ಮಂಗಳವಾರ, ನವೆಂಬರ್ 24, 2020
19 °C
ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಕರ್ನಾಟಕ ಸೇನಾ ಪಡೆ ಪ್ರತಿಔಭಟನೆ

ಚಾಮರಾಜನಗರ: ಮರಾಠ ಅಭಿವೃದ್ದಿ ಪ್ರಾಧಿಕಾರ ರದ್ಧತಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ರಾಜ್ಯ ಸರ್ಕಾರ ರಚಿಸಿರುವ ಮರಾಠ ಅಭಿವೃದ್ದಿ ಪ್ರಾಧಿಕಾರವನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಭುವನೇಶ್ವರಿ ವೃತ್ತದಲ್ಲಿ ಸೇರಿದ ಪ್ರತಿಭಟನಕಾರರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರವು ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಮೂಲಕ ಕನ್ನಡಿಗರ ತಲೆಯ ಮೇಲೆ ಚಪ್ಪಡಿ ಹಾಕುವ ಕೆಲಸ ಮಾಡಿದೆ ಆರೋಪಿಸಿದ ಪ್ರತಿಭಟನನಿರತರು ಚಪ್ಪಡಿ ಕಲ್ಲು ಹೊತ್ತುಕೊಂಡು ಸರ್ಕಾರದ‌ ವಿರುದ್ಧ ಧಿಕ್ಕಾರ ಕೂಗಿದರು. 

ಸೇನಾಪಡೆಯ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ‘ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕನ್ನಡ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಮರಾಠ ಪ್ರಾಧಿಕಾರ ಸ್ಥಾಪಿಸುವ ಮೂಲಕ ಕನ್ನಡಕ್ಕೆ ದ್ರೋಹ ಬಗೆಯುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಏಳುಕೋಟಿ ಕನ್ನಡಿಗರ ಭಾವನೆಗೆ ವಿರುದ್ಧವಾಗಿ ಸರ್ಕಾರ ನಡೆದುಕೊಂಡಿದೆ. ಮರಾಠಿಗರು ಬೆಳಗಾವಿಯಲ್ಲಿ ಪದೇಪದೇ ಕ್ಯಾತೆ ತೆಗೆದು ಕನ್ನಡಿಗರೊಂದಿಗೆ ಜಗಳ ಮಾಡುತ್ತಿದ್ದಾರೆ. ನಮ್ಮ ಕರ್ನಾಟಕ ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆ ಆಚರಿಸಿ ಸದಾ ಕನ್ನಡಿಗರಿಗೆ ತೊಂದರೆ ಕೊಡುತ್ತಿರುವವರ ಪರವಾಗಿ ರಾಜ್ಯ ಸರ್ಕಾರ ಕೆಲಸ ಮಾಡುತ್ತಿರುವುದು ಖಂಡನೀಯ’ ಎಂದರು.

‘ಮರಾಠಿಗರ ಮತಗಳಿಗಾಗಿ ಭಾಷೆ ಭಾಷೆಗಳ ನಡುವೆ ಆಶಾಂತಿ ಉಂಟು ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಅಖಂಡ ಕರ್ನಾಟಕದ ಏಳಿಗೆಗಾಗಿ ನಿರಂತರ ದುಡಿಯುತ್ತಿರುವ ಕನ್ನಡ ಅಭಿವೃದ್ದಿ ಪ್ರಾಧಿಕಾರಕ್ಕೆ ಸರ್ಕಾರ ಕೇವಲ ₹5 ಕೋಟಿ ನೀಡಿ, ಕನ್ನಡಿಗರ ಕಟ್ಟಾ ವಿರೋಧಿಯಾಗಿರುವ ಮರಾಠಿಗರ ಅಭಿವೃದ್ದಿ ಪ್ರಾಧಿಕಾರಕ್ಕೆ ₹ 50 ಕೋಟಿ ನೀಡುತ್ತಿರುವುದು ನಾಚಿಗೇಡಿನ ಸಂಗತಿ. ಈ ನಿರ್ಧಾರದ ವಿರುದ್ಧ ದೊಡ್ಡ ಆದೋಂಲನ ಮಾಡಬೇಕಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಬಂದ್‌ಗೆ ಬೆಂಬಲ: ಕನ್ನಡ ಚಳವಳಿಗಾರ ವಾಟಾಳ್‌ನಾಗರಾಜ್ ಹಾಗೂ ಕನ್ನಡಪರ ಸಂಘಟನೆಗಳು ಡಿಸೆಂಬರ್ 5 ರಂದು ಕರೆ ಕೊಟ್ಟಿರುವ ಕರ್ನಾಟಕ ಬಂದ್‌ಗೆ ಚಾಮರಾಜನಗರ ಕನ್ನಡಪರ ಸಂಘಟನೆಗಳು ಸಂಪೂರ್ಣ ಬೆಂಬಲ ನೀಡಲಿವೆ ಎಂದು ಶ್ರೀನಿವಾಸಗೌಡ ಅವರು ಈ ಸಂದರ್ಭದಲ್ಲಿ ಹೇಳಿದರು. 

ಶಾ.ಮುರಳಿ, ಚಾ.ವೆಂ.ರಾಜ್‌ಗೋಪಾಲ್, ಕಂಡಕ್ಟರ್ ಚಾ.ಸಿ.ಸೋಮನಾಯಕ, ನಿಜಧ್ವನಿಗೋವಿಂದರಾಜು, ಗು.ಪುರುಷೋತ್ತಮ್, ಲಿಂಗರಾಜು, ದೊರೆ, ಶಿವಶಂಕರನಾಯಕ, ತಾಂಡವಮೂರ್ತಿ, ವೀರಭದ್ರ ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು