಿಂಗಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು