ಅವಿನ್ ಪ್ರಕಾಶ್ ವಿ.
ಕೊಳ್ಳೇಗಾಲ: ಕೃಷಿಯಲ್ಲಿ ಲಾಭ ಕಡಿಮೆ, ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುವುದಿಲ್ಲ ಎಂದು ಬಹುತೇಕ ರೈತರು ಬೇಸರ ವ್ಯಕ್ತಪಡಿಸುತ್ತಾರೆ. ಆದರೆ, ಕೃಷಿಯನ್ನು ಅಪ್ಪಿಕೊಂಡ ಎಂಜಿನಿಯರ್ ಪದವೀಧರರೊಬ್ಬರು ‘ಕೃಷಿಯಲ್ಲಿ ಸ್ವರ್ಗವಿದೆ’ ಎಂದು ಪ್ರತಿಪಾದಿಸುತ್ತಾರೆ!
ತಾಲ್ಲೂಕಿನ ಸತ್ತೇಗಾಲ ಗ್ರಾಮದ ರೈತ ಪ್ರಶಾಂತ್ ಅವರು ಕೃಷಿ ಕುಟುಂಬಕ್ಕೆ ಸೇರಿದವರು. ಹಾಗಾಗಿ, ಕೃಷಿಯ ಬಗ್ಗೆ ಅವರದ್ದು ಸಹಜ ಒಲವು. ವಿದ್ಯಾಭ್ಯಾಸ ಮಾಡುವಾಗಲೂ ಕೃಷಿ ಬಗ್ಗೆ ಆಸಕ್ತಿ ಹೊಂದಿದ್ದರು. ಎಂಜಿನಿಯರಿಂಗ್ ಪದವಿಯ ನಂತರ ಉದ್ಯೋಗಕ್ಕೆ ಹೋಗದೆ, ಪೂರ್ಣಕಾಲಿಕವಾಗಿ ಕೃಷಿಯಲ್ಲಿ ತೊಡಗಿಕೊಂಡರು.
ಕೃಷಿಯಲ್ಲಿ ಏನಾದರೂ ಸಾಧಿಸಲೇ ಬೇಕು ಎಂಬ ಛಲ ಹೊಂದಿರುವ ಅವರು, ನೈಸರ್ಗಿಕ ಕೃಷಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಎಂಟು ಎಕರೆ ತೋಟದಲ್ಲಿ ಉಳುಮೆ ರಹಿತವಾಗಿ ತೆಂಗು, ಬಾಳೆ, ಅರಿಸಿನ, ಇನ್ನಿತರೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕ ಬಳಸದೇ ವಿಷಮುಕ್ತವಾಗಿ ಬೆಳೆಯುವ ಇವರ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಇದ್ದು, ಕೆಲವು ಗ್ರಾಹಕರು ನೇರವಾಗಿ ಇವರ ತೋಟಕ್ಕೆ ಬಂದು ಖರೀದಿಸುತ್ತಾರೆ.
ಬೆಳೆ ವೈವಿಧ್ಯ: ಪ್ರಶಾಂತ್ ಅವರ ತೋಟದಲ್ಲಿ ಬೆಳೆಗಳ ವೈವಿಧ್ಯ ಕಾಣಬಹುದು. ಮೇವು, ಗೊಬ್ಬರದ ಬೆಳೆಗಳನ್ನು ಬೆಳೆಯುತ್ತಾರೆ. ವಾರ್ಷಿಕ ಬೆಳೆಗಳಾದ ತೆಂಗು, ಅಡಿಕೆ, ಬಾಳೆ ಮತ್ತು ಇತರೆ ಹಣ್ಣಿನ ಮರಗಳೂ ಇಲ್ಲಿವೆ. ಅರಿಸಿನ, ಕಾಳು ಮೆಣಸು, ಬಟರ್ ಫ್ರೂಟ್, ಹಲಸು, ನಿಂಬೆ, ಮಾವು, ನೇರಳೆ, ಸೀತಾಫಲ, ರಾಮಫಲ, ನುಗ್ಗೆ, ಸುವರ್ಣ ಗೆಡ್ಡೆ, ಮರೆಗೆಣಸು, ಬಿದಿರು ಇವೆ. ಮನೆ ಬಳಕೆಗೆ ಬೇಕಾಗುವ ತರಕಾರಿಗಳನ್ನೂ ಬೆಳೆಯುತ್ತಾರೆ.
ಕೃಷಿ ಅರಣ್ಯ: ಅರಣ್ಯ ಕೃಷಿಯಲ್ಲೂ ಅವರು ತೊಡಗಿಕೊಂಡಿದ್ದಾರೆ. ಹಿಂದೆ ತಮ್ಮ ಜಮೀನಿನಲ್ಲಿ 100 ತೇಗ, 200 ಸಿಲ್ವರ್ ಓಕ್, ಹೊಂಗೆ, ಬೇವು, ಶ್ರೀಗಂಧ, ಬೀಟೆ, ಬಿದಿರು ಮತ್ತು ಇತರೆ ಕಾಡು ಜಾತಿಯ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ.
ಇವರ ತೋಟಕ್ಕೆ ಹೋದರೆ ಕಾಡಿನಲ್ಲಿ ಸಂಚಾರ ಮಾಡಿದ ಅನುಭವವಾಗುತ್ತದೆ. 350 ತೆಂಗಿನ ಮರಗಳಿದ್ದು, ಇದರಲ್ಲಿ 250 ತೆಂಗಿನ ಮರಗಳು ಫಲ ನೀಡುತ್ತಿವೆ. ತೆಂಗಿನ ಕಾಯಿ ಮಾರಾಟದಿಂದಲೂ ಆದಾಯ ಗಳಿಸುತ್ತಿದ್ದಾರೆ. ಚಂದ್ರಗಿರಿ ತಳಿಯ ಸುಮಾರು 2,000 ಕಾಫಿ ಗಿಡಗಳನ್ನು ನರ್ಸರಿ ಮಾಡಲಾಗಿದ್ದು, ತೆಂಗು ಮತ್ತು ಅಡಿಕೆ ಮಧ್ಯೆ ಅಂತರ ಬೆಳೆಯಾಗಿ ಹಾಕಲು ಸಿದ್ಧತೆ ನಡೆಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.