ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಲ್ಡ್ ಲೋನ್ ಕಂಪನಿಗಳ ವಿರುದ್ಧ ಪ್ರತಿಭಟನೆ

ಜಿಲ್ಲಾಧಿಕಾರಿ ಮಧ್ಯಪ್ರವೇಶಕ್ಕೆ ಒತ್ತಾಯ, ಚಿನ್ನ ಹರಾಜು ಮುಂದೂಡಲು ಸಂಘಟನೆಗಳ ಮನವಿ
Last Updated 8 ಸೆಪ್ಟೆಂಬರ್ 2021, 4:12 IST
ಅಕ್ಷರ ಗಾತ್ರ

ಚಾಮರಾಜನಗರ: ಚಿನ್ನ ಅಡವಿರಿಸಿಕೊಂಡು ಸಾಲ ನೀಡುವ (ಗೋಲ್ಡ್‌ ಲೋನ್‌) ಖಾಸಗಿ ಕಂಪನಿಗಳು, ಕೋವಿಡ್‌ ಸಂಕಷ್ಟದ ಸಂದರ್ಭದಲ್ಲೂ ಗ್ರಾಹಕರ ಚಿನ್ನವನ್ನು ಹರಾಜು ಹಾಕುತ್ತಿವೆ ಎಂದು ಆರೋಪಿಸಿ ಸುವರ್ಣ ಕನ್ನಡ ರಕ್ಷಣಾ ವೇದಿಕೆ ಪದಾಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ನಗರದಲ್ಲಿ ಮಂಗಳವಾರ ಪ್ರತಿಭಟಿಸಿದರು.

ಜೋಡಿ ರಸ್ತೆಯಲ್ಲಿರುವ ಜಿಲ್ಲಾಡಳಿತ ಭವನದ ಮುಖ್ಯ ದ್ವಾರದಲ್ಲಿ ಜಮಾಯಿಸಿದ ಪ್ರತಿಭಟನಕಾರರು, ಅಲ್ಲಿಂದ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನದವರೆಗೆ ತೆರಳಿ, ಅಲ್ಲಿ ಪ್ರತಿಭಟನೆ ನಡೆಸಿ ಗೋಲ್ಡ್‌ಲೋನ್‌ ಕಂಪನಿಗಳ ವಿರುದ್ಧ ಘೋಷಣೆ ಕೂಗಿದರು.

ಸುವರ್ಣ ಕನ್ನಡ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಸುರೇಶ್‌ ವಾಜಪೇಯಿ ಮಾತನಾಡಿ, ‘ಕೋವಿಡ್‌ 2ನೇ ಅಲೆಯಲ್ಲಿ ಕಷ್ಟ ಎದುರಿಸಿದ ಸಂದರ್ಭದಲ್ಲಿ ಜಿಲ್ಲೆಯ ಬಡ ಕಾರ್ಮಿಕರು, ರೈತರು, ಬೀದಿ ಬದಿ ವ್ಯಾಪಾರಿಗಳು, ಗಾರೆ ಕೆಲಸದವರು ಸೇರಿದಂತೆ ಬಡವರು ಖರ್ಚಿಗಾಗಿ ತಮ್ಮ ಕುಟುಂಬದ ಸದಸ್ಯರ ಆಭರಣಗಳನ್ನು ಗೋಲ್ಡ್‌ಲೋನ್‌ ಸಂಸ್ಥೆಗಳಲ್ಲಿ ಅಡವಿಟ್ಟು ಹಣ ಪಡೆದಿದ್ದರು.

ಮುತ್ತೂಟ್‌ ಫಿನ್‌ ಕಾರ್ಪ್‌, ಮಣಪ್ಪುರಂ, ಐಎಸ್‌ಎಸ್‌ ಕೋಸಮಟ್ಟಂ ಸೇರಿದಂತೆ ಇನ್ನೂ ಅನೇಕ ಸಂಸ್ಥೆಗಳು ಗುರುವಾರ (ಸೆ.9) ಅಡವಿಟ್ಟ ಆಭರಣಗಳನ್ನು ಹರಾಜು ಮಾಡುವುದಾಗಿ ಗ್ರಾಹಕರಿಗೆ ನೋಟಿಸ್‌ ನೀಡಿ ತೊಂದರೆ ಕೊಡುತ್ತಿವೆ’ ಎಂದು ಆರೋಪಿಸಿದರು.

‘ಲಾಕ್‌ಡೌನ್‌ ಸಂದರ್ಭದಲ್ಲಿ ಜನರಿಗೆ ಜೀವನ ನಡೆಸಲು ಕಷ್ಟವಾಗಿತ್ತು. ಜೂನ್‌, ಜುಲೈ ತಿಂಗಳಲ್ಲಿ ಪ್ರತಿ ದಿನ ಮಳೆಯಾಗಿದ್ದರಿಂದ ಕೂಲಿ ಕೆಲಸ, ಗಾರೆ ಕೆಲಸ ಹಾಗೂ ಇತರೆ ಸಣ್ಣ ಪುಟ್ಟ ಕೂಲಿ ಕೆಲಸ ಮಾಡುವವರಿಗೆ ಸರಿಯಾಗಿ ಕೆಲಸ ಇರಲಿಲ್ಲ. ಈಗ ಸುಧಾರಿಸಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಗೋಲ್ಡ್‌ಲೋನ್‌ ಕಂಪನಿಗಳು ಚಿನ್ನದ ಹರಾಜು ನಡೆಸಿದರೆ ಬಡ ಗ್ರಾಹಕರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ’ ಎಂದರು.

‘10ರಂದು ಗೌರಿ–ಗಣೇಶ ಹಬ್ಬವಿದೆ. ಈ ಸಂದರ್ಭದಲ್ಲಿ ಹಣ ಹೊಂದಿಸಿ ಚಿನ್ನ ಬಿಡಿಸಿಕೊಳ್ಳುವುದು ಕಷ್ಟ. ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ಗೋಲ್ಡ್‌ಲೋನ್‌ ಕಂಪನಿಗಳ ಜೊತೆ ಮಾತನಾಡಿ, ಚಿನ್ನ ಹರಾಜು ಪ್ರಕ್ರಿಯೆ ಮುಂದೂಡಿ, ಬಡ್ಡಿ ಕಟ್ಟಲು ಮೂರು ತಿಂಗಳವರಗೆ ಕಾಲಾವಕಾಶ ಕೊಡಿಸಬೇಕು. ಹರಾಜು ಪ್ರಕ್ರಿಯೆ ಮುಂದುವರಿದರೆ ಕಂಪನಿಗಳ ಶಾಖೆಗಳಿಗೆ ಬೀಗ ಹಾಕಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು’ ಎಂದು ಸುರೇಶ್‌ ವಾಜಪೇಯಿ ಎಚ್ಚರಿಸಿದರು.

ಪ್ರತಿಭಟನ ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ ಪ್ರತಿಭಟನಕಾರರ ಅಹವಾಲು ಆಲಿಸಿ ಮನವಿ ಪತ್ರ ಸ್ವೀಕರಿಸಿದರು.

ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಚಾ.ಗು.ನಾಗರಾಜು, ಯುವ ಸೇನೆ ಕರ್ನಾಟಕ ಸೇವಾ ಸಂಘದ ಅಧ್ಯಕ್ಷ ನಮ್ಮನೆ ಪ್ರಶಾಂತ್, ಅರುಣ್ ಕುಮಾರ್, ರವಿಕುಮಾರ್, ಗ್ರಾಮ ಘಟಕದ ಅಧ್ಯಕ್ಷ ಲಿಂಗರಾಜು, ಉದಯ್ ಕುಮಾರ್, ಆಟೊಕುಮಾರ್, ಚೆನ್ನಿಗಶೆಟ್ಟಿ, ಮಣಿಕಂಠ, ಗೋಪಾಲ್, ಕುಮಾರ್, ಪರ್ವತ್‌ರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT