ಸೋಮವಾರ, ಜುಲೈ 4, 2022
24 °C
ಯಳಂದೂರು: ಗಮನ ಸೆಳೆಯುತ್ತಿದೆ ಅಗರ ರವಿ ಅವರ ಪ್ರಯೋಗ

ಭವಿಷ್ಯದ ದಿನಗಳಿಗೆ 'ಅರಣ್ಯ ಕೃಷಿ' ಕನಸು

ನಾ.ಮಂಜುನಾಥಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ಬೇಸಾಯ ನಾಳಿನ ನೆಮ್ಮದಿಗೆ ಬುನಾದಿ ಆಗಬೇಕು. ಉತ್ತಮ ಆದಾಯವೂ ಕೈಸೇರಬೇಕು. ಬೆಳೆ ಜೀವನ ಕಟ್ಟಿಕೊಡಬೇಕು ಎಂಬ ಉದ್ದೇಶದಿಂದ ಯುವಕರು ಹಿಡುವಳಿಗಳಲ್ಲಿ ಹೊಸ ಹೊಸ ಪ್ರಯೋಗ ಮಾಡುತ್ತಿದ್ದಾರೆ.

ಅರಣ್ಯ ಕೃಷಿಯೂ ಯುವ ರೈತರನ್ನು ಆಕರ್ಷಿಸುತ್ತಿದೆ. ತಾಲ್ಲೂಕಿನ ಅಗರ ಗ್ರಾಮದ ರೈತ ರವಿ ಅವರು ಕೃಷಿಯೊಂದಿಗೆ ಗಿಡ ಮರಗಳನ್ನು ಬೆಳೆಸುವ ಪ್ರಯೋಗ ನಡೆಸುತ್ತಿದ್ದು, ಎಲ್ಲರ ಪ್ರಯೋಗ ಗಮನ ಸೆಳೆದಿದೆ.

ರವಿ ಕಲಿತಿದ್ದು ಹತ್ತನೇ ತರಗತಿ. ತಂದೆಯ ಮಾರ್ಗದರ್ಶನದಿಂದ ಮಿಶ್ರ ಕೃಷಿ ಪದ್ಧತಿಯತ್ತ ಆಕರ್ಷಿತರಾದರು. ತಮ್ಮ ಎರಡು ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡುವ ಮೊದಲು ಒಂದಷ್ಟು ಅಧ್ಯಯನ ಮಾಡಿದರು. ಆಧುನಿಕ ಮತ್ತು ಸಾವಯವ ಮಾದರಿಗಳಲ್ಲಿ ಪಳಗಿದರು. 

ಕೃಷಿಕರಿಗೆ ಹವಾಮಾನ, ನೀರು, ವಿದ್ಯುತ್ ಒಂದೇ ರೀತಿ ಲಭಿಸದು. ಆಯಾ ಮಣ್ಣಿನ ಆರೋಗ್ಯವೂ ತಿಳಿದಿರಬೇಕು. ಯಾವ ಸಮಯ ಬಿತ್ತನೆ ಮಾಡಬೇಕು ಎಂಬುದರ ಜ್ಞಾನ ಇರಬೇಕು. ಎಲ್ಲವನ್ನೂ ಅರಿತು ನಾಟಿ ಮಾಡಬೇಕು. ದೀರ್ಘಾವಧಿ ಕೃಷಿ ಜೀವನದ ಸಂಧ್ಯಾ ಕಾಲದಲ್ಲಿ ನೆರವಾಗಬೇಕು. ನಿರಂತರ ಆದಾಯದ ಕನಸನ್ನು ಈಡೇರಿಸಬೇಕು. ಈ ಆಲೋಚನೆಯ ಭಾಗವಾಗಿ ಎರಡು ಎಕರೆಯಲ್ಲಿ 2 ಸಾವಿರ ಬಾಳೆಯ ಜೊತೆಗೆ 700 ಮಹಾಗನಿ ಗಿಡಗಳನ್ನು ರವಿ ನೆಟ್ಟಿದ್ದಾರೆ. 

ರವಿ ಅವರದ್ದು ಮಣ್ಣು ಮರಳು ಮಿಶ್ರತ ಜಮೀನು. ಹೆಚ್ಚು ನೀರು ಇಂಗುವುದಿಲ್ಲ. ದೀರ್ಘಕಾಲ ತೇವಾಂಶ ಇರುತ್ತದೆ. ಈ ಭೂಮಿಯಲ್ಲಿ ಬಾಳೆ, ಬದನೆ, ತೆಂಗು, ಅಡಿಕೆ ನಾಟಿ ಮಾಡಲಾಗಿದೆ. ಬಾಳೆಯ ಜೊತೆ ಮಹಾಗನಿ ಸಸಿಗಳನ್ನು ನಾಟಿ ಮಾಡಿದ್ದು, ಅವೀಗ ಬೆಳೆದು ಜಮೀನಿನ ಸುತ್ತಲೂ ಜೀವಂತ ಬೇಲಿ ನಿರ್ಮಿಸಿವೆ. ಹೊರ ನೋಟಕ್ಕೆ ಅರಣ್ಯದ ಸಾಲಿನಂತೆ ಕಾಣುತ್ತಿದ್ದು, ಹಲವಾರು ರೈತರು ರವಿ ಅವರಿಂದ ಮಾಹಿತಿ ಪಡೆಯುತ್ತಿದ್ದಾರೆ.

‘ಕೃಷಿಗೆ ಇಳಿಯುವ ಮೊದಲು ಕೃಷಿಕರ ಸಂಕಷ್ಟದ ಬಗ್ಗೆ ಅರಿವಿರಬೇಕು. 20 ರಿಂದ 30 ವರ್ಷದ ನಂತರ ಕಟಾವಿಗೆ ಬರುವ ವೃಕ್ಷ ಕೃಷಿ ವಿಧಾನ ಕೆಲವರಿಗೆ ವಿಚಿತ್ರ ಎನಿಸಬಹುದು. ಆದರೆ, ಯೋಚಿಸಿ ನೋಡಿದರೆ ಭವಿಷ್ಯದಲ್ಲಿ ಇವು ಬಹು ದೊಡ್ಡ ಲಾಭ ನೀಡುತ್ತದೆ. ಅನ್ನದಾತರಿಗೆ ನೆಮ್ಮದಿಯ ನಾಳೆಗಳು ಸಿಗುವ ಭರವಸೆಯನ್ನು ಕೊಡುತ್ತದೆ. ಆದರೆ, ಸಣ್ಣ ಹಿಡುವಳಿದಾರರು ಅರಣ್ಯ ಕೃಷಿ ಮಾಡುವ ಮೊದಲು ಹತ್ತಾರು ರೈತರ ಹೊಲಗಳಿಗೆ ಭೇಟಿ ನೀಡಿ ನಂತರ ಮುಂದುವರಿಯಬೇಕು. ಆಯಾ ಭೂ ಭಾಗದ ಫಲವತ್ತತೆ, ಪರಿಸರದ ಬಗ್ಗೆ ತಿಳಿದಿರಬೇಕು. ಮುಂದಾಲೋಚನೆ ಇಲ್ಲದೆ ಕೃಷಿ ಚಟುವಟಿಕೆ ಆರಂಭಿಸಬಾರದು’ ಎಂದು ಸಲಹೆ ನೀಡುತ್ತಾರೆ ರವಿ.

ಧನಸಹಾಯ ಪಡೆಯಿರಿ

ಕೃಷಿಯಲ್ಲಿ ಸಾವಯವ ಕೃಷಿಯಿಂದಲೇ ಬದುಕು ಕಟ್ಟಿಕೊಳ್ಳುವುದು ಕಷ್ಟಸಾಧ್ಯ. ಯತೇಚ್ಛ ಹಟ್ಟಿ ಗೊಬ್ಬರಗಳ ಬಳಕೆಯ ಜೊತೆಗೆ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಸೀಮಿತ ಬಳಕೆ ಬಗ್ಗೆಯೂ ಅರಿವಿರಬೇಕು. ಇದರಿಂದ ಸುಸ್ಥಿರ ಕೃಷಿ ಸಾಧ್ಯ ಎನ್ನುವ ರವಿ ಅವರು, ಬಹುತೇಕ ಕೆಲಸಗಳನ್ನು ತಾವೇ ನಿರ್ವಹಿಸುತ್ತಾರೆ.

‘ಮಳೆ ಬಂದಾಗ ಬಸಿಗಾಲುವೆ ನಿರ್ಮಾಣ, ಔಷಧ ಸಿಂಪಡಣೆ ಇನ್ನಿತರ ಕೆಲಸಗಳಿಗೆ ಆಳುಗಳನ್ನು ಆಶ್ರಯಿಸುವುದನ್ನು ತಪ್ಪಿಸಬೇಕು. ಬಾಳೆ, ಹನಿ ನೀರಾವರಿ ಮತ್ತು ಕೃಷಿ ಅರಣ್ಯ ಅಭಿವೃದ್ಧಿಗೆ ಸರ್ಕಾರ ನೀಡುವ ಸಹಾಯಧನವನ್ನು ರೈತರು ಪಡೆಯಲೇಬೇಕು. ವೈಜ್ಞಾನಿಕ ಬೆಲೆ ಸಿಗದಿದ್ದಾಗ ಆಗುವ ಬೆಲೆ ನಷ್ಟವನ್ನು ಈ ಮೂಲಕ ತುಸು ಕಡಿಮೆ ಮಾಡಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗುವ ಕೃಷಿ ಪದ್ಧತಿಗಳು ಅಥವಾ ಕೃಷಿ ವಿಧಾನಗಳನ್ನು ಸರಿಯಾಗಿ ಪರಿಶೀಲಿಸದೆ ಅನುಸರಿಸಬಾರದು’ ಎಂದು ಹೇಳುತ್ತಾರೆ ರವಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು