ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಹಿಂಗಾರು ಬಿತ್ತನೆ ಚುರುಕು; 23,930 ಹೆಕ್ಟೇರ್‌ ಗುರಿ

ಉತ್ತಮ ಮಳೆಯಿಂದ ಕೃಷಿಗೆ ಅನುಕೂಲ; ಹುರುಳಿ, ಹಸಿಕಡಲೆಗೆ ಹೆಚ್ಚಿನ ಒತ್ತು
Last Updated 16 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಮುಂಗಾರು ಬಿತ್ತನೆಯಲ್ಲಿ ಗುರಿ ಸಾಧಿಸಿರುವ (ಶೇ 101.23) ಜಿಲ್ಲೆಯ ರೈತರು, ಈಗ ಹಿಂಗಾರು ಅವಧಿಯ ಬಿತ್ತನೆಯನ್ನು ಆರಂಭಿಸಿದ್ದಾರೆ. ವಾರದ ಹಿಂದೆ ಉತ್ತಮ ಮಳೆಯಾಗಿ ಬಿತ್ತನೆಗೆ ಉತ್ತಮ ವಾತಾವರಣ ನಿರ್ಮಾಣವಾಗಿದ್ದು, ಹಸಿಕಡಲೆ, ಅವರೆ, ಹುರುಳಿ, ಮುಸುಕಿನ ಜೋಳ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆ ಜಿಲ್ಲೆಯಾದ್ಯಂತ ನಡೆಯುತ್ತಿದೆ.

ಹಿಂಗಾರಿನ ಅವಧಿಯಲ್ಲಿ ಒಟ್ಟು 23,930 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡುವ ಗುರಿಯನ್ನು ಕೃಷಿ ಇಲಾಖೆ ಹಾಕಿಕೊಂಡಿದ್ದು, ಗುರುವಾರದವರೆಗೆ 4,115 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಶೇಕಡವಾರು ಲೆಕ್ಕಾಚಾರದಲ್ಲಿ 17.20ರಷ್ಟು ಬಿತ್ತನೆ ಪೂರ್ಣಗೊಂಡಿದೆ.

ಹಿಂಗಾರು ಅವಧಿಯಲ್ಲಿ ಜಿಲ್ಲೆಯ ರೈತರು ಸಾಮಾನ್ಯವಾಗಿ ಹಸಿಕಡಲೆ, ಹುರುಳಿ ಹಾಗೂ ಅವರೆ ಬೆಳೆಯನ್ನು ಹೆಚ್ಚು ಬೆಳೆಯುತ್ತಾರೆ‌.ನಿಗದಿ ಪಡಿಸಿರುವ ಒಟ್ಟು ಗುರಿಯಲ್ಲಿ, 10,715 ಹೆಕ್ಟೇರ್‌ ಪ್ರದೇಶದಲ್ಲಿ ಹುರುಳಿ ಬಿತ್ತನೆ ಮಾಡಲು ಗುರಿ ನಿಗದಿಪಡಿಸಲಾಗಿದೆ. ಈಗಾಗಲೇ 2,727 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಹಸಿಕಡಲೆ 3,445 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಲಿದೆ. ಸದ್ಯ ರೈತರು 83 ಹೆಕ್ಟೇರ್‌ನಲ್ಲಿ ಬೆಳೆದಿದ್ದಾರೆ. ಉಳಿದಂತೆ ಮುಸುಕಿನ ಜೋಳ 2,760 ಹೆಕ್ಟೇರ್‌ನ ಗುರಿಗೆ ಪ್ರತಿಯಾಗಿ 502 ‌ಹೆಕ್ಟೇರ್‌ನಲ್ಲಿ ಬಿತ್ತನೆ ನಡೆದಿದೆ.

ತಾಲ್ಲೂಕುವಾರು ಅಂಕಿ ಅಂಶಗಳು ಗಮನಿಸಿದರೆ, ಯಳಂದೂರಿನಲ್ಲಿ ಅತಿ ಹೆಚ್ಚು ಶೇ 28ರಷ್ಟು ಬಿತ್ತನೆಯಾಗಿದೆ. ಗುಂಡ್ಲುಪೇಟೆಯಲ್ಲಿ ಶೇ 25.88ರಷ್ಟು ಪ್ರದೇಶದಲ್ಲಿ ಬೆಳೆಗಳನ್ನು ಬೆಳೆಯಲಾಗಿದೆ. ಚಾಮರಾಜನಗರದಲ್ಲಿ ಅತಿ ಕಡಿಮೆ ಅಂದರೆ ಶೇ 3.3ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ.

ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ. ಯೂರಿಯಾ ಗೊಬ್ಬರದ ಕೊರತೆ ಕಂಡು ಬಂದಿರುವುದರಿಂದ ಪೂರೈಸುವಂತೆ ಇಲಾಖೆಗೆ ಮನವಿ ಮಾಡಲಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ಟೋಬರ್‌ನಲ್ಲಿ ಮಳೆ ಕಡಿಮೆ: ಜಿಲ್ಲೆಯಲ್ಲಿ ಸಾಮಾನ್ಯವಾಗಿ ಹಿಂಗಾರು ಮಳೆ ಉತ್ತಮವಾಗಿರುತ್ತದೆ. ಈ ವರ್ಷ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚು ಬಂದಿದೆ. ಸೆಪ್ಟೆಂಬರ್‌ ತಿಂಗಳಲ್ಲೂ ಚೆನ್ನಾಗಿ ಮಳೆ ಬಿದ್ದಿದೆ. ಅಕ್ಟೋಬರ್‌ ತಿಂಗಳ ಮೊದಲ ಎರಡು ವಾರಗಳಲ್ಲಿ ಸುರಿದ ಮಳೆಯ ಪ್ರಮಾಣವನ್ನು ಗಮನಿಸಿದರೆ, ವಾಡಿಕೆಗಿಂತ ಸ್ವಲ್ಪ ಕಡಿಮೆಯಾಗಿದೆ.ಅಕ್ಟೋಬರ್‌1ರಿಂದ 15ರವರೆಗೆ ಸಾಮಾನ್ಯವಾಗಿ 8.6 ಸೆಂ.ಮೀ ಮಳೆಯಾಗುತ್ತದೆ. ಈ ವರ್ಷ 8.4 ಸೆಂ.ಮೀ ಮಳೆ ಸುರಿದಿದೆ.

ಅನುಕೂಲಕರ ವಾತಾವರಣ: ಸದ್ಯ ಜಿಲ್ಲೆಯಲ್ಲಿ ಹಿಂಗಾರು ಬಿತ್ತನೆಗೆ ಅನುಕೂಲಕರ ವಾತಾವರಣ ಇದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ನಿರ್ದೇಶಕಿ ಎಚ್‌.ಟಿ.ಚಂದ್ರಕಲಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ವಾರ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಬೆಳೆಗೆ ಹಾನಿಯಾಗುವಷ್ಟು ಮಳೆ ಎಲ್ಲೂ ಬಂದಿಲ್ಲ. ಈ ವರ್ಷ ಮಳೆ ಕೊರತೆ ಹಾಗೂ ಹೆಚ್ಚು ಆಗಿ ಎಲ್ಲೂ ಬೆಳೆ ಹಾನಿಯಾಗಿಲ್ಲ. ಧಾರಾಕಾರ ಮಳೆ ಬಂದು ದೀರ್ಘ ಸಮಯ ಜಮೀನುಗಳಲ್ಲಿ ನಿಂತಿದ್ದರೆ ಮಾತ್ರ ಬೆಳೆ ನಷ್ಟವಾಗುತ್ತದೆ. ಅಂತಹ ಸನ್ನಿವೇಶ ನಿರ್ಮಾಣವಾಗಿಲ್ಲ. ಈ ಸಮಯದಲ್ಲಿ ರೈತರು ಹೆಚ್ಚು ಹಸಿ ಕಡಲೆಯನ್ನು ಬಿತ್ತನೆ ಮಾಡುತ್ತಾರೆ’ ಎಂದು ಅವರು ಹೇಳಿದರು.

‘ಈಗಿನ ಪರಿಸ್ಥಿತಿಯೇ ಮುಂದುವರಿದರೆ ಹಿಂಗಾರು ಬಿತ್ತನೆಯ ಗುರಿಯನ್ನೂ ನಾವು ತಲುಪಲಿದ್ದೇವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT