ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಜೂನ್‌ 1ರಿಂದ ಖಾಸಗಿ ಬಸ್‌ ಸಂಚಾರ

ಮಾಲೀಕರೊಂದಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಸಭೆ: ಷರತ್ತುಬದ್ಧ ಅನುಮತಿ
Last Updated 28 ಮೇ 2020, 16:09 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಜೂನ್‌ 1ರಿಂದ ಖಾಸಗಿ ಬಸ್‌ಗಳ ಸಂಚಾರ ಆರಂಭವಾಗಲಿದೆ. ಜಿಲ್ಲೆಯ ವಿವಿಧ ಭಾಗಗಳಿಗೆ ಹಾಗೂ ಹೊರ ಜಿಲ್ಲೆಗಳಿಗೆ ಶೇ 50ರಷ್ಟು ಬಸ್‌ಗಳ ಓಡಾಟಕ್ಕೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಅನುಮತಿ ನೀಡಿದ್ದು, ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ.

ಬಸ್‌ ಸಂಚಾರ ಆರಂಭಿಸುವ ಸಂಬಂಧ ಜಿಲ್ಲಾಧಿಕಾರಿ ಗುರುವಾರ ಖಾಸಗಿ ಬಸ್‌ ಮಾಲೀಕರ ಹಾಗೂ ಪದಾಧಿಕಾರಿಗಳ ಸಭೆ ನಡೆಸಿದರು.

‘ಕೆಎಸ್ಆರ್‌ಟಿಸಿ ಬಸ್‌ಗಳು ಜಿಲ್ಲೆ ಹಾಗೂ ಅಂತರಜಿಲ್ಲೆಗೆ ಈಗಾಗಲೇ ಸಂಚರಿಸುತ್ತಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಖಾಸಗಿ ಬಸ್‌ಗಳಿಗೂ ಜೂನ್ 1ರಿಂದ ಸಂಚರಿಸಲು ಅನುಮತಿ ನೀಡಲಾಗಿದೆ’ ಎಂದು ಡಾ.ಎಂ.ರವಿ ಹೇಳಿದರು.

ಕೆಎಸ್ಆರ್‌ಟಿಸಿ ಬಸ್‌ಗಳಿಗೆ ನೀಡಿರುವ ಸೂಚನೆ, ಮಾರ್ಗಸೂಚಿಗಳನ್ನು ಖಾಸಗಿ ಬಸ್‌ಗಳ ಸಂಚಾರಕ್ಕೂ ನೀಡಲಾಗಿದೆ. ಜಿಲ್ಲೆಯಲ್ಲಿ ಶೇ 50ರಷ್ಟು ಖಾಸಗಿ ಬಸ್‌ಗಳು ಸಂಚರಿಸಬೇಕು. ಮುಂದಿನ ದಿನಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಖಾಸಗಿ ಬಸ್‌ಗಳ ಸೇವೆ ಹೆಚ್ಚಿಸಲಾಗುವುದು’ ಎಂದರು.

ಜಿಲ್ಲೆಯಲ್ಲಿ ಎಲ್ಲ ಕಡೆಗಳಿಗೂ ಬಸ್‌ ಸಂಚರಿಸಲಿವೆ. ಹೊರ ಜಿಲ್ಲೆಗಳ ಪೈಕಿ ಸದ್ಯ ಮೈಸೂರಿಗೆ ಮಾತ್ರ ಸಂಚರಿಸಲು ಅನುಮತಿ ನೀಡಲಾಗಿದೆ. ಬಸ್‌ಗಳಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರೂ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಸೇರಿದಂತೆ ಅಗತ್ಯ ಸುರಕ್ಷತಾ ಸಾಧನಗಳನ್ನು ಬಳಸುವಂತೆ ಪ್ರಯಾಣಿಕರಿಗೆ ಅರಿವು ಮೂಡಿಸಬೇಕು’ ಎಂದು ಅವರು ಮಾಲೀಕರಿಗೆ ಸೂಚಿಸಿದರು.

‘ಬಸ್‌ಗಳಲ್ಲಿ 30ಕ್ಕಿಂತ ಹೆಚ್ಚಿನ ಪ್ರಯಾಣಿಕರಿಗೆ ಅವಕಾಶ ನೀಡಬಾರದು.ಬಸ್ ಹತ್ತುವಾಗ ಮತ್ತು ಇಳಿಯುವಾಗ ಸುರಕ್ಷಿತ ಅಂತರದ ನಿಯಮ ಪಾಲನೆ ಮಾಡಬೇಕು. ವೈಯಕ್ತಿಕ ನೈರ್ಮಲ್ಯ ಕಾಪಾಡಿಕೊಳ್ಳಬೇಕು’ ಎಂದು ಹೇಳಿದರು.

