ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕನ್ ಪ್ರಿಯರಿಗೆ ಬೆಲೆ ಏರಿಕೆ ಬಿಸಿ

ಮೊಟ್ಟೆ, ಮೀನಿಗೆ ಹೆಚ್ಚಾದ ಬೇಡಿಕೆ
Published 14 ಜೂನ್ 2023, 14:27 IST
Last Updated 14 ಜೂನ್ 2023, 14:27 IST
ಅಕ್ಷರ ಗಾತ್ರ

ಯಳಂದೂರು: ಕಳೆದ ಮೂರು ವಾರದಿಂದ ಕೋಳಿ ಮಾಂಸದ ಬೆಲೆ ಏರಿಕೆಯಲ್ಲಿದ್ದು, ಮಂಗಳವಾರ ಮತ್ತಷ್ಟು ಗಗನಮುಖಿಯಾಗಿದ್ದು, ಮೊಟ್ಟೆ ಬೆಲೆಯಲ್ಲೂ ಏರಿಕೆ ದಾಖಲಿಸಿದೆ.

ತಾಲ್ಲೂಕಿನ ಕೆರೆಕಟ್ಟೆಯಲ್ಲಿ ನೀರಿನ ಪ್ರಮಾಣ ಕುಸಿದಿದೆ. ಮೀನು ಸಾಕಣೆದಾರರ ಸಂಖ್ಯೆಯೂ ಕುಸಿದಿದೆ. ಬೇರೆ ಭಾಗಗಳಿಂದ ಮೀನು ತಂದು ಮಾರಾಟ ಮಾಡಬೇಕಿದ್ದು, ಅಲ್ಪಸ್ವಲ್ಪ ಸಂಗ್ರಹವಾಗುವ ಮೀನು ಮುಂಜಾನೆಯೇ ಖಾಲಿಯಾಗುತ್ತದೆ. ಇದರಿಂದ ಮಾಂಸದ ಖಾದ್ಯಗಳನ್ನು ಮಾರಾಟ ಮಾಡುವ ತಳ್ಳು ಗಾಡಿಗಳ ಮಾಲೀಕರು ಧಾರಣೆ ಏರಿಕೆಯಿಂದ ಪರಿತಪಿಸುವಂತೆ ಆಗಿದೆ.

ಮಟನ್ ಕೆ.ಜಿ.ಗೆ ₹600, ಚಿಕನ್‌ಗೆ ₹220 ಹಾಗೂ ಮೀನು ಕೆಜಿಗೆ ₹200 ಇದೆ. ಕಳೆದ ತಿಂಗಳು ಕೋಳಿ ಮಾಂಸಕ್ಕೆ ₹160 ಹಾಗೂ ಮೀನು ಕೆ.ಜಿಗೆ ₹150ರಷ್ಟಿತ್ತು. ಆದರೆ, ಕಳೆದೊಂದು ತಿಂಗಳಿನಿಂದ ಮಾಂಸದ ಧಾರಣೆ ಏರಿಕೆ ಹಾದಿಯಲ್ಲಿದ್ದು, ಚಿಕನ್ ಪ್ರತಿದಿನ ಬೆಲೆಯಲ್ಲಿ ವ್ಯತ್ಯಾಸ ಆಗುತ್ತಿದ್ದು, ಬೇಡಿಕೆ ಏಕಮುಖವಾಗಿ ಸಾಗಿದೆ ಎನ್ನುತ್ತಾರೆ ಪಟ್ಟಣದ ವ್ಯಾಪಾರಿ ಶೂರಿ.

‘ಮಳೆ ಪ್ರಮಾಣ ಕುಸಿದಿದೆ. ನೀರು ತಳಕಂಡಿದೆ. ಇದ್ದ ಅಲ್ಪಸ್ವಲ್ಪ ಮೀನು ಬಲೆಗೆ ಬೀಳುತ್ತಿಲ್ಲ. ಕೆರೆಯಲ್ಲಿ ತೆಪ್ಪ ಬಳಸಿ ಮೀನು ಹಿಡಿಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಜಿಲ್ಲಾ ಕೇಂದ್ರಗಳಿಂದ ಮೀನು ಮಾರುಕಟ್ಟೆಗೆ ಬರಬೇಕಿದ್ದು, ದರದಲ್ಲಿ ಏರಿಕೆ ಕಂಡಿದೆ’ ಎಂದು ಯರಿಯೂರು ಕೃಷ್ಣಶೆಟ್ಟಿ ಹೇಳಿದರು.

‘ಸಗಟು ಮಾರಾಟಗಾರರು ಪ್ರತಿ ಮೊಟ್ಟೆಗೆ ₹5.50 ದರ ನಿಗದಿಪಡಿಸಿದ್ದಾರೆ. ಅಂಗಡಿಗಳಲ್ಲಿ ₹6.50 ಬೆಲೆ ಇದೆ. ಚಿಕನ್ ಮತ್ತು ಮಟನ್ ಬೆಲೆಗಳಲ್ಲೂ ವ್ಯತ್ಯಾಸವಾಗಿದೆ. ಆದರೆ, ಬೇಡಿಕೆ ಕಡಿಮೆ ಆಗಿಲ್ಲ. 2 ಕೆಜಿ ತೂಗುವ ನಾಟಿ ಕೋಳಿಗೆ ₹500ರಷ್ಟಿದೆ. ಅಷಾಢ ಮಾಸ ಆರಂಭವಾದರೆ, ಮಾಂಸದ ದರ ಮತ್ತಷ್ಟು ಏರಲಿದೆ. ಇದು ಮಾಂಸ ಪ್ರಿಯರ ಚಿಂತೆಗೆ ಕಾರಣವಾಗಿದೆ ಎಂದು ಸಂತೇಮರಹಳ್ಳಿ ಇಸ್ಮಾಯಿಲ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT