ಶನಿವಾರ, ಏಪ್ರಿಲ್ 1, 2023
23 °C
ಸಂತೇಮರಹಳ್ಳಿ: ರೈತ ಗುರುಪಾದಸ್ವಾಮಿಯ ವ್ಯವಸಾಯ

ಬಾಳೆ ನಡುವೆ ಯಶಸ್ವಿ ಅಂತರ ಬೆಳೆ

ಮಹದೇವ್‌ ಹೆಗ್ಗವಾಡಿಪುರ Updated:

ಅಕ್ಷರ ಗಾತ್ರ : | |

Prajavani

ಸಂತೇಮರಹಳ್ಳಿ: ಬಾಳೆ ಜೊತೆಗೆ ಅಂತರ್ ಬೆಳೆಯಾಗಿ ವಿವಿಧ ಬೆಳೆಗಳನ್ನು ಬೆಳೆಯುತ್ತಾ ಪ್ರತಿ ಮೂರು ತಿಂಗಳಿಗೊಮ್ಮೆ ಲಾಭ ಗಳಿಸುತ್ತಿದ್ದಾರೆ ಸಂತೇಮರಹಳ್ಳಿಯ ಗುರುಪಾದಸ್ವಾಮಿ.

ಇವರು ತಮ್ಮ ಎರಡು ಎಕರೆ ಜಮೀನಿನಲ್ಲಿ ಬಾಳೆ ಜೊತೆಗೆ ಟೊಮೆಟೊ, ಮಂಗಳೂರು ಸೌತೆ ಹಾಗೂ ಸಣ್ಣ ಈರುಳ್ಳಿಯನ್ನು ಬೆಳೆಯುತ್ತಾರೆ. ಒಂದು ಬೆಳೆ ಕಟಾವಾದ ನಂತರ ಮತ್ತೊಂದು ಬೆಳೆಯನ್ನು ಬೆಳೆಯುತ್ತಾರೆ. ಪ್ರತಿ ಮೂರು ತಿಂಗಳಿಗೊಮ್ಮೆ ಅಂತರ ಬೆಳೆ ಬದಲಾಗುತ್ತಿರುತ್ತದೆ.   

ಗುರುಪಾದಸ್ವಾಮಿಯವರು ಪದವಿ ಮುಗಿಸಿದ ನಂತರ ಖಾಸಗಿ ಕಂಪನಿಯೊಂದರಲ್ಲಿ ನೌಕರಿಗೆ ಸೇರಿದ್ದರು. ಅಲ್ಲಿ ಈಗಿನ ಒತ್ತಡಕ್ಕೆ ಬೇಸತ್ತು ಕೆಲಸ ಬಿಟ್ಟು ಬೇಸಾಯಕ್ಕೆ ಇಳಿದರು.

ಒಂದೇ ಬೆಳೆಯನ್ನು ನೆಚ್ಚಿಕೊಂಡರೆ ಆಗದು ಎಂಬ ತೀರ್ಮಾನಕ್ಕೆ ಬಂದ ಅವರು, ಬೇರೆ ಬೆಳೆಗಳತ್ತ ಗಮನ ಹರಿಸಿದರು. ಬಾಳೆಯ ಮಧ್ಯೆ ಅಂತರ ಬೆಳೆಯನ್ನು ಹಾಕುವ ತೀರ್ಮಾನಕ್ಕೆ ಬಂದರು. ಅದು ಅವರ ಕೈಹಿಡಿದಿದೆ. 

ಸದ್ಯ ಬಾಳೆ ನಡುವೆ ಈರುಳ್ಳಿ ಬಿತ್ತನೆ ಮಾಡಿದ್ದಾರೆ. ತೆರಕಣಾಂಬಿಯ ಸಂತೆಯಲ್ಲಿ ಕ್ವಿಂಟಲ್‌ಗೆ ₹ 4 ಸಾವಿರ ನೀಡಿ, ಆರು ಕ್ವಿಂಟಲ್ ಬೀಜದ ಈರುಳ್ಳಿ ತಂದು ಬಿತ್ತನೆ ಮಾಡಿದ್ದಾರೆ. ಬಿತ್ತನೆಯ ನಂತರ ಈರುಳ್ಳಿ ಬೆಳೆ ಒಂದು ತಿಂಗಳಿಗೆ ಬರುವ ಹಂತದಲ್ಲಿ ಔಷಧಿ ಸಿಂಪಡಿಸಿದ್ದಾರೆ. ಜತೆಗೆ ವ್ಯವಸಾಯ, ಕೂಲಿ ಆಳುಗಳು, ಔಷಧ ಸಿಂಪಡಣೆ ಸೇರಿದಂತೆ ₹ 80 ಸಾವಿರದಿಂದ ₹1 ಲಕ್ಷದವರೆಗೆ ಖರ್ಚು ಮಾಡಿದ್ದಾರೆ.

ಕೊಳವೆ ಬಾವಿ ಹೊಂದಿರುವ ಅವರು ಈರುಳ್ಳಿ ಹಾಗೂ ಬಾಳೆಗೆ ಹನಿ ನೀರಾವರಿ ಪದ್ಧತಿಯಲ್ಲಿ ನೀರುಣಿಸುತ್ತಿದ್ದಾರೆ.

‘ವಾರ ಕಳೆದರೆ ಈರುಳ್ಳಿ ಕಟಾವು ಹಂತಕ್ಕೆ ಬರುತ್ತದೆ. 40 ಕ್ವಿಂಟಲ್‌ವರೆಗೆ ಇಳುವರಿ ಸಿಗುವ ನಿರೀಕ್ಷೆ ಇಟ್ಟುಕೊಂಡಿದ್ದೇನೆ. ಈಗಿನ ದರದಲ್ಲಿ ₹ 2 ಲಕ್ಷದಿಂದ ₹ 2.50 ಲಕ್ಷ ದೊರೆಯಬಹುದು. ಬೆಲೆ ಹೆಚ್ಚಾದರೆ ಆದಾಯವೂ ಹೆಚ್ಚಾಗಲಿದೆ’ ಎಂದು ಗುರುಪಾದಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಬಾಳೆಯನ್ನು ವಾರ್ಷಿಕ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಎರಡು ಎಕರೆಯಲ್ಲಿ 2 ಸಾವಿರ ನೇಂದ್ರ ಗಿಡಗಳನ್ನು ಹಾಕಿದ್ದಾರೆ. ವ್ಯವಸಾಯ, ಗೊಬ್ಬರ ಸೇರಿದಂತೆ ಬಾಳೆ ಕಟಾವು ಹಂತಕ್ಕೆ ಬರುವವರೆಗೆ ₹ 1.5 ಲಕ್ಷದವರೆಗೆ ಖರ್ಚಾಗುತ್ತದೆ. 25ರಿಂದ 30 ಟನ್‌ವರೆಗೆ ಇಳುವರಿ ಬರುತ್ತದೆ. ಬೆಲೆ ಚೆನ್ನಾಗಿದ್ದರೆ ₹ 5 ಲಕ್ಷದಿಂದ ₹ 6 ಲಕ್ಷದವರೆಗೆ ಹಣ ಸಿಗಬಹುದು’ ಎಂದು ಆದಾಯದ ಲೆಕ್ಕಾಚಾರವನ್ನು ಅವರು ಬಿಚ್ಚಿಟ್ಟರು.

ಹೈನುಗಾರಿಕೆಗೂ ಒತ್ತು

ಗುರುಪಾದಸ್ವಾಮಿಯವರು ಹೈನುಗಾರಿಕೆಗೂ ಒತ್ತು ನೀಡಿದ್ದಾರೆ. ಹಸುಗಳನ್ನು ಸಾಕಿಕೊಂಡು ಡೇರಿಗೂ ಹಾಲು ಹಾಕುತ್ತಿದ್ದಾರೆ. 

ಸದ್ಯ ಒಂದು ಹಸು ಹಾಲು ನೀಡುತ್ತಿದೆ. ಪ್ರತಿ ದಿನ ಡೇರಿಗೆ ಐದು ಲೀಟರ್ ಹಾಲು ನೀಡುತ್ತಿದ್ದಾರೆ. ಪ್ರತಿ ವಾರವೂ ₹ 1 ಸಾವಿರ ಆದಾಯ ಬರುತ್ತದೆ. ತಮ್ಮ ಜಮೀನಿನ ಸುತ್ತ ಹಸುಗಳಿಗಾಗಿ ಮೇವು ಬೆಳೆಸಿದ್ದಾರೆ.

‘ವ್ಯವಸಾಯವನ್ನು ಆಸಕ್ತಿಯಿಂದ ಮಾಡುತ್ತಿದ್ದೇವೆ. ಫಸಲು ಮಾರಾಟ ಸಮಯದಲ್ಲಿ ಬೆಲೆ ಏರುಪೇರಾಗಿ ಜೂಜಾಟದಂತಾಗುತ್ತದೆ. ಬೆಲೆ ಹೆಚ್ಚಾದರೇ ರೈತರಿಗೆ ಅನುಕೂಲ. ಕಡಿಮೆಯಾದರೆ ನಷ್ಟ ಖಚಿತ. ಹಾಗಾಗಿ, ರೈತರು ಬೆಳೆದ ಬೆಳೆಗಳಿಗೆ ಸರ್ಕಾರ ವೈಜ್ಞಾನಿಕ ದರ ನಿಗದಿಗೊಳಿಸಬೇಕು’ ಎಂದು ಗುರುಪಾದಸ್ವಾಮಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.