ಶೀತ, ಕೆಮ್ಮು, ನೆಗಡಿ ಹಾಗೂ ಜ್ವರದ ಲಕ್ಷಣಗಳು ಇರುವವರಿಗೆ ಬಸ್‌ಗಳಲ್ಲಿ ಸಂಚರಿಸಲು ಅವಕಾಶ ನೀಡಬಾರದು. ಆದರೂ ಸಹ ಪ್ರಯಾಣಿಕರಿಗೆ ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಶೀತ, ಕೆಮ್ಮು, ನೆಗಡಿ ಇರುವ ವ್ಯಕ್ತಿಗಳು ಕೆಮ್ಮುವಾಗ, ಸೀನುವಾಗ ಇತರರಿಂದ ದೂರವಿರುವಂತಹ ಜಾಗೃತಿ ಫಲಕಗಳನ್ನು ಖಾಸಗಿ ಬಸ್‌ಗಳಲ್ಲಿ ಅಳವಡಿಸಬೇಕು. ಜನರು ಕಿಟಕಿಯ ಬದಿಯಲ್ಲಿ ಎಲ್ಲೆಂದರಲ್ಲಿ ಉಗುಳದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಸಿ.ರವಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಕುಮಾರ್, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಕೆ.‌ಸುರೇಶ್, ಪಟ್ಟಣ ಠಾಣೆ ಇನ್‌ಸ್ಪೆಕ್ಟರ್‌ ಎನ್‌.ಸಿ.ನಾಗೇಗೌಡ, ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಕೆ.ಎಂ.ಅನ್ವರ್ ಪಾಷ, ಉಪಾಧ್ಯಕ್ಷ ವಿಜಯ ಕೃಷ್ಣ, ಕಾರ್ಯದರ್ಶಿಗಳಾದ ಮುರಳಿ ಕೃಷ್ಣ, ಎಚ್.ವಿ.ತ್ಯಾಗರಾಜ್ ಇದ್ದರು.

ಸೋಂಕು ನಿವಾರಕ ಸಿಂಪಡಣೆ‌ ಕಡ್ಡಾಯ

ಜಿಲ್ಲೆಯಲ್ಲಿ ಸಂಚರಿಸುವ ಖಾಸಗಿ ಬಸ್‌ಗಳಿಗೆ ಪ್ರತಿದಿನ ಎರಡು ಬಾರಿ ಕಡ್ಡಾಯವಾಗಿ ಸೋಂಕು ನಿವಾರಕ ಸಿಂಪಡಣೆ ಕಡ್ಡಾಯ. ಸೋಂಕು ನಿವಾರಕ ದ್ರಾವಣ ಬಳಸುವ ವಿಧಾನಗಳ ಮಾಹಿತಿಯನ್ನು ನಗರಸಭೆ ಅಧಿಕಾರಿ, ಸಿಬ್ಬಂದಿಯಿಂದ ಪಡೆಯಬೇಕು. ಎಲ್ಲ ಖಾಸಗಿ ಬಸ್‌ಗಳಲ್ಲಿಯೂ ಥರ್ಮಲ್ ಸ್ಕ್ಯಾನರ್ ಅನ್ನು ಇಟ್ಟುಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

‘ಬಸ್ ಚಾಲಕ ಮತ್ತು ನಿರ್ವಾಹಕರಿಗೆ ಗುರುತಿನ ಚೀಟಿ, ಸಮವಸ್ತ್ರ ನೀಡಬೇಕು. ಪ್ರಯಾಣಿಕರಿಗೆ ಟಿಕೆಟ್ ನೀಡಲು ಕಡ್ಡಾಯವಾಗಿ ಫಾಸ್ಟ್ ಮಿಷನ್ ಬಳಸುವಂತೆ ಸೂಚಿಸಬೇಕು. ಈ ಎಲ್ಲ ಕ್ರಮಗಳ ಕುರಿತು ಖಾಸಗಿ ಬಸ್ ಚಾಲಕರು, ನಿರ್ವಾಹಕರು ಸೇರಿದಂತೆ ಎಲ್ಲ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT