ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಖಾಸಗಿ ಶಾಲಾ ಶಿಕ್ಷಕರ ಸಂಕಷ್ಟ ಕೇಳೋರಿಲ್ಲ

ಶಾಲೆ ಆರಂಭ ಯಾವಾಗ ಎಂದು ಗೊತ್ತಿಲ್ಲ, ಸಂಬಳ ನೀಡುವ ಸ್ಥಿತಿಯಲ್ಲಿಲ್ಲದ ಆಡಳಿತ ಮಂಡಳಿಗಳು
Last Updated 6 ಜುಲೈ 2020, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್–19 ಹಾವಳಿಯಿಂದಾಗಿ ಖಾಸಗಿ ಶಾಲೆಗಳ ಶಿಕ್ಷಕರು ತತ್ತರಿಸಿ ಹೋಗಿದ್ದಾರೆ. ಮಾರ್ಚ್‌ನಲ್ಲಿ ರಾಜ್ಯದಲ್ಲಿ ಸೋಂಕು ಕಾಣಿಸಿಕೊಂಡ ನಂತರ ಖಾಸಗಿ ಶಾಲೆಗಳು ಮುಚ್ಚಿದ್ದು, ಆ ಬಳಿಕ ಅಲ್ಲಿನ ಶಿಕ್ಷಕರಿಗೆ ಸರಿಯಾಗಿ ವೇತನ ಪಾವತಿಯಾಗುತ್ತಿಲ್ಲ.

ಕೆಲವು ಶಾಲೆಗಳ ಆಡಳಿತ ಮಂಡಳಿ ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳ ಸಂಬಳ ಕೊಟ್ಟಿದ್ದು, ನಂತರ ನೀಡಿಲ್ಲ. ಇನ್ನೂ ಕೆಲವು ಶಾಲೆಗಳು ಅರ್ಧ ಸಂಬಳ ಕೊಟ್ಟಿವೆ. ಶಾಲೆ ಆರಂಭವಾಗದೆ ಸಂಬಳ ನೀಡಲು ಸಾಧ್ಯವಿಲ್ಲ ಎಂದು ಕೆಲವು ಆಡಳಿತ ಮಂಡಳಿಗಳು ನೇರವಾಗಿಯೇ ಹೇಳಿದೆ. ಸೆಪ್ಟೆಂಬರ್‌ವರೆಗೂ ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭವಾಗುವ ಲಕ್ಷಣ ಕಾಣದೇ ಇರುವುದರಿಂದ ಶಿಕ್ಷಕರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಖಾಸಗಿ ಶಾಲೆಗಳ ಶಿಕ್ಷಕರಿಗಾಗಿ ಸರ್ಕಾರ ವಿಶೇಷ ಪರಿಹಾರ ಪ್ಯಾಕೇಜ್‌ ಘೋಷಿಸಬೇಕು ಎಂಬುದು ಅವರ ಆಗ್ರಹ.

ಜಿಲ್ಲೆಯಲ್ಲಿ 189 ಖಾಸಗಿ ಶಾಲೆಗಳಿವೆ. ಈ ಪೈಕಿ 130 ಪ್ರಾಥಮಿಕ ಶಾಲೆಗಳು ಹಾಗೂ 59 ಪ್ರೌಢ ಶಾಲೆಗಳು. ಇವುಗಳ ಜೊತೆಗೆ ಅನುದಾನಿತ 55 ಪ್ರೌಢಶಾಲೆಗಳು ಹಾಗೂ 44 ಪ್ರಾಥಮಿಕ ಶಾಲೆಗಳಿವೆ.

ಸಣ್ಣ‍ಪ್ರಮಾಣದ ಖಾಸಗಿ ಶಾಲೆಗಳಲ್ಲಿ ನಾಲ್ಕರಿಂದ ಐದು ಮಂದಿ ಶಿಕ್ಷಕರಿದ್ದರೆ, ದೊಡ್ಡ ಶಾಲೆಗಳಲ್ಲಿ 12ರಿಂದ 13ರವರೆಗೂ ಶಿಕ್ಷಕರಿರುತ್ತಾರೆ. ಸರಾಸರಿ ಏಳು ಶಿಕ್ಷಕರಂತೆ ಲೆಕ್ಕಹಾಕಿದರೂ ಜಿಲ್ಲೆಯ ಖಾಸಗಿ ಶಾಲೆಗಳಲ್ಲಿ 1300ಕ್ಕೂ ಹೆಚ್ಚು ಮಂದಿ ಬೋಧನೆ ಮಾಡುತ್ತಿದ್ದಾರೆ. ನಾಲ್ಕು ತಿಂಗಳುಗಳಿಂದ ಇವರೆಲ್ಲ ಸಂಕಷ್ಟದಲ್ಲಿದ್ದು, ಇದೇ ಪರಿಸ್ಥಿತಿ ಇನ್ನೆಷ್ಟು ತಿಂಗಳು ಮುಂದುವರಿಯಲಿದೆಯೋ ಎಂಬ ಆತಂಕ ಶಿಕ್ಷಕರಲ್ಲಿದೆ.

ಶಾಲಾ ಮಕ್ಕಳಿಗೆ ಆನ್‌ಲೈನ್‌ ಪಾಠ ಮಾಡಲು ಹೈಕೋರ್ಟ್‌ ಅವಕಾಶ ಮಾಡಿಕೊಟ್ಟಿರುವುದು ಕೆಲವರಲ್ಲಿ ಕೊಂಚ ಸಮಾಧಾನ ತಂದಿದೆ.

‘ಸರ್ಕಾರಿ ಕೆಲಸ ಸಿಕ್ಕಿಲ್ಲ ಎಂದು ಖಾಸಗಿ ಶಾಲೆಗಳಲ್ಲಿ ಸೇರಿದ್ದೇವೆ. ಲಾಕ್‌ಡೌನ್‌ ಆದಾಗಿನಿಂದ ತುಂಬಾ ಕಷ್ಟವಾಗಿದೆ. ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳ ಸಂಬಳವನ್ನು ಆಡಳಿತ ಮಂಡಳಿ ನೀಡಿದೆ. ಆ ಬಳಿಕ ಕೆಲವು ಶಾಲೆಗಳು ಅರ್ಧ ಸಂಬಳ ಕೊಡುವ ಭರವಸೆ ನೀಡಿವೆ. ಇನ್ನೂ ಕೆಲವು ಕಡೆಗಳಲ್ಲಿ ಸಂಬಳ ಕೊಡಲು ಸಾಧ್ಯವಿಲ್ಲ ಎಂದು ಆಡಳಿತ ಮಂಡಳಿಗಳು ನೇರವಾಗಿ ಹೇಳಿವೆ’ ಎಂದು ಬೆಂಗಳೂರಿನ ಖಾಸಗಿ ಶಾಲೆಯೊಂದರ ಶಿಕ್ಷಕ, ಚಾಮರಾಜನಗರದ ನಿವಾಸಿ ಮಂಜುನಾಥ್‌ ಎಂಬುವವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಒಳಗಾದ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಜನರಿಗೆ ಸರ್ಕಾರ ಆರ್ಥಿಕವಾಗಿ ನೆರವು ನೀಡಿದೆ. ಆದರೆ, ಖಾಸಗಿ ಶಾಲೆಗಳ ಶಿಕ್ಷಕರಿಗೆ ಮಾತ್ರ ಯಾವುದೇ ಸೌಲಭ್ಯ ಸಿಕ್ಕಿಲ್ಲ. ನಾವು ಕೂಡ ಶಾಲೆಗಳಲ್ಲಿ ಪಾಠ ಮಾಡಿ ದೇಶದ ಪ್ರಜೆಗಳನ್ನು ರೂಪಿಸುವ ಕೆಲಸ ಮಾಡುತ್ತಿದ್ದೇವೆ. ಸರ್ಕಾರ ನಮ್ಮ ಬಗ್ಗೆಯೂ ಗಮನ ಹರಿಸಬೇಕು. ಎಲ್ಲ ಖಾಸಗಿ ಶಾಲೆಗಳ ಶಿಕ್ಷಕರಿಗೆ ಪ್ಯಾಕೇಜ್‌ ಘೋಷಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಮಾರ್ಚ್‌ನಿಂದ ಸರಿಯಾಗಿ ವೇತನ ಬಂದಿಲ್ಲ. ಮಾರ್ಚ್‌, ಏಪ್ರಿಲ್‌ ತಿಂಗಳಲ್ಲಿ ನಮಗೆ ಪೂರ್ಣ ಸಂಬಳ ಕೊಟ್ಟಿರಲಿಲ್ಲ. ಆ ದುಡ್ಡನ್ನೇ ಇಟ್ಟುಕೊಂಡು ತಿಂಗಳಿಗೆ ಸ್ವಲ್ಪ ಸ್ವಲ್ಪ ಕೊಡುತ್ತಿದ್ದಾರೆ. ಖರ್ಚಿಗೂ ಸಾಕಾಗುತ್ತಿಲ್ಲ. ಶಾಲೆಗಳ ಆಡಳಿತ ಮಂಡಳಿಗೆ ಈಗ ಕಷ್ಟ ಇದೆ. ಒಪ್ಪಿಕೊಳ್ಳುತ್ತೇವೆ. ಆದರೆ‌, ಇದುವರೆಗೆ ಬಂದ ಲಾಭವನ್ನು ಅವು ಏನು ಮಾಡುತ್ತವೆ’ ಎಂದು ಚಾಮರಾಜನಗರದ ಶಾಲೆಯೊಂದರ ಶಿಕ್ಷಕರೊಬ್ಬರು ಪ್ರಶ್ನಿಸಿದರು.

‘ಕಷ್ಟ ಅನುಭವಿಸುತ್ತಿರುವ ಖಾಸಗಿ ಶಾಲೆಗಳ ಶಿಕ್ಷಕರ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಆರ್ಥಿಕ ನೆರವು ನೀಡಿ ಸಂಕಷ್ಟದಿಂದ ಪಾರು ಮಾಡಬೇಕು’ ಎಂದು ಖಾಸಗಿ ಶಾಲೆಯೊಂದರಲ್ಲಿ ಬೋಧಕರಾಗಿರುವ ಮಹೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ವಿಶೇಷ ಪ್ಯಾಕೇಜ್‌ಗೆ ಒತ್ತಾಯ

‘ಕೋವಿಡ್‌–19 ಕಾರಣದಿಂದ ಖಾಸಗಿ ಶಾಲೆಗಳ ಶಿಕ್ಷಕರು ದಯನೀಯ ಸ್ಥಿತಿಯಲ್ಲಿದ್ದಾರೆ. ಆರ್ಥಿಕ ಸಂಕಷ್ಟದಿಂದ ಎಂಟು ಮಂದಿ ಅತಿಥಿ ಶಿಕ್ಷಕರು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಸಂಕಷ್ಟದಲ್ಲಿರುವ ಶಿಕ್ಷಕ ವರ್ಗದ ರಕ್ಷಣೆಗೆ ಸರ್ಕಾರ ಧಾವಿಸಬೇಕು’ ಎಂದು ಸೋಷಿಯಲ್‌ ಡೆಮಾಕ್ರಟಿಕ್‌ ಪಕ್ಷದ (ಎಸ್‌ಡಿಪಿಐ) ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶ, ನಗರಸಭಾ ಸದಸ್ಯ ಎಂ.ಮಹೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ ರಾಜ್ಯದಲ್ಲಿ ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುವ 35 ಸಾವಿರಕ್ಕೂ ಹೆಚ್ಚು ಶಿಕ್ಷಕರಿದ್ದಾರೆ. ರಾಜ್ಯ ಸರ್ಕಾರ ಇವರ ಬಗ್ಗೆ ವಿಶೇಷ ಕಾಳಜಿ ವಹಿಸಿ, ವಿಶೇಷ ಪ್ಯಾಕೇಜ್‌ ಘೋಷಿಸಬೇಕು’ ಎಂದು ಅವರು ಒತ್ತಾಯಿಸಿದರು.

ಕನ್ನಡ ಶಾಲೆಗಳ ಶಿಕ್ಷಕರ ಸ್ಥಿತಿ ಶೋಚನೀಯ

ಕೋವಿಡ್‌ ಹಾವಳಿಯಿಂದಾಗಿ ಖಾಸಗಿ ಕನ್ನಡ ಶಾಲೆಗಳು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿ ತತ್ತರಿಸಿವೆ. ಪೋಷಕರು, ಶಿಕ್ಷಕರು ಶಾಲೆಯ ಕಡೆ ಮುಖ ಮಾಡಿಲ್ಲ. ಎರಡು ತಿಂಗಳುಗಳಿಂದ ಶಿಕ್ಷಕರಿಗೆ ಸಂಬಳವಾಗಿಲ್ಲ. ಮಕ್ಕಳು ಶಾಲೆಗೆ ದಾಖಲಾಗದೇ ಇರುವುದರಿಂದ ಶುಲ್ಕ ಸಂಗ್ರಹವಾಗುತ್ತಿಲ್ಲ. ಇದರಿಂದಾಗಿ ಶಿಕ್ಷಕರಿಗೆ ಸಂಬಳ ಇಲ್ಲದಂತಾಗಿದೆ ಎಂದು ಸೇವಾಭಾರತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಾಸುದೇವರಾವ್‌ ಅವರು ಹೇಳಿದ್ದಾರೆ.

‘ಸರ್ಕಾರದ ಆದೇಶದಂತೆ ಆನ್‌ಲೈನ್‌ ತರಗತಿ ಮಾಡಲು ಅವಕಾಶ ಇದ್ದರೂ ಕನ್ನಡ ಮಾಧ್ಯಮ ಶಾಲೆಯ ಪೋಷಕರ ಬಳಿ ಆಂಡ್ರಾಯ್ಡ್‌ ಫೋನ್‌ ಇಲ್ಲದಿರುವುದು ಕೂಡ ಶಿಕ್ಷಕರ ವೃತ್ತಿಗೆ ತೊಡಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ಸಂರಕ್ಷಣೆ ಮಾಡುವುದು ರಾಜ್ಯ ಸರ್ಕಾರ ಹೊಣೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರ ಎಲ್ಲ ವರ್ಗಗಳ ಜನರಿಗೂ ಆರ್ಥಿಕ ನೆರವನ್ನು ನೀಡಿದೆ. ಹಾಗೆಯೇ ಖಾಸಗಿ ಶಾಲೆಗಳ ಶಿಕ್ಷಕರಿಗೂ ನೆರವು ನೀಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT