ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕೊರೊನಾ ಸೇನಾನಿಗಳು 2021: ಬಡವರಿಗೆ ಆಹಾರ ಧಾನ್ಯ ವಿತರಿಸಿದ ಸಂಸ್ಥೆಗಳು

Last Updated 31 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಸೇಂಟ್ ಜೋಸೆಫ್ ಹೆಲ್ತ್ ಸೆಂಟರ್
ಚಾಮರಾಜನಗರ:
ಜಿಲ್ಲೆಯ ಹನೂರು ತಾಲ್ಲೂಕಿನ ಮಾರ್ಟಳ್ಳಿ, ಹೂಗ್ಯಂ ಗ್ರಾಮಗಳು ಕಾಡಂಚಿನಲ್ಲಿವೆ. ಬಡವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಇಲ್ಲಿ, ಜನರು ಕೂಲಿ ನಾಲಿ ಮಾಡಿಯೇ ಜೀವನ ಸಾಗಿಸುತ್ತಿದ್ದಾರೆ. ಲಾಕ್‌ಡೌನ್‌ ಸಂದರ್ಭದಲ್ಲಿ ಸಂಪಾದನೆ ಇಲ್ಲದೇ ಕಷ್ಟ ಪಡುತ್ತಿದ್ದ ಜನರಿಗೆ ಕೈಲಾದ ಮಟ್ಟಿಗೆ ನೆರವಾಗಿದ್ದು ಗ್ರಾಮದ ಸೇಂಟ್ ಜೋಸೆಫ್ ಹೆಲ್ತ್ ಸೆಂಟರ್ ಸಿಬ್ಬಂದಿ ಹಾಗೂ ಅನಿಷಾ ಸಾವಯವ ಕೃಷಿ ಸಂಸ್ಥೆಗಳು.

ಜನರು ಎದುರಿಸುತ್ತಿರುವ ಕಷ್ಟವನ್ನು ಮನಗಂಡ ಅನಿಷಾ ಸಾವಯವ ಕೃಷಿ ಸಂಸ್ಥೆಯ ಮುಖ್ಯಸ್ಥೆ ವಲ್ಲಿಯಮ್ಮಾಳ್ ಹಾಗೂ ಮಾರ್ಟಳ್ಳಿ ಸೇಂಟ್ ಹೆಲ್ತ್ ಸೆಂಟರ್‌ನ ಮುಖ್ಯಸ್ಥೆ ಸಿಸ್ಟರ್ ಡೆನ್ನಿಸಾ ಅವರು ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ಆಹಾರ ಪದಾರ್ಥ ವಿತರಿಸುವ ಕಾರ್ಯ ಆರಂಭಿಸಿದರು. ಮಾರ್ಟಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ 20 ಗ್ರಾಮಗಳು, ಹೂಗ್ಯಂ ಹಾಗೂ ಕೂಡ್ಲೂರು ಗ್ರಾಮ ಸೇರಿದಂತೆ 4,000 ಕುಟುಂಬಗಳಿಗೆ ಆಹಾರ ಪದಾರ್ಥಗಳನ್ನು ವಿತರಿಸಿದ್ದಾರೆ.

-ಸೇಂಟ್ ಜೋಸೆಫ್ ಹೆಲ್ತ್ ಸೆಂಟರ್
-ಸೇಂಟ್ ಜೋಸೆಫ್ ಹೆಲ್ತ್ ಸೆಂಟರ್

ಶಿಕ್ಷಣ ಸೇವೆ ಹಾಗೂ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಮಾರ್ಟಳ್ಳಿಯಲ್ಲಿ 1954ರಲ್ಲಿ ಸೇಂಟ್ ಜೋಸೆಫ್ ಹೆಲ್ತ್ ಸೆಂಟರ್ ಆರಂಭವಾಯಿತು. ಪ್ರಾರಂಭದಲ್ಲಿ ವಿದೇಶಿ ಕ್ರಿಶ್ಚಿಯನ್ನರ ನಿಯಂತ್ರಣದಲ್ಲಿದ್ದ ಆಸ್ಪತ್ರೆ ಬಳಿಕ ಸ್ಥಳೀಯ ಕ್ರಿಶ್ಚಿಯನ್ನರ ತೆಕ್ಕೆಗೆ ಬಂತು. 60-70 ಹಾಗೂ 70-80 ರ ದಶಕದಲ್ಲಿ ಕಾಣಿಸಿಕೊಂಡ ಮಲೇರಿಯ, ಪ್ಲೇಗ್, ಕಾಲರಾ ಮುಂತಾದ ಮಾರಣಾಂತಿಕ ರೋಗಗಳಿಗೆ ಚಿಕಿತ್ಸೆ ನೀಡಿದ ಸೇವೆಯನ್ನು ಇಂದಿಗೂ ಮಾರ್ಟಳ್ಳಿ ಸುತ್ತಮುತ್ತಲ ಗ್ರಾಮದ ಜನ ಇಂದಿಗೂ ನೆನೆಸಿಕೊಳ್ಳುತ್ತಾರೆ. ಅಲ್ಲದೇ ಅರಣ್ಯದೊಳಗಿರುವ ಗ್ರಾಮದ ಜನರಿಗೆ ಚಿಕಿತ್ಸಾ ಸೌಲಭ್ಯ ನೀಡುತ್ತಾ ಬರುತ್ತಿದೆ. ಮುಖ್ಯವಾಗಿ ಹೆರಿಗೆ ವಿಷಯದಲ್ಲಿ ಈ ಆಸ್ಪತ್ರೆ ಸದಾ ಕಾರ್ಯ ನಿರ್ವಹಿಸಿಕೊಂಡು ಬರುತ್ತಿದೆ.

‘ಲಾಕ್‌ಡೌನ್‌ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಗ್ರಾಮೀಣ ಭಾಗದ ಜನರಿಗೆ ಸಹಾಯಮಾಡಬೇಕು ಎಂದು ನಿರ್ಧರಿಸಿದಾಗ ಸೆಂಟರ್‌ನ ಫ್ರಾನ್ಸಿಸ್ ಆಫ್ ಸಿಸ್ಟರ್ಸ ಆಫ್ ಮೇರಿ ವತಿಯಿಂದ ಹಾಗೂ ಅನಿಷಾ ಸಂಸ್ಥೆಯೊಂದಿಗೆ ಸೇರಿ ಬಡಜನರಿಗೆ ಆಹಾರ ಪದಾರ್ಥಗಳನ್ನು ವಿತರಿಸುವ ಕಾರ್ಯವನ್ನು ಮಾಡಿದ್ದೇವೆ’ ಎಂದು ಹೆಲ್ತ್‌ ಸೆಂಟರ್‌ ಮುಖ್ಯಸ್ಥೆ ಸಿಸ್ಟರ್ ಡೆನ್ನಿಸಾ ಹೇಳುತ್ತಾರೆ.

**
ಅನಿಷಾ ಸಾವಯವ ಕೃಷಿ ಸಂಸ್ಥೆ
ಚಾಮರಾಜನಗರ: ಗ್ರಾಮೀಣ ಭಾಗದ ರೈತರಲ್ಲಿ ಸಾವಯವ ಕೃಷಿಯ ಬಗ್ಗೆ ಅರಿವು ಮೂಡಿಸುವ ದೃಷ್ಟಿಯಿಂದ ಮಾರ್ಟಳ್ಳಿ ಗ್ರಾಮದಲ್ಲಿ 2006ರಲ್ಲಿ ಅನಿಷಾ ಎಂಬ ಹೆಸರಿನಡಿ ಸಾವಯವ ಕೃಷಿ ಸಂಸ್ಥೆಯನ್ನು ತೆರೆಯಲಾಯಿತು. ಹತ್ತು ವರ್ಷಗಳ ಕಾಲ ಸ್ಥಳೀಯ ಹಾಗೂ ಹೊರ ಜಿಲ್ಲೆಗಳ ರೈತರಿಗೂ ಸಾವಯವ ಕೃಷಿಯ ಬಗ್ಗೆ ತರಬೇತಿ ನೀಡುತ್ತಾ ಬಂದಿರುವ ಅನಿಷಾ ಸಂಸ್ಥೆ ಸಾಮಾಜಿಕ ಕಾರ್ಯಗಳಲ್ಲೂ ತನ್ನನ್ನು ತೊಡಗಿಸಿಕೊಂಡಿದೆ.

ವಲ್ಲಿಯಮ್ಮಾಳ್‌ ನೇತೃತ್ವದ ಈ ಸಂಸ್ಥೆ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವುದರ ಜೊತೆಗೆ ಅವರ ಶೈಕ್ಷಣಿಕ ವೆಚ್ಚ ಭರಿಸುವುದು, ನಿರ್ಗತಿಕರಿಗೆ ಉದ್ಯೋಗ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ. 2016 ರಿಂದ ಶಾಲೆಗಳಲ್ಲಿ ಮಕ್ಕಳಿಗೆ ಸಾವಯವ ಕೃಷಿಯ ಬಗ್ಗೆ ತರಬೇತಿ ನೀಡುತ್ತಾ ಬಂದಿದೆ. ಸಾವಯವ ಕೃಷಿ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ದೇಶಿ ಬಿತ್ತನೆ ಬೀಜ ಬ್ಯಾಂಕ್ ಅನ್ನು ಸಂಸ್ಥೆ ನಿರ್ವಹಿಸುತ್ತಿದೆ. 300 ಬಗೆಯ ನಾಟಿ ಬಿತ್ತನೆ ಬೀಜಗಳಿವೆ.

-ಅನಿಷಾ ಸಾವಯವ ಕೃಷಿ ಸಂಸ್ಥೆ
-ಅನಿಷಾ ಸಾವಯವ ಕೃಷಿ ಸಂಸ್ಥೆ

‘ಇಲ್ಲಿನ ಬಹುತೇಕ ಜನರು ತಮಿಳುನಾಡಿನ ಕ್ವಾರಿಗಳಲ್ಲಿ ಜೆಸಿಬಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್‌ನಿಂದಾಗಿ ಅವರೆಲ್ಲ ಗ್ರಾಮಕ್ಕೆ ವಾಪಸ್ಸಾದ ಮೇಲೆ ಒಂದು ಹೊತ್ತಿನ ಊಟಕ್ಕೂ ಕಷ್ಟವಾಗಿರುವ ಬಗ್ಗೆ ಮಾಹಿತಿ ತಿಳಿದು ಅವರಿಗೆ ಆಹಾರ ಪದಾರ್ಥ ವಿತರಿಸಬೇಕು ಎಂದು ನಿರ್ಧರಿಸಿದೆ. ಇದಕ್ಕೆ ಸೇಂಟ್ ಜೋಸೆಫ್ ಹೆಲ್ತ್ ಸೆಂಟರ್ ಸಿಬ್ಬಂದಿ ಹಾಗೂ ಇಲ್ಲಿ ಮಾರ್ಟಳ್ಳಿ ಶಿಕ್ಷಕರ ಬಳಗ ಸಹಕಾರ ನೀಡಿದೆ’ ಎಂದು ಹೇಳುತ್ತಾರೆ ವಲ್ಲಿಯಮ್ಮಾಳ್‌.


**
ವಾರಿಯರ್‌ ಆಗಿ ದುಡಿದ ದಾಕ್ಷಾಯಿಣಿ
ಚಾಮರಾಜನಗರ: ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ಜನರಲ್ಲಿ ಕೊರೊನಾ ವೈರಸ್‌ ಹಾಗೂ ಅದರ ಹರಡುವಿಕೆ ತಡೆಯುವ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸ್ವ ಇಚ್ಛೆಯಿಂದ ಕೊರೊನಾ ವಾರಿಯರ್‌ ಆಗಿ ದುಡಿದವರು ಚಾಮರಾಜನಗರದ ದಾಕ್ಷಾಯಿಣಿ ಎನ್‌‌.

ಕೋವಿಡ್‌–19ಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿಗಳ ಮೇಲೆ ನಿಗಾ ಇಡುವುದಕ್ಕಾಗಿ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ವಾರ್ತಾ ಹಾಗೂ ಕಾರ್ಮಿಕ ಇಲಾಖೆಗಳು ಸ್ವಯಂ ಸೇವಕರನ್ನು ಬಳಸಿಕೊಂಡಿತ್ತು. ಜಿಲ್ಲೆಯಲ್ಲಿ 30 ಮಂದಿಯಾಗಿ ಸ್ವಯಂ ಸೇವಕರು ದುಡಿದ್ದರು. ಅವರಲ್ಲಿ ದಾಕ್ಷಾಯಿಣಿ ಕೂಡ ಒಬ್ಬರು.

ಬಿ.ಎ ಪದವೀಧರೆ ಆಗಿರುವ ದಾಕ್ಷಾಯಿಣಿ ಅವರು ನೆಹರು ಯುವ ಕೇಂದ್ರದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಾರೆ. ಜನರು ಕಷ್ಟದಲ್ಲಿರುವಾಗ ತನ್ನಿಂದಾದ ಸಹಾಯಮಾಡಬೇಕು ಎಂಬ ಉದ್ದೇಶದಿಂದ ಸ್ವಯಂ ಸೇವಕಿಯಾಗಿ ನೋಂದಣಿ ಮಾಡಿಕೊಂಡ ದಾಕ್ಷಾಯಿಣಿ ಅವರು ಪ್ರತಿಫಲಾಪೇಕ್ಷೆ ಇಲ್ಲದೇ ಕೆಲಸ ಮಾಡಿದ್ದಾರೆ. ಸ್ವಯಂ ಸೇವಕಿಯಾಗಿ ಕಾರ್ಯನಿರ್ವಹಿಸಿದ ಬಳಿಕ ಅವರನ್ನೂ ಕೊರೊನಾ ವೈರಸ್ ಕಾಡಿದೆ. ಸೋಂಕನ್ನು ಅವರು ಯಶಸ್ವಿಯಾಗಿ ಜಯಿಸಿದ್ದಾರೆ.

ಲಾಕ್‌ಡೌನ್‌ ಅವಧಿಯಲ್ಲಿ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಅಗತ್ಯವಾದ ಔಷಧಿಗಳನ್ನು ಪೂರೈಸುವುದು, ವಿವಿಧ ಕಡೆಗಳಲ್ಲಿ ಆಶ್ರಯ ಪಡೆದಿದ್ದ ವಲಸೆ ಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳನ್ನು ಪೂರೈಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಕಾಪಾಡಿಕೊಳ್ಳುವಂತೆ ನೋಡಿಕೊಳ್ಳುವುದು, ಜನರಿಗೆ ಆರೋಗ್ಯ ಸೇತು ಆ್ಯಪ್ ಬಗ್ಗೆ ವಿವರಿಸಿ ಅದನ್ನು ‌ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಮಾಡುವುದು, ಕರಪತ್ರಗಳ ಹಂಚುವಿಕೆ... ಸೇರಿದಂತೆ ಜಾಗೃತಿ ಮೂಡಿಸುವ ಹಲವು ಕೆಲಸಗಳನ್ನು ದಾಕ್ಷಾಯಿಣಿ ಅವರು ತಂಡದೊಂದಿಗೆ ಸೇರಿ ಮಾಡಿದ್ದಾರೆ.

'ಜನರು ಭಯದಲ್ಲಿದ್ದ ಸಂದರ್ಭ ಅದು. ಜನರು ಸಂಕಷ್ಟದಲ್ಲಿದ್ದರು. ನನ್ನಿಂದಾಗುವ ಸಹಾಯವನ್ನು ಮಾಡಬೇಕು ಎಂದು ಎನಿಸಿತು. ಸ್ವಯಂ ಸೇವಕಿಯಾಗಿ ದುಡಿಯಲು ಅವಕಾಶ ಇದೆ ಎಂದು ಗೊತ್ತಾದಾಗ ಖುಷಿಯಿಂದಲೇ ಹೆಸರು ನೋಂದಾಯಿಸಿಕೊಂಡೆ. ದೊಡ್ಡ ಸಾಧನೆಯೇನೂ ನಾನು ಮಾಡಿಲ್ಲ. ಆದರೆ, ಮಾಡಿದ ಕೆಲಸದಲ್ಲಿ ತೃಪ್ತಿ ಇದೆ’ ಎಂದು ಹೇಳುತ್ತಾರೆ ದಾಕ್ಷಾಯಿಣಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT