ಬುಧವಾರ, ಸೆಪ್ಟೆಂಬರ್ 29, 2021
21 °C
ಬೇಕಾಬಿಟ್ಟಿ ದಂಡ ವಸೂಲಿ; ಆಜಾದ್‌ ಹಿಂದೂ ಸೇನೆಯಿಂದ ಜಿಲ್ಲಾಧಿಕಾರಿಗೆ ಮನವಿ

ಚಾಮರಾಜನಗರ: ಸಂಚಾರ ಪೊಲೀಸರ ವಿರುದ್ಧ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನಗರದ ಸಂಚಾರ ಪೊಲೀಸರು ಸಾರ್ವಜನಿಕರೊಂದಿಗೆ ದುರ್ವರ್ತನೆ ತೋರುತ್ತಿದ್ದಾರೆ ಎಂದು ಆರೋಪಿಸಿ ಆಜಾದ್ ಹಿಂದೂ ಸೇನೆಯ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಡಳಿತ ಭವನದ ಎದುರು ಸೇರಿದ ಪ್ರತಿಭಟನಕಾರರು ಸಂಚಾರ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣಾ ತಹಶೀಲ್ದಾರ್ ವಿನೋದ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

'ಚಾಮರಾಜನಗರದಲ್ಲಿ ಸಂಚಾರ ಪೊಲೀಸರ ದುರ್ವರ್ತನೆ ಮಿತಿ‌ ಮೀರಿದೆ. ದಂಡ ವಸೂಲಿ ಹೆಸರಿನಲ್ಲಿ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ. ಸಂಚಾರ ನಿಯಮಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಬದಲು ಕೇವಲ ದಂಡ ವಸೂಲಾತಿ ಮಾಡುತ್ತಿದ್ದಾರೆ’ ಎಂದು ಮನವಿಯಲ್ಲಿ ದೂರುತ್ತಿದ್ದಾರೆ.

ಹಿಂದೂಗಳೇ ಗುರಿ: 'ನಗರದ ಜಿಲ್ಲಾಸ್ಪತ್ರೆ ಎದುರು, ಸಂತೇಮರಹಳ್ಳಿ ವೃತ್ತ, ಮಾರಿಗುಡಿ ಮುಂಭಾಗ... ಹೀಗೆ ಹಿಂದುಳಿದ ವರ್ಗಗಳು, ದಲಿತರು, ಕೂಲಿ ಕಾರ್ಮಿಕರು ಹಾಗೂ ಬಹುಸಂಖ್ಯಾತ ಹಿಂದೂಗಳನ್ನು ಗುರಿಯಾಗಿಸಿಕೊಂಡು ದಂಡ ವಸೂಲಾತಿ ಮಾಡಲಾಗುತ್ತಿದೆ.

ನಗರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಇತರ ಸಂಚಾರ ನಿಯಮಗಳ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ. ಬೈಪಾಸ್ ರಸ್ತೆಯಲ್ಲಿ ವ್ಹೀಲಿಂಗ್ ಮಾಡಲಾಗುತ್ತಿದೆ. ಜನ ವಾಸಿಸುವ ಪ್ರದೇಶದಲ್ಲಿ ಸೈಲೆನ್ಸರ್‌ಗಳನ್ನು ತೆಗೆದು ದ್ವಿಚಕ್ರವಾಹನಗಳನ್ನು ಕೆಲವರು ಚಲಾಯಿಸುತ್ತಿದ್ದು, ಇವೆಲ್ಲ ಪೊಲೀಸರ ಕಣ್ಣಿಗೆ ಬೀಳುತ್ತಿಲ್ಲ' ಎಂದು ಆರೋಪಿಸಿದ್ದಾರೆ.

‘ಗಣೇಶ ಹಬ್ಬದ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ದೊಡ್ಡ ಅಂಗಡಿ ಬೀದಿ, ಮಾರುಕಟ್ಟೆ ರಸ್ತೆ ಬಳಿ ಹಬ್ಬದ ಖರೀದಿಗಾಗಿ ಬಂದಿದ್ದವರಿಂದ ಯದ್ವಾತದ್ವಾ ದಂಡ ವಸೂಲಿ ಮಾಡಲಾಗಿದೆ. ಗುಂಡ್ಲುಪೇಟೆ ರಸ್ತೆ, ಗಾಳೀಪುರ ರಸ್ತೆಗಳಲ್ಲಿ ಸಂಚರಿಸುವ ವ್ಯಕ್ತಿಗಳು ಸಂಚಾರ ನಿಮಯ ಪಾಲಿಸುತ್ತಿಲ್ಲ. ದಾಖಲೆ ರಹಿತ ವಾಹನಗಳು, ಕಳ್ಳತನವಾದ ವಾಹನಗಳು, ಒಂದೇ ನೊಂದಣಿ ಸಂಖ್ಯೆ ಹೊಂದಿರುವ ವಾಹನಗಳು ಸಂಚಾರ ಮಾಡುತ್ತಿದ್ದರೂ ಪೊಲೀಸರು ಪ್ರಶ್ನಿಸುತ್ತಿಲ್ಲ. ರಂಜಾನ್, ಬಕ್ರೀದ್ ಹಬ್ಬಗಳ ಸಂದರ್ಭದಲ್ಲಿ ದ್ವಿಚಕ್ರ ವಾಹನಗಳಲ್ಲಿ ಮೂರರಿಂದ ನಾಲ್ಕು ಜನ ಕುಳಿತು ಸವಾರಿ ಮಾಡಿದರೂ ಇವರು ಏಕೆ ಪ್ರಶ್ನಿಸುತ್ತಿಲ್ಲ? ಆದರೆ ಹಿಂದೂಗಳ ಹಬ್ಬದ ದಿನದಂದು ಅಮಾಯಕ ಜನರ ಬಳಿ ಸುಲಿಗೆ ನಡೆಯುತ್ತಿದೆ’ ಎಂದು ದೂರಿದ್ದಾರೆ. 

‘ತಂತ್ರಜ್ಞಾನ ಬಳಸಿ ವಾಹನದ ಮಾಲೀಕರ ಮನೆಗೆ ನೋಟಿಸ್ ಕಳುಹಿಸಿ ದಂಡ ವಸೂಲಾತಿ ಮಾಡಬಹುದು. ಸಂಚಾರ‌ ಪೊಲೀಸರು ಈ ರೀತಿಯ ದುರ್ವರ್ತನೆಯನ್ನು ಬದಲಾಯಿಸಿಕೊಂಡು ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದುವಂತೆ ತಾವು  ಪೊಲೀಸ್ ಇಲಾಖೆಗೆ ಸೂಚನೆ ನೀಡಬೇಕು. ಸಂಚಾರ ಪೊಲೀಸರು ತಮ್ಮ ಮನಃಸ್ಥಿತಿ ಬದಲಾಯಿಸದಿದ್ದರೆ ಮುಂದಿನ ದಿನಗಳಲ್ಲಿ ಸಂಚಾರ ಠಾಣೆಗೆ ಮುತ್ತಿಗೆ ಹಾಕಬೇಕಾಗುತ್ತದೆ’ ಎಂದು ಮನವಿಯಲ್ಲಿ ಹೇಳಲಾಗಿದೆ. 

ಆಜಾದ್ ಹಿಂದೂ ಸೇನೆ ಜಿಲ್ಲಾ ಅಧ್ಯಕ್ಷ ಶಿವು ವಿರಾಟ್, ಮುಖಂಡ ರಾಜೇಶ್, ಗೌರವ ಅಧ್ಯಕ್ಷ ಚಂದ್ರಶೇಖರ್, ಕಿರಣ್, ನಾಗೇಂದ್ರ, ರವಿ, ಕುಮಾರ್, ಮಂಜುನಾಥ್, ರಘು, ಶಿವಣ್ಣ, ಪ್ರವೀಣ್, ಬುಲೆಟ್ ಚಂದ್ರು, ಸಂತೋಷ್, ಎಲ್.ಪೃಥ್ವಿ, ರಾಘವೇಂದ್ರ, ರಘು, ಗ್ರಾಮ ಪಂಚಾಯಿತಿ ಸದಸ್ಯ ರಮೇಶ್, ಮನು ವಿರಾಟ್, ನಾಗಚೇತನ್, ಪ್ರಸಾದ್, ಅಶ್ವಿನ್ ಪ್ರತಿಭಟನೆಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು